ಬೆಂಗಳೂರು(ಫೆ.25): ಕೊರೋನಾ ಸೋಂಕಿನ ಎರಡನೇ ಅಲೆ ಭೀತಿ ಹಿನ್ನೆಲೆಯಲ್ಲಿ ನಗರದ ಕಲ್ಯಾಣ ಮಂಟಪಗಳಲ್ಲಿ ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ನಿಗಾ ವಹಿಸಲು ಮತ್ತು ಜಾಗೃತಿ ಮೂಡಿಸಲು ಬಿಬಿಎಂಪಿಯು ಮಾರ್ಷಲ್‌ಗಳನ್ನು ನಿಯೋಜಿಸಿದೆ.

"

ರಸ್ತೆ, ಮಾರುಕಟ್ಟೆ ಸೇರಿದಂತೆ ಇನ್ನಿತರ ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್‌ ಧರಿಸದೆ, ಸಾಮಾಜಿಕ ಅಂತರ ನಿಯಮ ಉಲ್ಲಂಘಿಸಿದವರಿಗೆ ದಂಡ ವಿಧಿಸುತ್ತಿದ್ದ ಬಿಬಿಎಂಪಿ ಮಾರ್ಷಲ್‌ಗಳು ಜೆ.ಪಿ. ಪಾರ್ಕ್ ವಾರ್ಡ್‌ನ ರಾಮಯ್ಯ ಮ್ಯಾರೇಜ್‌ ಹಾಲ್‌, ಗಂಗಮ್ಮ ತಿಮ್ಮಯ್ಯ ಕಲ್ಯಾಣ ಮಂಟಪ ಸೇರಿದಂತೆ ಮೊದಲಾದ ಕಲ್ಯಾಣ ಮಂಟಪಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮಾಸ್ಕ್‌ ಹಾಗೂ ಸಾಮಾಜಿಕ ಅಂತರ ನಿಯಮ ಪಾಲಿಸುವಂತೆ ಜಾಗೃತಿ ಮೂಡಿಸಿದರು.
ಕೋವಿಡ್‌ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲನೆ ಮಾಡದಿದ್ದರೆ ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿದರು. ಇನ್ನು ನಿಗದಿತ ಸಂಖ್ಯೆಗಿಂತ ಹೆಚ್ಚಿನ ಜನರಿಗೆ ಕಲ್ಯಾಣ ಮಂಟಪಗಳಲ್ಲಿ ಅವಕಾಶ ನೀಡಬಾರದು. ಒಂದು ವೇಳೆ ಅವಕಾಶ ನೀಡಿದರೆ ಕಲ್ಯಾಣ ಮಂಟಪದ ಆಡಳಿತ ಮಂಡಳಿ ಅಥವಾ ಮಾಲೀಕರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಮಾರ್ಷಲ್‌ಗಳು ಎಚ್ಚರಿಕೆ ನೀಡಿದರು.

ಮಾ.1ರಿಂದ ಹಿರಿಯರಿಗೆ ಕೊರೋನಾ ಲಸಿಕೆ

ಕಲ್ಯಾಣ ಮಂಟಪ ಹಾಗೂ ಮದುವೆ ಮನೆಗಳ ಮೇಲೆ ನಿಗಾ ವಹಿಸುವುದಕ್ಕೆ ಆಯಾ ವಾರ್ಡ್‌ಗಳಲ್ಲಿರುವ ಮಾರ್ಷಲ್‌ಗಳಿಗೆ ಬಿಬಿಎಂಪಿ ಜವಾಬ್ದಾರಿ ನೀಡಿದೆ. ಆಯಾ ವಾರ್ಡ್‌ನ ಮಾರ್ಷಲ್‌ಗಳು ತಮ್ಮ ವಾರ್ಡ್‌ನ ವ್ಯಾಪ್ತಿಯಲ್ಲಿರುವ ಕಲ್ಯಾಣ ಮಂಟಪಗಳಿಗೆ ಭೇಟಿ ಪರಿಶೀಲನೆ ನಡೆಸಲಿದ್ದಾರೆ.

ಈ ಕುರಿತು ‘ಕನ್ನಡಪ್ರಭ’ದೊಂದಿಗೆ ಮಾತನಾಡಿದ ಬಿಬಿಎಂಪಿ ಆಯುಕ್ತ ಎನ್‌. ಮಂಜುನಾಥ ಪ್ರಸಾದ್‌ ಅವರು, ಮದುವೆ ಮನೆ ಹಾಗೂ ಕಲ್ಯಾಣ ಮಂಟಪಗಳಿಗೆ ಮಾರ್ಷಲ್‌ಗಳನ್ನು ನೇಮಕ ಮಾಡಿರುವುದಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ನಗರದ ಎಲ್ಲ ಕಲ್ಯಾಣ ಮಂಟಪಗಳಿಗೆ ನಿಯೋಜನೆ ಮಾಡಲು ಬೇಕಾದಷ್ಟು ಮಾರ್ಷಲ್‌ಗಳಿಲ್ಲ. ಸದ್ಯ ಇರುವ 440 ಮಂದಿ ಮಾರ್ಷಲ್‌ಗಳನ್ನು ದೊಡ್ಡ ದೊಡ್ಡ ಕಲ್ಯಾಣ ಮಂಟಪಗಳಿಗೆ ನಿಯೋಜನೆ ಮಾಡಲಾಗಿದೆ. ಕೋವಿಡ್‌ ನಿಯಮ ಉಲ್ಲಂಘಿಸಿದರೆ ಕಲ್ಯಾಣ ಮಂಟಪಗಳ ಮಾಲೀಕರಿಗೆ ದಂಡ ವಿಧಿಸುವುದಕ್ಕೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.