ಶೇಷಮೂರ್ತಿ ಅವಧಾನಿ 

ಕಲಬುರಗಿ(ಫೆ.09): ತೊಗರಿ ಕಣಜ, ಕವಿರಾಜ ಮಾರ್ಗಕಾರನ ನೆಲ ಕಲಬುರಗಿಯಲ್ಲಿ ಫೆ.5ರಿಂದ 3 ದಿನಗಳ ಕಾಲ ನಡೆದ 85ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಹಿಂದಿನ ಸಮ್ಮೇಳನಗಳ ಎಲ್ಲ ದಾಖಲೆಗಳನ್ನೆಲ್ಲ ಮುರಿದು ನವ ನವೀನ ದಾಖಲೆಗಳೊಂದಿಗೆ ಕನ್ನಡಿಗರ ಮಾತೃಸಂಸ್ಥೆ ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಸರಣಿಯಲ್ಲಿ ನಭೂತೋ... ಎಂಬಂತೆ ಗಟ್ಟಿ ಸ್ಥಾನ ಪಡೆದುಕೊಂಡಿದೆ. 

ಭಾಷಣ ಮಾಡೋವಾಗ ಮೋದಿ ಮೋದಿ ಘೋಷಣೆ: ಡೋಂಟ್ ಕೇರ್ ಎಂದ ಸಿದ್ದು

ಬರೋಬ್ಬರಿ 33 ವರ್ಷಗಳ ನಂತರ ಕಲಬುರಗಿಯಲ್ಲಿ ನಡೆದ ಸಮ್ಮೇಳನ ಇದಾಗಿತ್ತು. ಸಮ್ಮೇಳನಕ್ಕೆ ವಿಶ್ವ ವಿದ್ಯಾಲಯ ಅಂಗಳ ಆಯ್ಕೆ ಮಾಡಿದ್ದರಿಂದ ಜನ ಬರುತ್ತಾರೋ ಇಲ್ಲವೋ ಎಂಬ ಅಳಕು ಸಂಘಟಕರಿಗೆ ಕಾಡಿತ್ತು. ಆದರೆ ಸಂಘಟಕರ ಅಂಜಿಕೆ, ಅಳಕನ್ನೆಲ್ಲ ದೂರ ಸರಿಸಿದಂತೆ ಸಮ್ಮೇಳನಕ್ಕೆ ಜನಸಾಗರವೇ ಹರಿದು ಬಂದಿತ್ತು. ನಿತ್ಯ ಒಂದೂವರೆಯಿಂದ 2 ಲಕ್ಷದಂತೆ 3 ದಿನಗಳ ಸಮ್ಮೇಳನದಲ್ಲಿ ಬಂದುಹೋದ ಜನಸಂಖ್ಯೆ 6 ಲಕ್ಷಕ್ಕೂ ಅಧಿಕ ಎಂಬುದು ಈ ಸಮ್ಮೇಳನದ ಹೊಸ ದಾಖಲೆ. 

