ಸುರತ್ಕಲ್ ರೈಲು ನಿಲ್ದಾಣದಲ್ಲಿ, ಚಲಿಸುವ ರೈಲು ಹತ್ತಲು ಯತ್ನಿಸಿ ಆಯತಪ್ಪಿ ಬೀಳುತ್ತಿದ್ದ ಪ್ರಯಾಣಿಕನನ್ನು ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ರಕ್ಷಿಸಿದ್ದಾರೆ. ತಮ್ಮ ಸಮಯಪ್ರಜ್ಞೆಯಿಂದ ಪ್ರಯಾಣಿಕನನ್ನು ಪ್ಲಾಟ್‌ಫಾರ್ಮ್‌ಗೆ ಎಳೆದು, ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ.
ಮಂಗಳೂರು: ಚಲಿಸಲು ಆರಂಭಿಸಿದ್ದ ರೈಲನ್ನು ಹತ್ತಲು ಯತ್ನಿಸಿದ ವೇಳೆ ಪ್ಲಾಟ್‌ಫಾರ್ಮ್ ಹಾಗೂ ರೈಲು ಬೋಗಿ ನಡುವೆ ಸಿಲುಕಲಿದ್ದ ಪ್ರಯಾಣಿಕನನ್ನು ಪಾಯಿಂಟ್ಸ್‌ಮ್ಯಾನ್ ಸಮಯಪ್ರಜ್ಞೆ ಹಾಗೂ ಸಾಹಸದಿಂದ ರಕ್ಷಿಸಿದ ಘಟನೆ ಸೋಮವಾರ ಸುರತ್ಕಲ್ ರೈಲು ನಿಲ್ದಾಣದಲ್ಲಿ ನಡೆದಿದೆ.
ಏನಿದು ಘಟನೆ?
ಸುರತ್ಕಲ್ ನಿಲ್ದಾಣಕ್ಕೆ ಸೋಮವಾರ ಬೆಳಗ್ಗೆ 11.11ಕ್ಕೆ ಆಗಮಿಸಿದ್ದ ಮಡ್ಗಾಂವ್-ಛತ್ರಪತಿ ಶಿವಾಜಿ ಮಹಾರಾಜ್ ಟರ್ಮಿನಸ್ ಎಕ್ಸ್‌ಪ್ರೆಸ್ (10107) ರೈಲು ಮಧ್ಯಾಹ್ನ 12.12ಕ್ಕೆ ಹೊರಡಲು ಸಿದ್ಧವಾಗಿತ್ತು. ರೈಲು ನಿಧಾನವಾಗಿ ಚಲಿಸಲು ಆರಂಭಿಸುತ್ತಿದ್ದಂತೆ ಪ್ರಯಾಣಿಕರೊಬ್ಬರು ಓಡಿ ಬಂದು ರೈಲನ್ನು ಹತ್ತಲು ಪ್ರಯತ್ನಿಸಿದ್ದಾರೆ. ಈ ವೇಳೆ ಆಯತಪ್ಪಿದ ಅವರು ಫ್ಲಾಟ್‌ಫಾರ್ಮ್ ಮತ್ತು ರೈಲಿನ ಬೋಗಿಯ ನಡುವಿನ ಜಾಗಕ್ಕೆ ಬೀಳುವ ಅಪಾಯಕ್ಕೆ ಸಿಲುಕಿದ್ದರು.
ಇದನ್ನು ಗಮನಿಸಿದ ಕರ್ತವ್ಯನಿರತ ಪಾಯಿಂಟ್ಸ್‌ಮ್ಯಾನ್ ಸಂದೀಪ್ ನಾಯಕ್ ತಕ್ಷಣ ಕಾರ್ಯಪ್ರವೃತ್ತರಾಗಿ, ಅಪಾಯವನ್ನು ಲೆಕ್ಕಿಸದೆ ಪ್ರಯಾಣಿಕನನ್ನು ಬಲವಾಗಿ ಎಳೆದು ಸುರಕ್ಷಿತವಾಗಿ ಪ್ಲಾಟ್‌ಫಾರ್ಮ್‌ಗೆ ಕರೆತಂದಿದ್ದಾರೆ. ಸಂದೀಪ್ ನಾಯಕ್ ಅವರ ಸಮಯಪ್ರಜ್ಞೆ ಹಾಗೂ ಕ್ಷಿಪ್ರ ಕಾರ್ಯಾಚರಣೆಯಿಂದ ಸಂಭವಿಸಬಹುದಾಗಿದ್ದ ದೊಡ್ಡ ಅನಾಹುತ ತಪ್ಪಿದೆ. ಘಟನೆಯ ಬಳಿಕ ರೈಲನ್ನು ಮಧ್ಯಾಹ್ನ 12.16ಕ್ಕೆ ಸುರಕ್ಷಿತವಾಗಿ ನಿಲ್ದಾಣದಿಂದ ಕಳುಹಿಸಲಾಯಿತು.
10,000 ರು. ನಗದು ಬಹುಮಾನ ಘೋಷಣೆ
ಪ್ರಯಾಣಿಕನ ಪ್ರಾಣ ಉಳಿಸಿದ ಸಂದೀಪ್ ನಾಯಕ್ ಅವರ ಧೈರ್ಯ, ಕರ್ತವ್ಯನಿಷ್ಠೆ ಹಾಗೂ ಸಾಹಸವನ್ನು ಮೆಚ್ಚಿದ ಕೊಂಕಣ ರೈಲ್ವೆ ಅಧ್ಯಕ್ಷ ಹಾಗೂ ವ್ಯವಸ್ಥಾಪಕ ನಿರ್ದೇಶಕ ಸಂತೋಷ್ ಕುಮಾರ್ ಝಾ ಅವರು 10,000 ರು. ನಗದು ಬಹುಮಾನ ಘೋಷಿಸಿದ್ದಾರೆ ಎಂದು ಸಾರ್ವಜನಿಕ ಸಂಪರ್ಕಾಧಿಕಾರಿ ಸುಧಾ ಕೃಷ್ಣಮೂರ್ತಿ ತಿಳಿಸಿದ್ದಾರೆ.
ಇದನ್ನೂ ಓದಿ: ಅಮೃತ್ ಭಾರತ್ ಯೋಜನೆ: ಕರ್ನಾಟಕದಲ್ಲಿ ಕೇವಲ 12 ರೈಲು ನಿಲ್ದಾಣಗಳು ಮಾತ್ರ ಪೂರ್ಣ! ವಿಳಂಬಕ್ಕೆ ಕಾರಣ ಬಹಿರಂಗ


