ಕೋಲಾರ, (ಡಿ.09): ಜೆಡಿಎಸ್ ಪಕ್ಷಕ್ಕೆ ರೈತ ದ್ರೋಹಿ ಎನ್ನುವ ಪಟ್ಟ ಕಟ್ಟಲು ಕೆಲವರು ಹೊರಟಿದ್ದಾರೆ. ರೈತರ ಹೆಸರಲ್ಲಿ ಡೋಂಗಿ ರೈತರಾಗಿದ್ದಾರೆ ಎಂದು ಮಾಜಿ ಸಿಎಂ ಎಚ್​.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.

ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಮೊದ ಜೆಡಿಎಸ್ ವಿರೋಧ ವ್ಯಕ್ತಪಡಿಸಿತ್ತು. ಆದ್ರೆ, ಏಕಾಏಕಿ ವಿಧಾನಪರಿಷತ್‌ನಲ್ಲಿ  ಭೂ ಸುಧಾರಣೆ ತಿದ್ದುಪಡಿ ಮಸೂದೆಗೆ ಬೆಂಬಲಿಸಿದೆ. ಇದರಿಂದ ರೈತ ನಾಯಕ ಕೋಡಿಹಳ್ಳಿ ಚಂದ್ರಶೇಖರ್ ಸೇರಿದಂತೆ ಹಲವು ಕುಮಾರಸ್ವಾಮಿ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.

ಭೂ ಸುಧಾರಣಾ ತಿದ್ದುಪಡಿ ಕಾಯ್ದೆಗೆ ಜೆಡಿಎಸ್ ಬೆಂಬಲ: ಕೋಡಿಹಳ್ಳಿ ಖಡಕ್ ಮಾತು ಕೇಳಿ..!

ಇದಕ್ಕೆ ಕೋಲಾರದ ಜಿಲ್ಲೆಯಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯಲ್ಲಿ ಎಚ್​ಡಿಕೆ ಪ್ರತಿಕ್ರಿಯಿಸಿರುವ ಕುಮಾರಸ್ವಾಮಿ, ಭೂ ಸುಧಾರಣೆ ಮಸೂದೆ ತಂದಾಗ ನಾನು ಮತ್ತು ದೇವೇಗೌಡರು ಬಿಲ್ ವಿರೋಧಿಸಿದ್ದು ನಿಜ. ಕಳೆದ ಅಧಿವೇಶನದಲ್ಲಿ ಕೆಲ ಬದಲಾವಣೆ ತರಲು ಸಲಹೆ ನೀಡಿದ್ದೆ. ಬಿಲ್​ನಲ್ಲಿ ನಾನು ನೀಡಿದ ಸಲಹೆಯಂತೆ ಬದಲಾವಣೆ ತಂದಿದ್ದಾರೆ ಎಂದು ಹೇಳುವ ಮೂಲಕ ರೈತ ಹೋರಾಟಗಾರರಿಗೆ ಟಾಂಗ್ ಕೊಟ್ಟರು.

ನಾನು ಸಿಎಂ ಆಗಿದ್ದಾಗ ರೈತರ ಸಾಲಮನ್ನಾ ಮಾಡಿದೆ. ರೈತಪರ ಸಾಕಷ್ಟು ಯೋಜನೆಗಳನ್ನ ತಂದೆ. ಆ ವೇಳೆ ಯಾರೊಬ್ಬರೂ ಕೃತಜ್ಞತೆ ಹೇಳಿಲ್ಲ‌. ನಿಮ್ಮ ಹುಳುಕನ್ನು ಮುಚ್ಚಿಕೊಳ್ಳಿ, ನಿಮ್ಮಿಂದ ನಾನು ಹೇಳಿಸಿಕೊಳ್ಳಬೇಕಾಗಿಲ್ಲ. ಜೆಡಿಎಸ್ ಪಕ್ಷ ರೈತರಿಗಾಗಿಯೇ ಇದೆ. ಮುಂದೆಯೂ ರೈತರ ಪರ ಇರಲಿದೆ ಎಂದು ಹೇಳಿದರು.

