ಶಶಿಕುಮಾರ ಪತಂಗೆ

ಅಳ್ನಾವರ(ಅ. 25): 'ಸಾವಿರ ಸುಳ್ಳು ಹೇಳಿ ಒಂದು ಮದುವೆ ಮಾಡು’ ಎನ್ನುವ ಗಾದೆ ಮಾತು ಉತ್ತರ ಕರ್ನಾಟಕದಲ್ಲಿ ಚಾಲ್ತಿ ಇದೆ. ಆದರೆ, ಪ್ರಸ್ತುತ ದಿನಗಳಲ್ಲಿ ಈ ಗಾದೆ ಮಾತನ್ನೇ ಬಂಡವಾಳ ಮಾಡಿಕೊಂಡಿರುವ ಕೆಲವು ಮಧ್ಯವರ್ತಿಗಳು ಮದುವೆ ಮಾಡಿಸುವ ಹೆಸರಿನಲ್ಲಿ ಹಣ ಮಾಡುವ ದಂಧೆಯನ್ನು ಮಾಡಿಕೊಂಡಿದ್ದಾರೆ.

ಇಂತಹ ಸಾಕಷ್ಟು ಘಟನೆಗಳು ಧಾರವಾಡ ಜಿಲ್ಲೆಯ ಅಳ್ನಾವರ ತಾಲೂಕಿನಲ್ಲಿ ನಡೆದಿವೆ. ವಧು- ವರರ ದಲ್ಲಾಳಿಗಳು ಎಂದು ಹೇಳಿಕೊಂಡು ಗ್ರಾಮೀಣ ಪ್ರದೇಶಕ್ಕೆ ಹೋಗುವ ಅವರು, ಅಂದದ ಹೆಣ್ಣುಮಕ್ಕಳನ್ನು ಹೊರ ರಾಜ್ಯಗಳಿಗೆ ಮದುವೆ ಮಾಡಿ ಕಳಿಸುತ್ತಿದ್ದಾರೆ. ಅಲ್ಲದೇ, ವಧು- ವರರ ಸಂಪರ್ಕ ಕೂಡಿಸಿ ಮದುವೆ ಮಾಡಿಸಿದರೆ ಹೊರರಾಜ್ಯದವರಿಗೆ ಒಂದೊಂದು ಮದುವೆಗೆ ಒಂದೊಂದು ಲಕ್ಷ ಹಣ ಹಾಗೂ ಬಂಗಾರದ ಆಭರಣಗಳನ್ನು ದಲ್ಲಾಳಿಗಳು ಪಡೆದುಕೊಂಡಿರುವ ಮಾಹಿತಿ ಇದೆ.

ಬಡತನವೇ ಅಸ್ತ್ರ:

ಬಡತನದ ಹಿನ್ನೆಲೆ ಮಗಳನ್ನು ಹೇಗಾದರೂ ಮಾಡಿ ದಾಟಿಸಿ ಬಿಡಬೇಕು ಎನ್ನುವ ಅನೇಕ ಹೆಣ್ಣುಮಕ್ಕಳ ಪಾಲಕರನ್ನೇ ಗುರಿಯಾಗಿಸಿಕೊಂಡು ವ್ಯವಹಾರ ಕುದುರಿಸುತ್ತಾರೆ ಈ ಮಧ್ಯವರ್ತಿಗಳು. ಕೆಲವು ಪಾಲಕರು ತಮ್ಮ ಮಕ್ಕಳನ್ನು ರಾಜಸ್ಥಾನ, ಮಹಾರಾಷ್ಟ್ರ, ಗೋವಾ ರಾಜ್ಯಗಳಿಗೆ ಈಗಾಗಲೇ ಮದುವೆ ಮಾಡಿಕೊಟ್ಟಸಾಕಷ್ಟುಉದಾಹರಣೆಗಳಿವೆ.

