ಮಾ.1ರಿಂದ ಹಿರಿಯರಿಗೆ ಕೊರೋನಾ ಲಸಿಕೆ
ಲಸಿಕೆ ಫಲಾನುಭವಿ ಸಂಖ್ಯೆ 87 ಸಾವಿರದಷ್ಟು ಕಡಿತ| ಹಲವೆಡೆ ನೋಂದಣಿ ಸೇರಿ ವಿವಿಧ ಕಾರಣಗಳಡಿ ಗುರಿ ಪರಿಷ್ಕರಣೆ| ರಾಜ್ಯದಲ್ಲಿ ಲಸಿಕೆ ಪಡೆದವರ ಪ್ರಮಾಣ ಶೇಕಡ 55ಕ್ಕೆ ಜಿಗಿತ| ಸರ್ಕಾರಿ ಕೇಂದ್ರದಲ್ಲಿ ಉಚಿತ ಲಸಿಕೆ|
ಬೆಂಗಳೂರು(ಫೆ.25): ಒಂದಕ್ಕಿಂತ ಹೆಚ್ಚಿನ ಕಡೆಗೆ ನೋಂದಣಿಯಾಗಿರುವುದು ಸೇರಿದಂತೆ ವಿವಿಧ ಕಾರಣಗಳ ಹಿನ್ನೆಲೆಯಲ್ಲಿ ಕೋವಿಡ್ ಯೋಧರಿಗೆ ಲಸಿಕೆ ಹಾಕುವ ಗುರಿಯನ್ನು ಪರಿಷ್ಕರಿಸಲಾಗಿದ್ದು, 10,19,386 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದೆ.
"
ಈ ಮೊದಲು 11,06,889 ಜನರಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿತ್ತು. ಆದರೆ ಎರಡೆರಡು ಕಡೆ ನೋಂದಣಿ, ನರ್ಸಿಂಗ್, ವೈದ್ಯ ವಿದ್ಯಾರ್ಥಿಗಳು ಕಾಲೇಜಿಗೆ ಬಾರದೇ ಇರುವುದು, ನೋಂದಣಿ ಸಮಯದಲ್ಲಿ ನೀಡಿದ್ದ ವಿಳಾಸದಲ್ಲಿ ಇಲ್ಲದೇ ಇರುವ ಕಾರಣಗಳಿಗಾಗಿ ಲಸಿಕೆ ಪಡೆಯುವ ಫಲಾನುಭವಿಗಳ ಸಂಖ್ಯೆಯಲ್ಲಿ 87,503 ಕಡಿತ ಮಾಡಲಾಗಿದೆ. ಹೀಗಾಗಿ ಲಸಿಕೆ ನೀಡುವ ಗುರಿಯನ್ನು ಪರಿಷ್ಕರಿಸಲಾಗಿದೆ.
ಗುರಿ ಪರಿಷ್ಕರಣೆಯಿಂದಾಗಿ ಶೇ.50ಕ್ಕಿಂತಲೂ ಕಡಿಮೆ ಪ್ರಮಾಣದಲ್ಲಿದ್ದ ರಾಜ್ಯದ ಕೋವಿಡ್ ಲಸಿಕೆ ಪಡೆದವರ ಪ್ರಮಾಣ ಇದೀಗ ಒಟ್ಟಾರೆ ಶೇ.55ಕ್ಕೆ ಜಿಗಿದಿದೆ. ರಾಜ್ಯ ಸದ್ಯ ಶೇ.70 ರಿಂದ ಶೇ.80ರಷ್ಟು ಫಲಾನುಭವಿಗಳಿಗೆ ಲಸಿಕೆ ನೀಡಲು ಸಾಧ್ಯವಾದರೆ ಅದೇ ದೊಡ್ಡ ಮಟ್ಟದ ಯಶಸ್ಸು ಎಂದು ಭಾವಿಸಿಕೊಳ್ಳುವ ಸ್ಥಿತಿಯಲ್ಲಿದೆ.
8,21,939 ಆರೋಗ್ಯ ಕಾರ್ಯಕರ್ತರಿಗೆ ಲಸಿಕೆ ನೀಡಲು ಗುರುತಿಸಲಾಗಿತ್ತು. ಆದರೆ 93,590 ಫಲಾನುಭವಿಗಳನ್ನು ಲಸಿಕೆ ಯೋಜನೆಯಿಂದ ಕೈ ಬಿಡಲಾಗಿದೆ. ಹಾಗಾಗಿ ಫಲಾನುಭವಿಗಳ ಪಟ್ಟಿಯನ್ನು ಪರಿಷ್ಕರಿಸಿ 7,28,349 ಮಂದಿಗೆ ಲಸಿಕೆ ನೀಡುವ ಗುರಿ ಇಟ್ಟುಕೊಳ್ಳಲಾಗಿದೆ. ಇದೇ ವೇಳೆ 2,84,950 ಮುಂಚೂಣಿ ಕಾರ್ಯಕರ್ತರಿಗೆ ಲಸಿಕೆ ನೀಡಲು ಇದ್ದ ಗುರಿಯನ್ನು 2,91,033ಕ್ಕೆ ಹೆಚ್ಚಿಸಲಾಗಿದೆ.
