ಅನ್‌ಲಾಕ್‌ ಬಳಿಕ ಭಕ್ತರ ದರ್ಶನಕ್ಕೆ ಮುಕ್ತವಾಗಿದ್ದ ದೇವಸ್ಥಾನಗಳಲ್ಲಿ ಇನ್ನು ಮುಂದೆ ಪ್ರಸಾದ ಸೇವೆ ವಿವಿಧ ಸೇವಾ ಕಾರ್ಯಗಳಿಗೂ ಅವಕಾಶ ನೀಡಲಾಗಿದೆ

 ಬೆಂಗಳೂರು (ಜು.25):  ಅನ್‌ಲಾಕ್‌ ಬಳಿಕ ಭಕ್ತರ ದರ್ಶನಕ್ಕೆ ಮುಕ್ತವಾಗಿದ್ದ ದೇವಸ್ಥಾನಗಳಲ್ಲಿ ಇನ್ನು ಮುಂದೆ ಪ್ರಸಾದ ಮತ್ತು ವಿವಿಧ ಸೇವಾ ಕಾರ್ಯಗಳಿಗೂ ಅವಕಾಶ ನೀಡಲಾಗಿದೆ. ಭಾನುವಾರದಿಂದಲೇ ಭಕ್ತರು ಪುಣ್ಯ ಕ್ಷೇತ್ರಗಳಲ್ಲಿ ತಮ್ಮಿಷ್ಟದ ಸೇವೆಗಳನ್ನು ಸಲ್ಲಿಸಿ ಪ್ರಸಾದ ಸ್ವೀಕರಿಸಬಹುದು.

ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರನ್ನು ಶನಿವಾರ ಭೇಟಿ ಮಾಡಿದ ಮುಜರಾಯಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಈ ಬಗ್ಗೆ ಟ್ವೀಟ್‌ ಮಾಡಿದ್ದು ಜು.25ರಿಂದ ವಿವಿಧ ಸೇವೆಗಳು ಮತ್ತು ಪ್ರಸಾದ ವಿತರಣೆಗೆ ಮುಖ್ಯಮಂತ್ರಿಗಳು ಅನುಮತಿ ನೀಡಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಇದರ ಬೆನ್ನಲ್ಲೇ ಮುಜರಾಯಿ ಇಲಾಖೆಯಿಂದ ಆದೇಶವೂ ಬಿಡುಗಡೆಯಾಗಿದೆ.

ಆಯ್ದ 100 ದೇಗುಲಗಳಲ್ಲಿ ಸಪ್ತಪದಿ ಯೋಜನೆ ಶೀಘ್ರ ಪುನಾರಂಭ

ಅನ್‌ಲಾಕ್‌ ಬಳಿಕ ದೇವಸ್ಥಾನಗಳಲ್ಲಿ ದೇವರ ದರ್ಶನಕ್ಕೆ ಅವಕಾಶ ನೀಡಲಾಗಿತ್ತಾದರೂ, ಕೊರೋನಾ ಸೋಂಕಿನ ಮುನ್ನೆಚ್ಚರಿಕೆಯಿಂದಾಗಿ ವಿವಿಧ ಸೇವೆಗಳು ಮತ್ತು ಪ್ರಸಾದ ವಿತರಣೆಗೆ ಅನುಮತಿ ನೀಡಿರಲಿಲ್ಲ. ಇದರಿಂದಾಗಿ ಭಕ್ತರು ಪುಣ್ಯ ಕ್ಷೇತ್ರಗಳಿಗೆ ತೆರಳಿದ್ದರೂ ದೇವರ ದರ್ಶನಕ್ಕಷ್ಟೇ ತೃಪ್ತಿಪಟ್ಟುಕೊಳ್ಳಬೇಕಾಗಿತ್ತು.

ಧರ್ಮಸ್ಥಳ, ಕೊಲ್ಲೂರು, ಹೊರನಾಡು, ಶೃಂಗೇರಿ, ಯಡಿಯೂರು ಮತ್ತಿತರ ಶ್ರೀ ಕ್ಷೇತ್ರಗಳಲ್ಲಿ ನಡೆಯುತ್ತಿದ್ದ ಅನ್ನ ದಾಸೋಹಕ್ಕೆ ಇನ್ನು ಚಾಲನೆ ಸಿಗಲಿದೆ. ಕುಕ್ಕೆ ಸುಬ್ರಹ್ಮಣ್ಯ, ಘಾಟಿ ಸುಬ್ರಹ್ಮಣ್ಯದಲ್ಲಿ ನಡೆಯುತ್ತಿದ್ದ ಸರ್ಪದೋಷ ಪೂಜೆಗಳೂ ಪ್ರಾರಂಭವಾಗಲಿವೆ.