Asianet Suvarna News Asianet Suvarna News

ಛೋಟಾ ಮುಂಬೈ ಹುಬ್ಬಳ್ಳಿಗೆ ಗಡಿಭಾಗದಿಂದಲೇ ಬರುತ್ತೆ ಗಾಂಜಾ!

ಕೆಜಿಗಟ್ಟಲೇ ಬರುತ್ತೆ; ಇಲ್ಲಿಂದ ಗ್ರಾಂಗಳ ಲೆಕ್ಕದಲ್ಲಿ ಸರಬರಾಜು ಮಾಡಲಾಗುತ್ತದೆ| ಬಸ್‌, ಕಾರುಗಳ ಮೂಲಕ ಅಲ್ಲಿಂದ ಬರುತ್ತದೆ| ದೊಡ್ಡ ಜಾಲವೇ ಇದ್ದರೂ ಪೊಲೀಸರ ಕೈಗೆ ಸಿಗುವುದು ಬರೀ ಸಣ್ಣ ಪುಟ್ಟ ಹುಡುಗರು ಮಾತ್ರ| 

Marijuana Comes to Hubballi from Border
Author
Bengaluru, First Published Sep 6, 2020, 12:32 PM IST

ಶಿವಾನಂದ ಗೊಂಬಿ

ಹುಬ್ಬಳ್ಳಿ(ಸೆ.06):‘ಛೋಟಾ ಮುಂಬೈ’ ಹುಬ್ಬಳ್ಳಿಯಲ್ಲಿ ನಶೆ ಏರಿಸುವ ಗಾಂಜಾದ ದೊಡ್ಡ ಜಾಲವೇ ಇದೆ. ದಶಕಗಳಿಂದಲೇ ಇಲ್ಲಿ ಗಾಂಜಾ ವಹಿವಾಟು ಎಗ್ಗಿಲ್ಲದೇ ನಡೆಯುತ್ತಿದೆ. ಹಾಗಾದರೆ ಮಹಾನಗರಕ್ಕೆ ಬರುವಂತಹ ಗಾಂಜಾದ ಮೂಲ ಯಾವುದು? ಬರುವುದು ಹೇಗೆ? ಎಂಬೆಲ್ಲ ಪ್ರಶ್ನೆಗಳು ಸಾಮಾನ್ಯವಾಗಿ ಕಾಡುತ್ತವೆ.

ಈ ಪ್ರಶ್ನೆಗಳಿಗೆ ಉತ್ತರ ಹುಡುಕಲು ಪ್ರಯತ್ನಿಸಿದರೆ ದೊಡ್ಡ ಶಾಕ್‌ ಆಗುತ್ತದೆ. ಹುಬ್ಬಳ್ಳಿಗೆ ಆಂಧ್ರಪ್ರದೇಶ, ಗೋವಾ ರಾಜ್ಯಗಳಿಂದ ಬರುತ್ತದೆ. ಇನ್ನೂ ಮಹಾರಾಷ್ಟ್ರಕ್ಕೆ ಹೊಂದಿಕೊಂಡಂತಿರುವ ಕೆಲ ಗ್ರಾಮಗಳಲ್ಲಿ ಗಾಂಜಾ ಬೆಳೆಯಲಾಗುತ್ತದೆ. ರಾಯಚೂರು, ಬಳ್ಳಾರಿ ಮತ್ತಿತರರ ಜಿಲ್ಲೆಗಳ ಗಡಿಯಂಚಿನ ಗ್ರಾಮಗಳಲ್ಲಿ ಬೆಳೆಯುವ ಗಾಂಜಾ ಇಲ್ಲಿಗೆ ಸರಬರಾಜು ಆಗುತ್ತದೆ ಎಂದು ಮೂಲಗಳು ತಿಳಿಸುತ್ತವೆ. ಇನ್ನೂ ಧಾರವಾಡ ಜಿಲ್ಲೆಯ ಕೆಲವು ತಾಲೂಕಿನ ಗಡಿ ಗ್ರಾಮಗಳಲ್ಲೂ ಗಾಂಜಾ ಬೆಳೆಯಲಾಗುತ್ತದೆ.

