ಬೆಂಗಳೂರು(ಡಿ.10): ಮರಗಳಿಗೆ ಹಾನಿ ಮಾಡುವ ಮೊಳೆ, ಸ್ಟ್ಯಾಪ್ಲರ್‌ ಪಿನ್‌ ಹೊಡೆಯುವುದು ಶಿಕ್ಷಾರ್ಹ ಅಪರಾಧ ಆಗಲಿದೆ. ಈ ಸಂಬಂಧ ಕಾನೂನಿಗೆ ತಿದ್ದುಪಡಿ ತಂದು ಶಿಕ್ಷಾರ್ಹ ಅಪರಾಧವನ್ನಾಗಿ ಮಾಡಲು ಕ್ರಮವಹಿಸುವುದಾಗಿ ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಹೇಳಿದ್ದಾರೆ.

ಬುಧವಾರ ನಗರದ ಚಿತ್ರಕಲಾ ಪರಿಷತ್ತು ಬಸ್‌ ನಿಲ್ದಾಣ ಹತ್ತಿರ ಬಿ.ಪ್ಯಾಕ್‌ ಸಂಸ್ಥೆ ಹಮ್ಮಿಕೊಂಡಿರುವ ‘ಮೊಳೆ ಮುಕ್ತ ಮರ ಬೆಂಗಳೂರು’ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದ ಅವರು, ಮರಗಳ ಮೇಲೆ ಭಿತ್ತಿಪತ್ರಗಳು ಅಂಟಿಸುವುದು, ಮೊಳೆ ಹೊಡೆಯುವುದನ್ನು ನಿಷೇಧಿಸಿದ್ದರೂ ಮರಗಳ ಮೇಲೆ ಭಿತ್ತಿಪತ್ರಗಳನ್ನು ಅಂಟಿಸುತ್ತಿದ್ದಾರೆ. ಅಂತವರ ಮೇಲೆ ಕ್ರಿಮಿನಲ್‌ ಕೇಸ್‌ ಹಾಕಲು ಕ್ರಮಕೈಗೊಳ್ಳಲಾಗುತ್ತಿದೆ. ಜೊತೆಗೆ ಕಾನೂನು ತಿದ್ದುಪಡಿಗೆ ಕ್ರಮವಹಿಸಲಾಗುವುದು ಎಂದು ತಿಳಿಸಿದರು.

ಬಿಬಿಎಂಪಿಯ ವ್ಯಾಪ್ತಿ 1 ಕಿ.ಮೀ. ಹೆಚ್ಚಳ..!

ಮರಕ್ಕೆ ಮೊಳೆ, ಕೇಬಲ್‌, ತಂತಿಗಳನ್ನು ಸುತ್ತಿದರೆ ಗಾಯವಾಗಿ ಸರಿಯಾಗಿ ಆಹಾರ, ನೀರು, ಪೌಷ್ಟಿಕಾಂಶ ಸಿಗದೆ ಮರಗಳು ಸಾವನ್ನಪ್ಪಲಿವೆ ಎಂದ ಅವರು, ಬಿ-ಪ್ಯಾಕ್‌ ಸಂಸ್ಥೆ ಹಮ್ಮಿಕೊಂಡಿರುವ ಮೊಳೆ ಮುಕ್ತ ಮರ ಬೆಂಗಳೂರು ಅಭಿಯಾನಕ್ಕೆ ಶ್ಲಾಘನೆ ವ್ಯಕ್ತಪಡಿಸಿದರು.

ಮರ ಸ್ಥಳಾಂತರಕ್ಕೆ ಒತ್ತು

ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ಸಂಸ್ಥೆ ಬಳಿ ಮರಗಳನ್ನು ಸ್ಥಳಾಂತರ ಮಾಡುವ ದೊಡ್ಡ ಯಂತ್ರಗಳಿವೆ. ನಗರದಲ್ಲಿ ಮೂಲ ಸೌಕರ್ಯ ಕಲ್ಪಿಸುವ ಸ್ಥಳದಲ್ಲಿ ದೊಡ್ಡ ದೊಡ್ಡ ಮರಗಳಿದ್ದರೆ ಅದನ್ನು ಉಚಿತವಾಗಿ ಬೇರೆಡೆ ಸ್ಥಳಾಂತರ ಮಾಡಲು ಈ ದೊಡ್ಡ ಯಂತ್ರ ನೀಡಲಿದ್ದಾರೆ. ಅವರ ಸೇವೆ ಬಳಸಿಕೊಂಡು ಮರಗಳನ್ನು ಕಡಿಯದೆ ಎಲ್ಲೆಲ್ಲಿ ಸಾಧ್ಯವಾಗುತ್ತದೆಯೋ ಅಂತಹ ಕಡೆ ಮರಗಳ ಸ್ಥಳಾಂತರ ಮಾಡಲು ಕ್ರಮ ಕೈಗೊಳ್ಳಲಾಗುವುದು ಎಂದರು.