ಉಡುಪಿ[ಜು. 04]   ಉಡುಪಿ ಜಿಲ್ಲೆಯ ಕಾರ್ಕಳ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಗೋಪಾಲ ಭಂಡಾರಿ ಹೃದಯಾಘಾತದಿಂದ ನಿಧನರಾಗಿದ್ದಾರೆ.

ಬೆಂಗಳೂರಿನಿಂದ ಮಧ್ಯಾಹ್ನ ವೋಲ್ವೋ ಬಸ್ ನಲ್ಲಿ ಹೊರಟಿದ್ದ ಗೋಪಾಲ ಭಂಡಾರಿ ಅವರಿಗೆ ಹೃದಯಾಘಾತವಾಗಿದೆ. ರಾತ್ರಿ ಮಂಗಳೂರು ಬಸ್ ನಿಲ್ದಾಣ ತಲುಪಿದಾಗಲೂ ಬಸ್ಸಿನಿಂದ ಇಳಿಯದ್ದನ್ನ ಕಂಡು ಕಂಡಕ್ಟರ್ ಭಂಡಾರಿ ಅವರನ್ನು ಗಮನಿಸಿದ್ದಾರೆ.

ಈ ವೇಳೆ ಅಸ್ವಸ್ಥರಾಗಿ ಬಸ್ಸಿನ ಸೀಟಿನ ಮೇಲೆ ಬಿದ್ದಿದ್ದ ಗೋಪಾಲ ಭಂಡಾರಿ ಅವರನ್ನು ತಕ್ಷಣ  ತಕ್ಷಣ ಸ್ಥಳೀಯ ಸರ್ಕಾರಿ ಆಸ್ಪತ್ರೆಗೆ ಸ್ಥಳೀಯರ ನೆರವಿನಿಂದ ದಾಖಲಿಸಲಾಗಿದೆ. ಆಸ್ಪತ್ರೆಯಲ್ಲಿ ಗೋಪಾಲ ಭಂಡಾರಿ ಹೃದಯಾಘಾತದಿಂದ ಮೃತಪಟ್ಟಿರುವುದು ದೃಢವಾಗಿದೆ

1952 ಜುಲೈ 5 ಗೋಪಾಲ ಭಂಡಾರಿ ಜನನಿಸಿದ್ದರು. ಒಂದು ಅವಧಿಗೆ ಹೆಬ್ರಿ ಬ್ಲಾಕ್ ಅಧ್ಯಕ್ಷರಾಗಿದ್ದರು. ಒಂದು ಬಾರಿ ಜಿಲ್ಲಾ ಪಂಚಾಯತ್ ಸದಸ್ಯರಾಗಿದ್ದರು. ಮಾಜಿ ಸಿಎಂ ವೀರಪ್ಪ ಮೊಯ್ಲಿ ಆಪ್ತರಾಗಿ ಗುರುತಿಸಿಕೊಂಡಿದ್ದರು. ಸದ್ಯ ಕೆಪಿಸಿಸಿ ಕಾರ್ಯದರ್ಶಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

ಜಾತಿ ಬಲ ಇಲ್ಲದೆ ಎರಡು ಬಾರಿ ಶಾಸಕರಾಗಿದ್ದ ಭಂಡಾರಿ ಹೆಬ್ರಿಯ ನಿವಾಸಿಯಾಗಿದ್ದರು. ಕಾರ್ಕಳ ವಿಧಾನಸಭಾ ಕ್ಷೇತ್ರದಿಂದ 1999ರಲ್ಲಿ ಕಾಂಗ್ರೆಸ್ ನಿಂದ ಮೊದಲ ಸಾರಿ ಗೆಲುವು ದಾಖಲಿಸಿದ್ದರು. 2004ರಲ್ಲಿ ಚುನಾವಣೆಯಲ್ಲಿ ವಿ. ಸುನೀಲ್ ಕುಮಾರ್ ಎದರು ಗೋಪಾಲ್ ಭಂಡಾರಿ ಸೋಲು ಕಂಡಿದ್ದರು. 2008ರಲ್ಲಿ ಮತ್ತೆ ಗೋಪಾಲ್ ಭಂಡಾರಿ ಸುನೀಲ್ ಕುಮಾರ್ ಎದುರು ಗೆಲುವು ದಾಖಲಿಸಿದ್ದರು.

2013 ಮತ್ತು 2018 ರಲ್ಲಿ ಮತ್ತೆ ಸುನೀಲ್ ಕುಮಾರ್ ಎದುರು ಸೋಲು ಕಂಡಿದ್ದರು. ಒಟ್ಟು ಎರಡು ಬಾರಿ ಗೆಲುವು, ಮೂರು ಬಾರಿ ಸೋಲುಂಡಿದ್ದ ರಾಜಕಾರಣಿ ಜನಾನುರಾಗಿಯಾಗಿ ಹೆಸರು ಮಾಡಿದ್ದರು.