ನಮ್ಮವರಿಗೆ ಜಾತಿ ಹೆಸರೇಳಲು ಹಿಂಜರಿಕೆ: ಸಚಿವ
ಬೇರೆ ಸಮುದಾಯಗಳ ನಾಯಕರಿಗೆ ಜಾತಿಯ ಬಗ್ಗೆ ಬದ್ಧತೆ ಇದೆ. ನಮ್ಮ ಜನಾಂಗದವರು ಜಾತಿ ಹೆಸರು ಹೇಳುವುದಕ್ಕೂ ಹಿಂಜರಿಯುತ್ತಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ತುಮಕೂರು : ಬೇರೆ ಸಮುದಾಯಗಳ ನಾಯಕರಿಗೆ ಜಾತಿಯ ಬಗ್ಗೆ ಬದ್ಧತೆ ಇದೆ. ನಮ್ಮ ಜನಾಂಗದವರು ಜಾತಿ ಹೆಸರು ಹೇಳುವುದಕ್ಕೂ ಹಿಂಜರಿಯುತ್ತಾರೆ ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಬೇಸರ ವ್ಯಕ್ತಪಡಿಸಿದರು.
ನಗರದ ನಾಗಾರ್ಜುನ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ನಡೆದ ಸ್ವಾಭಿಮಾನಿ ಮಾದಿಗ ಮಹಸಭಾ ಸದಸ್ಯತ್ವ ನೋಂದಣಿಗೆ ಚಾಲನೆ ನೀಡಿ ಮಾತನಾಡಿದರು.
ಸಾಮಾಜಿಕ ಪರಿಸ್ಥಿತಿಗಳಿಂದ ನಮ್ಮ ಸಮುದಾಯದವರು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ, 75 ವರ್ಷಗಳಿಂದ ಯೋಜನೆ ನೀಡುತ್ತಲೇ ಇವೆ. ಅಂಬೇಡ್ಕರ್ ತತ್ವ, ಮೀಸಲಾತಿ ಎಲ್ಲ ಇದ್ದರೂ ಸಹ ನಮ್ಮ ಸಮುದಾಯದ ಮಕ್ಕಳು ಶಿಕ್ಷಣದಿಂದ ವಿಮುಖರಾಗುತ್ತಿದ್ದಾರೆ. ನಾನು, ನನ್ನ ಹೆಂಡತಿ, ಮಕ್ಕಳು ಎನ್ನುವುದನ್ನು ಬಿಟ್ಟು ಸಮಾಜಕ್ಕಾಗಿ ಜಾಗೃತರಾಗಬೇಕಿದೆ. ರಾಜಕೀಯದಲ್ಲಿ ಏನೇ ವ್ಯತ್ಯಾಸಗಳಿದ್ದರೂ ಸಹ ಒಂದೇ ತಾಯಿ ಮಕ್ಕಳು ಎನ್ನುವುದನ್ನು ಅರಿಯಬೇಕು, ಸಮುದಾಯಕ್ಕಾಗಿ ಕೆಲಸ ಮಾಡಲು ಮುಂದೇ ಬರಬೇಕಿದೆ ಎಂದು ಕರೆ ನೀಡಿದರು.
ಮಾಜಿ ಸಚಿವ ಎಚ್.ಆಂಜನೇಯ ಮಾತನಾಡಿ, ಅತ್ಯಧಿಕ ಸಂಖ್ಯೆಯಲ್ಲಿ ಸಮುದಾಯ ಇದ್ದರೂ ಒಗ್ಗಟ್ಟಿನ ಕೊರತೆಯಿಂದ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಲು ಆಗುತ್ತಿಲ್ಲ. ಇದಕ್ಕೆಲ್ಲ ಸಂಘಟನೆಯ ಕೊರತೆ ಕಾಡುತ್ತಿದೆ. ಸಂಘಟನೆಯನ್ನು ಬಲಗೊಳಿಸುವ ನಿಟ್ಟಿನಲ್ಲಿ ಎಲ್ಲರೂ ಸದಸ್ಯತ್ವ ಬಲಗೊಳಿಸಬೇಕೆಂದು ಕರೆ ನೀಡಿದರು.
ರಾಜ್ಯಸಭಾ ಸದಸ್ಯ ಎಲ್.ಹನುಮಂತಯ್ಯ ಮಾತನಾಡಿ, ಸ್ವಾಭಿಮಾನಿ ಮಾದಿಗ ಮಹಾಸಭಾ ಜನಾಂಗದ ಸಂಘಟನೆ, ಚುನಾವಣೆ ಆಧಾರದ ಮೇಲೆ ಪದಾಧಿಕಾರಿಗಳ ಆಯ್ಕೆಯಾಗುವುದರಿಂದ ಇಲ್ಲಿ ರಾಜಕಾರಣಿ, ರಾಜಕೀಯ ಎರಡು ಇರುವುದಿಲ್ಲ, ಕುರುಬ, ಒಕ್ಕಲಿಗ ಸಮುದಾಯದಂತೆಯೇ ಮಾದಿಗ ಸಮುದಾಯವೂ ಪ್ರಜಾಸತ್ತಾತ್ಮಕವಾಗಿ ಸಂಘಟನೆಯನ್ನು ಕಟ್ಟಲು ಕೈ ಜೋಡಿಸಬೇಕಿದೆ ಎಂದು ಕರೆ ನೀಡಿದರು.
