ಮಂಗಳೂರು(ಆ.29): ಜಿಲ್ಲೆಯ ರೌಡಿ ಶೀಟರ್‌ಗಳು ಪ್ರತಿ ವಾರ ತಪ್ಪದೆ ಆಯಾ ಪೊಲೀಸ್‌ ಠಾಣೆಗೆ ಬಂದು ಸಹಿ ಹಾಕಿ, ತಮ್ಮ ವಾರದ ಚಟುವಟಿಕೆ ಬಗ್ಗೆ ಲಿಖಿತ ಮಾಹಿತಿ ನೀಡಬೇಕು. ಇದನ್ನು ಠಾಣಾಧಿಕಾರಿಗಳು ಅಡ್ಡಪರಿಶೀಲನೆ ಮಾಡುತ್ತಾರೆ. ಸನ್ನಡತೆಯಲ್ಲಿ ಇರುವುದು ಕಂಡುಬಂದರೆ, ಅಂತಹ ರೌಡಿ ಶೀಟರ್‌ಗಳಿಗೆ ಹಾಗೂ ಅವರ ಕುಟುಂಬಕ್ಕೆ ಸಮಾಜದ ಮುಖ್ಯವಾಹಿನಿಯಲ್ಲಿ ಜೀವಿಸಲು ಅವಕಾಶ ಕಲ್ಪಿಸುವುದು ಅಲ್ಲದೆ, ಸ್ವಉದ್ಯೋಗಕ್ಕೆ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.

ಕಮಿಷನರೇಟ್‌ ವ್ಯಾಪ್ತಿಯಲ್ಲಿ ಬುಧವಾರ ಸುಮಾರು 355 ರೌಡಿಶೀಟರ್‌ಗಳ ಪರೇಡ್‌ ನಡೆಸಿದ ಕಮಿಷನರ್‌ ಡಾ.ಹರ್ಷ ಅವರು, ಈ ಆಫರ್‌ನ್ನು ತಿರಸ್ಕರಿಸಿ ಸಮಾಜಭಂಜಕರಾಗಿ ಮುಂದುವರಿಯುವುದಾದರೆ, ಕಠಿಣ ಕ್ರಮ ಕೈಗೊಳ್ಳಲು ಹಿಂದೇಟು ಹಾಕುವುದಿಲ್ಲ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಪ್ರತ್ಯೇಕ ಘಟಕ:

ರೌಡಿಶೀಟರ್‌ಗಳಿಗೆ ಬುದ್ಧಿಮಾತು ಹೇಳಿ ಸಾಗಹಾಕುವ ಬದಲು ಅವರು ಮನಃಪರಿವರ್ತನೆಗೊಂಡು ಭಾರತೀಯ ಸತ್ಪ್ರಜೆಯಾಗಿ ಬಾಳುವುದಕ್ಕೆ ಹೀಗೊಂದು ಅವಕಾಶ ನೀಡಲಾಗಿದೆ. ಅಲ್ಲದೆ ಇದಕ್ಕಾಗಿ ಕಮಿಷನರೇಟ್‌ ಕಚೇರಿಯಲ್ಲಿ ಪ್ರತ್ಯೇಕ ಘಟಕವನ್ನು ತೆರೆಯುವುದಾಗಿಯೂ ಹೇಳಿದ್ದಾರೆ.

ಏನಿದು ಆಫರ್‌?:

1-ರೌಡಿಶೀಟರ್‌ಗಳು ಪ್ರತಿ ಸೋಮವಾರ ತಮ್ಮ ಇಡೀ ವಾರದ ದಿನಚರಿಯನ್ನು ತಂದು ಆಯಾ ಪೊಲೀಸ್‌ ಠಾಣೆಗೆ ಒಪ್ಪಿಸಬೇಕು. ನಿರಂತರವಾಗಿ ಆರು ತಿಂಗಳು ಕಾಲ ಈ ರೀತಿ ಚಾಚೂ ತಪ್ಪದೆ ಮಾಡಿದರೆ, ಅಂತಹ ರೌಡಿಶೀಟರ್‌ ಕ್ರಿಮಿನಲ್‌ ಕೃತ್ಯದಿಂದ ಹೊರಗೆ ಬರುತ್ತಿರುವುದು ಖಚಿತವಾದರೆ, ಸನ್ನಡತೆ ವರ್ತನೆಗೆ ಕಾನೂನು ರೀತಿಯ ನೆರವು ನೀಡಲಾಗುವುದು. ಅಲ್ಲದೆ ಪ್ರತಿ ಬಾರಿ ಮನೆಗೆ ಬಂದು ತನಿಖೆ ನಡೆಸುವುದನ್ನು ನಿಲ್ಲಿಸಲಾಗುವುದು.

2-ಸನ್ನಡತೆಯಿಂದ ಸಮಾಜದ ಮುಖ್ಯವಾಹಿನಿಗೆ ಬರಲು ಇಚ್ಛಿಸಿ ಮನಃಪರಿವರ್ತನೆಗೊಳ್ಳುವ ರೌಡಿಶೀಟರ್‌ಗಳು ಬಯಸಿದಲ್ಲಿ ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿವಿಧ ಯೋಜನೆಗಳಡಿಯಲ್ಲಿ ಸ್ವಉದ್ಯೋಗಕ್ಕೆ ಅವಕಾಶ ಕಲ್ಪಿಸಲಾಗುವುದು. ಅದಕ್ಕೆ ಬೇಕಾದ ನೆರವನ್ನು ಪೊಲೀಸ್‌ ಇಲಾಖೆ ಕಲ್ಪಿಸಲಿದೆ.

3-ಒಂದು ರೌಡಿಶೀಟರ್‌ ಮನೆಯಲ್ಲಿ ಇನ್ನೊಂದು ರೌಡಿಶೀಟರ್‌ ಹಣೆಪಟ್ಟಿತಲೆಎತ್ತುವುದು ಬೇಡ. ಜನಿಸುವಾಗ ಯಾರೂ ರೌಡಿಶೀಟರ್‌ ಹಣೆಪಟ್ಟಿಕಟ್ಟಿಕೊಂಡು ಬರುವುದಿಲ್ಲ. ಆದ್ದರಿಂದ ಕುಟುಂಬದ ಗೌರವಕ್ಕೆ ಕುಂದು ಬಾರದಂತೆ ನೆರವಾಗುವುದು ಪೊಲೀಸ್‌ ಇಲಾಖೆಯ ಉದ್ದೇಶ. ಕುಟುಂಬಸ್ಥರು ಬಯಸಿದಲ್ಲಿ ಸ್ವಉದ್ಯೋಗಕ್ಕೂ ಪೊಲೀಸರು ನೆರವಾಗಲಿದ್ದಾರೆ.

ಗೂಂಡಾ ಸುಧಾರಣಾ ಘಟಕ ಸ್ಥಾಪನೆ:

ರೌಡಿಶೀಟರ್‌ನಿಂದ ಹೊರಬಂದು ಸಮಾಜದಲ್ಲಿ ಸಜ್ಜನರಾಗಿ ಜೀವಿಸಲು ಇಚ್ಛಿಸುವ ರೌಡಿಶೀಟರ್‌ಗಳ ಆಗುಹೋಗುಗಳ ಬಗ್ಗೆ ಪರಿಶೀಲನೆ ನಡೆಸಲು ಗೂಂಡಾ ಸುಧಾರಣಾ ಘಟಕವನ್ನು ಕಮಿಷನರೇಟ್‌ನಲ್ಲಿ ಸ್ಥಾಪಿಸಲು ಕ್ರಮ ಕೈಗೊಳ್ಳಲಾಗುವುದು.

