Asianet Suvarna News Asianet Suvarna News

ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಅಲ್ಪಪ್ರಮಾಣದ ಹೆಚ್ಚಳ

ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದು, ಸುಮಾರು 9514 ಕ್ಯುಸೆಕ್‌ ನೀರು ಅಣೆಕಟ್ಟೆಗೆ ಹರಿದುಬರುತ್ತಿದೆ. ಆದರೆ, ಕೆರೆಗಳನ್ನು ತುಂಬಿಸುವುದಕ್ಕೆ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿರುವುದರಿಂದ ನೀರಿನ ಮಟ್ಟದಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡುಬಂದಿದೆ. 

Marginal increase in KRS Dam inflows gvd
Author
First Published Jul 24, 2023, 10:23 PM IST

ಮಂಡ್ಯ (ಜು.24): ಕೆಆರ್‌ಎಸ್‌ ಜಲಾಶಯದ ಒಳಹರಿವಿನಲ್ಲಿ ಅಲ್ಪ ಪ್ರಮಾಣದ ಏರಿಕೆ ಕಂಡುಬಂದಿದ್ದು, ಸುಮಾರು 9514 ಕ್ಯುಸೆಕ್‌ ನೀರು ಅಣೆಕಟ್ಟೆಗೆ ಹರಿದುಬರುತ್ತಿದೆ. ಆದರೆ, ಕೆರೆಗಳನ್ನು ತುಂಬಿಸುವುದಕ್ಕೆ ಅಣೆಕಟ್ಟೆಯಿಂದ ನಾಲೆಗಳಿಗೆ ನೀರು ಬಿಡುಗಡೆ ಮಾಡಿರುವುದರಿಂದ ನೀರಿನ ಮಟ್ಟದಲ್ಲಿ ಕೊಂಚ ಪ್ರಮಾಣದ ಏರಿಕೆ ಕಂಡುಬಂದಿದೆ. ಶುಕ್ರವಾರ ರಾತ್ರಿ 4336 ಕ್ಯುಸೆಕ್‌ ಒಳಹರಿವು ದಾಖಲಾಗಿದ್ದರೆ, ಶನಿವಾರ ಬೆಳಗ್ಗೆ 6278 ಕ್ಯುಸೆಕ್‌ ಒಳಹರಿವಿತ್ತು. ಶನಿವಾರ ರಾತ್ರಿ ಒಳಹರಿವಿನ ಪ್ರಮಾಣ 7914 ಕ್ಯುಸೆಕ್‌ಗೆ ಹೆಚ್ಚಳವಾದರೆ, ಭಾನುವಾರ ಬೆಳಗಿನ ವೇಳೆಗೆ 9514 ಕ್ಯುಸೆಕ್‌ ಒಳಹರಿವು ದಾಖಲಾಗಿತ್ತು.

ಕೃಷ್ಣರಾಜಸಾಗರ ಜಲಾಶಯದ ಗರಿಷ್ಠ ಮಟ್ಟ124.80 ಅಡಿ ಇದ್ದು, ಹಾಲಿ ಜಲಾಶಯದಲ್ಲಿ 91.82 ಅಡಿ ನೀರು ಸಂಗ್ರಹವಾಗಿದೆ. ಅಣೆಕಟ್ಟೆಗೆ 9514 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ ಅಣೆಕಟ್ಟೆಯಿಂದ ಹೊರಕ್ಕೆ 5249 ಕ್ಯುಸೆಕ್‌ ನೀರನ್ನು ಬಿಡಲಾಗುತ್ತಿದೆ. ಇದರಲ್ಲಿ ನದಿಗೆ 2488 ಕ್ಯುಸೆಕ್‌, ವಿಶ್ವೇಶ್‌ವರಯ್ಯ ನಾಲೆಗೆ 2503 ಕ್ಯುಸೆಕ್‌, ಆರ್‌ಬಿಎಲ್‌ಎಲ್‌ ನಾಲೆಗೆ 150 ಕ್ಯುಸೆಕ್‌, ಎಲ್‌ಬಿಎಲ್‌ಎಲ್‌ ನಾಲೆಗೆ 58 ಕ್ಯುಸೆಕ್‌, ಎಂಸಿಸಿಡಬ್ಲ್ಯು ನಾಲೆಗೆ 50ಕ್ಯುಸೆಕ್‌ ನೀರು ಹರಿಸಲಾಗುತ್ತಿದೆ. ಪ್ರಸ್ತುತ ಅಣೆಕಟ್ಟೆಯಲ್ಲಿ 17.051 ಟಿಎಂಸಿ ಅಡಿ ನೀರು ಸಂಗ್ರಹವಾಗಿದೆ.