ಹುಬ್ಬಳ್ಳಿಯಲ್ಲಿ ಮತ್ತೆ ಹರಿಯಿತು ನೆತ್ತರು: ಚಾಕುವಿನಿಂದ ಇರಿದು ನಿವೃತ್ತ ಪ್ರೊಫೆಸರ್‌ ಬರ್ಬರ ಕೊಲೆ

ಕೊರೋನಾದಲ್ಲಿ ಅಧಿಕ ಲಾಭ:

ಕೊರೋನಾ ರೋಗವು ಹರಡಿರುವ ಪರಿಣಾಮವಾಗಿ ವಿಶ್ವದ ತುಂಬೆಲ್ಲ ಜನ ಜೀವನ ಆರ್ಥಿಕ ಸಂಕಷ್ಟದಲ್ಲಿ ಸಿಲುಕಿದೆ. ಆದರೆ, ಈ ದಲ್ಲಾಳಿಗಳು ಮಾತ್ರ ಕೊರೋನಾವನ್ನೇ ಒಂದು ಅಸ್ತ್ರವನ್ನಾಗಿ ಮಾಡಿಕೊಂಡು ಕಡಿಮೆ ಜನರನ್ನು ಕೂಡಿಸಿ ಮದುವೆ ಮಾಡಿಸುವುದಾಗಿ ಹೇಳಿ ವಧುವರರ ಮನೆಯಲ್ಲಿ ಅಧಿಕ ಹಣವನ್ನು ಸುಲಿಗೆ ಮಾಡಿದ್ದೂ ಇದೆ.

ಜಿಲ್ಲೆ ಹಾಗೂ ಪಟ್ಟಣಗಳಲ್ಲೊಬ್ಬರು ಮುಖ್ಯ ಬ್ರೋಕರ್‌ ಇದ್ದು, ಅವರ ಅಡಿ ತಾಲೂಕು, ಹಳ್ಳಿಗಳಲ್ಲಿ ಅವರ ಸಹಚರರು ಈ ಕೆಲಸ ಮಾಡುತ್ತಿದ್ದಾರೆ. ಹಳ್ಳಿಗಳ ಸಹಚರರಿಂದಲೇ ಆ ಗ್ರಾಮದ ವಯಸ್ಸಿನ ಹೆಣ್ಣುಮಕ್ಕಳ ಮಾಹಿತಿ ಜಿಲ್ಲೆಯಲ್ಲಿರುವ ಮುಖ್ಯ ದಲ್ಲಾಳಿ ಮಾಹಿತಿ ಪಡೆದುಕೊಂಡು ಹೊರರಾಜ್ಯದ ವರಗಳಿಗೆ ತಿಳಿಸುತ್ತಾನೆ. ಅಳ್ನಾವರ ಭಾಗದಲ್ಲಿ ಇಂತಹ ದಂಧೆ ನಡೆಯುತ್ತಿದ್ದು, ಯಾರ ಗಮನಕ್ಕೂ ಬಂದಿಲ್ಲ. ದೂರು ನೀಡಿಲ್ಲ. ಹೀಗಾಗಿ ಪೊಲೀಸರು ಈ ಬಗ್ಗೆ ಹೆಚ್ಚಿನ ತಲೆಕೆಡಿಸಿಕೊಂಡಿಲ್ಲ.

ಉದ್ಯೋಗ ನೋಡಿ ದರ ನಿಗದಿ:

ಮದುವೆ ಮಾಡಿಸುತ್ತೇನೆ ಎನ್ನುವ ನೆಪ ಒಡ್ಡಿಕೊಂಡು ಬರುವ ಕೆಲವು ದಲ್ಲಾಳಿಗಳು ಒಂದು ಹೆಣ್ಣು ತೋರಿಸಿದರೆ ಸಾಕು ಸಾವಿರಾರು ರುಪಾಯಿಗಳನ್ನು ಸುಲಿಗೆ ಮಾಡುತ್ತಾರೆ. ಈ ಸುಲಿಗೆ ಪ್ರತಿ ವಧು ಅಥವಾ ವರನನ್ನು ತೋರಿಸಿದಾಗಲೂ ಇರುತ್ತದೆ. ಇವರು ನಿಗದಿ ಮಾಡಿರುವ ದರ ಗಂಡು ಮತ್ತು ಹೆಣ್ಣಿನ ಎರಡು ಮನೆಗೂ ಬೇರೆ ಬೇರೆ. ವಿಶೇಷ ಎಂದರೆ ಒಂದೊಂದು ಉದ್ಯೋಗಕ್ಕೆ ಒಂದೊಂದು ರೀತಿಯ ದರ ನಿಗದಿ ಮಾಡಲಾಗಿದೆ. ಕೂಲಿ ಕೆಲಸ ಮಾಡುವವರಿಗೆ ಬೇರೆ ದರ, ಸರ್ಕಾರಿ ನೌಕರಿ, ಖಾಸಗಿ ಕಂಪನಿ ಹಾಗೂ ಅವರವರ ಆಸ್ತಿಯನ್ನು ನೋಡಿ ದರವನ್ನು ನಿಗದಿ ಮಾಡಿ ಹಂತ ಹಂತವಾಗಿ ವಸೂಲಿ ಮಾಡುತ್ತಾರೆ.