ಹೇಗೆ ಬರುತ್ತೆ?:

ಬಸ್‌, ರೈಲು, ಕಾರು, ಸರಕು ಸಾಗಾಣಿಕೆ ವಾಹನಗಳ ಮೂಲಕ ಇಲ್ಲಿಗೆ ಬರುತ್ತದೆ. ಗಾಂಜಾ ವಾಸನೆ ಬಾರದಂತೆ ಅತ್ಯಂತ ಅಚ್ಚುಕಟ್ಟಾಗಿ ಪ್ಯಾಕ್‌ ಮಾಡಲಾಗಿರುತ್ತದೆ. ಹಾಗೆ ನೋಡಿದರೆ 5, 10, 15, 20 ಹಾಗೂ 25 ಕೆಜಿಯ ಪಾರ್ಸಲ್‌ ಕೂಡ ಬರುತ್ತದೆ. ಇದನ್ನು ಇಲ್ಲಿನ ವ್ಯಕ್ತಿಯೊಬ್ಬ ಪಡೆದುಕೊಳ್ಳುತ್ತಾನೆ. ಆತ ಅದನ್ನು 1 ಅಥವಾ 2 ಕೆಜಿ ಲೆಕ್ಕದಲ್ಲಿ ಮತ್ತೆ ಪ್ರತ್ಯೇಕ ಪ್ಯಾಕ್‌ ಮಾಡಿ ಎಂಟ್ಹತ್ತು ಜನರಿಗೆ ಸರಬರಾಜು ಮಾಡುತ್ತಾನೆ. ಹೀಗೆ ಒಂದೆರಡು ಕೆಜಿ ಪಡೆದವರು ಅದನ್ನು ಗ್ರಾಂಗಳ ಪ್ಯಾಕೆಟ್‌ ಮಾಡುತ್ತಾರೆ. 5 ಗ್ರಾಂ ಅಥವಾ 10 ಗ್ರಾಂಗಳ ಪ್ಯಾಕೆಟ್‌ ಮಾಡಿ ಮಾರಾಟ ಮಾಡಲಾಗುತ್ತದೆ ಎನ್ನುವ ಸುದ್ದಿ ಬಲು ಜೋರಾಗಿದೆ.

ರಾಗಿಣಿ ಮತ್ತು ಇತರ ಅಮಲಿನ ಕತೆಗಳು!ಮದ್ಯ ಹಳೇದು, ಮದ್ದು ಹೊಸದು

ಹೀಗೆ 5 ಅಥವಾ 10 ಗ್ರಾಂಗಳ ಪ್ಯಾಕೆಟ್‌ಗಳೇ ಕಾಲೇಜ್‌ ಅಕ್ಕಪಕ್ಕದ ನಿರ್ಜನ ಪ್ರದೇಶಗಳಲ್ಲಿ ಹಾಗೂ ಇಲ್ಲಿನ ಕೆಲ ಬಡಾವಣೆ ಅಥವಾ ಗಲ್ಲಿಗಳಲ್ಲಿ ಮಾರಾಟವಾಗುತ್ತವೆ. 5 ಗ್ರಾಂ ಗಾಂಜಾ ಪ್ಯಾಕೆಟ್‌ 50 ಯಂತೆ ಮಾರಾಟವಾಗುತ್ತದೆ. ಇಲ್ಲಿಂದಲೇ ಧಾರವಾಡಕ್ಕೂ ರವಾನೆಯಾಗುತ್ತದೆ. ಕೆಲವೊಂದು ಹಬ್ಬ-ಹರಿದಿನಗಳಲ್ಲಿ ಇದರ ಬೆಲೆಯೂ ದುಪ್ಪಟ್ಟಾಗಿರುತ್ತದೆ. ಆಂಧ್ರಪ್ರದೇಶದಿಂದ ಬಂದಿದ್ದ 20 ಕೆಜಿ ಗಾಂಜಾವನ್ನು ಕಳೆದ ಒಂದೂವರೆ ವರ್ಷದ ಹಿಂದೆ ಪೊಲೀಸ್‌ ಇಲಾಖೆ ಪತ್ತೆ ಹಚ್ಚಿತ್ತು. ಆಂಧ್ರ ಪ್ರದೇಶದಿಂದ ಇಲ್ಲಿಗೆ ಗಾಂಜಾ ಪೂರೈಕೆಯಾಗುತ್ತಿದೆ ಎಂಬುದಕ್ಕೆ ಪುಷ್ಟಿನೀಡಿತ್ತು.

ಸಣ್ಣ ಪುಟ್ಟ ಕುಳಗಳೇ:

