ಚಿಕ್ಕಬಳ್ಳಾಪುರ [ಡಿ.20]: ನಾನು ಯಾವುದೇ ಖಾತೆಗಾಗಿ ವರಿಷ್ಠರ ಬಳಿ ಲಾಬಿ ಮಾಡಿಲ್ಲ ಮುಂದೆಯೂ ಮಾಡುವುದಿಲ್ಲ, ಜಿಲ್ಲೆಯ ಜನತೆಯ ಹಸನು ಮಾಡುವ ಖಾತೆ ನೀಡಲು ಮುಕ್ಯಮತ್ರಿಗಳು ಸಿದ್ಧರಿದ್ದು, ಈ ವಿಚಾರದಲ್ಲಿ ಯಾವುದೇ ಲಾಬಿ ಅಗತ್ಯವಿಲ್ಲ ಎಂದು ಶಾಸಕ ಡಾ.ಕೆ. ಸುಧಾಕರ್‌ ಅಭಿಪ್ರಾಯಪಟ್ಟರು.

ನಗರದಲ್ಲಿ ಗುರುವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, ಪ್ರಸ್ತುತ ಧನುರ್‌ ಮಾಸ ನಡೆಯುತ್ತಿರುವ ಹಿನ್ನೆಲೆಯಲ್ಲಿ ಪುಣ್ಯ ಕಾಲದಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡುವ ಉದ್ಧೇಶದಿಂದ ಮುಂದೂಡಲಾಗಿದ್ದು, ಧನುರ್‌ ಮಾಸ ಮುಗಿದ ಕೂಡಲೇ ಸಂಪುಟ ವಿಸ್ತರಣೆಯಾಗಲಿದೆ ಎಂದು ಹೇಳಿದರು.

ಜನರೇ ಛೀಮಾರಿ ಹಾಕಲಿದ್ದಾರೆ:  ಕಾನೂನಿನ ಅರಿವಿಲ್ಲದ, ದೇಶದ ಮೇಲೆ ಪ್ರೀತಿ ಇಲ್ಲದ ಕಾಂಗ್ರೆಸ್‌ ಪೌರತ್ವ ಕಾಯ್ದೆ ತಿದ್ದುಪಡಿ ವಿಚಾರದಲ್ಲಿ ರಾಜಕೀಯ ಲಾಭಕ್ಕಾಗಿ ಬೀದಿಗಿಳಿದು ರಂಪಾಟ ನಡೆಸುತ್ತಿದೆ. ದೇಶದ 120 ಕೋಟಿ ಜನರಿಗೆ ಯಾವುದೇ ರೀತಿಯ ತೊಂದರೆಯಾಗದ ಕಾಯ್ದೆ ಕುರಿತು ಅನಗತ್ಯ ಗೊಂದಲ ಸೃಷ್ಟಿಮಾಡಲಸಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಸಾಂತ್ಯಕ್ಕೆ ಕೆಪಿಸಿಸಿಗೆ ಹೊಸ ಬಾಸ್‌ : ರೇಸ್ ನಲ್ಲಿ ಯಾರು.....

ದೇಶದ ಯಾವೊಬ್ಬ ಪ್ರಜೆಗೂ ಈ ಕಾಯ್ದೆಯಿಂದ ಅನ್ಯಾಯಾ ಆಗುವುದಿಲ್ಲ, ಸತ್ಯ, ಕಾನೂನು ಅರ್ಥ ಮಾಡಿಕೊಳ್ಳದ ಕಾಂಗ್ರೆಸ್‌ ಮುಗ್ದ ಜನರ ಮತ್ತು ಸರ್ಕಾರದ ಆಸ್ತಿಗೆ ಹಾನಿ ಮಾಡುವ ಕೆಲಸಕ್ಕೆ ಮುಂದಾಗಿದ್ದು, ಮುಂದಿನ ದಿನಗಳಲ್ಲಿ ಜನರೇ ಕಾಂಗ್ರೆಸ್‌ಗೆ ಛೀಮಾರಿ ಹಾಕಲಿದ್ದಾರೆ ಎಂದರು. ಪ್ರಸ್ತುತ ಕಾನೂನು ಸುವ್ಯವಸ್ಥೆ ಕಾಪಾಡುವ ಜೊತೆಗೆ ಶಾಂತಿ ಕಾಪಾಡಬೇಕಾದ ಹಿನ್ನೆಲೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಲಾಗಿದ್ದು, ಇದು ಉತ್ತಮ ಕ್ರಮ ಎಂದು ಹೇಳಿದರು.