Asianet Suvarna News Asianet Suvarna News

Kodagu: ವಧು-ವರರಿಲ್ಲದೆ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ನಡೆದ ಮದುವೆ: ಅಸಲಿಗೆ ನಡೆದಿದ್ದೇನು?

ಒಂದೆಡೆ ಸಾಂಗವಾಗಿ ಮೊಳಗುತ್ತಿರುವ ಮಂಗಳವಾದ್ಯ, ಮತ್ತೊಂದೆಡೆ ಶಾಸ್ತ್ರೋಕ್ತವಾಗಿ ನೆರವೇರುತ್ತಿರುವ ವಿವಾಹದ ವಿಧಿ, ವಿಧಾನಗಳು. ಇಡೀ ಊರಿಗೆ ಊರೇ ಮದುವೆಯ ಸಂಭ್ರಮದಲ್ಲಿ ತಲ್ಲೀನವಾಗಿರುವ ಕ್ಷಣಗಳು. ಆದರೆ ಈ ವಿವಾಹದಲ್ಲಿ ವಧುವರರೇ ಇರಲಿಲ್ಲ. 

Marriage of Peepul Tree and Indian Gooseberry at Kodagu gvd
Author
First Published Feb 4, 2024, 7:39 PM IST

ವರದಿ: ರವಿ.ಎಸ್.ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು (ಫೆ.04): ಒಂದೆಡೆ ಸಾಂಗವಾಗಿ ಮೊಳಗುತ್ತಿರುವ ಮಂಗಳವಾದ್ಯ, ಮತ್ತೊಂದೆಡೆ ಶಾಸ್ತ್ರೋಕ್ತವಾಗಿ ನೆರವೇರುತ್ತಿರುವ ವಿವಾಹದ ವಿಧಿ, ವಿಧಾನಗಳು. ಇಡೀ ಊರಿಗೆ ಊರೇ ಮದುವೆಯ ಸಂಭ್ರಮದಲ್ಲಿ ತಲ್ಲೀನವಾಗಿರುವ ಕ್ಷಣಗಳು. ಆದರೆ ಈ ವಿವಾಹದಲ್ಲಿ ವಧುವರರೇ ಇರಲಿಲ್ಲ. ಅರರೇ ವಧುವರರೇ ಇಲ್ಲ ಅಂತಾದರೆ ಮದುವೆ ಯಾರಿಗೆ ಆಗುತ್ತದೆ ಎನ್ನುವ ಅಚ್ಚರಿ ನಿಮಗೆ ಕಾಡುತ್ತಿದೆ ಅಲ್ವಾ. ಆದರೂ ಈ ವಿವಾಹ ಸಾಂಗವಾಗಿ ನೆರವೇರಿದೆ. ಹೌದು ಅಷ್ಟಕ್ಕೂ ಈ ವಿವಾಹ ನೆರವೇರಿದ್ದು ಅಶ್ವತ್ಥ ವೃಕ್ಷ ಮತ್ತು ನೆಲ್ಲಿ ಗಿಡದ ಮದುವೆ. ಇಂತಹ ವಿಶೇಷ ಮತ್ತು ಅಚ್ಚರಿಯ ಮದುವೆ ನಡೆದಿರುವುದು ಕೊಡಗು ಜಿಲ್ಲೆ ಮಡಿಕೇರಿ ತಾಲ್ಲೂಕಿನ ಕಡಗದಾಳು ಗ್ರಾಮದಲ್ಲಿ. 

ಇಲ್ಲಿನ ಬೊಟ್ಲಪ್ಪ ಯುವಕ ಸಂಘದ ವತಿಯಿಂದ ಇಂತಹ ಒಂದು ವಿಶೇಷ ವಿವಾಹಕ್ಕೆ ನೂರಾರು ಜನರು, ನೆಂಟರಿಷ್ಟು ಅಷ್ಟೇ ಏಕೆ ಮಡಿಕೇರಿಯ ಹಾಲಿ ಶಾಸಕ ಮಂತರ್ ಗೌಡ, ವಿರಾಜಪೇಟೆಯ ಮಾಜಿ ಶಾಸಕ ಕೆ.ಜಿ. ಬೋಪಯ್ಯ ಸೇರಿದಂತೆ ಸಾಕಷ್ಟು ಗಣ್ಯರು ಕೂಡ ಮದುವೆಗೆ ಸಾಕ್ಷಿಯಾದರು. 2003 ರಲ್ಲಿ ಬೊಟ್ಲಪ್ಪ ಯುವಕ ಸಂಘ ಸ್ಥಾಪನೆಯಾಗಿತ್ತು. ಸಂಘವು 10 ವರ್ಷಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಅರಳಿ ಗಿಡವೊಂದನ್ನು ನೆಡಲಾಗಿತ್ತು. ಅದೀಗ ಬೆಳೆದು 21 ವರ್ಷಗಳನ್ನು ಪೂರೈಸಿದೆ. ಹೀಗಾಗಿ ಯುವಕ ಸಂಘದ ವತಿಯಿಂದ ಗ್ರಾಮದ ಜನರೆಲ್ಲರೂ ಸೇರಿ ಅಶ್ವತ್ಥ ವೃಕ್ಷಕ್ಕೆ ನೆಲ್ಲಿ ಗಿಡದೊಂದಿಗೆ ವಿವಾಹ ನೆರವೇರಿಸಿದ್ದಾರೆ. 

ಹಂಪಿ ಉತ್ಸವದಲ್ಲಿ ಗಮನ ಸೆಳೆದ ಶ್ವಾನ ಪ್ರದರ್ಶನ: ಒಂದಕ್ಕಿಂತ ಒಂದು ಭಿನ್ನವಾಗಿದ್ದ 19 ತಳಿಯ ಶ್ವಾನಗಳು!

