ಉಡುಪಿ(ಜ.03): ಸಂಶಯಾಸ್ಪದವಾಗಿ ಮೃತಪಟ್ಟಿರುವ ಮಂಗಳೂರು ನ್ಯೂಸ್‌ ಚಾನೆಲ್‌ ಮಾಲೀಕ ರೋಹಿತ್‌ ರಾಜ್‌ (56) ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾಗ, ಕೆಳಗೆ ಬಿದ್ದು ರಕ್ತಸ್ರಾವದಿಂದ ಮೃತಪಟ್ಟಿರಬಹುದು ಎಂದು ಅವರ ತಂದೆ ವಿಶ್ವನಾಥ್‌ ಅವರು ದೂರಿನಲ್ಲಿ ತಿಳಿಸಿದ್ದಾರೆ.

ರೋಹಿತ್‌ ರಾಜ್‌ ಅವರು ಈ ಹಿಂದೆ 2 ಮದುವೆಯಾಗಿ ವಿಚ್ಚೇದನಕ್ಕಾಗಿ ಅರ್ಜಿ ಸಲ್ಲಿಸಿದ್ದು, ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯಲ್ಲಿರುತ್ತದೆ. ಇತ್ತೀಚೆಗೆ ರೂಮಾ ಸಹಾನಿ ಅವರನ್ನು ಮದುವೆಯಾಗಿ ಮಣಿಪಾಲದ ಬಾಡಿಗೆ ಅಪಾರ್ಟ್‌ಮೆಂಟಲ್ಲಿ ವಾಸವಾಗಿದ್ದರು ಎಂದು ಅವರ ತಂದೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

ಮಂಗಳೂರು: NMC ಕೇಬಲ್ ವಾಹಿನಿ ಮುಖ್ಯಸ್ಥ ಅನುಮಾನಾಸ್ಪದ ಸಾವು

ಡಿ.31ರಂದು ಹೊಸ ವರ್ಷದ ಆಚರಣೆಗಾಗಿ ರೋಹಿತ್‌ ರಾಜ್‌ ಗೆಳತಿ ಕೊಲ್ಕತ್ತಾ ಮೂಲದ ರೂಮಾ ಸಹಾನಿ ಹಾಗೂ ತಮ್ಮ ಚಾನೆಲ್‌ನಲ್ಲಿ ಕೆಲಸ ಮಾಡುವ ಜಾಸಿಂ ಮತ್ತು ಅಜ್ಜುಂ ಎಂಬವರು ಜೊತೆಗೆ ಉಡುಪಿಯ 'ಓಷಿಯನ್ ಪರ್ಲ್' ಹೋಟೆಲ್‌ನಲ್ಲಿ ರಾತ್ರಿ ಪಾರ್ಟಿ ಮಾಡಿ, ನಂತರ ಮಣಿಪಾಲದ 'ರಾಯಲ್‌ ಎಂಬೆಲಿ' ಅಪಾರ್ಮೆಂಟ್‌ಗೆ ಹೋಗಿದ್ದರು.

ಮರುದಿನ ಬೆಳಗ್ಗೆ ರೂಮಾ ಸಹಾನಿ ಅವರು, ರಕ್ತದ ಮಡುವಿನಲ್ಲಿ ಬಿದ್ದಿದ್ದ ರೋಹಿತ್‌ ರಾಜ್‌ ಅವರನ್ನು ಕಂಡು, ಸೆಕ್ಯೂರಿಟಿ ಗಾರ್ಡ್‌ ಸಹಾಯದಿಂದ ಕೆ.ಎಂ.ಸಿ.ಆಸ್ಪತ್ರೆಗೆ ಕರೆದುಕೊಂಡು ಹೋದಾಗ, ರೋಹಿತ್‌ ರಾಜ್‌ ಅದಾಗಲೇ ಮೃತಪಟ್ಟಿದ್ದರು.

ನೇತ್ರಾವತಿಗೆ ಮತ್ತೊಬ್ಬ ಆಹುತಿ: ಸಿದ್ಧಾಥ್‌ ಹೆಗ್ಡೆ ಆತ್ಮಹತ್ಯೆ ಸ್ಥಳದಲ್ಲಿಯೇ ನದಿಗೆ ಹಾರಿದ ಯುವಕ

ಘಟನಾ ಸ್ಥಳಕ್ಕೆ ಎಎಸ್ಪಿ ಕುಮಾರಚಂದ್ರ, ಕೆ.ಎಂ.ಸಿ. ಆಸ್ಪತ್ರೆಯ ಫೋರೆನ್ಸಿಕ್‌ ಮೆಡಿಸಿನ್‌ ವಿಭಾಗದ ವೈದಾಧಿಕಾರಿಗಳ ತಂಡ ಭೇಟಿ ನೀಡಿದರು. ಮರಣೋತ್ತರ ಪರೀಕ್ಷೆ ವರದಿ ಹಾಗೂ ಎಫ್‌.ಎಸ್‌.ಎಲ್‌ ವರದಿ ಬಂದ ಬಳಿಕ ಸಾವಿಗೆ ಸ್ಪಷ್ಟಕಾರಣ ತಿಳಿಯಬಹುದುಎಂದು ಪೊಲೀಸರು ತಿಳಿಸಿದ್ದಾರೆ.