ಪ್ರಸ್ತುತ ತಂತ್ರಜ್ಞಾನ ಯುಗದಲ್ಲಿ ಶಾದಿ ಡಾಟ್‌ ಕಾಮ್‌, ಕನ್ನಡ ಮ್ಯಾಟ್ರಿಮೋನಿ, ಲಿಂಗಾಯತ ಮ್ಯಾಟ್ರಿಮೋನಿ ಅಂತಹ ಆಯಾ ಧರ್ಮ, ಜಾತಿಗಳಿಗೊಂದು ಸೃಷ್ಟಿಯಾಗಿವೆ. ಜತೆಗೆ ವಾಟ್ಸ್‌ಆ್ಯಪ್‌ ಗ್ರೂಪ್‌ಗಳು ಸಹ ಕಡಿಮೇ ಏನಿಲ್ಲ. ಈ ವೇದಿಕೆಗಳ ಮೂಲಕ ವಧು- ವರರ ಹುಡುಕಾಟ ನಡೆದಿದೆ. ಇದೆಲ್ಲವನ್ನು ಹೊರತುಪಡಿಸಿ ಮದುವೆ ದಲ್ಲಾಳಿಗಳೂ ಇದ್ದಾರೆ. ಈ ಪೈಕಿ ಕೆಲವರು ಪ್ರಾಮಾಣಿಕವಾಗಿ ಈ ಕಾರ್ಯ ಮಾಡುತ್ತಿದ್ದರೆ, ಕೆಲವರು ಮಾತ್ರ ಮದುವೆ ಮಾಡಿಸುವುದನ್ನೇ ಬಂಡವಾಳ ಮಾಡಿಕೊಂಡು ಹೆಣ್ಣುಮಕ್ಕಳ ವ್ಯಾಪಾರಕ್ಕೆ ನಿಂತಿದ್ದಾರೆ ಎನ್ನುವುದೇ ಬೇಸರದ ಸಂಗತಿ.

ಇಂತಹ ಪ್ರಕರಣಗಳು ಈ ಹಿಂದೆ ಕಲಘಟಗಿಯಲ್ಲಿ ನಡೆದಿದ್ದು ಇತ್ತೀಚೆಗೆ ಕಡಿಮೆಯಾಗಿತ್ತು. ಆದರೆ, ಇದೀಗ ಅಳ್ನಾವರ ಭಾಗದಲ್ಲಿ ಇಂತಹ ಪ್ರಕರಣಗಳು ಬೆಳಕಿಗೆ ಬರುತ್ತಿದ್ದು, ಪೊಲೀಸ್‌ ಇಲಾಖೆ ಇಂತಹ ದಲ್ಲಾಳಿಗಳ ಮೇಲೆ ಕಣ್ಣಿಡುವುದು ಸದ್ಯದ ಅಗತ್ಯವಾಗಿದೆ.

ನಮ್ಮ ಅನುಭವದಲ್ಲಿ ನೂರಾರು ಮದುವೆಗಳನ್ನು ಮಾಡಿಸಿದ್ದೇವೆ. ಆನ್‌ಲೈನ್‌ ರೀತಿಯಲ್ಲಿಯೇ ನಮ್ಮದು ಎಂಟ್ರನ್ಸ್‌ ಫೀ ಇರುತ್ತದೆ. ನಾವು ರಾಜಸ್ಥಾನ, ಗುಜರಾತನಂತಹ ಹೊರರಾಜ್ಯಗಳಿಗೂ ಮದುವೆ ಮಾಡಿಸಿದ್ದೇವೆ. ಕರ್ನಾಟಕದಲ್ಲಿ ಹೆಣ್ಣು ಕೊಡಸಿದರೆ 50ರಿಂದ 70 ಸಾವಿರ ಹಾಗೂ ಬೇರೆ ರಾಜ್ಯಗಳಿಗೆ ಕೊಡಸಿದರೆ 1 ಲಕ್ಷ ಬೇಡಿಕೆ ಇದೆ ಎಂದು ಮದುವೆ ದಲ್ಲಾಳಿ ಶಬ್ಬೀರ ಅಹಮ್ಮದ (ಹೆಸರು ಬದಲಿಸಲಾಗಿದೆ) ಹೇಳಿದ್ದಾರೆ.