ಅರಸೀಕೆರೆ [ಡಿ.21]:  ವಿಧಾನಸಭಾ ಉಪ ಚುನಾವಣೆಯ ಫಲಿತಾಂಶದ ಬಳಿಕ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಸುಭದ್ರವಾಗುತ್ತಿದ್ದಂತೆ ಇತ್ತ ಸ್ಥಳೀಯ ಬಿಜೆಪಿ ಮುಖಂಡರು ಹೊಸ ಹುರುಪಿನಲ್ಲಿ ರಾಜಕೀಯವಾಗಿ ಸೂಕ್ತ ಸ್ಥಾನಮಾನ ಹರಸಿ ತಮ್ಮದೇ ಆದ ರೀತಿಯಲ್ಲಿ ತೆರೆಮರೆಯಲ್ಲಿ ಹೋರಾಟ ನಡೆಸುತ್ತಿರುವುದು ಈಗ ಗುಟ್ಟಾಗಿ ಉಳಿದಿಲ್ಲ.

ಪಕ್ಷದ ಚೌಕಟ್ಟಿನಲ್ಲಿ ಸ್ಥಳೀಯ ಘಟಕಗಳ ಅಧ್ಯಕ್ಷ ಗಾದೆಗೆ ಸೇರಿದಂತೆ ಸರ್ಕಾರದಿಂದ ನಿಯೋಜನೆಗೊಳ್ಳುವ ನಗರಾಭಿವೃದ್ಧಿ ಯೋಜನ ಪ್ರಾಧಿಕಾರದ ಅಧ್ಯಕ್ಷ ಗಾದೆಯಿಂದ ಹಿಡಿದು ಸ್ಥಳೀಯ ಸಂಸ್ಥೆಗಳಿಗೆ (ನಾಮಿನಿ) ನಾಮ ನಿರ್ದೇಶನ ಸದಸ್ಯರಾಗಲು ಈಗಾಗಲೇ ಜಾತಿ ಜನಾಂಗದ ಹೆಸರಿನಲ್ಲಿ ತಮ್ಮ ನೆಚ್ಚಿನ ನಾಯಕರ ಮೂಲಕ ಒತ್ತಡ ತಂದು ಅಧಿಕಾರದ ಗದ್ದುಗೆ ಏರಲೇಬೇಕು ಎಂದು ಬಿಜೆಪಿ ಮುಖಂಡರು ತಮ್ಮದೇ ಲೆಕ್ಕಾಚಾರದಲ್ಲಿ ತಂತ್ರ ಪ್ರತಿ ತಂತ್ರವನ್ನು ಎಣೆಯುತ್ತಿದ್ದಾರೆ.

ನಗರಾಭಿವೃದ್ಧಿ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಜಿವಿಟಿ ಬಸವರಾಜು, ಜಿಲ್ಲಾ ಬಿಜೆಪಿ ವಕ್ತಾರ ಎನ್‌.ಡಿ. ಪ್ರಸಾದ್‌, ಮುಖಂಡರಾದ ಕಾಟೀಕೆರೆ ಪ್ರಸನ್ನಕುಮಾರ್‌, ಕೆವಿಎನ್‌ ಶಿವು, ಅಣ್ಣನಾಯ್ಕನಹಳ್ಳಿ ವಿಜಯ್‌ಕುಮಾರ್‌, ದುಮ್ಮೇನಹಳ್ಳಿ ಗಂಗಾಧರ್‌, ನಗರಾಧ್ಯಕ್ಷ ಜಿ.ಎನ್‌. ಮನೋಜ್‌ಕುಮಾರ್‌ ಸೇರಿದಂತೆ ಆಕಾಂಕ್ಷಿಗಳ ಪಟ್ಟಿಬೆಳೆಯುತ್ತಾ ಹೋಗುತ್ತದೆ.

ಬಿಜೆಪಿಯಲ್ಲಿ ಯಾವುದೇ ಲಾಬಿ ಮಾಡಿಲ್ಲ : ಸುಧಾಕರ್...