ಕೋಮುವಾದ ಎನ್ನುವುದು ಬೇರೆ ಬೇರೆ ಸಮುದಾಯಗಳಿಗೆ ಇಲ್ಲದ್ದು, ಮಾದಿಗ ಸಮುದಾಯಕ್ಕೆ ಮಾತ್ರ ಏಕೆ? ಸದಸ್ಯತ್ವವನ್ನು ಶೀಘ್ರವಾಗಿ ಪೂರ್ಣಗೊಳಿಸಬೇಕು, ಯೋಗ್ಯರಿಗೆ ಅವಕಾಶ ಸಿಕ್ಕಾಗ ಸಂಘ ಉತ್ತಮವಾಗಿ ಬೆಳೆಯುತ್ತದೆ, ಸಮುದಾಯದ ಭವಿಷ್ಯಕ್ಕಾಗಿ ಸದಸ್ಯತ್ವ ಪಡೆಯುವಂತೆ ಮನವಿ ಮಾಡಿದರು.
ಅಭಿಯಾನದಲ್ಲಿ ಸ್ವಾಭಿಮಾನಿ ಮಾದಿಗ ಮಹಾಸಭಾ ಪ್ರಧಾನ ಕಾರ್ಯದರ್ಶಿ ಕೆ.ಜಿ.ಜಗದೀಶ್, ಮಾಜಿ ಸಂಸದ ಬಿ.ಎನ್.ಚಂದ್ರಪ್ಪ, ಮಾಜಿ ಶಾಸಕರಾದ ಗಂಗಹನುಮಯ್ಯ, ತಿಮ್ಮರಾಯಪ್ಪ, ನಿವೃತ್ತ ಐಎಎಸ್ ಅಧಿಕಾರಿ ಬಿ.ಎಚ್.ಅನಿಲ್ ಕುಮಾರ್, ಜಿ.ಪಂ.ಮಾಜಿ ಅಧ್ಯಕ್ಷ ವೈ.ಎಚ್.ಹುಚ್ಚಯ್ಯ, ಕೆಂಚಮಾರಯ್ಯ, ಮಾಜಿ ಉಪ ಮೇಯರ್ ರೂಪಾಶೆಟ್ಟಾಳಯ್ಯ, ಮರಿಚೆನ್ನಮ್ಮ, ಡಾ.ಅರುಂಧತಿ, ಡಾ.ಲಕ್ಷ್ಮೀಕಾಂತ್, ಡಾ.ಮುರುಳೀಧರ್, ಡಾ.ವೈ.ಕೆ.ಬಾಲಕೃಷ್ಣಪ್ಪ, ಡಾ.ಚಂದ್ರಕುಮಾರ್, ನಾಗಾರ್ಜುನ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಶಿವನಂಜಪ್ಪ, ಚಿಕ್ಕರಂಗಯ್ಯ, ನರಸೀಯಪ್ಪ, ವಾಲೆ ಚಂದ್ರಯ್ಯ, ತಾ.ಪಂ.ಮಾಜಿ ಅಧ್ಯಕ್ಷ ನರಸಿಂಹಮೂರ್ತಿ, ಸಚಿವಾಲಯದ ನಿವೃತ್ತ ಜಂಟಿ ಕಾರ್ಯದರ್ಶಿ ಚಂದ್ರಹಾಸ್, ನಾಗರಾಜ್ ಸೇರಿದಂತೆ ಇತರರಿದ್ದರು.
ಮಾದಿಗ ಸಮುದಾಯ ರಾಜ್ಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ಸಮುದಾಯಕ್ಕೆ ಸಿಗಬೇಕಾದ ಸರ್ಕಾರಿ ಸವಲತ್ತುಗಳನ್ನು ಪಡೆದು ಆಸ್ತಿಯನ್ನು ಮಾಡಿಲ್ಲ, ಸಮಾಜಕ್ಕೆ ಆಸ್ತಿ ಮಾಡದೇ ಇದ್ದರೆ ಸಮುದಾಯ ಅಭಿವೃದ್ಧಿಯಾಗುವುದಿಲ್ಲ ಎನ್ನುವುದನ್ನು ಮನಗಾಣಬೇಕಿದೆ. ಸಣ್ಣ ಸಣ್ಣ ಸಮುದಾಯಗಳು ಸಮಾಜಕ್ಕಾಗಿ ಆಸ್ತಿ ಮಾಡಿದೆ ಆದರೆ ನಮ್ಮ ಸಮುದಾಯ ಇದುವರೆಗೆ ಯಾವುದೇ ಆಸ್ತಿ ಮಾಡದೇ ಇರುವುದು ದುರದೃಷ್ಟಕರ.
ಎಲ್.ಹನುಮಂತಯ್ಯ ರಾಜ್ಯಸಭಾ ಸದಸ್ಯ