Asianet Suvarna News Asianet Suvarna News

ಕುಕ್ಕೆ ದೇವಳದಲ್ಲಿ ಇಂದಿನಿಂದ ಸೇವೆಗಳು ಆರಂಭ, 29ರಿಂದ ಸರ್ಪಸಂಸ್ಕಾರ ಆರಂಭ

  • ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು. 27ರಂದು ಸೇವೆಗಳು ಆರಂಭಗೊಳ್ಳಲಿದೆ. 
  • ಪ್ರಧಾನ ಸೇವೆಗಳಾದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29ರಿಂದ ಪ್ರಾರಂಭ
many pooja Begins in Kukke subramanya snr
Author
Bengaluru, First Published Jul 27, 2021, 7:21 AM IST

 ಸುಬ್ರಹ್ಮಣ್ಯ (ಜು.27):  ನಾಗಾರಾಧನೆಯ ಪುಣ್ಯ ತಾಣ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ಜು. 27ರಂದು ಸೇವೆಗಳು ಆರಂಭಗೊಳ್ಳಲಿದೆ. ಆದರೆ ಪ್ರಧಾನ ಸೇವೆಗಳಾದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ ಮತ್ತು ಮಹಾಭಿಷೇಕವು ಜು.29ರಿಂದ ಪ್ರಾರಂಭಗೊಳ್ಳಲಿದೆ.

ಸರ್ಕಾರದ ಕೋವಿಡ್‌ ಮಾರ್ಗಸೂಚಿಗೆ ಅನುಗುಣವಾಗಿ ಶ್ರೀ ದೇವಳದಲ್ಲಿ ಸೇವೆಗಳನ್ನು ನೆರವೇರಿಸಲು ಭಕ್ತರಿಗೆ ಅವಕಾಶ ಕಲ್ಪಿಸಲಾಗಿದೆ. ಅಲ್ಲದೆ ಭಕ್ತರಿಗೆ ಭೋಜನ ಪ್ರಸಾದ ವಿತರಣೆಯಾಗಲಿದೆ. ಬೆಳಗ್ಗೆ 6.30ರಿಂದ ಮಧ್ಯಾಹ್ನ 1.30ರ ತನಕ ಬಳಿಕ ಮಧ್ಯಾಹ್ನ 3.30ರಿಂದ ರಾತ್ರಿ 8.30 ಗಂಟೆ ತನಕ ಭಕ್ತರಿಗೆ ಶ್ರೀ ದೇವರ ದರುಶನಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಶ್ರೀ ದೇವಳದ ಪ್ರಕಟಣೆ ತಿಳಿಸಿದೆ.

ದೇಗುಲಗಳಲ್ಲಿ ಇಂದಿನಿಂದ ಪ್ರಸಾದ, ಸೇವೆಗಳು ಆರಂಭ

ಇಂದಿನಿಂದ ಪ್ರಾರ್ಥನೆ, ತುಲಾಭಾರ ಆರಂಭ:

ಇಂದಿನಿಂದ(ಮಂಗಳವಾರ) ತುಲಾಭಾರ, ಶೇಷ ಸೇವೆ, ಪ್ರಾರ್ಥನೆ, ಇಡೀ ದಿನದ ಮಹಾಪೂಜೆ, ಮಧ್ಯಾಹ್ನದ ಮಹಾಪೂಜೆ, ಪವಮಾನಯುಕ್ತ ಪಂಚಾಮೃತಾಭಿಷೇಕ, ಕಲಶಪೂಜಾಯುಕ್ತ ಪಂಚಾಮೃತಾಭಿಷೇಕ, ಚವಲ ಹರಕೆ, ಹಣ್ಣುಕಾಯಿ ಸಮರ್ಪಣೆ, ವಾಹನಪೂಜೆ, ಹರಿವಾಣ ನೈವೇದ್ಯ, ಚಿತ್ರಾನ್ನ ಸಮರ್ಪಣೆ, ಹಾಲುಪಾಯಸ, ಸಹಸ್ರನಾಮಾರ್ಚನೆ, ಅಷ್ಟೋತ್ತರ ಅರ್ಚನೆ, ಮೃಷ್ಠಾನ್ನ ಸಂತರ್ಪಣೆ, ಸಂತರ್ಪಣೆ, ನಂದಾದೀಪ, ಮಂಗಳಾರತಿ, ಪಂಚಾಮೃತಾಭಿಷೇಕ, ರುದ್ರಾಭಿಷೇಕ, ಕ್ಷೀರಾಭಿಷೇಕ, ಕಾರ್ತಿಕ ಪೂಜೆ ಸೇವೆಗಳು ಆರಂಭಗೊಳ್ಳಲಿದೆ. ಭಕ್ತರಿಗೆ ಭೋಜನ ಪ್ರಸಾದ ವಿತರಣೆ ಇರುತ್ತದೆ. ಅಲ್ಲದೆ ಭಕ್ತರಿಗೆ ಶ್ರೀ ದೇವಳದ ವಸತಿ ಗೃಹಗಳಲ್ಲಿ ತಂಗಲು ಅವಕಾಶ ನೀಡಲಾಗಿದೆ. ಅಲ್ಲದೆ ಲಡ್ಡು, ಪಂಚ ಕಜ್ಜಾಯ ಪ್ರಸಾದ, ತೀರ್ಥ ಬಾಟ್ಲಿ ವಿತರಣೆ ಆರಂಭಗೊಳ್ಳಲಿದೆ.