ಕಲಬುರಗಿ ಸಾಹಿತ್ಯ ಸಮ್ಮೇಳನದಲ್ಲಿ ಸುರೇಶ್‌, ಬಳಿಗಾರ್‌ ಜುಗಲ್ಬಂದಿ

ತಡೆದ ಮಳೆ ಧೋ ಎಂದು ಸುರಿಯುವಂತೆ ಕಲಬುರಗಿಯಲ್ಲಿ ಮೂರು ದಶಕಗಳ ನಂತರ ನಡೆದ ಸಾಹಿತ್ಯ ಜಾತ್ರೆಯಲ್ಲಿ ಪಾಲ್ಗೊಂಡು ಕನ್ನಡ ರಥವನ್ನೆಳೆಯಲು ಜನಸಾಗರವೇ ಹರಿದು ಬಂದಿತ್ತು. ನಗರ ಪ್ರದೇಶಕ್ಕಿಂತ ಗ್ರಾಮೀಣ ಕಲಬುರಗಿ ಜನರು ಕುಟಂಬ ಸಮೇತ ತಮ್ಮೂರಿನ, ತಮ್ಮ ಮನೆಯ, ನೆಂಟರ ಹಬ್ಬ, ಸಮಾರಂಭದಂತೆ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ 3 ದಿನ ಪಾಲ್ಗೊಂಡು ಸಾಹಿತ್ಯ ಸವಿ ಸವಿದರು, ಊಟ ಮಾಡಿ ಆನಂದಪಟ್ಟರು, ಗೋಷ್ಠಿಗಳಿಗೆ ಕಿವಿಯಾಗಿ ಹೊಸ ವಿಚಾರಗಳಿಗೆ ಮನಸ್ಸು ಒಪ್ಪಿಸಿದ್ದರು. ಸಾಂಸ್ಕೃತಿಕ ರಂಗನ್ನೆಲ್ಲ ಕಣ್ಣಲ್ಲಿ ತುಂಬಿಕೊಡು ಬಹುಕಾಲ ಆ ಬಿಂಬಗಳನ್ನೆ ಕಾಪಿಟ್ಟುಕೊಳ್ಳುವ ಒಲವು ತೋರಿದರು.

ಕಲಬುರಗಿ ಸಮ್ಮೇಳನದ ದಾಖಲೆಗಳಿವು

1. ಫೆ.5ರಿಂದ ಫೆ.7ರ ವರೆಗಿನ 3 ದಿನಗಳ ಸಮ್ಮೇಳನದಲ್ಲಿ ಬಂದು ಹೋದವರು ಅಂದಾಜು 6 ಲಕ್ಷ ಜನ 

2. ಸಮ್ಮೇಳನಕ್ಕೆ 23 ಸಾವಿರ ನೋಂದಣಿ ಮಾಡಿದ್ದು ಹೊಸ ದಾಖಲೆ 

3. 3 ದಿನಗಳ ಸಮ್ಮೇಳನದಲ್ಲಿ ಊಟ, ಉಪಹಾರ ಸವಿದವರು 5 ರಿಂದ 6 ಲಕ್ಷ ಮಂದಿ 

4. ಆರೂವರೆ ಕಿ.ಮೀ. ಉದ್ದ ಸಮ್ಮೇಳನಾಧ್ಯಕ್ಷರ ಮೆರವಣಿಗೆ ದಾರಿ 

5. 35 ಎಕರೆ ವಿಶಾಲ ಪ್ರದೇಶದಲ್ಲಿ ಏಕಕಾಲಕ್ಕೆ ಎಲ್ಲ ಸಕಲ ಸವಲತ್ತು ದೊರಕುವಂತಾದ ಸಮ್ಮೇಳನ 

6. 6 ಸಾವಿರ ಚದರ ಅಡಿ ಮುಖ್ಯ ವೇದಿಕೆ ವಿಸ್ತೀರ್ಣ 

7. 1,18,800 ಚದರ ಅಡಿ ವಿಶಾಲವಾದ ಸಾರ್ವಜನಿಕರಿಗಾಗಿ ಪೆಂಡಾಲ್

8. 1.19 ಲಕ್ಷ ಚದರ ಅಡಿ ವಿಸ್ತೀರ್ಣ, 46 ಅಡಿ ಎತ್ತರದ ಪೆಂಡಾಲ್

ಕನ್ನಡದ ಕಮಿಷ್ನರ್ ಶರತ್ ಸತ್ಸಂಕಲ್ಪ 

ಆರಂಭದಲ್ಲಿ ಅವರಿವರ ಸಿಟ್ಟು, ಸೆಡವಿನಲ್ಲಿ ಸಮ್ಮೇಳನ ನರಳಿದರೂ ಇಲ್ಲಿನ ಡಿಸಿ ಶರತ್ ತಮ್ಮ ಸಂಬಳದ 1 ಲಕ್ಷ ರು. ದೇಣಿಗೆ ನೀಡಿ ತಾವೇ ಹೆಗಲಿಗೆ ಜೋಳಿಗೆ ಹಾಕಿದಾಗ ಕಲಬುರಗಿ ಸ್ವಾಭಿಮಾನಿ ಕನ್ನಡಿಗರು ನೀಡಿದ ಸಹಕಾರ ಅಷ್ಟಿಷ್ಟಲ್ಲ. ಸಾಕಷ್ಟು ಜನ ತಾವೇ ಬಂದು ಡಿಸಿ ಶರತ್‌ರನ್ನು ಕಂಡು ದೇಣಿಗೆ ನೀಡಿ ಸಹಕರಿಸಿದರು. ಜಿಲ್ಲಾಧಿಕಾರಿ ಬಿ. ಶರತ್ ಅವರನ್ನು ಈ ಸಮ್ಮೇಳನದೊಂದಿಗೆ ಕಲಬುರಗಿ ಮಂದಿ ‘ಕನ್ನಡದ ಕಮೀಷ್ನರ್’ಎಂದೇ ಗುರುತಿಸುವಂತಾಯ್ತು. 

