ಮಂಗಳೂರು(ಸೆ.27): ನಗರದ ಭವಂತಿ ಸ್ಟ್ರೀಟ್‌ನ ಅರುಣ್‌ ಜುವೆಲ್ಲರಿ ಸ್ಟೋರ್‌ನಲ್ಲಿ ಸೆಪ್ಟೆಂಬರ್‌ 2ರ ತಡರಾತ್ರಿ ನಡೆದ ದರೋಡೆ ಪ್ರಕರಣಕ್ಕೆ ಸಂಬಂಧಿಸಿ ಅಷ್ಘಾನಿಸ್ತಾನದ ಇಬ್ಬರು ಕ್ರಿಮಿನಲ್‌ಗಳು ಸೇರಿದಂತೆ ಮೂರು ಮಂದಿಯನ್ನು ಬಂಧಿಸುವ ಮೂಲಕ ಅಂತಾರಾಷ್ಟ್ರೀಯ ಮಟ್ಟದ ದರೋಡೆ ಜಾಲವನ್ನು ಮಂಗಳೂರು ಪೊಲೀಸರು ಬೇಧಿಸಿದ್ದಾರೆ.

ನಗರ ಪೊಲೀಸ್‌ ಕಮಿಷನರ್‌ ಡಾ. ಹರ್ಷ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಕುರಿತು ವಿವರ ನೀಡಿದರು. ಅತ್ಯಂತ ವ್ಯವಸ್ಥಿತವಾಗಿ ಸಂಘಟಿತ ಹಾಗೂ ಸುಸಜ್ಜಿತ ಸಲಕರಣಗಳನ್ನು ಬಳಸಿ ನಡೆಸಲಾಗಿದ್ದ ಈ ಅಂತಾಷ್ಟ್ರೀಯ ದರೋಡೆ ಪ್ರಕರಣವನ್ನು ಹಲವು ಆಯಾಮಗಳಲ್ಲಿ ತನಿಖೆ ನಡೆಸಿ ಸುಮಾರು 20 ದಿನಗಳ ಅಂತರದಲ್ಲಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ ಎಂದಿದ್ದಾರೆ.

ರೌಡಿ ಶೀಟರ್‌ಗಳಿಗೆ ಕಮಿಷನರ್‌ ಕೊಟ್ರು ಹೊಸ ಆಫರ್‌..!

ಪ್ರಕರಣದ ಪ್ರಮುಖ ಆರೋಪಿ ಕೇರಳ ಮೂಲದ ಕುಖ್ಯಾತ ಕ್ರಿಮಿನಲ್‌ ಮುತ್ತಸ್ಸಿಮು ಸಿಎಂ ಅಲಿಯಾಸ್‌ ತಸ್ಲಿಂ (39 ವರ್ಷ) ಹಾಗೂ ಅಷ್ಘಾನಿಸ್ತಾನದ ಕುಖ್ಯಾತರಾದ ವಲಿ ಮುಹಮ್ಮದ್‌ ಸಫಿ ಅಲಿಯಾಸ್‌ ಸಫಿ (45), ಮುಹಮ್ಮದ್‌ ಅಝೀಮ್‌ ಖುರಂ ಅಲಿಯಾಸ್‌ ಅಝೀಮ್‌ (25) ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ 12 ದಿನಗಳ ಪೊಲೀಸ್‌ ವಶಕ್ಕೆ ಪಡೆಯಲಾಗಿದೆ. ಕೇರಳದಲ್ಲಿ ಸೆ. 23ರಂದು ಈ ಮೂವರನ್ನು ಬಂಧಿಸಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ದರೋಡೆಯಾಗಿದ್ದ ಸುಮಾರು 1 ಕೋಟಿ ರು. ಮೌಲ್ಯದ 2.8 ಕೆ.ಜಿ. ಚಿನ್ನಾಭರಣಗಳನ್ನು ಕೇರಳ ಹಾಗೂ ಮುಂಬೈನಿಂದ ವಶಪಡಿಸಿಕೊಳ್ಳಲಾಗಿದೆ.

