Mangaluru rains: ಕರಾವಳಿಯಲ್ಲಿ ಇಂದು, ನಾಳೆ ಆರೆಂಜ್ ಅಲರ್ಟ್!
ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಬುಧವಾರ ಮಳೆ ದೂರ, ಹಗಲು ಮೋಡ, ಅಲ್ಲಲ್ಲಿ ತುಂತುರು ಮಳೆ ಕಾಣಿಸಿದೆ. ಹವಾಮಾನ ಇಲಾಖೆ ಜು.20 ಮತ್ತು 21ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಮಂಗಳೂರು (ಜು.20): ಮಂಗಳೂರು ಸೇರಿದಂತೆ ದ.ಕ.ಜಿಲ್ಲೆಯಲ್ಲಿ ಬುಧವಾರ ಮಳೆ ದೂರ, ಹಗಲು ಮೋಡ, ಅಲ್ಲಲ್ಲಿ ತುಂತುರು ಮಳೆ ಕಾಣಿಸಿದೆ. ಹವಾಮಾನ ಇಲಾಖೆ ಜು.20 ಮತ್ತು 21ರಂದು ಕರಾವಳಿಯಲ್ಲಿ ಆರೆಂಜ್ ಅಲರ್ಟ್ ಘೋಷಿಸಿದೆ.
ಜಿಲ್ಲೆಯ ಗ್ರಾಮೀಣ ಭಾಗಗಳಲ್ಲಿ ಬುಧವಾರ ಬಿಸಿಲು, ಅಪರಾಹ್ನ ತುಂತುರು ಹನಿದಿದೆ. ಮಂಗಳೂರಲ್ಲಿ ಸಂಜೆ ವೇಳೆ ಮಳೆ ಹನಿದಿದೆ. ಇದರ ಹೊರತು ಇಡೀ ದಿನ ಬಿಸಿಲು ಕಂಡುಬಂತು.
ಸುಳ್ಯದಲ್ಲಿ ಗರಿಷ್ಠ ಮಳೆ:
ದ.ಕ.ಜಿಲ್ಲೆಯಲ್ಲಿ ಬುಧವಾರ ಬೆಳಗ್ಗಿನ ವರೆಗೆ ಸುಳ್ಯದಲ್ಲಿ ಗರಿಷ್ಠ 27.1 ಮಿಲಿ ಮೀಟರ್ ಮಳೆ ದಾಖಲಾಗಿದೆ. ಬೆಳ್ತಂಗಡಿ 21.1 ಮಿ.ಮೀ, ಬಂಟ್ವಾಳ 12.6 ಮಿ.ಮೀ, ಮಂಗಳೂರು 4.5 ಮಿ.ಮೀ, ಪುತ್ತೂರು 10.7 ಮಿ.ಮೀ, ಮೂಡುಬಿದಿರೆ 18.2 ಮಿ.ಮೀ. ಹಾಗೂ ಕಡಬದಲ್ಲಿ 19 ಮಿ.ಮೀ. ಮಳೆಯಾಗಿದ್ದು, ದಿನದ ಸರಾಸರಿ ಮಳೆ 19.6 ಮಿ.ಮೀ. ದಾಖಲಾಗಿದೆ.
Rain update: ಮಂಗಳೂರು, ಉಡುಪಿ ಭಾಗದಲ್ಲಿ ಮುಂಗಾರು ಚುರುಕು
ಉಪ್ಪಿನಂಗಡಿ ನೇತ್ರಾವತಿ ಹಾಗೂ ಕುಮಾರಧಾರ ನದಿ 24.5 ಮೀಟರ್, ಬಂಟ್ವಾಳ ನೇತ್ರಾವತಿ ನದಿ 2.1 ಮೀಟರ್‌ನಲ್ಲಿ ಹರಿಯುತ್ತಿದೆ. ಮೂಡುಬಿದಿರೆಯಲ್ಲಿ ಐದು ಮನೆ ಭಾಗಶ: ಹಾನಿಗೀಡಾಗಿದೆ.
ಉಡುಪಿ: ಮಳೆಗೆ 6 ಮನೆಗಳಿಗೆ ಹಾನಿ
ಉಡುಪಿ: ಜಿಲ್ಲೆಯಾದ್ಯಂತ ಬುಧವಾರ ಬಿಸಿಲಿನ ನಡುವೆ ಒಂದೆರಡು ಬಾರಿ ಲಘುವಾದ ಮಳೆಯಾಗಿದೆ. ಮಂಗಳವಾರ ಉತ್ತಮ ಮಳೆಯಾಗಿತ್ತು. ಬುಧವಾರ ಮುಂಜಾನವೆರೆಗೆ 24 ಗಂಟೆಗಳಲ್ಲಿ ಜಿಲ್ಲೆಯಲ್ಲಿ ಸರಾಸರಿ 51.10 ಮಿ.ಮೀ. ಮಳೆಯಾಗಿತ್ತು. ಜೊತೆಗೆ 6 ಮನೆಗಳಿಗೆ ಹಾನಿಯಾಗಿದೆ.