ಶತಾಯ ಗತಾಯ ಪ್ರಾಧಿಕಾರದ ಅಧ್ಯಕ್ಷ ಗಾದಿಗಾಗಿ ಹೋರಾಟ ನಡೆಸುತ್ತಿರುವ ಮುಖಂಡರು, ಪಕ್ಷಕ್ಕೆ ತಾವು ಮಾಡಿರುವ ಸೇವೆ ಹಾಗೂ ಪಕ್ಷ ನೀಡಿದ ಜವಾಬ್ದಾರಿಗಳನ್ನು ನಿಭಾಯಿಸಿರುವ ವಿಶ್ವಾಸದ ಜೊತೆಗೆ ರಾಜ್ಯ ಮಟ್ಟದ ನಾಯಕರೊಂದಿಗೆ ತಾವು ಹೊಂದಿರುವ ಸಂಭಂದ ಹೀಗೆ?, ತಮ್ಮದೇ ರೀತಿಯಲ್ಲಿ ವಾದ ಮಂಡಿಸುವ ಮೂಲಕ ಪ್ರಾಧಿಕಾರದ ಅಧ್ಯಕ್ಷರು ನಾವೇ ಆಗುವ ವಿಶ್ವಾಸದ ಮಾತುಗಳನ್ನಾಡುತ್ತಿದ್ದರೇ. ಮತ್ತೆ ಕೆಲ ನಾಯಕರು ಪಕ್ಷದ ತೀರ್ಮಾನಕ್ಕೆ ನಾವು ಬದ್ಧ ಎಂದು ಅಡ್ಡಗೋಡೆಯ ಮೇಲೆ ದೀಪವಿಟ್ಟಂತೆ ಹೇಳುತ್ತಾ ಲಕ್ಕಿ ಡ್ರಾದ ನಿರೀಕ್ಷೆಯೊಂದಿದ್ದಾರೆ. ಒಟ್ಟಾರೆ ಪ್ರಾಧಿಕಾರದ ಅಧ್ಯಕ್ಷರ ಗಾದೆ ಅಲಂಕರಿಸಲು ಹಿನ್ನಿಲ್ಲದ ಯತ್ನ ನಡೆಸುತ್ತಿರುವುದು ಸುಳ್ಳಲ್ಲ.

ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ, ಜಿಲ್ಲಾ ಉಪಾಧ್ಯಕ್ಷ ಹಾಗೂ ಕಾರ್ಯದರ್ಶಿಯಾಗಿ ಪಕ್ಷ ವಹಿಸಿದ ಎಲ್ಲ ಜವಾಬ್ದಾರಿಯನ್ನು ಶ್ರದ್ಧೆಯಿಂದ ಬಿಭಾಯಿಸಿದ್ದೇನೆ. ಅಲ್ಲದೇ, ಸ್ಥಳೀಯ ಕಾರ್ಯಕರ್ತರ ನೋವು ನಲಿವಿಗೆ ಸ್ಪಂದಿಸುತ್ತಾ ಜೆಡಿಎಸ್‌ ಪ್ರಾಬಲ್ಯದ ನಡುವೆಯೂ ಕ್ಷೇತ್ರದಲ್ಲಿ ಬಿಜೆಪಿ ಸಂಘಟನೆಗೆ ಶ್ರಮಿಸುತ್ತಿದ್ದೇನೆ. ಮಾದರಿ ನಗರದ ಕನಸು ಕಾಣುತ್ತಾ ಬಂದಿರುವ ನನಗೆ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಒಲಿದು ಬಂದಿದ್ದೇ ಆದರೆ, ಪಕ್ಷದ ನಾಯಕರ ಮಾರ್ಗದರ್ಶನದಲ್ಲಿ ಜನತೆಯ ಅಪೇಕ್ಷೆಗೆ ಅನುಗುಣವಾಗಿ ಕೊಟ್ಟಹುದ್ದೆಯನ್ನು ಯಶಸ್ವಿಯಾಗಿ ನಿರ್ವಹಿಸುವ ಮೂಲಕ ಪಕ್ಷ ನನ್ನ ಮೇಲೆ ಇಟ್ಟನಂಬಿಕೆಯನ್ನು ಉಳಿಸಿಕೊಳ್ಳುತ್ತೇನೆ.

