ಹುಬ್ಬಳ್ಳಿ(ಫೆ.23): ಮೂರುಸಾವಿರ ಮಠದ ಉತ್ತರಾಧಿಕಾರಿ ನಾನೇ ಎಂದು ಹೇಳಿಕೊಂಡು ಸತ್ಯದರ್ಶನ ಸಭೆ ಕರೆದಿರುವ ಬಾಲೆಹೊಸೂರಿನ ದಿಂಗಾಲೇಶ್ವರ ಶ್ರೀಗಳ ಮೇಲೆ ವಿವಿಧ ಪ್ರಕರಣಗಳ ದೊಡ್ಡ ಮಣಭಾರವೇ ಇದೆ. ಇವರ ಮೇಲೆ ಪ್ರಕರಣ ದಾಖಲಿಸಿದವರು ಮತ್ತು ಇವರಿಂದ ದೌರ್ಜನ್ಯ, ಹಲ್ಲೆ, ನೋವು, ನಿಂದನೆಗೆ ಒಳಗಾದವರು ಈಗಲೂ ಶ್ರೀಗಳಿಗೆ ಶಿಕ್ಷೆಯಾಗಲಿ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಆದರೆ, ದಿಂಗಾಲೇಶ್ವರರು ಮಾತ್ರ ಇದೀಗ ಬಹುತೇಕ ಕೇಸ್‌ಗಳು ನಿಕಾಲಿಯಾಗಿವೆ. ಒಂದು ಕೇಸ್‌ ಮಾತ್ರ ಉಳಿದಿದೆ ಎಂದಿದ್ದಾರೆ. ತಮ್ಮ ಮೇಲೆ ಪ್ರಕರಣಗಳು ದಾಖಲಾಗಿದ್ದನ್ನು ಅವರು ಪ್ರಾಂಜಲ ಮನಸ್ಸಿನಿಂದ ಒಪ್ಪಿಕೊಂಡಿದ್ದಾರೆ. ಈ ಕೇಸುಗಳು ಮೂರುಸಾವಿರ ಮಠದ ಭಕ್ತರಲ್ಲಿ ಆಕ್ರೋಶ ಹುಟ್ಟಿಸಿದ್ದರೆ, ಇಷ್ಟೆಲ್ಲ ಹಗರಣ ಹೊತ್ತು ಮಠಕ್ಕೆ ಹೇಗೆ ಬರುತ್ತಾರೆ ? ಎಂದು ಪ್ರಶ್ನಿಸುತ್ತಿದ್ದಾರೆ. ಜತೆಗೆ ದಿಂಗಾಲೇಶ್ವರರ ಹಿಂಬಾಲಕರನ್ನೂ ಇವು ಮುಜುಗರಕ್ಕೆ ಈಡುಮಾಡಿದ್ದುಂಟು.

ಮೂರುಸಾವಿರ ಮಠ ಉತ್ತರಾಧಿಕಾರಿ ವಿವಾದ: ಮೌನ ಮುರಿದ ಮೂಜಗು

ಶ್ರೀಗಳ ಮೇಲೆ ಜಮೀನಿನ ವಿವಾದದ ಕುರಿತಂತೆ ಲಕ್ಷ್ಮೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಆಗ ಶ್ರೀಗಳು ಸೇರಿದಂತೆ 17 ಜನರು ಆರೋಪಿತರಾಗಿದ್ದರು. ಕಲಂ 143, 147, 148, 307, 324, 326, 504, 506, 109 ಹಾಗೂ 149 ಪ್ರಕಾರ ಕೇಸ್‌ ದಾಖಲಾಗಿತ್ತು. ಈ ಪ್ರಕರಣ 2014ರಲ್ಲೇ ದಾಖಲಾಗಿತ್ತು.

ಇದರೊಂದಿಗೆ ಗಂಗಾವತಿ ಠಾಣೆಯಲ್ಲಿ 1999ರಲ್ಲಿ, ಕುಕನೂರು ಠಾಣೆಯಲ್ಲಿ 2001ರಲ್ಲಿ, ಯಲಬುರ್ಗಾ ಠಾಣೆಯಲ್ಲಿ 1991 ಸೇರಿದಂತೆ ಮತ್ತಿತರರ ಕಡೆಗಳಲ್ಲಿ ವಿವಿಧ ಪ್ರಕರಣಗಳು ದಾಖಲಾಗಿದ್ದವು. ಅಲ್ಲದೇ ತಮ್ಮ ಸಂಬಂಧಿಗೆ ಸರ್ಕಾರಿ ಜಾಗೆಯ ಮೇಲೆ ಬ್ಯಾಂಕ್‌ ಸಾಲ ಪಡೆದಿರುವ ಪ್ರಕರಣವೊಂದು ಭಾರೀ ಸದ್ದು ಮಾಡುತ್ತಿದೆ. ಇವನ್ನೆಲ್ಲ ಗಮನಿಸಿದರೆ ಉತ್ತರ ಕರ್ನಾಟಕದ ಯಾವುದೇ ಮಠಾಧೀಶರು ಇಷ್ಟು ಹಗರಣ, ಕೇಸುಗಳಲ್ಲಿ ಸಿಲುಕಿದ ನಿದರ್ಶನಗಳಿಲ್ಲ. ಇದೇ ಕಾರಣಕ್ಕೆ ಮೂರುಸಾವಿರ ಮಠದ ಭಕ್ತರು ಈ ಶ್ರೀಗಳನ್ನು ಬಲವಾಗಿ ವಿರೋಧಿಸುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬರುತ್ತಿದೆ.

ಈ ಕುರಿತಂತೆ ಮಾತನಾಡಿದ ದಿಂಗಾಲೇಶ್ವರ ಶ್ರೀಗಳು, ಹೌದು ಸಾಕಷ್ಟು ಕೇಸ್‌ಗಳು ನನ್ನ ಮೇಲೆ ದಾಖಲಾಗಿದ್ದವು. ಆದರೆ ಎಲ್ಲವೂ ನಿಕಾಲಿಯಾಗಿವೆ. ಒಂದೇ ಒಂದು ಕೇಸ್‌ ಮಾತ್ರ ಇನ್ನೂ ಉಳಿದಿದೆ. ಆದರೆ ಅದಕ್ಕೆ ಹೈಕೋರ್ಟ್‌ಲ್ಲಿ ತಡೆಯಾಜ್ಞೆ ನೀಡಲಾಗಿದೆ. ಆ ಕೇಸ್‌ ಯಾವುದೆಂದು ತಿಳಿದುಕೊಂಡು ಸತ್ಯದರ್ಶನ ಸಭೆಯಲ್ಲಿ ಸ್ಪಷ್ಟಪಡಿಸುತ್ತೇನೆ ಎಂದು ತಿಳಿಸಿದ್ದಾರೆ.