ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣ ಆಡಳಿತ ಪೂರ್ತಿ ಅದಾನಿ ವಶಕ್ಕೆ!
ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮೂರು ವರ್ಷದ ಬಳಿಕ ಅ.31ರಂದು ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣದ ಎಲ್ಲ ಆಗು ಹೋಗುಗಳು ಅದಾನಿ ಗುಂಪಿನಿಂದಲೇ ನಡೆಯಲಿದೆ.
ಆತ್ಮಭೂಷಣ್
ಮಂಗಳೂರು (ಅ.6): ಮಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಪೂರ್ಣ ಆಡಳಿತ ಮೂರು ವರ್ಷದ ಬಳಿಕ ಅ.31ರಂದು ಅದಾನಿ ಗ್ರೂಪ್ ತೆಕ್ಕೆಗೆ ಸೇರಲಿದೆ. ಇನ್ನು ಮುಂದೆ ಈ ವಿಮಾನ ನಿಲ್ದಾಣದ ಎಲ್ಲ ಆಗು ಹೋಗುಗಳು ಅದಾನಿ ಗುಂಪಿನಿಂದಲೇ ನಡೆಯಲಿದೆ.
2020 ಅ.31ರಂದು ಮಂಗಳೂರು ಸೇರಿದಂತೆ ದೇಶದ 6 ವಿಮಾನ ನಿಲ್ದಾಣಗಳ ಆಡಳಿತವನ್ನು ದೇಶದ ಪ್ರತಿಷ್ಠಿತ ಉದ್ದಿಮೆ ಕಂಪನಿ ಅದಾನಿ ತನ್ನ ವಶಕ್ಕೆ ಪಡೆದುಕೊಂಡಿತ್ತು. ಕೇಂದ್ರ ಸರ್ಕಾರ ಖಾಸಗಿ ರಂಗದ ಮೂಲಕ ವಿಮಾನ ನಿಲ್ದಾಣಗಳ ಅಭಿವೃದ್ಧಿಗೆ ತೆಗೆದುಕೊಂಡ ನಿರ್ಧಾರದ ಹಿನ್ನೆಲೆ ಇದಾಗಿದೆ.
ಸಿಡಿದೆದ್ದ ಐಟಿ ಉದ್ಯೋಗಿಗಳು, ರಾಷ್ಷ್ರಮಟ್ಟದಲ್ಲಿ ಸದ್ದು ಮಾಡ್ತಿದೆ ಬೆಂಗಳೂರು ಮಟ್ರೋ ಸುದ್ದಿ!
ದೇಶದ ಆರು ವಿಮಾನ ನಿಲ್ದಾಣಗಳ ಪೈಕಿ ಮಂಗಳೂರು ವಿಮಾನ ನಿಲ್ದಾಣ ಪ್ರಥಮವಾಗಿ ಅದಾನಿ ಕೈವಶವಾಗಿತ್ತು. ಆ ಬಳಿಕ ಅಹಮ್ಮದಾಬಾದ್, ಲಕ್ನೋ, ಜೈಪುರ, ಗುವಾಹಟಿ ಹಾಗೂ ತ್ರಿವೆಂಡ್ರಂ ವಿಮಾನ ನಿಲ್ದಾಣಗಳನ್ನು ಅದಾನಿ ತೆಕ್ಕೆಗೆ ತೆಗೆದುಕೊಂಡಿತ್ತು. ಮುಂಬೈ ವಿಮಾನ ನಿಲ್ದಾಣವನ್ನು 2020 ಜುಲೈನಲ್ಲಿ ಅದಾನಿ ಕಂಪನಿ ಜಿವಿಕೆ ಕೈನಿಂದ ತೆಗೆದುಕೊಂಡಿತ್ತು. ಪ್ರಸಕ್ತ ನವಿ ಮುಂಬೈನಲ್ಲಿ ಅದಾನಿ ಗ್ರೂಪ್‌ನ ಹೊಸ ವಿಮಾನ ನಿಲ್ದಾಣ ನಿರ್ಮಾಣವಾಗುತ್ತಿದ್ದು, 2024ರ ವೇಳೆಗೆ ಕಾರ್ಯಾರಂಭಿಸುವ ನಿರೀಕ್ಷೆ ಇದೆ.