- ಜಿವಿಟಿ ಬಸವರಾಜ್‌, ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ

ಸತತ ನಾಲ್ಕು ಬಾರಿ ಪುರಸಭೆ ಸದಸ್ಯನಾಗಿ ತಾಲೂಕು ಮತ್ತು ಜಿಲ್ಲಾ ಘಟಕಗಳಲ್ಲಿ ನಾನಾ ಜವಾಬ್ದಾರಿಗಳನ್ನು ಹೊತ್ತು ಪಕ್ಷ ಸಂಘಟನೆಗೆ ಶ್ರಮಿಸಿದ್ದೇನೆ. ಅದೇ ರೀತಿ ಪಕ್ಷವು ಕೂಡ ನನಗೆ ಸೂಕ್ತ ಸಂದರ್ಭಗಳಲ್ಲಿ ವಿವಿಧ ಜವಾಬ್ದಾರಿಗಳನ್ನು ನೀಡುವ ಮೂಲಕ ಜನ ಸೇವೆ ಮಾಡಲು ಹೆಚ್ಚಿನ ಅವಕಾಶವನ್ನು ಕಲ್ಪಿಸಿಕೊಟ್ಟಿದೆ. ಅದೇ ರೀತಿ ಪ್ರಾಧಿಕಾರದ ಅಧ್ಯಕ್ಷ ಆಕಾಂಕ್ಷಿಯಾಗಿದ್ದು, ಪಕ್ಷದ ವರಿಷ್ಠರು ಈ ಹುದ್ದೆ ನೀಡಿದರೆ, ಜವಾಬ್ದಾರಿ ಹಾಗೂ ಸೇವೆ ಎಂದು ಭಾವಿಸಿ ನಗರದ ಅಭಿವೃದ್ಧಿ ದೃಷ್ಟಿಯಿಂದ ಪ್ರಾಮಾಣಿಕವಾಗಿ ಶ್ರಮಿಸುತ್ತೇನೆ.

- ಎನ್‌.ಡಿ. ಪ್ರಸಾದ್‌, ಜಿಲ್ಲಾ ಬಿಜೆಪಿ ವಕ್ತಾರ

ನಾನು ಬಿಜೆಪಿ ಪಕ್ಷದ ಶಿಸ್ತಿನ ಸಿಪಾಯಿ. ತಾಲೂಕು ಬಿಜೆಪಿ ಗ್ರಾಮೀಣ ಮಂಡಲದ ಅಧ್ಯಕ್ಷ ಸ್ಥಾನ ಅಥವಾ ಪ್ರಾಧಿಕಾರದ ಅಧ್ಯಕ್ಷ ಸ್ಥಾನ ಯಾವುದಾದರೂ ಸರಿ ಪಕ್ಷ ನೀಡುವ ಜವಾಬ್ದಾರಿಯನ್ನು ನಿಬಾಯಿಸುವ ಜೊತೆಗೆ ಸ್ಥಳೀಯ ಮುಖಂಡರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕಾರ್ಯಕರ್ತರ ಒಡಗೂಡಿ ಕ್ಷೇತ್ರದಲ್ಲಿ ಪಕ್ಷದ ಬಲವರ್ಧನೆಗೆ ಶ್ರಮಿಸುತ್ತೇನೆ. ಅಲ್ಲದೇ, ತಾಲೂಕಿನಲ್ಲಿ ಇನ್ನೂ ಹೆಚ್ಚಿನ ಸಂಘಟನೆ ಮಾಡಿ. ಪಕ್ಷನ್ನು ಬೆಳೆಸುತ್ತೇನೆ.

- ಕೆವಿಎನ್‌ ಶಿವು, ಜಿಲ್ಲಾ ಬಿಜೆಪಿ ಕಾರ್ಯಕಾರಿಣಿ ಸಮಿತಿ ಸದಸ್ಯ