ಸುತ್ತೂರು, ಚುಂಚನಗಿರಿ ಎರಡು ಕಣ್ಣುಗಳಿದ್ದಂತೆ: ಸಚಿವ ಚಲುವರಾಯಸ್ವಾಮಿ

ಕಳೆದ ವರ್ಷ ಇದೇ ದಿನ ಅಣೆಕಟ್ಟು ಗರಿಷ್ಠ ಮಟ್ಟವನ್ನು ತಲುಪಿತ್ತು. ಅಂದು ಅಣೆಕಟ್ಟೆಗೆ 17458 ಕ್ಯುಸೆಕ್‌ ನೀರು ಹರಿದುಬರುತ್ತಿದ್ದರೆ, ಅಣೆಕಟ್ಟೆಯಿಂದ 19688 ಕ್ಯುಸೆಕ್‌ ನೀರನ್ನು ಹೊರಬಿಡಲಾಗುತ್ತಿತ್ತು. ಕೊಡಗು ಜಿಲ್ಲೆಯಲ್ಲಿ ಉತ್ತಮ ವರ್ಷಧಾರೆಯಾಗುತ್ತಿರುವ ಹಿನ್ನೆಲೆಯಲ್ಲಿ ಕೆಆರ್‌ಎಸ್‌ಗೆ ಹರಿದುಬರುತ್ತಿರುವ ಒಳಹರಿವಿನಲ್ಲಿ ಸ್ವಲ್ಪ ಪ್ರಮಾಣದ ಏರಿಕೆಯಾಗಿದೆ. ಹಾರಂಗಿ ಜಲಾಶಯದಿಂದ ಶನಿವಾರ ಸಂಜೆ 5 ಸಾವಿರ ಕ್ಯುಸೆಕ್‌ ನೀರನ್ನು ನದಿಗೆ ಹರಿಸಲಾಗುತ್ತಿದೆ. ಒಳಹರಿವನ್ನು ಹಂತ ಹಂತವಾಗಿ ಹೆಚ್ಚಿಸುವುದಾಗಿಯೂ ಅಣೆಕಟ್ಟೆಅಧಿಕಾರಿಗಳು ತಿಳಿಸಿದ್ದಾರೆ. ಇದರಿಂದ ಒಳಹರಿವಿನ ಪ್ರಮಾಣ ಮತ್ತಷ್ಟುಹೆಚ್ಚಾಗುವ ಸಾಧ್ಯತೆಗಳಿವೆ ಎಂದು ಹೇಳಲಾಗುತ್ತಿದೆ.

