Asianet Suvarna News Asianet Suvarna News

ಹುಬ್ಬಳ್ಳಿ-ಧಾರವಾಡ: ಗ್ರಾಮೀಣ ಭಾಗದಲ್ಲೂ ಇದೆ ಗಾಂಜಾ ಘಾಟು!

ಕಲಘಟಗಿ, ಹುಬ್ಬಳ್ಳಿ ಗ್ರಾಮೀಣ, ಧಾರವಾಡ ಗ್ರಾಮೀಣದಲ್ಲಿ ಅವ್ಯಾಹತ ಗಾಂಜಾ ಮಾರಾಟ| ಕೆರೆ-ಹಳ್ಳದ ದಂಡೆ, ತೋಟದ ಮನೆಗಳು, ಪಡಾ ಹೊಲಗಳಲ್ಲಿ ಏರುತ್ತಿದೆ ಗಾಂಜಾ ನಶೆ| ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ವಿಶೇಷ ತಂಡ ರಚನೆ: ಎಸ್ಪಿ ವರ್ತಿಕಾ ಕಟಿಯಾರ| 

Marijuana is Available in Rural Areas in Dharwad District
Author
Bengaluru, First Published Sep 10, 2020, 9:15 AM IST

ಬಸವರಾಜ ಹಿರೇಮಠ

ಧಾರವಾಡ(ಸೆ.10): ಗಾಂಜಾ ಘಾಟು ಹುಬ್ಬಳ್ಳಿ-ಧಾರವಾಡ ಅವಳಿ ನಗರ ಪ್ರದೇಶಕ್ಕಷ್ಟೇ ಸೀಮಿತವಾಗಿಲ್ಲ. ಜಿಲ್ಲೆಯ ಗ್ರಾಮೀಣ ಪ್ರದೇಶದಲ್ಲೂ ಪಸರಿಸಿದೆ. ಗಾಂಜಾ ನಶೆ ಏರಿಸಿಕೊಳ್ಳಲು ಗ್ರಾಮೀಣ ಜನರೇನೂ ಹಿಂದೆ ಬಿದ್ದಿಲ್ಲ..!

ಗಾಂಜಾ ಎಂಬ ಮಾದಕತೆ ಬಳಸಲು ನಗರ ಪ್ರದೇಶದ ಜನರಿಗೆ ತುಸು ಭಯ. ಆದರೆ, ಗ್ರಾಮೀಣ ಜನರಿಗೆ ಹೊಲಗಳ ದಿಬ್ಬ, ಹಳ್ಳ-ಕೊಳ್ಳಗಳ ದಂಡೆಗಳಂತಹ ಅನೇಕ ಸ್ಥಳಗಳು ಲಭ್ಯ. ಇಸ್ಟೀಟು ಆಟ, ಕುಡಿತದ ಜತೆಗೆ ಗಾಂಜಾದ ನಶೆ ಏರಿಸಿಕೊಳ್ಳುವ ಸಾಕಷ್ಟು ಅವಕಾಶಗಳಿವೆ. ಹೀಗಾಗಿ ಜಿಲ್ಲೆಯ ಎಲ್ಲ ತಾಲೂಕುಗಳಲ್ಲಿ ಮಾದಕ ದ್ರವ್ಯ ಮಾರಾಟ ಅವ್ಯಾಹತವಾಗಿದೆ.

ಗಾಂಜಾ ಮಾರಾಟ ಕುರಿತಂತೆ ಜಿಲ್ಲಾ ಪೊಲೀಸ್‌ ಇಲಾಖೆಯ ಮಾಹಿತಿ ಪ್ರಕಾರ, 2019ರಲ್ಲಿ ನಾಲ್ಕು ಪ್ರಕರಣಗಳು ಹಾಗೂ 2020ರ ಈ ವರೆಗೆ ಐದು ಪ್ರಕರಣಗಳು ಮಾತ್ರ ದಾಖಲಾಗಿವೆ. ಕುಂದಗೋಳ, ಕಲಘಟಗಿ, ಹುಬ್ಬಳ್ಳಿ ಗ್ರಾಮೀಣ, ನವಲಗುಂದ ಹಾಗೂ ಧಾರವಾಡ ಗ್ರಾಮೀಣದಲ್ಲಿ ಈ ಪ್ರಕಣಗಳು ದಾಖಲಾಗಿದ್ದು ಎರಡು ವರ್ಷಗಳಲ್ಲಿ ಅಂದಾಜು ಹತ್ತಾರು ಕೆಜಿಗಟ್ಟಲೇ ಗಾಂಜಾ ವಶಪಡಿಸಿಕೊಂಡು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಅಟ್ಟಲಾಗಿದೆ. ಕಳೆದ ಎರಡು ದಿನಗಳ ಹಿಂದಷ್ಟೇ ಕಲಘಟಗಿಯ ಹನ್ನೆರೆಡು ಮಠದ ಬಳಿ ಅಕ್ರಮವಾಗಿ ಗಾಂಜಾ ಎಲೆಗಳನ್ನು ಮಾರುತ್ತಿದ್ದ ವ್ಯಕ್ತಿಯನ್ನು ಬಂಧಿಸಿ 7500 ಮೌಲ್ಯದ 300 ಗ್ರಾಂ ಗಾಂಜಾ ವಶಪಡಿಸಿಕೊಂಡಿರುವನ್ನು ಸ್ಮರಿಸಬಹುದು.