ಆರ್ಥಿಕ ಹಾಗೂ ಮಾದಕ ವಸ್ತುಗಳ ಅಪರಾಧ ಠಾಣೆಯ ಪೊಲೀಸರು ಕಳೆದ ಮೂರು ದಿನಗಳಿಂದ ನಿರಂತರವಾಗಿ ಬೇಟೆಯಾಡುತ್ತಿದ್ದಾರೆ. ಆದರೆ, ಮೂರು ಪ್ರಕರಣಗಳಲ್ಲೂ ಸಣ್ಣ ಪುಟ್ಟಪ್ರಕರಣಗಳಷ್ಟೇ ಪತ್ತೆಯಾಗುತ್ತಿದೆ. ಮೊದಲ ದಿನ 5 ಕೆಜಿ, 2ನೇ ದಿನ 1.7 ಕೆಜಿ, ಮೂರನೆಯವಾಗಿರುವ ಶನಿವಾರ 500 ಗ್ರಾಂ ಗಾಂಜಾವನ್ನು ವಶಕ್ಕೆ ಪಡೆಯಲಾಗಿದೆ. ಕಳೆದ ಒಂದೂವರೆ ವರ್ಷದ ಹಿಂದೆ ಆಂಧ್ರಪ್ರದೇಶದಿಂದ ಬಂದಿದ್ದ 20 ಕೆಜಿ ಗಾಂಜಾ ವಶ ಪಡೆದಿರುವುದನ್ನು ಹೊರತುಪಡಿಸಿದರೆ ಅಂಥ ದೊಡ್ಡ ಕಾರ್ಯಾಚರಣೆ ಮಾಡಿಯೇ ಇಲ್ಲ. ಬರೀ ಇಲ್ಲಿನ ಕಾಲೇಜ್‌, ಸಂದಿ-ಗೊಂದಿಗಳಲ್ಲಿ ಮಾರಾಟ ಮಾಡುವವರನ್ನು ಮಾತ್ರ ವಶಕ್ಕೆ ಪಡೆಯುವ ಕೆಲಸ ಪೊಲೀಸ್‌ ಇಲಾಖೆ ಮಾಡುತ್ತಿದೆ. ಆಳಕ್ಕಿಳಿದು ಗಾಂಜಾ ಮೂಲವನ್ನು ಪತ್ತೆ ಹಚ್ಚುವಲ್ಲಿ ಕಮಿಷನರೇಟ್‌ ವಿಫಲವಾಗಿದೆ ಎಂಬುದರಲ್ಲಿ ಯಾವುದೇ ಸಂಶಯವಿಲ್ಲ. ಗಾಂಜಾ ಘಮಲಿನ ಹಿಂದೆ ದೊಡ್ಡ ದೊಡ್ಡ ಕುಳಗಳ ಕೈಗಳಿವೆ. ಅವುಗಳನ್ನು ಪತ್ತೆ ಹಚ್ಚಲು ಪೊಲೀಸರು ಪ್ರಾಮಾಣಿಕವಾಗಿ ಪ್ರಯತ್ನಿಸಬೇಕಿದೆ ಎಂಬುದು ನಾಗರಿಕರ ಆಗ್ರಹ.

ಅತ್ತ ಬೆಂಗಳೂರಲ್ಲಿ ಡ್ರಗ್ಸ್‌ ಜಾಲದ ಮಾತು ಬಂದ ಕೂಡಲೇ ಇತ್ತ ಗಾಂಜಾ ಘಮಲುನ್ನು ನಾವು ಭೇದಿಸುತ್ತಿದ್ದೇವೆ ಎಂಬುದನ್ನು ತೋರಿಸುವುದಕ್ಕೆ ಈ ಕಾರ್ಯಾಚರಣೆ ಮಾಡಲಾಗುತ್ತಿದೆಯೇ ಎಂಬ ಪ್ರಶ್ನೆ ಕಾಡುತ್ತಿದೆ. ಈ ಮೂರು ದಿನಗಳಿಂದ ಗಾಂಜಾ ಮಾರಾಟ ಜಾಸ್ತಿಯಾಗಿದೆಯಾ? ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ. ಇನ್ನಾದರೂ ಛೋಟಾ ಮುಂಬೈಗೆ ಬರುವ ಗಾಂಜಾದ ಮೂಲವನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಲು ಪೊಲೀಸ್‌ ಶ್ರಮಿಸಬೇಕು ಎಂಬುದು ಪ್ರಜ್ಞಾವಂತರ ಆಗ್ರಹ.

ಹುಬ್ಬಳ್ಳಿ- ಧಾರವಾಡದಲ್ಲಿ ಗಾಂಜಾ ಸೇರಿದಂತೆ ಮಾದಕ ವಸ್ತುಗಳ ಮಾರಾಟ ವಿಪರೀತವಾಗಿರುವುದು ಇತ್ತೀಚಿನ ದಿನಗಳಲ್ಲಿ ಕಂಡು ಬರುತ್ತಿದೆ. ಬೇರೆ ಬೇರೆ ರಾಜ್ಯಗಳಿಂದ ಗಾಂಜಾ ಸರಬರಾಜು ಆಗುತ್ತದೆ ಎಂದು ಹೇಳಲಾಗುತ್ತಿದೆ. ಅದರ ಮೂಲವನ್ನು ಪತ್ತೆ ಹಚ್ಚಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಸಂಪೂರ್ಣ ಕಡಿವಾಣ ಹಾಕಬೇಕು ಎಂದು ಸಾಮಾಜಿಕ ಕಾರ್ಯಕರ್ತೆ ವೀಣಾ ಟೋಣಪಿ ಅವರು ಆಗ್ರಹಿಸಿದ್ದಾರೆ. 
 

Follow Us:
Download App:
  • android
  • ios