ಬೆಳೆಗಳಿಗೆ ನೀರು ಅನುಮಾನ: ಮುಂಗಾರು ಮಳೆ ವೈಫಲ್ಯ ಸಾಧಿಸಿರುವುದರಿಂದ ಕೆಆರ್‌ಎಸ್‌ ಅಣೆಕಟ್ಟೆಗೆ ನಿರೀಕ್ಷಿತ ಪ್ರಮಾಣದಲ್ಲಿ ಒಳಹರಿವು ದಾಖಲಾಗಿಲ್ಲ. ನೀರಿನ ಮಟ್ಟದಲ್ಲೂ ಏರಿಕೆಯಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಮುಂಗಾರು ಹಂಗಾಮಿಗೆ ನೀರು ಹರಿಸುವ ಸಾಧ್ಯತೆಗಳು ಕ್ಷೀಣಿಸಿವೆ. ಹಾಗಾಗಿ ರೈತರು ಯಾವುದೇ ಹೊಸ ಬೆಳೆ ಬೆಳೆಯದಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್‌.ಚಲುವರಾಯಸ್ವಾಮಿ ಆದಿಯಾಗಿ ನೀರಾವರಿ ಇಲಾಖೆ ಅಧಿಕಾರಿಗಳು ರೈತರಲ್ಲಿ ಮನವಿ ಮಾಡಿದ್ದಾರೆ. ಕೆಆರ್‌ಎಸ್‌ ಅಚ್ಚುಕಟ್ಟು ವ್ಯಾಪ್ತಿಯ ನಾಲೆಗಳಿಗೆ ನೀರು ಹರಿಸುವ ಸಂಬಂಧ ನೀರಾವರಿ ಸಲಹಾ ಸಮಿತಿ ಸಭೆ ಕರೆದು ತೀರ್ಮಾನ ಕೈಗೊಳ್ಳದಿರುವುದರಿಂದ ಕೃಷಿ ಇಲಾಖೆ ಅಧಿಕಾರಿಗಳು ಭತ್ತದ ಬಿತ್ತನೆ ಬೀಜಗಳನ್ನು ರೈತರಿಗೆ ವಿತರಿಸುತ್ತಿಲ್ಲ. 

ಕೆಆರ್‌ಎಸ್‌ನಲ್ಲಿ ನೀರಿದ್ದಾಗ ಪರ್ಯಾಯ ಸಂಗ್ರಹಣೆ ಆಲೋಚನೆಗಳಿಲ್ಲವೇಕೆ?

ಜುಲೈ ಅಂತ್ಯ ಹಾಗೂ ಆಗಸ್ಟ್‌ ಮೊದಲವಾರದವರೆಗೆ ಮಳೆ ನೋಡಿಕೊಂಡು ತೀರ್ಮಾನ ಕೈಗೊಳ್ಳುವುದಕ್ಕೆ ನಿರ್ಧರಿಸಿದ್ದಾರೆ. ಬೆಳೆದು ನಿಂತಿರುವ ಬೆಳೆಗಳಿಗೆ ಕಬ್ಬು ಬೆಳೆಗೆ ನೀರಿನ ಅಗತ್ಯವಿದೆ. ಒಂದು ಅಥವಾ ಎರಡು ಕಟ್ಟು ನೀರು ಹರಿಸಿ ಬೆಳೆಗಳನ್ನು ರಕ್ಷಣೆ ಮಾಡುವಂತೆ ರೈತರು ಮೊರೆ ಇಡುತ್ತಿದ್ದಾರೆ. ಆದರೆ, ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಜಿಲ್ಲೆಯ ಕೆರೆ-ಕಟ್ಟೆಗಳಲ್ಲಿ ಶೇ.20ಕ್ಕಿಂತ ಕಡಿಮೆ ನೀರು ಸಂಗ್ರಹವಾಗಿರುವುದರಿಂದ ಅವುಗಳನ್ನು ತುಂಬಿಸಲು ಅಣೆಕಟ್ಟೆಯಿಂದ ನೀರು ಹರಿಸುತ್ತಿದ್ದಾರೆ. ಜನ-ಜಾನುವಾರುಗಳ ಕುಡಿಯುವ ನೀರಿನ ಉದ್ದೇಶಕ್ಕಾಗಿ ನೀರು ಹರಿಸುತ್ತಿದ್ದು, ಹೊಸ ಬೆಳೆ ಬೆಳೆಯದಂತೆ, ಬೆಳೆದು ನಿಂತಿರುವ ಬೆಳೆಗಳಿಗೆ ನೀರು ಹರಿಸಿ ವ್ಯರ್ಥ ಮಾಡದಂತೆ ಮನವಿ ಮಾಡಿದ್ದಾರೆ.

Follow Us:
Download App:
  • android
  • ios