ಹೆಮ್ಮೆಯ ಬೀಟ್ ಡ್ಯೂಟಿಗೆ ಮೊದಲ ಯಶಸ್ಸು: 30 ವರ್ಷಗಳಿಂದ ತಲೆ ಮರೆಸಿದ್ದ ಆರೋಪಿ ಸೆರೆ

ಸೆ.2ರ ತಡರಾತ್ರಿ ಅರುಣ್‌ ಜುವೆಲ್ಲರಿಗೆ ನುಗ್ಗಿದ ದರೋಡೆ ತಂಡ 1 ಕೋಟಿ ರು. ಮೌಲ್ಯದ 3 ಕೆ.ಜಿ. ಚಿನ್ನಾಭರಣವನ್ನು ದೋಚಿ ಪರಾರಿಯಾಗಿತ್ತು. ದರೋಡೆಗೆ ಹೈಡ್ರಾಲಿಕ್‌ ಜ್ಯಾಕ್‌, ಎಲ್‌ಪಿಜಿ ಸಿಲಿಂಡರ್‌, ಅತ್ಯಾಧುನಿಕ ಮಾದರಿಯ ಕಟ್ಟಿಂಗ್‌ ಮಿಷಿನ್‌ ಬಳಸಿರುವುದು ಪತ್ತೆಯಾಗಿತ್ತು. ಈ ಬಗ್ಗೆ ಅವಿರತ ಕಾರ್ಯಾಚರಣೆ ನಡೆಸಿದ ಪರಿಣಾಮ ಆರೋಪಿಗಳು ಪೊಲೀಸ್‌ ಬಲೆಗೆ ಬಿದ್ದಿದ್ದಾರೆ. ಉಳಿದ ಆರೋಪಿಗಳನ್ನು ಹಾಗೂ ಸೊತ್ತುಗಳನ್ನು ಇನ್ನಷ್ಟೆವಶಪಡಿಸಬೇಕಾಗಿದೆ ಎಂದು ಹೇಳಿದ್ದಾರೆ.

ಪ್ರಕರಣದಲ್ಲಿ ಅಪ್ಘಾನ್‌ ಮೂಲದ ಇನ್ನೋರ್ವ ಕ್ರಿಮಿನಲ್‌ ಸೇರಿದಂತೆ ಇಬ್ಬರು ತಲೆಮರೆಸಿಕೊಂಡಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸ್‌ ಕಮಿಷನರ್‌ ತಿಳಿಸಿದರು. ಅತ್ಯಂತ ವ್ಯವಸ್ಥಿತ ಹಾಗೂ ಸಂಘಟಿತವಾಗಿ ನಡೆಸಲಾಗಿದ್ದ ಈ ದರೋಡೆ ಪ್ರಕರಣವನ್ನು ನಾಲ್ಕೈದು ತಂಡಗಳಲ್ಲಿ ಮಂಗಳೂರು ಪೊಲೀಸರು ಅಧಿಕಾರಿಗಳು ಹಾಗೂ ಸಿಬ್ಬಂದಿ ರಾಷ್ಟ್ರೀಯ ಮಟ್ಟದಲ್ಲಿ ತನಿಖೆ ನಡೆಸಿ ಆರೋಪಿಗಳನ್ನು ಕೆಲವು ದಿನಗಳಲ್ಲೇ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದಿದ್ದಾರೆ.

ಭೂಗತ ಜಗತ್ತಿನ ನಂಟು

ಬಂಧಿತ ಪ್ರಮುಖ ಆರೋಪಿ ಕಾಸರಗೋಡಿನ ಮುತ್ತಸ್ಸಿಮು ಸಿಎಂ ಅಲಿಯಾಸ್‌ ತಸ್ಲಿಂಗೆ ಭೂಗತ ಜಗತ್ತಿನ ಜೊತೆಗೆ ನಂಟು ಹೊಂದಿರುವುದು ಪ್ರಾಥಮಿಕ ವಿಚಾರಣೆಯಲ್ಲಿ ಬೆಳಕಿಗೆ ಬಂದಿದೆ ಎಂದು ಕಮಿಷನರ್‌ ಡಾ.ಹರ್ಷ ತಿಳಿಸಿದ್ದಾರೆ.

ಈತನ ವಿರುದ್ಧ ಕಾಸರಗೋಡಿನ ಬೇಕಲ ಪೊಲೀಸ್‌ ಠಾಣೆ, ಮಂಗಳೂರಿನ ಉಳ್ಳಾಲ ಹಾಗೂ ದೆಹಲಿಯಲ್ಲಿ ಶಸ್ತ್ರಾಸ್ತ ಕಾಯ್ದೆಯಡಿ ಪ್ರಕರಣ ದಾಖಲಾಗಿತ್ತು. ಕೇರಳದಲ್ಲಿ ಜನಿಸಿದ ಈತ ಬಳಿಕ ಮುಂಬಯಿಗೆ ತೆರಳಿದ್ದನು. ಅಲ್ಲಿನ ಅಪರಾಧ ಜಗತ್ತಿನ ಜೊತೆಗೆ ಸೇರಿ ಅಲ್ಲಿಂದ ದುಬೈನ ಭೂಗತ ಜಗತ್ತಿನ ಸಂಪರ್ಕ ಹೊಂದಿದ್ದನು ಎಂದಿದ್ದಾರೆ.