ಅರಳಿ ಗಿಡನೆಟ್ಟು 10 ವರ್ಷಗಳಾದಾಗ ಗಿಡಕ್ಕೆ ಉಪನಯನ ನೆರವೇರಿಸಲಾಗಿತ್ತು. ಇದೀಗ ಹಿಂದೂ ಸಂಪ್ರದಾಯದಂತೆ ಶಾಸ್ತ್ರೋಕ್ತವಾಗಿ ವಿವಾಹ ನೆರವೇರಿಸಲಾಗಿದೆ. ಅಶ್ವತ್ಥ ವೃಕ್ಷ ಹಾಗೂ ನೆಲ್ಲಿ ಗಿಡಗಳ ನಡುವೆ ನಡೆದ ವಿವಾಹ ಸಮಾರಂಭದ ಭಾಗವಾಗಿ ಇಡೀ ಗ್ರಾಮ ತಳಿರು ತೋರಗಳಿಂದ ಸಿಂಗಾರಗೊಂಡಿತ್ತು. ಅದರಲ್ಲೂ ಅಶ್ವತ್ಥ ವೃಕ್ಷ ಇರುವ ಮೈದಾನದಲ್ಲಿ ಶಾಮಿಯಾನ ಹಾಕಿ, ಹಸಿರು ಚಪ್ಪರ ಹಾಕಿ ಹೂವು, ತಳಿರು ತೋರಗಳಿಂದ ಅಲಂಕಾರ ಮಾಡಲಾಗಿತ್ತು. ವಿವಾಹದ ಅಂಗವಾಗಿ ಕಾಸರಗೋಡಿನ ಗಣಪತಿ ಭಟ್ ಮತ್ತು ತಂಡದವರಿಂದ ಬೆಳಿಗ್ಗೆಯಿಂದಲೇ ವಿವಿಧ ಹೋಮ, ಹವನ, ಪೂಜಾ ವಿಧಿವಿಧಾನಗಳು ನೆರವೇರಿದವು.

ಮದುವೆಗೆ ಜನರು ಹೊಸ ಬಟ್ಟೆ ತೊಟ್ಟು ತಮ್ಮ ಮನೆ ಮಕ್ಕಳ ಮದುವೆಯಲ್ಲಿ ಭಾಗವಹಿಸಿದ್ದ ರೀತಿ ಭಾಗವಹಿಸಿ ಸಂಭ್ರಮಿಸಿದರು. ಗ್ರಾಮದ ಬಾಲಕೃಷ್ಣ ಮತ್ತು ಭಾರತಿ ದಂಪತಿ ಮುಂದೆ ನಿಂತು ಅಶ್ವತ್ಥ ವೃಕ್ಷ ಹಾಗೂ ನೆಲ್ಲಿ ಗಿಡಗಳಿಗೆ ಧಾರೆ ಎರೆದರು. ಇದಕ್ಕೂ ಮೊದಲು ಸಂಘದ ಗೌರವ ಸಲಹೆಗಾರರಾದ ಜಯಪ್ಪ ಅವರು ಮದುವೆಗೆ ಭಾಗವಹಿಸಿದ್ದ ಮುತ್ತೈದೆಯರ ಬಳಿಗೆ ಮಾಂಗಲ್ಯವನ್ನು ಕೊಂಡೊಯ್ದರು. ಈ ವೇಳೆ ಎಲ್ಲರೂ ತಾಳಿ ಮುಟ್ಟಿ ಒಳ್ಳೆಯದಾಗಲಿ ಎಂದು ಹರಸಿ ಹಾರೈಸಿದರು. ಬಳಿಕ ಮೀನಾ ಲಗ್ನದಲ್ಲಿ ಮಂಗಳವಾದ್ಯ ಮೊಳಗುತ್ತಿದ್ದಂತೆ ಅರಳಿ ಮರದ ಪರವಾಗಿ ಬಾಲಕೃಷ್ಣ ಅವರೇ ನೆಲ್ಲಿಗಿಡಕ್ಕೆ ತಾಳಿಕಟ್ಟಿ ವಿವಾಹವನ್ನು ಪೂರೈಸಿದರು. 

ರೈತರು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು: ಸಚಿವ ಚಲುವರಾಯಸ್ವಾಮಿ

ನೆರೆದಿದ್ದ ಎಲ್ಲರೂ ಅಕ್ಷತೆಯನ್ನು ಹಾಕಿ ನೂರ್ಕಾಲ ಬಾಳಿ ಎಂದು ಹಾರೈಸಿದರು. ಇಷ್ಟೇ ಏಕೆ ಮದುವೆಗೆ ಆಗಮಿಸಿದ್ದ ನೂರಾರು ಜನರಿಗೆ ಬೆಳಿಗ್ಗೆ ತಿಂಡಿ, ಮಧ್ಯಾಹ್ನ ಬೂರಿ ಭೋಜ ಇತ್ತು. ಎಲ್ಲರೂ ಮದುವೆ ಊಟ ಸವಿದು ಸಂಭ್ರಮಿಸಿದರು. ನೋಡಿದ್ರಲಾ ಒಟ್ಟಿನಲ್ಲಿ ಕೊಡಗಿನ ಕಡಗದಾಳು ಗ್ರಾಮದಲ್ಲಿ ನಡೆದಿರುವ ವಿಶೇಷ ವಿವಾಹವೊಂದು ಎಲ್ಲರ ಹುಬ್ಬೇರುವಂತೆ ಮಾಡಿದೆ.

Follow Us:
Download App:
  • android
  • ios