ಕೆ.ಎಂ. ಮಂಜುನಾಥ್‌

ಬಳ್ಳಾರಿ(ಜ.26): ಜಿಲ್ಲೆಯ ಹೊಸಪೇಟೆ ತಾಲೂಕಿನ ಮರಿಯಮ್ಮನಹಳ್ಳಿಯಲ್ಲಿ ಪುಟ್ಟದೊಂದು ಗೂಡಿನಲ್ಲಿ ವಾಸ ಮಾಡುತ್ತಿರುವ ಜಾನಪದ ಅಕಾಡೆಮಿ ಅಧ್ಯಕ್ಷರೂ ಆಗಿರುವ ಮಂಜಮ್ಮ ಜೋಗತಿಗೆ ದೇಶದ ಅತ್ಯಂತ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ ಒಲಿದು ಬಂದಿದೆ.

ನಾಡಿನ ಜಾನಪದ ಕಲಾ ಪ್ರಕಾರದ ಬೆಳವಣಿಗೆಗೆ ಹಗಲಿರುಳೂ ಶ್ರಮಿಸುತ್ತಿರುವ ನಾಡಿನ ಶೋಷಿತರ ಧ್ವನಿಯಾಗಿ, ಅವರ ಕಲೆಯ ರಾಯಭಾರಿಯಾಗಿರುವ ಮಂಜಮ್ಮ ಜೋಗತಿ ಅವರು ಜಾನಪದ ಅಕಾಡೆಮಿ ಅಧ್ಯಕ್ಷರಾದರೂ ಚಿಕ್ಕ ಗುಡಿಸಲಿನಲ್ಲಿ ವಾಸಿಸುತ್ತಿದ್ದಾರೆ. ಮಂಜಮ್ಮ ಜೋಗತಿ ಅವರು ತನ್ನಂತೆ ಸಂಕಷ್ಟದಲ್ಲಿರುವ ಜೋಗತಿಗೆ ಪುಟ್ಟಗೂಡಿನಲ್ಲಿಯೇ ಆಸರೆ ನೀಡಿ ತಾಯಿಪ್ರೀತಿ ಮೆರೆದಿದ್ದಾರೆ. ಅವರ ಕಲಾಸೇವೆ ಪರಿಗಣಿಸಿ ರಾಜ್ಯೋತ್ಸವ, ಜಾನಪದಶ್ರೀ, ಕರ್ನಾಟಕ ಯಕ್ಷಗಾನ ಅಕಾಡೆಮಿ ಪ್ರಶಸ್ತಿ ಸೇರಿದಂತೆ ಅನೇಕ ಪ್ರಶಸ್ತಿಗಳು ಮಂಜಮ್ಮ ಜೋಗತಿ ಅವರನ್ನು ಹುಡುಕಿಕೊಂಡು ಬಂದಿವೆ.

ಎಸ್ಸೆಸ್ಸೆಲ್ಸಿ ವರೆಗೆ ಓದಿರುವ ಮಂಜಮ್ಮ ಜೋಗತಿಗೆ ಮೂಲತಃ ಮಂಜುನಾಥ ಎಂದು ಹೆಸರಿಟ್ಟಿದ್ದರು. ಬಾಲಕನಾಗಿಯೇ ಇದ್ದ ಮಂಜುನಾಥ ಹೈಸ್ಕೂಲು ಪ್ರವೇಶಿಸುವ ಸಂದರ್ಭದಲ್ಲಿ ದೇಹದಲ್ಲಾದ ಬದಲಾವಣೆಯಿಂದ ಮಂಜಮ್ಮ ಜೋಗತಿಯಾಗಿ ಬದಲಾದ ಕಥೆ ಈ ಸಮಾಜದಲ್ಲಿನ ಮೌಢ್ಯ, ಅಂಧವಿಶ್ವಾಸವನ್ನು ಪ್ರತಿಬಿಂಬಿಸುತ್ತದೆ. ಜೀವನವಿಡೀ ಕಷ್ಟ, ಕಾರ್ಪಣ್ಯದಲ್ಲೇ ಕೈತೊಳೆಯುತ್ತ ಜೋಗತಿಯಾಗಿ ಬದುಕುತ್ತ ಭಿಕ್ಷೆ ಬೇಡಿ ಜೀವನ ಸಾಗಿಸಿದ್ದು, ಬಳಿಕ ಜೋಗತಿ ನೃತ್ಯವನ್ನೂ ಮಾಡುತ್ತಿದ್ದರು.