ಜು.29 ರಿಂದ ಸರ್ಪಸಂಸ್ಕಾರ ಆರಂಭ:

ಜು. 29 ಗುರುವಾರದಿಂದ ಶ್ರೀ ದೇವಳದ ಪ್ರಧಾನ ಸೇವೆಗಳಾದ ಸರ್ಪ ಸಂಸ್ಕಾರ, ಆಶ್ಲೇಷ ಬಲಿ, ನಾಗಪ್ರತಿಷ್ಠೆ, ಮಹಾಭಿಷೇಕ ಸೇವೆಗಳು ಆರಂಭಗೊಳ್ಳಲಿದೆ. ಸೇವಾರ್ಥಿಗಳು ಕನಿಷ್ಠ ಕೋವಿಡ್‌ ಪ್ರಥಮ ಡೋಸ್‌ ಲಸಿಕೆ ಪಡೆದಿರಬೇಕು ಮತ್ತು ಆರ್‌ಟಿಪಿಸಿಆರ್‌ ಪರೀಕ್ಷೆ ನಡೆಸಿದ ವರದಿ ಹಾಜರು ಪಡಿಸಬೇಕು. ಕಡ್ಡಾಯವಾಗಿ ಮಾಸ್ಕ್‌ ಧಾರಣೆ ಮತ್ತು ಸಾಮಾಜಿಕ ಅಂತರ ಪಾಲನೆ ಮಾಡಬೇಕು. ಪ್ರತಿ ಟಿಕೇಟಿಗೆ 2 ಭಕ್ತರಿಗೆ ಮಾತ್ರ ಸೇವೆಯಲ್ಲಿ ಭಾಗವಹಿಸಲು ಅವಕಾಶ ನೀಡಲಾಗಿದೆ. ಅಲ್ಲದೆ ಸರ್ಪಸಂಸ್ಕಾರ ಕ್ರಿಯಾಕರ್ತರು ಕೂಡಾ ಕೋವಿಡ್‌-19 ಲಸಿಕೆ ಪಡೆದು ಕ್ರಿಯಾದಿಗಳನ್ನು ನೆರವೇರಿಸಲಿದ್ದಾರೆ.

2 ಹಂತದಲ್ಲಿ 180 ಸರ್ಪಸಂಸ್ಕಾರ:

ಇಷ್ಟರ ತನಕ ಒಂದು ಬ್ಯಾಚ್‌ನಲ್ಲಿ ನಡೆಯುತ್ತಿದ್ದ ಸರ್ಪಸಂಸ್ಕಾರ ಸೇವೆಯು ಗುರುವಾರದಿಂದ ಪ್ರತಿದಿನ ಎರಡು ಬ್ಯಾಚ್‌ನಲ್ಲಿ ನಡೆಯಲಿದೆ. ಬೆಳಗ್ಗೆ 8 ಗಂಟೆಗೆ ಒಂದನೇ ಸರದಿ ಹಾಗೂ ಎರಡನೇ ಸರದಿಯು 10 ಗಂಟೆಗೆ ಆರಂಭಗೊಳ್ಳಲಿದೆ. ಪ್ರತಿ ಸರದಿಯಲ್ಲಿ 90ರಂತೆ ಎರಡು ಸರದಿಯಲ್ಲಿ ಒಟ್ಟು 180 ಸರ್ಪಸಂಸ್ಕಾರ ಸೇವೆ ನಡೆಸಲು ಅವಕಾಶ ಕಲ್ಪಿಸಲಾಗಿದೆ. ಪ್ರತಿ ಸರದಿಯಲ್ಲಿ ಆನ್‌ಲೈನ್‌ ಮೂಲಕ ಮುಂಗಡ ಬುಕ್ಕಿಂಗ್‌ ಮಾಡಿದ 60 ಮಂದಿಗೆ, ಡಿ.ಡಿ, ಎಂ.ಟಿ, ಎಂ.ಒ ಮಾಡಿದ 10 ಭಕ್ತರಿಗೆ ಹಾಗೂ ಗಣ್ಯ ವ್ಯಕ್ತಿಗಳಿಗೆ 30 ಸೇವೆಗೆ ವ್ಯವಸ್ಥೆ ಕಲ್ಪಿಸಲಾಗಿದೆ. ಈಗಾಗಲೇ ಸುಮಾರು 6, 400 ಮಂದಿ ಸರ್ಪಸಂಸ್ಕಾರ ಸೇವೆಯನ್ನು ಆನ್‌ಲೈನ್‌ ಮೂಲಕ ಮುಂಗಡವಾಗಿ ಕಾದಿರಿಸಿದ್ದಾರೆ. ಇವರಿಗೆ ಪ್ರಥಮ ಆದ್ಯತೆ ನೀಡಲಾಗುವುದು. ಹಾಗಿದ್ದೂ ಸೇವಾರ್ಥಿಗಳ ಸಂಖ್ಯೆ ಕಡಿಮೆ ಇದ್ದರೆ ಕಾರ್ಯನಿರ್ವಹಣಾಧಿಕಾರಿಗಳ ಅನುಮತಿ ಪಡೆದು ಆಯಾಯ ದಿನದಲ್ಲಿ ಆಗಮಿಸಿ ಸೇವೆ ನಿರ್ವಹಿಸುವ ಭಕ್ತಾದಿಗಳಿಗೆ ಅವಕಾಶ ಕಲ್ಪಿಸಲಾಗುವುದು.

4 ಸರದಿಯಲ್ಲಿ 240 ಆಶ್ಲೇಷ ಬಲಿ:

ಪ್ರತಿ ದಿನ 4 ಸರದಿಯಲ್ಲಿ ಒಟ್ಟು 240 ಭಕ್ತರಿಗೆ ಆಶ್ಲೇಷ ಬಲಿ ಸೇವೆ ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ. ಬೆಳಗ್ಗೆ 6 ಗಂಟೆಯಿಂದ 8 ಗಂಟೆ ತನಕ, 8.15ರಿಂದ 9.30 ತನಕ, 9.45 ರಿಂದ 11.15ರ ತನಕ ಹಾಗೂ ಸಂಜೆ 5 ಗಂಟೆಯಿಂದ 6.30 ತನಕ ಸೇವೆ ನಡೆಯಲಿದೆ. ಪ್ರತಿ ಸರದಿಯಲ್ಲಿ 60 ಭಕ್ತರಂತೆ 4 ಸರದಿಯಲ್ಲಿ 240 ಭಕ್ತರು ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ಪ್ರತಿ ದಿನ ಸರ್ಪಸಂಸ್ಕಾರ ಸೇವೆಗೆ ಸಂಬಂಧಪಟ್ಟ180 ನಾಗಪ್ರತಿಷ್ಠೆಯೊಂದಿಗೆ ಪ್ರತ್ಯೇಕ 25 ಭಕ್ತರಿಗೆ ನಾಗ ಪ್ರತಿಷ್ಠೆ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ಪ್ರತಿ ದಿನ 3 ಭಕ್ತರಿಗೆ ಮಹಾಭಿಷೇಕ ಸೇವೆ ನೆರವೇರಿಸಲು ಅವಕಾಶ ನೀಡಲಾಗಿದೆ. ರಾಜ್ಯ ಸರ್ಕಾರದ ಕೋವಿಡ್‌ ನಿಯಮಗಳಿಗೆ ಅನುಗುಣವಾಗಿ ಭಕ್ತರಿಗೆ ಸೇವೆಗಳನ್ನು ನೆರವೇರಿಸಲು ಅವಕಾಶ ಕಲ್ಪಿಸಲಾಗಿದೆ.

Follow Us:
Download App:
  • android
  • ios