ಮಂಗಳೂರು ಮಹಾನಗರ ಪಾಲಿಕೆಯು ಸಾಕು ನಾಯಿಗಳ ಮಾಲೀಕರಿಗೆ ಲಸಿಕೆ, ಆರೈಕೆ ಮತ್ತು ಸಂತಾನಹರಣ ಚಿಕಿತ್ಸೆಗೆ ಸಂಬಂಧಿಸಿದಂತೆ ಕಟ್ಟುನಿಟ್ಟಿನ ಹೊಸ ನಿಯಮಗಳನ್ನು ಜಾರಿಗೆ ತಂದಿದೆ. ಈ ನಿಯಮಗಳನ್ನು ಉಲ್ಲಂಘಿಸಿದರೆ ಅಥವಾ ಪ್ರಾಣಿಗಳನ್ನು ರಸ್ತೆಯಲ್ಲಿ ಬಿಟ್ಟು ಹೋದರೆ 50 ಸಾವಿರ ರೂಪಾಯಿವರೆಗೆ ದಂಡ ಹಾಗೂ ಜೈಲು ಶಿಕ್ಷೆ ವಿಧಿಸಲಾಗುವುದು ಎಂದು ಎಚ್ಚರಿಸಿದೆ.

ದಕ್ಷಿಣ ಕನ್ನಡ : ಮಂಗಳೂರು ಮಹಾನಗರ ಪಾಲಿಕೆ ತನ್ನ ಪಾಲಿಕೆ ವ್ಯಾಪ್ತಿಗೆ ಬರುವ ಎಲ್ಲಾ ಸಾಕು ಪ್ರಾಣಿಗಳಿಗೆ ಖಡಕ್ ಆಗಿ ವಾರ್ನಿಂಗ್ ನೀಡಿದೆ. ನೀವು ಸಾಕುವ ನಾಯಿಗಳಿಗೆ ಕಡ್ಡಾಯವಾಗಿ ಲಸಿಕೆ, ಅವುಗಳ ಆರೈಕೆ ಹಾಗೂ ಸಂತಾನಹರಣ ಚಿಕಿತ್ಸೆ ಮತ್ತು ಅವುಗಳ ಜವಾಬ್ದಾರಿಗೆ ಸಂಬಂಧಿಸಿದ ಹೊಸ ನಿಯಮಗಳನ್ನ ಜಾರಿಗೆ ತಂದಿದೆ.

ಒಂದು ವೇಳೆ ನಿಯಮ ಮೀರಿದ್ರೆ ಬರೋಬ್ಬರಿ 50 ಸಾವಿರ ರೂಪಾಯಿ ದಂಡವನ್ನು ನೀವು ಪಾವತಿಸಬೇಕಾಗುತ್ತದೆ ಎಂದು ಎಚ್ಚರಿಕೆಯನ್ನ ನೀಡಿದೆ. ಸುಪ್ರೀಂ ಕೋರ್ಟ್‌ನ ಆದೇಶಗಳನ್ನ ಉಲ್ಲೇಖಿಸಿ ಸುತ್ತೋಲೆಗಳನ್ನ ಹೊರಡಿಸಿದೆ. 2023 ಭಾರತೀಯ ಪ್ರಾಣಿ ಕಲ್ಯಾಣ ನಿಯಮಗಳು, ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆ, ನಾಯಿ ಸಕಾಣೆ ಮತ್ತು ಮಾರುಕಟ್ಟೆ ನಿಯಮಗಳು ಜೊತೆಗೆ ಕರ್ನಾಟಕ ಮುನ್ಸಿಪಲ್ ಕಾಪೊರೇಷನ್ ಕಾಯ್ದೆಗೆ ಅನುಸಾರವಾಗಿ ಸುತ್ತೋಲೆಯನ್ನ ಹೊರಡಿಸಿದೆ.

ಆದೇಶದಲ್ಲಿ ಏನಿದೆ?