SPBಗೆ ಪದ್ಮವಿಭೂಷಣ, ಕಂಬಾರರಿಗೆ ಪದ್ಮಭೂಷಣ, ಮಂಜಮ್ಮ ಜೋಗತಿಗೆ ಪದ್ಮಶ್ರೀ

ಮಂಜುನಾಥ ಮಂಜಮ್ಮ ಜೋಗತಿಯಾದ ಕಥೆ

ಬಾಲಕ ಮಂಜುನಾಥ ದೇಹದಲ್ಲಾದ ಬದಲಾವಣೆ ಬಳಿಕ ಮಂಜಮ್ಮ ಜೋಗತಿಯಾಗಿ ಬದಲಾಯಿಸಿತು. ಎಲ್ಲರಂತೆ ಮಗ ಬೆಳೆದು ಆಸರೆಯಾಗುತ್ತಾನೆ ಎಂದುಕೊಂಡಿದ್ದ ತಂದೆ-ತಾಯಿ ಮಗನಲ್ಲಾದ ಬೆಳವಣಿಗೆ ಕಂಡು ಕುಗ್ಗಿ ಹೋದರು. ತಾನು ಮಾಡದ ತಪ್ಪಿಗೆ ಕುಟುಂಬ ಸದಸ್ಯರು ನೊಂದುಕೊಂಡರು ಎಂದು ಜರ್ಝರಿತಗೊಂಡು ಆತ್ಮಹತ್ಯೆಗೂ ಪ್ರಯತ್ನಿಸಿ, ಬದುಕುಳಿದ ಮಂಜುನಾಥ, ನನ್ನಿಂದ ಕುಟುಂಬ ಸದಸ್ಯರಿಗೆ ತಲೆ ತಗ್ಗಿಸುವಂತಾಗಬಾರದು ಎಂದು ಕುಟುಂಬದಿಂದ ದೂರ ಉಳಿದು ಮಂಜಮ್ಮ ಜೋಗತಿಯಾಗಿಯೇ ಬದುಕಲಾರಂಭಿಸಿದಳು.

ಕೇಂದ್ರದ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿಗೆ ಆಯ್ಕೆಗೊಂಡಿರುವ ಮಂಜಮ್ಮ ಜೋಗತಿ ಅವರು ಬಾಲ್ಯದಿಂದಲೇ ಸಂಕಷ್ಟವನ್ನು ಉಂಡು ಬೆಳೆದವರು. ಮಂಜಮ್ಮಗೆ ಏಳನೇ ತರಗತಿ ಓದುತ್ತಿರುವಾಗಲೇ ದೇಹದಲ್ಲಿ ಬದಲಾವಣೆಯಾಗುತ್ತಿರುವುದು ಅರಿವಿಗೆ ಬಂತು. ಆದರೆ, ಯಾರ ಮುಂದೆಯೂ ಹೇಳಿಕೊಳ್ಳಲಾರದ ಸ್ಥಿತಿಯಿಂದ ಒದ್ದಾಡಿದಳು. ಎಸ್ಸೆಸ್ಸೆಲ್ಸಿಗೆ ಬರುವ ಹೊತ್ತಿಗೆ ಇಡೀ ದೇಹವೇ ಬದಲಾಯಿತು. ವಿಷಯ ಗೊತ್ತಾಗುತ್ತಿದ್ದಂತೆಯೇ ಪೋಷಕರು ಶಾಲೆ ಬಿಡಿಸಿ, ಬ್ಯಾಂಕ್‌ವೊಂದರ ಪಿಗ್ಮಿ ಕೆಲಸಕ್ಕೆ ಹಚ್ಚಿದರು. ಆದರೆ, ಮಂಜಮ್ಮ ಜೋಗತಿಯಾಗಿ ಬದಲಾದ ಬಳಿಕ ತಂದೆ-ತಾಯಿ ಇವರನ್ನು ದೂರವೇ ಇಟ್ಟರು. ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಯತ್ನಿಸಿದ ಬಳಿಕ ಆಸ್ಪತ್ರೆಗೆ ದಾಖಲಿಸಿದ ಪೋಷಕರು, ಮರಳಿ ಮಗಳತ್ತ ಬಾರದಿರುವುದು ಮಂಜಮ್ಮಳ ಮನಸಿನ ಮೇಲೆ ತೀವ್ರ ಘಾಸಿಗೊಳಿಸಿತಲ್ಲದೆ, ಕುಟುಂಬಕ್ಕೆ ಭಾರವಾಗಿ ಜತೆಗಿರಬಾರದೆಂದು ಜೋಗತಿಯಾಗಿ ಸ್ವಯಂ ಜೀವನ ಆರಂಭಿಸಿದರು. ತಂದೆ-ತಾಯಿ ದೂರ ಇಟ್ಟ ಬಳಿಕ ಒಬ್ಬಂಟಿಯಾಗಿಯೇ ಇದ್ದ ಮಂಜಮ್ಮ, ಕಾಳಮ್ಮ ಜೋಗತಿ ಎಂಬುವರನ್ನು ಗುರುವಾಗಿ ಸ್ವೀಕರಿಸಿದರಲ್ಲದೆ, ತನ್ನ ಎಲ್ಲ ವಿದ್ಯೆಯನ್ನು ಮಂಜಮ್ಮಗೆ ಧಾರೆ ಎರೆದರು. ಹೊಟ್ಟೆ ಪಾಡಿಗಾಗಿ ಎಂದೂ ಭಿಕ್ಷೆ ಬೇಡದ ಮಂಜಮ್ಮ ಅವರು ಜೋಗತಿ ನೃತ್ಯದ ಮೂಲಕ ಕಾರ್ಯಕ್ರಮಗಳನ್ನು ನೀಡಿ ಅದರಿಂದ ಗೌರವಧನದಲ್ಲಿ ಜೀವನ ಕಟ್ಟಿಕೊಂಡರು. ಅಷ್ಟೇ ಅಲ್ಲ, ಅನೇಕ ಜೋಗತಿಯರಿಗೆ ನೃತ್ಯ ತರಬೇತಿ ನೀಡಿ ಅವರ ಬದುಕಿಗೂ ನೆರವಾದರು.