ಒಪ್ಪಂದ ಪ್ರಕಾರ ಮೂರು ವರ್ಷಗಳ ವರೆಗೆ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದ(ಎಎಐ) ಅರ್ಧದಷ್ಟು ಸಿಬ್ಬಂದಿ ಹಾಗೂ ಅದಾನಿ ಸಿಬ್ಬಂದಿ ಜತೆಯಾಗಿಯೇ ಕೆಲಸ ಮಾಡಬೇಕಿತ್ತು. ಇದೀಗ ಒಪ್ಪಂದದ ಅವಧಿ ಅ.30ಕ್ಕೆ ಮುಕ್ತಾಯಗೊಳ್ಳುತ್ತಿದ್ದು, ಇಡೀ ವಿಮಾನ ನಿಲ್ದಾಣ ಆಡಳಿತ ಅದಾನಿ ತೆಕ್ಕೆಗೆ ಹೋಗುತ್ತಿದೆ.
ನಮ್ಮ ಮೆಟ್ರೋದಲ್ಲಿ ಆಹಾರ ಸೇವಿಸಿದವನಿಗೆ ಬಿಸಿ ಮುಟ್ಟಿಸಿದ ಬಿಎಂಆರ್‌ಸಿಎಲ್, 500 ರೂ ದಂಡ
ಎಎಐ ಎಲ್ಲ ಸಿಬ್ಬಂದಿ ವರ್ಗಾವಣೆ: ಅದಾನಿ ತೆಕ್ಕೆಗೆ ಸೇರ್ಪಡೆಗೊಂಡ ವೇಳೆ 118 ಮಂದಿ ಎಎಐ ಸಿಬ್ಬಂದಿ ಇದ್ದರು. ಅವರಲ್ಲಿ 97 ಮಂದಿಯನ್ನು ಉಳಿಸಿಕೊಳ್ಳಲಾಗಿತ್ತು. ಇವರೆಲ್ಲ ಎಜಿಎಂ ಹಾಗೂ ಕೆಳಗಿನ ಹಂತದವರು. ಅವರೆಲ್ಲ ಹಣಕಾಸು, ಎಚ್‌ಆರ್, ಆಡಳಿತ, ವಾಣಿಜ್ಯ, ಅಗ್ನಿಶಾಮಕ, ಟರ್ಮಿನಲ್ ಸೇರಿದಂತೆ ಆರು ವಿಭಾಗಗಳಲ್ಲಿ ಅದಾನಿ ಸಿಬ್ಬಂದಿಯೊಂದಿಗೆ ಜತೆಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈಗ ಒಪ್ಪಂದ ಅವಧಿ ಮುಕ್ತಾಯಗೊಳ್ಳುತ್ತಿರುವುದರಿಂದ ಈಗ ಈ 97 ಮಂದಿಯನ್ನು ಬೇರೆ ಬೇರೆ ವಿಮಾನ ನಿಲ್ದಾಣಗಳಿಗೆ ವರ್ಗಾವಣೆಗೊಳಿಸಲಾಗಿದೆ. ಇನ್ನು ಈ ಆರು ವಿಭಾಗ ಕೂಡ ಅದಾನಿ ಆಡಳಿತಕ್ಕೆ ಒಳಪಡಲಿದೆ. ಏರ್‌ಟ್ರಾಫಿಕ್ ಕಂಟ್ರೋಲ್(ಎಟಿಸಿ), ಕಾರ್ಗೊ ಹಾಗೂ ಸಿಎನ್‌ಎಸ್(ಕಮ್ಯುನಿಕೇಷನ್ ನೇವಿಗೇಷನ್ ಅಂಡ್ ಸರ್ವೆಲೆನ್ಸ್) ಮಾತ್ರ ಅದಾನಿ ಹೊರತಾಗಿ ಇರಲಿದೆ. ಆದರೆ ವಿಮಾನ ನಿಲ್ದಾಣದ ಹೆಸರಿನಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು ವಿಮಾನ ನಿಲ್ದಾಣ ಮೂಲಗಳು ಸ್ಪಷ್ಟಪಡಿಸಿವೆ.