ಅಷ್ಘಾನ್‌ ಮೂಲದ ಇನ್ನಿಬ್ಬರು ಆರೋಪಿಗಳಾದ ವಲಿ ಮುಹಮ್ಮದ್‌ ಸಫಿ ಅಲಿಯಾಸ್‌ ಸಫಿ ಮತ್ತು ಮುಹಮ್ಮದ್‌ ಅಝೀಮ್‌ ಖುರಂ ಅಲಿಯಾಸ್‌ ಅಝೀಮ್‌ ಇವರು ಅಂತಾರಾಷ್ಟ್ರೀಯ ವೃತ್ತಿಪರ ಕ್ರಿಮಿನಲ್‌ ಗ್ಯಾಂಗ್‌ನವರಾಗಿದ್ದಾರೆ. ಭಾರತೀಯ ಶಸ್ತ್ರಾಸ್ತ್ರ ಕಾಯ್ದೆಯಡಿ ದೆಹಲಿ ಪೊಲೀಸರು ಇವರ ವಿರುದ್ಧ ಕೇಸ್‌ ದಾಖಲಿಸಿ ಬಂಧಿಸಿದ್ದರು. ಜಾಮೀನು ಮೇಲೆ ಬಿಡುಗಡೆಗೊಂಡ ಬಳಿಕ ಇವರು ಮತ್ತೆ ದರೋಡೆ ಕೃತ್ಯಕ್ಕೆ ಇಳಿದಿರುವುದು ಪತ್ತೆಯಾಗಿದೆ. ಇವರ ಮೂಲ ಪತ್ತೆಯಾದ ಹಿನ್ನೆಲೆಯಲ್ಲಿ ಅಷ್ಘಾನ್‌ ದೂತಾವಾಸಕ್ಕೆ ಮಾಹಿತಿ ನೀಡಲಾಗಿದೆ. ಅಲ್ಲದೆ ಇವರ ಪಾಸ್‌ಪೋರ್ಟ್‌ನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಕಮಿಷನರ್‌ ಹೇಳಿದ್ದಾರೆ.

6 ತಿಂಗಳಿಂದ ಸ್ಕೆಚ್‌

ಈ ದರೋಡೆ ತಂಡ ಕಳೆದ 6 ತಿಂಗಳಿಂದ ದರೋಡೆಗೆ ಸ್ಕೆಚ್‌ ಹಾಕುತ್ತಿತ್ತು. ಈ ತಂಡದ ಸದಸ್ಯರು ಮಂಗಳೂರಿನಲ್ಲಿ ವಾಸ್ತವ್ಯ ಹೂಡಿರಲಿಲ್ಲ. ಪ್ರಮುಖ ಆರೋಪಿ ಕಾಸರಗೋಡಿ ನಿವಾಸಿಯಾದ ಕಾರಣ ಆತನಿಗೆ ಮಂಗಳೂರಿನ ಬಗ್ಗೆ ಮಾಹಿತಿ ಇತ್ತು. ಹಾಗಾಗಿ ಇತರೆ ಆರೋಪಿಗಳನ್ನು ಬಳಸಿಕೊಂಡು ದರೋಡೆ ಕೃತ್ಯ ನಡೆಸಿದ್ದಾರೆ. ಇತರ ಕಡೆಗಳಲ್ಲೂ ದರೋಡೆಗೆ ಸ್ಕೆಚ್‌ ಹಾಕಿರುವ ಬಗ್ಗೆ ಹೆಚ್ಚಿನ ಮಾಹಿತಿಯನ್ನು ಪಡೆಯಲಾಗುತ್ತಿದೆ. ಭವಂತಿಸ್ಟ್ರೀಟ್‌ನಲ್ಲಿ ಚಿನ್ನಾಭರಣಗಳ ಅಂಗಡಿ ಹೆಚ್ಚಾಗಿ ಇರುವುದರಿಂದ ಅದೇ ಸ್ಟ್ರೀಟ್‌ನಲ್ಲಿ ದರೋಡೆ ನಡೆಸಿದ್ದಾರೆ. ಇವರನ್ನು ಬಂಧಿಸುವ ಮೂಲಕ ಇನ್ನಷ್ಟುದರೋಡೆ ಕೃತ್ಯಗಳನ್ನು ತಡೆಗಟ್ಟಿದಂತಾಗಿದೆ ಎಂದು ಕಮಿಷನರ್‌ ತಿಳಿಸಿದರು.