30 ಮಂದಿಗೆ ಜಾನಪದ ಅಕಾಡಮಿ ಪ್ರಶಸ್ತಿ; ಇಬ್ಬರಿಗೆ ಒಲಿದ ಜಾನಪದ ತಜ್ಞ ಪ್ರಶಸ್ತಿ

ಬಳ್ಳಾರಿಗೆ ದೊರೆತ ಬಹುದೊಡ್ಡ ಪ್ರಶಸ್ತಿ....

ಇದೇ ಮೊದಲ ಬಾರಿಗೆ ಬಳ್ಳಾರಿ ಜಿಲ್ಲೆಗೆ ರಾಷ್ಟ್ರಮಟ್ಟದ ಪ್ರತಿಷ್ಠಿತ ಪ್ರಶಸ್ತಿಗೆ ಲಭಿಸಿದೆ. ಮಂಜಮ್ಮ ಜೋಗತಿ ಅವರು ಪದ್ಮಶ್ರೀ ಪ್ರಶಸ್ತಿಗೆ ಭಾಜನರಾಗುವ ಮೂಲಕ ಬಳ್ಳಾರಿ ಜಿಲ್ಲೆ ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡಿದೆ. ಈ ಸುದ್ದಿ ತಿಳಿಯುತ್ತಿದ್ದಂತೆಯೇ ಗಣಿ ಜಿಲ್ಲೆಯಲ್ಲಿ ಸಂಭ್ರಮ ಮನೆ ಮಾಡಿದೆ. ನೂರಾರು ಕಲಾವಿದರು ಮಂಜಮ್ಮ ಜೋಗತಿ ಅವರಿಗೆ ಕರೆ ಮಾಡಿ ಶುಭಾಶಯಗಳನ್ನು ಹೇಳುತ್ತಿದ್ದಾರೆ.

ಹೆಸರು: ಮಂಜಮ್ಮ ಜೋಗತಿ
ಮೂಲ ಹೆಸರು: ಮಂಜುನಾಥ
ಸ್ವಂತ ಊರು: ಕಲ್ಲುಕಂಬ ಗ್ರಾಮ. ಬಳ್ಳಾರಿ ತಾಲೂಕು.
ವಿದ್ಯಾರ್ಹತೆ: ಎಸ್ಸೆಸ್ಸೆಲ್ಸಿ
ಹುಟ್ಟಿದ ದಿನಾಂಕ: 18-4-1964
ತಂದೆ: ಹನುಮಂತಯ್ಯಶೆಟ್ಟಿ.
ತಾಯಿ: ಜಯಲಕ್ಷ್ಮಿ
ಜೋಗತಿದೀಕ್ಷೆ: ಹೊಸಪೇಟೆ ತಾಲೂಕು ಹುಲಿಗಿಯ ಹುಲಿಗೆಮ್ಮ ದೇವಸ್ಥಾನ
ಜೋಗತಿ ಗುರು: ಕಾಳಮ್ಮ ಜೋಗತಿ