‘ಏರ್‌ಪೋರ್ಟ್ ವಿಲೇಜ್’ ಶಾಪಿಂಗ್ ಅಂಗಡಿಗಳಿಗೆ ಸಿದ್ಧತೆ: ಕಳೆದ ಮೂರು ವರ್ಷಗಳಿಂದ ಅದಾನಿ ಹಾಗೂ ಎಎಐ ಜಂಟಿ ಆಡಳಿತದಲ್ಲಿ ಮಂಗಳೂರು ವಿಮಾನ ನಿಲ್ದಾಣದಲ್ಲಿ ಕೆಲವೊಂದು ಸುಧಾರಣೆ ಮಾಡಲಾಗಿದೆ.
ಅಂತಾರಾಷ್ಟ್ರೀಯ ಪ್ರಯಾಣಿಕರಿಗೆ ಆಗಮನ ಹಾಲ್‌ನ್ನು ರಚಿಸಲಾಗಿದೆ. ಹಿಂದಿನ ಹಾಲ್‌ನ್ನು ವಿಶಾಲವಾಗಿ ದೇಶೀಯ ಯಾನಿಗಳಿಗೆ ಮೀಸಲಿರಿಸಲಾಗಿದೆ. ನಾಲ್ಕು ಏರೋಬ್ರಿಡ್ಜ್ ಸಾರಿಗೆ ಮತ್ತೆ ಎರಡು ಸೇರ್ಪಡೆಯಾಗಿದೆ. ರನ್‌ವೇಗೆ ಡಾಂಬರೀಕರಣ ನಡೆಸಿ ಸುರಕ್ಷತೆಗೆ ಹೆಚ್ಚಿನ ಗಮನ ನೀಡಲಾಗಿದೆ. ಕೆಳ ಅಂತಸ್ತಿನಲ್ಲಿ ಆಗಮನ ಹಾಗೂ ನಿರ್ಗಮನಕ್ಕೆ ಒಂದೇ ದಾರಿ ರಚನೆ, ಪಾರ್ಕಿಂಗ್‌ನಲ್ಲಿ ತಾಂತ್ರಿಕತೆ ಅಳವಡಿಕೆ, ಮುಂಗಡ ಬುಕ್ಕಿಂಗ್ ವಾಹನ ಸೌಕರ್ಯ, ಟ್ಯಾಕ್ಸಿ ಚಾಲಕರಿಗೆ ವಿಶ್ರಾಂತಿ ಗೃಹ ಹಾಗೂ ಕುಡಿವ ನೀರು ಸೌಲಭ್ಯ, ವಿಮಾನ ನಿಲ್ದಾಣ ಒಳಗೆ ಹೆಚ್ಚುವರಿ ತಿಂಡಿ, ತಿನಿಸುಗಳ ವ್ಯವಸ್ಥೆ ಏರ್ಪಡಿಸಲಾಗಿದೆ. ಈಗ ಕೆಳ ಅಂತಸ್ತಿನಲ್ಲಿ ‘ಏರ್‌ಪೋರ್ಟ್ ವಿಲೇಜ್’ ಪರಿಕಲ್ಪನೆಯಲ್ಲಿ ಕಂಟೈನ್ ಮಾದರಿಯಲ್ಲಿ ಶಾಪಿಂಗ್ ಅಂಗಡಿಗಳಿಗೆ ಸಿದ್ಧತೆ ನಡೆಯುತ್ತಿದೆ.