  • ಎಲ್ಲಾ ಸಾಕು ನಾಯಿಗಳಿಗೆ ರೇಬಿಸ್ ವಿರುದ್ಧ ಲಸಿಕೆ ಹಾಕಬೇಕು
  • ಪಶುವೈದ್ಯರು ಸೂಚಿಸಿದಂತೆ ಇತರೆ ಲಸಿಕೆಗಳನ್ನು ನೀಡಬೇಕು
  • ವರ್ಷಕ್ಕೊಮ್ಮೆ ಬೂಸ್ಟರ್ ಡೋಸ್‌ಗಳನ್ನು ಹಾಕಿಸಬೇಕು
  • ಅಧಿಕಾರಿಗಳಿಗೆ ತಪಾಸಣೆ ಮಾಡುವಾಗ ಲಸಿಕೆ ಪ್ರಮಾಣ ಪತ್ರ ತೋರಿಸಬೇಕು
  • ನಾಯಿಗಳಿಗೆ ಶುದ್ಧ ಮತ್ತು ಪೌಷ್ಟಿಕ ಆಹಾರ, ಶುದ್ದ ಕುಡಿಯುವ ನೀರು ಕೊಡಬೇಕು
  • ಸುರಕ್ಷಿತ ಆಶ್ರಯ, ಸೂಕ್ತ ಪಶುವೈದ್ಯಕೀಯ ಚಿಕಿತ್ಸೆ ನೀಡಬೇಕು
  • ಸಾರ್ವಜನಿಕ ಪ್ರದೇಶಗಳಲ್ಲಿ ಮುಕ್ತವಾಗಿ ಓಡಾಡಲು ಬಿಡಬಾರದು
  • ಹೊರಗಾಂಣಕ್ಕೆ ಕರೆದೊಯ್ಯುವಾಗ ನಿಯಮಗಳನ್ನ ಪಾಲಿಸಬೇಕು
  • ಮಲ ವಿಸರ್ಜನೆ ಮಾಡಿದರೆ.. ಆ ಪ್ರದೇಶವನ್ನು ತಕ್ಷಣ ಕ್ಲೀನ್ ಮಾಡಬೇಕು
  • ಕ್ಲೀನ್ ಮಾಡಿಲ್ಲ ಅಂದರೆ ಸಾವಿರದಿಂದ 5 ಸಾವಿರವರೆಗೆ ಸ್ಥಳದಲ್ಲೇ ದಂಡ

ಎಲ್ಲಾ ಸಾಕು ನಾಯಿಗಳು, ಗಂಡು ಮತ್ತು ಹೆಣ್ಣು ಎರಡೂ, ಅಧಿಕೃತ ಪಶುವೈದ್ಯರಿಂದ ಸಂತಾನಹರಣ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕು ಎಂದು ಪಾಲಿಕೆಯ ಸುತ್ತೋಲೆಯಲ್ಲಿ ತಿಳಿಸಲಾಗಿದೆ. ನಾಯಿ ಸಾಕಣೆ ಅಥವಾ ನಾಯಿಮರಿ ಮಾರಾಟದಲ್ಲಿ ತೊಡಗಿರುವ ಯಾವುದೇ ವ್ಯಕ್ತಿ ನೋಂದಣಿ ಪ್ರಮಾಣಪತ್ರವನ್ನು ಪಡೆಯಬೇಕು. ಕರ್ನಾಟಕ ರಾಜ್ಯ ಪ್ರಾಣಿ ಕಲ್ಯಾಣ ಮಂಡಳಿಯಿಂದ ನಾಯಿ ಸಾಕಣೆ ಮತ್ತು ಮಾರುಕಟ್ಟೆ ನಿಯಮಗಳ ಅಡಿಯಲ್ಲಿ ನೋಂದಣಿ ಪ್ರಮಾಣ ಪತ್ರವನ್ನು ಕಡ್ಡಾಯವಾಗಿ ಪಡೆಯಬೇಕು ಎಂದು ತಿಳಿಸಿದೆ.

ಜೊತೆಗೆ ಸಾಕು ನಾಯಿ ಹಾಗೂ ನಾಯಿ ಮರಿಗಳನ್ನ ಕಸದ ರಾಶಿ ಮೇಲೆ ಮತ್ತು ರಸ್ತೆಯಲ್ಲಿ ಬಿಟ್ಟು ಹೋಗುವುದು ಪ್ರಾಣಿಗಳ ಮೇಲಿನ ದೌರ್ಜನ್ಯ ತಡೆ ಕಾಯ್ದೆ ಅಡಿ ಅಪರಾಧವಾಗಿದೆ. ಅಂತಹ ನಿರ್ಲಕ್ಷ್ಯದಿಂದ ಪ್ರಾಣಿಗಳ ಸಾವು ಅಥವಾ ಅಂಗವೈಕಲ್ಯ ಸಂಭವಿಸಿದರೆ.. ಐದು ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ದಂಡ ವಿಧಿಸಲಾಗುತ್ತದೆ. ಒಂದು ವೇಳೆ ಅಂತಹ ಅಪರಾಧಗಳು ಕಂಡು ಬಂದರೆ.. ಬರೋಬ್ಬರಿ 50,000 ರೂಪಾಯಿ ವರೆಗೆ ದಂಡ ವಿಧಿಸಲಾಗುತ್ತದೆ ಎಂದು ಆಯುಕ್ತರು ಎಚ್ಚರಿಕೆ ನೀಡಿದ್ದಾರೆ. ಇನ್ನು ನಾಯಿಮರಿಗಳನ್ನ ಬಿಟ್ಟು ಹೋಗಿರೋದು ಕಂಡು ಬಂದರೆ 9449007722 ನಂಬರ್‍‌ಗೆ ದೂರು ನೀಡಬಹುದು.