ಬ್ರಹ್ಮಾವರ ತಾಲೂಕಿನ ಬಾಳ್ಕುದ್ರು ಗ್ರಾಮದ ಜ್ಯೋತಿ ಅವರ ಮನೆಗೆ ಗಾಳಿ ಮಳೆಯಿಂದ 50,000 ರು., ಕಾಪು ತಾಲೂಕಿನ ಮಟ್ಟು ಗ್ರಾಮದ ಕೃಷ್ಣ ಪೂಜಾರಿ ಅವರ ಮನೆಯ ಮೇಲೆ ಮರಬಿದ್ದು 15,000 ರು., ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ರಾಮ ಸಾಲಿಯನ್ ಅವರ ಮನೆ ಮೇಲೆ ಮರಬಿದ್ದು 20,000 ರು., ಕುಂದಾಪುರ ತಾಲೂಕಿನ ಬಳ್ಕೂರು ಗ್ರಾಮದ ಸಣ್ಣಮ್ಮ ಅವರ ಮನೆಗೆ 40,000 ರು., ಅಸೋಡು ಗ್ರಾಮದ ನಾಗರತ್ನ ಅವರ ಮನೆಗೆ 50,000 ರು. ಮತ್ತು ಕಟ್‌ಬೆಲ್ತೂರು ಗ್ರಾಮದ ಗುಲಾಬಿ ಅವರ ಮನೆಗೆ 50,000 ರು. ಹಾನಿಯಾಗಿದೆ.
ಸಸ್ಯಕ್ಷೇತ್ರ ಕಾರ್ಮಿಕ ವಿಶ್ರಾಂತಿ ಗೃಹದ ಮೇಲೆ ಉರುಳಿದ ಮರ
ಬೆಳ್ತಂಗಡಿ
ಅರಣ್ಯ ಇಲಾಖೆಯ ಮುಂಡಾಜೆಯ ಸಸ್ಯ ಕ್ಷೇತ್ರದಲ್ಲಿರುವ ಕಾರ್ಮಿಕರ ವಿಶ್ರಾಂತಿ ಗೃಹದ ಮೇಲೆ ಬೃಹತ್ ಗಾತ್ರದ ಮರ ಉರುಳಿ ಹಾನಿ ಉಂಟಾದ ಘಟನೆ ಬುಧವಾರ ಸಂಜೆ ನಡೆದಿದೆ. ಇದರ ಸಮೀಪದಲ್ಲಿರುವ ಪಂಪುಶೆಡ್‌ಗೂ ಹಾನಿ ಉಂಟಾಗಿದೆ.
ಮರ ಉರುಳುವ ಕೆಲವೇ ಕ್ಷಣಗಳ ಮೊದಲು ಇಲ್ಲಿ ಮೂವರು ಕಾರ್ಮಿಕರು ಚಹಾ ಸೇವಿಸುತ್ತಿದ್ದು ಆಗಷ್ಟೇ ಸಸ್ಯ ಕ್ಷೇತ್ರದತ್ತ ಕೆಲಸಕ್ಕೆ ತೆರಳಿದ್ದ ಕಾರಣ ಭಾರಿ ಅಪಾಯದಿಂದ ಕೂದಲೆಳೆಯ ಅಂತರದಲ್ಲಿ ಪಾರಾಗಿದ್ದಾರೆ.
ಈ ಕಟ್ಟಡದಲ್ಲಿ ಸಾಮಾನ್ಯವಾಗಿ ಕಾರ್ಮಿಕರು ಅಡುಗೆ ಕೆಲಸ ನಿರ್ವಹಣೆ, ವಿಶ್ರಾಂತಿ ಪಡೆಯುತ್ತಿರುತ್ತಾರೆ. ಕಟ್ಟಡದ ಒಳಗೆ ನರ್ಸರಿಗೆ ಸಂಬಂಧಿಸಿದ ಸಾಮಗ್ರಿಗಳು ಇದ್ದು ಮರವು ಸಂಪೂರ್ಣ ಕಟ್ಟಡವನ್ನು ಆವರಿಸಿರುವ ಕಾರಣ ಹಾನಿಯ ಪ್ರಮಾಣ ಸ್ಪಷ್ಟವಾಗಿಲ್ಲ.
Karnataka Monsoon: ಕೊಡಗಿನಲ್ಲಿ ಚುರುಕುಗೊಂಡ ಮಳೆ; ಕರಾವಳಿಯಲ್ಲಿ ಸಾಧಾರಣ
ಗಾಳಿ-ಮಳೆ: ತಾಲೂಕಿನಾದ್ಯಂತ ಬುಧವಾರ ಮಳೆಯೊಂದಿಗೆ ಭಾರಿ ಗಾಳಿ ಬೀಸಿದ್ದು ಚಿಬಿದ್ರೆ ಸಮೀಪದ ಕಳೆಂಜೊಟ್ಟು, ಮುಂಡಾಜೆಯ ಕೊಡಂಗೆ, ಕಾಯರ್ತೋಡಿ ಮೊದಲಾದ ಪರಿಸರದ ಗ್ರಾಮೀಣ ರಸ್ತೆಗಳಲ್ಲಿ ಮರಗಳು ಉರುಳಿ ಬಿದ್ದು ಸಂಚಾರಕ್ಕೆ ಸಮಸ್ಯೆ ಉಂಟಾಯಿತು.