ಆಕ್ಷೇಪ ಎತ್ತಿದವರೇ ಮೌನವಾಗಿದ್ದರು 

ಹುಬ್ಬಳ್ಳಿ ಬೈರು ಕೆಟರರ್ಸ್‌ಗೆ ಊಟೋಪಚಾರದ ಹೊಣೆ ಹೊರಿಸಿದಾಗ ಸ್ಥಳೀಯರು ಆಕ್ಷೇಪಿಸಿದ್ದರು. ಸಮ್ಮೇ ಳನದ ಮೊದಲ ದಿನದಿಂದಲೇ ಹರಿದು ಬಂದ ಜನಜಾತ್ರೆ ಕಂಡು ಆಕ್ಷೇಪ ಎತ್ತಿದವರೇ ಮೌನವಾಗಿದ್ದರು. ಈ ಪರಿ ಜನಜಾತ್ರೆ ಸೇರುತ್ತದೆ ಎಂಬು ದನ್ನು ಕನಸಲ್ಲೂ ಯೋಚಿಸರಿಲ್ಲ. ನಮ್ಮ ಕೈಲಿ ಇಂತಹ ಊಟೋಪಚಾರ ವ್ಯವಸ್ಥೆ ಮಾಡಲಾಗುತ್ತಿರಲಿಲ್ಲ ಬಿಡಿ ಎಂದುಕೊಂಡರು. 3 ದಿನ ಬಂದ ಜನರ ಪ್ರವಾಹ ಕಂಡೇ ರಾಜ್ಯದ ಜನರೇ ದಂಗಾಗಿದ್ದು ಈಗ ಇತಿಹಾಸ. 

ಪ್ಲಾಸ್ಟಿಕ್ ಮುಕ್ತ ಸಮ್ಮೇಳನ! 

ಕಲಬುರಗಿ ಸಮ್ಮೇಳನ ಸಂಪೂರ್ಣವಾಗಿ ಪ್ಲಾಸ್ಟಿಕ್ ಮುಕ್ತವಾಗಿದ್ದು ವಿಶೇಷ. ಸಮ್ಮೇಳನದ ಪ್ರತಿನಿಧಿಗಳಿಗೆ, ಸಾರ್ವಜನಿಕರಿಗೆ, ಅಧಿಕಾರಿಗಳಿಗೆ ವ್ಯವಸ್ಥೆಗೊಳಿಸಿದ ಊಟದಲ್ಲಿ ಪ್ಲಾಸ್ಟಿಕ್ ಸಂಪೂರ್ಣ ನಿಷೇಧಗೊಂಡಿತ್ತು. ಅಲ್ಲಲ್ಲಿ ನೀರಿನ ಬಾಟಲ್ ಮಾರಾಟ ಹೊರತುಪಡಿಸಿದರೇ ಊಟ ಬಡಿಸಲು ಬಂದವರೆಲ್ಲರಿಗೂ ಅಡಕೆ ಹಾಳೆಯಿಂದ ತಯಾರಿಸಿದ ಗಟ್ಟಿ ತಟ್ಟೆ ನೀಡಲಾಯಿ ತು. ಊಟದ ಮನೆ, ಕುಡಿವ ನೀರಿನ ಸವಲತ್ತಿನ ಅಕ್ಕಪಕ್ಕ ಸ್ವಚ್ಛವಾಗಿದ್ದ ಕಾರಣ ಬಂದವರು ಶ್ಲಾಘಿಸಿದರು.