ಬಿಜೆಪಿಯಿಂದ ಕಾಂಗ್ರೆಸ್‌ಗೆ-ಕಾಂಗ್ರೆಸ್‌ನಿಂದ ಬಿಜೆಪಿಗೆ : ಬಂಡಾಯದ ಬಿಸಿಯಲ್ಲಿ ನಾಯಕರು
ರಾಜ್ಯದಲ್ಲಿ ರಾಜಕೀಯ ಚಟುವಟಿಕೆ ಬಿರುಸುಗೊಂಡಿದೆ. ಇದರ ಬೆನ್ನಲ್ಲೇ ಪಕ್ಷಾಂತರ ಪರ್ವವೂ ಕೂಡ ಜೋರಾಗಿದೆ. ಹಲವರು ಮೂಲ ಪಕ್ಷ ತೊರೆದು ತೆರಳುತ್ತಿದ್ದಾರೆ.
ಗುಂಡ್ಲುಪೇಟೆ (ಡಿ.10): ಗ್ರಾಮ ಪಂಚಾಯತ್ ಚುನಾವಣೆಗೆ ನಾಮಪತ್ರ ಸಲ್ಲಿಕೆ ಆರಂಭವಾಗುತ್ತಿದ್ದಂತೆಯೇ ಪಕ್ಷಾಂತರ ಪರ್ವ ಆರಂಭ ಶುರುವಾಗಿದೆ. ಈಗಾಗಲೇ ಕಾಂಗ್ರೆಸ್ ಹಾಗೂ ಬಿಜೆಪಿ ಬೆಂಬಲಿಗರು ಪಕ್ಷ ತೊರೆದು ಪಕ್ಷಾಂತರಕ್ಕೆ ನಾಂದಿ ಹಾಡಿದ್ದು, ಚುನಾವಣೆ ಹತ್ತಿರವಾಗುತ್ತಿದ್ದಂತೆಯೇ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ.
ತಾಲೂಕಿನ ದೇಶಿಪುರ, ವಡ್ಡಗೆರೆ, ಭೋಗಯ್ಯನಹುಂಡಿ ಸೇರಿದಂತೆ ಹಲವಾರು ಗ್ರಾಮಗಳಲ್ಲಿ ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರೆ ಮತ್ತೊಂದೆಡೆ ಕೆಲವರು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಗರಲ್ಲಿ ಗ್ರಾಪಂ ಚುನಾವಣೆಯಲ್ಲಿ ನಿಲ್ಲಬೇಕು ಎಂದು ಪಕ್ಷದ ಕಾರ್ಯಕರ್ತರಲ್ಲೇ ಭಿನ್ನಮತ ಕೆಲವಡೆ ಎದ್ದು ಪಕ್ಷಾಂತರ ಮಾಡಲು ಪ್ರಮುಖ ಕಾರಣ ಎನ್ನಲಾಗಿದೆ. ಇನ್ನೂ ಕೆಲವು ಕಡೆ ಚುನಾವಣೆಯಲ್ಲಿ ಪಕ್ಷಾಂತರವೇ ಒಂದು ಕೆಲಸ ಮಾಡಿಕೊಂಡಿರುವ ಕೆಲ ಕಾರ್ಯಕರ್ತರು ಇಂಥ ಸಮಯದಲ್ಲಿ ಕೈ ಬೆಚ್ಚಗೆ ಮಾಡಿಕೊಳ್ಳಲು ಪಕ್ಷಾಂತರದಲ್ಲೂ ತೊಡಗಿದ್ದಾರೆ. ಹಠಕ್ಕೆ ಬಿದ್ದ ಕಾರ್ಯಕರ್ತರು ತಾಲೂಕಿನ ಶೇ.80 ಕ್ಕೂ ಗ್ರಾಮದಲ್ಲಿ ಬಿಜೆಪಿ ಹಾಗು ಕಾಂಗ್ರೆಸ್ ಬೆಂಬಲಿತರು ನಾನೇ ಚುನಾವಣೆಗೆ ನಿಲ್ಲಬೇಕು ಎಂದು ಹಠಕ್ಕೆ ಬಿದ್ದಿರುವುದು ಕಾಂಗ್ರೆಸ್-ಬಿಜೆಪಿಯ ವರಿಷ್ಠರಿಗೆ ನುಂಗಲಾರದ ತುತ್ತಾಗಿದೆ.
ಸತ್ಯ ಒಪ್ಪಿಕೊಂಡ ಕುಮಾರಸ್ವಾಮಿ, ಆದ್ರೂ ರೈತ ನಾಯಕರ ವಿರುದ್ಧ ಕೆಂಡಾಮಂಡಲ
ಇನ್ನು ಕೆಲ ಗ್ರಾಮಗಳಲ್ಲಿ ಪಕ್ಷದ ವರಿಷ್ಠರ ಮಾತಿಗೂ ಕ್ಯಾರೆ ಎನ್ನದೆ ಬಂಡಾಯವಾಗಿ ಕಣಕ್ಕೀಳಿದು ನಾಮಪತ್ರ ಸಲ್ಲಿಸಿದ್ದಾರೆ.ಇನ್ನೂ ನಾಮಪತ್ರ ಸಲ್ಲಿಸಲು ತುದಿಗಾಲಿನ ಮೇಲೆ ನಿಂತಿದ್ದಾರೆ.
ಶಮನಕ್ಕೆ ಯತ್ನ: ಬಿಜೆಪಿಗರಲ್ಲಿ ಹೆಚ್ಚಿನ ಬಂಡಾಯದ ವಾಸನೆ ಅಲ್ಲಲ್ಲಿ ಕಂಡು ಬಂದಿದೆ ಆದರೆ ಕಾಂಗ್ರೆಸ್ಸಿಗರಲ್ಲಿಯೂ ಬಂಡಾಯ ಏಳುವ ಕಾರ್ಯಕರ್ತರ ಬಂಡಾಯದ ಶಮನಕ್ಕೆ ಪಕ್ಷದ ಮುಖಂಡರು ಪ್ರಯತ್ನಿಸಿದ್ದಾರೆ. ಕಾಂಗ್ರೆಸ್ ಹಾಗೂ ಬಿಜೆಪಿಗೆ ಈ ಗ್ರಾಪಂ ಚುನಾವಣೆ ಪ್ರತಿಷ್ಠೆಯ ಕಣವಾಗಿದ್ದು,ನಮ್ಮ ಪಕ್ಷದ ಬೆಂಬಲಿಗರ ಗೆಲ್ಲಿಸಲು ರಾಜಕೀಯ ತಂತ್ರ ಹೆಣೆಯುತ್ತಿದ್ದಾರೆ.
ಕಾಂಗ್ರೆಸ್ ಹಾಗೂ ಬಿಜೆಪಿಯ ಮುಂಚೂಣಿ ಕಾರ್ಯಕರ್ತರಿಗೂ ಈ ಚುನಾವಣೆ ಸವಾಲಾಗಿದ್ದು,ನಮ್ಮೂರಲ್ಲಿ ನಮ್ಮ ಪಕ್ಷದ ಬೆಂಬಲಿಗರು ಚುನಾವಣೆಯಲ್ಲಿ ಗೆಲ್ಲದಿದ್ದರೆ ಅಸ್ತಿತ್ವ ಏನು ಎಂಬ ಪ್ರಶ್ನೆ ಎದ್ದಿದೆ.