ಛೋಟಾ ಮುಂಬೈ ಹುಬ್ಬಳ್ಳಿಗೆ ಗಡಿಭಾಗದಿಂದಲೇ ಬರುತ್ತೆ ಗಾಂಜಾ!

ಎಚ್ಚರಗೊಂಡ ಪೊಲೀಸರು:

ರಾಜ್ಯದಲ್ಲಿ ಡ್ರಗ್ಸ್‌ ಕುರಿತಂತೆ ಎಲ್ಲೆಡೆ ಜೋರಾದ ಚರ್ಚೆ ನಡೆಯುತ್ತಿರುವ ಕಾರಣ ಜಿಲ್ಲೆಯ ಪೊಲೀಸರು ಸಹ ಎಚ್ಚರಗೊಂಡಿದ್ದು ಅಕ್ರಮ ಗಾಂಜಾ ಮಾರುತ್ತಿದ್ದವರ ಹೆಡೆಮುರಿ ಕಟ್ಟಲು ಸಜ್ಜಾಗಿದ್ದಾರೆ. ಎಲ್ಲರ ಕಣ್ಣು ತಪ್ಪಿಸಿ ಸಾಕಷ್ಟುಕಡೆಗಳಲ್ಲಿ ಗ್ರಾಮೀಣ ಭಾಗದಲ್ಲಿ ಗಾಂಜಾ ಬೆಳೆಯಲಾಗಿದ್ದು, ಪೊಲೀಸರು ಹಗಲು-ರಾತ್ರಿ ಹುಡುಕಾಟ ನಡೆಸಿದ್ದಾರೆ. ಪೊಲೀಸ್‌ ಇಲಾಖೆ ಹಿರಿ ಅಧಿಕಾರಿಗಳ ಮಾಹಿತಿ ಪ್ರಕಾರ ಎರಡ್ಮೂರು ದಿನಗಳಲ್ಲಿ ಜಿಲ್ಲೆಯ ಗ್ರಾಮೀಣದಲ್ಲಿ ದೊಡ್ಡ ಮಟ್ಟದ ಅಕ್ರಮ ಗಾಂಜಾ ಸಿಗಲಿದೆ ಎಂಬ ಮಾಹಿತಿ ಇದೆ.

ಗಾಂಜಾ ಬೆಳೆಯುತ್ತಾರೆ:

ಹುಬ್ಬಳ್ಳಿ-ಧಾರವಾಡ ಅವಳಿ ನಗರದಿಂದ ಬೇಡಿಕೆ ಪ್ರಕಾರ ಗ್ರಾಮೀಣ ಪ್ರದೇಶಕ್ಕೆ ಪಾಕೆಟ್‌ ರೂಪದಲ್ಲಿ ಬರುತ್ತದೆ. ಇನ್ನು, ಹೊಲಗಳಲ್ಲಿ ಯಾರಿಗೂ ಕಾಣದಂತೆ ಗಾಂಜಾ ಬೆಳೆ ಬೆಳೆದು ಎಲೆಗಳನ್ನು ಹಾಳೆಗಳಲ್ಲಿ ಸುತ್ತಿಟ್ಟು ಮಾರಾಟಲಾಗುತ್ತದೆ. ಅಧಿಕೃತ ಮಾಹಿತಿ ಮೇರೆಗೆ ಪೊಲೀಸರು ಗಾಂಜಾ ಮಾರಾಟಗಾರರನ್ನು ಬಂಧಿಸಿ ಪ್ರಕರಣ ದಾಖಲಿಸಿದ್ದು ತೀರಾ ಕಡಿಮೆ. ಅನಧಿಕೃತವಾಗಿ ಗ್ರಾಮೀಣ ಪ್ರದೇಶದಲ್ಲಿ ಸಾಕಷ್ಟುಪ್ರಕರಣಗಳಲ್ಲಿ ಗಾಂಜಾ ನಶೆಯನ್ನು ಜನತೆ ಏರಿಸಿಕೊಳ್ಳುತ್ತಿದ್ದಾರೆ.