ಭೂ ಸುಧಾರಣಾ ಕಾಯ್ದೆಗೆ ಜೆಡಿಎಸ್ ಬೆಂಬಲಿಸಿದ್ದೇಕೆ? ಅಸಲಿ ಕಾರಣ ಬಿಚ್ಚಿಟ್ಟ ಎಚ್‌ಡಿಕೆ...!

 ರೈತ ಮುಖಂಡರಿಂದ ನಾನು ಏನನ್ನು ಹೇಳಿಸಿಕೊಳ್ಳಬೇಕಿಲ್ಲ. ನಾನು ಮತ್ತು ಜೆಡಿಎಸ್​ ಪಕ್ಷ ರೈತರ ಪರವಾಗಿಯೇ ಇದೆ. ಎಲ್ಲಿಗೆ ಬೇಕಾದರೂ ಬಹಿರಂಗ ಚರ್ಚೆಗೆ ಬರಲು‌ ನಾನು ಸಿದ್ಧ ಎಂದ ಎಚ್​ಡಿಕೆ, 1994ರಲ್ಲಿ ಪ್ರೊ.ನಂಜುಂಡಸ್ವಾಮಿ ಶಾಸಕರಾಗಿದ್ದರು. 1961ರ ಕಂದಾಯ ಕಾನೂನು 79(A),79(B) ತೆಗೆಯಬೇಕು ಎಂದು ವಿಧಾನಸೌಧದಲ್ಲಿ ಭಾಷಣ ಮಾಡಿದ್ದರು. ಪ್ರೊ.ನಂಜುಂಡಸ್ವಾಮಿ ಅವರು ಬಾರ್​ಕೋಲ್ ಜನಕ ಎಂದರು.

ರೈತರ‌ ಸಮಸ್ಯೆ ಆಲಿಸಲೆಂದು ಪ್ರತಿ ತಿಂಗಳು ಸಭೆ ಮಾಡಿದೆ. ಅದಕ್ಕೆ ವಿಧಾನಸೌಧದಲ್ಲಿ ದಾಖಲೆಗಳಿವೆ, ಕಾಂಗ್ರೆಸ್ ಬೆಂಬಲವಿಲ್ಲದೆ ಅನೇಕ ಕೆಲಸ ಮಾಡಿರುವೆ. ಕೋಡಿಹಳ್ಳಿ ಚಂದ್ರಶೇಖರ್​ರ ಹಿನ್ನೆಲೆ ಏನು‌? ಅವರ ಹೋರಾಟ, ಅವರು ಬಂದ ದಾರಿ.. ಎಲ್ಲವೂ ಗೊತ್ತಿದೆ. ಅವರಿಂದ ಬುದ್ಧಿ ಕಲಿಯುವ ಅವಶ್ಯಕತೆ ನನಗಿಲ್ಲ. ನಾನು ರೈತ ಕುಟುಂಬದಿಂದ ಬಂದವ ಎಂದು ಕಿಡಿಕಾರಿದರು.

ಹದಿನಾಲ್ಕು ತಿಂಗಳ ಕಾಂಗ್ರೆಸ್ ‌ಜೊತೆಗಿನ ಸರ್ಕಾರ ಮಾಡಿದ್ದು ಕೇವಲ ರೈತರ ಸಾಲ ಮನ್ನಾ ಮಾಡಲು ಎಂದು ಎಚ್​ಡಿಕೆ, ಜೆಡಿಎಸ್​ ಪಕ್ಷದ ಬಗ್ಗೆ ಮಾತನಾಡುವಾಗ ರೈತ ಮುಖಂಡರು ಎಚ್ಚರಿಕೆಯಿಂದ ಮಾತಾಡಲಿ ಎಂದು ಕಿಡಿಕಾರಿದರು.