ಕರ್ನಾಟಕ ಪ್ರವೇಶಿಸುವ ಕೇರಳಿಗರ ನೆಗೆಟಿವ್ ವರದಿ ಪರಿಶೀಲನೆಗೆ ವ್ಯವಸ್ಥೆಯೇ ಇಲ್ಲ..!
ಲಸಿಕೆ ಪಡೆಯಲು ನೋಂದಾಯಿಸಿಕೊಂಡು ಈಗ ಸ್ಥಳದಲ್ಲಿ ಇಲ್ಲದ ಅಂತಿಮ ವರ್ಷದ ವಿದ್ಯಾರ್ಥಿಗಳು, ವಿದ್ಯಾರ್ಥಿಗಳ ಹೆಸರನ್ನು ಕಾಲೇಜುಗಳು ನೀಡಿದ್ದರೂ ಕಾಲೇಜ್‌ಗೆ ಬಾರದವರು ಮತ್ತು ಒಂದಕ್ಕಿಂತ ಹೆಚ್ಚು ಬಾರಿ ನೋಂದಾವಣೆಗೊಂಡವರ ಹೆಸರನ್ನು ತೆಗೆದು ಹಾಕಲಾಗಿದೆ. ಈ ಹಿನ್ನೆಲೆಯಲ್ಲಿ ಫಲಾನುಭವಿಗಳ ಸಂಖ್ಯೆಯಲ್ಲಿ ಕಡಿತವಾಗಿದೆ ಎಂದು ಲಸಿಕೆ ವಿಭಾಗದ ಉಪ ನಿರ್ದೇಶಕಿ ಡಾ. ರಜನಿ ನಾಗೇಶ್ ರಾವ್ ತಿಳಿಸಿದ್ದಾರೆ.
ಬುಧವಾರದ ಹೊತ್ತಿಗೆ 4.39 ಲಕ್ಷ ಮಂದಿ ಆರೋಗ್ಯ ಕಾರ್ಯಕರ್ತರಿಗೆ ಮೊದಲ ಡೋಸ್ ಲಸಿಕೆ ನೀಡಲಾಗಿದೆ. ಆರೋಗ್ಯ ಮತ್ತು ಮುಂಚೂಣಿ ಕಾರ್ಯಕರ್ತರ ಮೊದಲ ಡೋಸ್‌ನ ಲಸಿಕೆ ಪ್ರಕ್ರಿಯೆ ಮುಕ್ತಾಯಗೊಳ್ಳಲು ಇನ್ನು ಮೂರು ದಿನಗಳು ಮಾತ್ರ ಬಾಕಿಯಿದೆ.
ಮಾ.1ರಿಂದ ಹಿರಿಯರಿಗೆ ಲಸಿಕೆ
ಮಾರ್ಚ್ 1ರಿಂದ ಹಿರಿಯ ನಾಗರಿಕರು ಮತ್ತು 45 ವರ್ಷಕ್ಕಿಂತ ಮೇಲ್ಪಟ್ಟಪೂರ್ವ ಕಾಯಿಲೆಗಳಿರುವವರಿಗೆ ಕೋವಿಡ್ ಲಸಿಕೆ ನೀಡುವ ಅಭಿಯಾನ ಪ್ರಾರಂಭಿಸಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಡಾ. ಕೆ.ಸುಧಾಕರ್ ಹೇಳಿದ್ದಾರೆ. ಈ ಬಗ್ಗೆ ಟ್ವೀಟ್ ಮಾಡಿರುವ ಸುಧಾಕರ್, ದೇಶಾದ್ಯಂತ ಮಾರ್ಚ್ 1ರಿಂದ ಕೋವಿಡ್-19 ಲಸಿಕೆಯ 2ನೇ ಹಂತ ಆರಂಭಗೊಳ್ಳಲಿದೆ. ದೇಶದಲ್ಲಿ ಹತ್ತು ಸಾವಿರ ಸರ್ಕಾರಿ ಮತ್ತು ಇಪ್ಪತ್ತು ಸಾವಿರ ಖಾಸಗಿ ಲಸಿಕಾ ಕೇಂದ್ರಗಳಲ್ಲಿ ಲಸಿಕೆಯನ್ನು ನೀಡಲಾಗುತ್ತದೆ. ಸರ್ಕಾರಿ ಕೇಂದ್ರದಲ್ಲಿ ಉಚಿತವಾಗಿ ಲಸಿಕೆ ನೀಡಲಾಗುವುದು ಎಂದು ತಿಳಿಸಿದ್ದಾರೆ.