ಜಿಲ್ಲೆಯ ವಿವಿಧ ತಾಲೂಕುಗಳ ಪೈಕಿ ಕಲಘಟಗಿಯಲ್ಲಿ ಗಾಂಜಾ ಘಾಟು ತುಸು ಹೆಚ್ಚಿದೆ. ಕಿರಾಣಿ ಅಂಗಡಿ, ಪಾನ್‌ ಶಾಪ್‌ ಅಂತಹ ಅಂಗಡಿಗಳಲ್ಲಿ ಅನಧಿಕೃತವಾಗಿ ಮಾರಲಾಗುತ್ತಿದೆ. ಪೊಲೀಸರ ಭಯ ಇದ್ದರೂ ಸಹ ಕಣ್ತಪ್ಪಿಸಿ ಮಾರಾಟ ಮಾಡಲಾಗುತ್ತಿದೆ. ಲಾಕ್‌ಡೌನ್‌ ನಿಮಿತ್ತ ನೌಕರಿ ಕಳೆದುಕೊಂಡ ಯುವಕರು ತಮ್ಮೂರುಗಳಿಗೆ ಮರಳಿದ್ದು ನಿಧಾನವಾಗಿ ಮಾದಕ ವ್ಯಸನಿಗಳುತ್ತಿದ್ದಾರೆ. ಗೆಳೆಯರೊಡನೆ ಪಾರ್ಟಿಗಳು ನಡೆಯುತ್ತಿದ್ದು ಅಲ್ಲಿ ಗಾಂಜಾ ಬಳಕೆಯಾಗುತ್ತಿದೆ. ಇನ್ನು, ಹಬ್ಬ-ಹರಿದಿನ ಹಾಗೂ ವಿಶೇಷ ದಿನಗಳಲ್ಲಿ ಮದ್ಯದ ನಶೆಯೊಂದಿಗೆ ಗಾಂಜಾ ಪಾರ್ಟಿಗಳೇ ಆಗುತ್ತಿದ್ದು ಈ ಸಂದರ್ಭದಲ್ಲಿ ಅನೇಕ ಬಾರಿ ಅಪರಾಧಗಳು ನಡೆದಿರುವ ಉದಾಹರಣೆಗಳಿವೆ. ಈ ಹಿನ್ನೆಲೆಯಲ್ಲಿ ಜಿಲ್ಲೆಯ ಪೊಲೀಸರು ತುಸು ಎಚ್ಚರಿಕೆ ವಹಿಸಿ ಗಾಂಜಾ ಕುಳಗಳನ್ನು ಕಟ್ಟಿಹಾಕುವ ಕೆಲಸವಾಗಬೇಕಿದೆ.

ತಮ್ಮ ಅಧಿಕಾರವಧಿಯ ಎರಡು ವರ್ಷಗಳಲ್ಲಿ ಒಂಭತ್ತು ಪ್ರಕರಣಗಳಾಗಿದ್ದು ಗಾಂಜಾ ವಶಪಡಿಸಿಕೊಳ್ಳಲಾಗಿದೆ. ಜಿಲ್ಲೆಯ ಗ್ರಾಮೀಣದಲ್ಲಿ ಗಾಂಜಾ ಮಾರಾಟ ತಡೆಯಲು ವಿಶೇಷ ತಂಡ ರಚಿಸಿದ್ದು ಸಂಪೂರ್ಣ ಗಾಂಜಾ ಮುಕ್ತ ಜಿಲ್ಲೆಯನ್ನಾಗಿ ಮಾಡಲು ಕ್ರಮತೆಗೆದುಕೊಳ್ಳಲಾಗುವುದು ಎಂದು ಪೊಲೀಸ್‌ ವರಿಷ್ಠಾಧಿಕಾರಿ ವರ್ತಿಕಾ ಕಟಿಯಾರ ಅವರು ಹೇಳಿದ್ದಾರೆ. 
 

Follow Us:
Download App:
  • android
  • ios