ಮಂಗಳೂರಿನಲ್ಲಿನ್ನು 'ಹೆಮ್ಮೆಯ ಬೀಟ್ ಡ್ಯೂಟಿ'

ಈ ಘಟಕದಿಂದ ರೌಡಿಶೀಟರ್‌ಗಳ ಪೂರ್ವಾಪರವನ್ನು ಅವಲೋಕಿಸಿ, ಆಯಾ ಠಾಣೆಗಳಿಂದ ಮಾಹಿತಿಯನ್ನು ಸಂಗ್ರಹಿಸಲಿದೆ. ಬಳಿಕ ರೌಡಿಶೀಟರ್‌ಗಳಿಗೆ ಸ್ವಉದ್ಯೋಗಕ್ಕೆ ನೆರವಾಗಲು ಬೇಕಾದ ಕ್ರಮಗಳನ್ನು ಕೈಗೊಳ್ಳಲಿದೆ. ಎನ್‌ಜಿಒ ಹಾಗೂ ಸರ್ಕಾರಿ ಸಂಸ್ಥೆಗಳ ಜೊತೆಗೆ ಸೇತುವಾಗಿ ಈ ಘಟಕ ಕಾರ್ಯನಿರ್ವಹಿಸಲಿದೆ.

ರೌಡಿಶೀಟರ್‌ಗಳ ಮೇಲೆ ನಿಗಾ:

ಈಗಾಗಲೇ ಡ್ರಗ್ಸ್‌ ಮಾಫಿಯಾ, ಗೂಂಡಾ, ಕೋಕಾ, ಜಾನುವಾರು ಸಾಗಾಟ ಸೇರಿದಂತೆ ವಿವಿಧ ಕೃತ್ಯಗಳಲ್ಲಿ ರೌಡಿಶೀಟರ್‌ ಆಗಿರುವವರ ಚಟುವಟಿಕೆಗಳ ಬಗ್ಗೆ ಹದ್ದಿನ ಕಣ್ಣು ಇರಿಸುವಂತೆ ಪೊಲೀಸರಿಗೆ ಸೂಚನೆ ನೀಡಲಾಗಿದೆ.

‘ನನ್ನ ಬೀಟ್‌-ನನ್ನ ಹೆಮ್ಮೆ’ ಯೋಜನೆಯಲ್ಲಿ ಸುಮಾರು 2 ಲಕ್ಷ ಮಂದಿ ನಾಗರಿಕರು ಸದಸ್ಯರಾಗಿದ್ದು, ಅವರ ಮೂಲಕವೂ ಅಲ್ಲಿನ ರೌಡಿಶೀಟರ್‌ಗಳ ಚಟುವಟಿಕೆಗಳ ಬಗ್ಗೆ ಗುಪ್ತವಾಗಿ ಮಾಹಿತಿಯನ್ನು ಕಲೆಹಾಕಲಾಗುತ್ತಿದೆ. ಸುಧಾರಣೆಗೆ ಸಾಕಷ್ಟುಅವಕಾಶ ನೀಡಿದರೂ ಸುಧಾರಿಸದ ರೌಡಿಶೀಟರ್‌ಗಳ ವಿರುದ್ಧ ಕಾನೂನು ರೀತಿಯಲ್ಲಿ ಮುಂದಿನ ಕಠಿಣ ಹಾದಿಯನ್ನು ಅನುಸರಿಸಬೇಕಾಗುತ್ತದೆ. ಯಾವುದೇ ಕಾರಣಕ್ಕೂ ಸಮಾಜದ ಶಾಂತಿಭಂಗಕ್ಕೆ ಅವಕಾಶ ನೀಡುವುದಿಲ್ಲ ಎಂದು ಕಮಿಷನರ್‌ ಡಾ.ಹರ್ಷ ಹೇಳಿದರು.

ಇದೇ ವೇಳೆ ಕಮಿಷನರ್‌ ಡಾ.ಹರ್ಷ ಅವರು ರೌಡಿಶೀಟರ್‌ಗಳಿಗೆ ‘ನಾನು ಭಾರತೀಯ, ಭಾರತದ ಉನ್ನತಿಗಾಗಿ ಶ್ರಮಿಸುತ್ತೇನೆ’ ಎನ್ನುವ ಪ್ರತಿಜ್ಞೆಯನ್ನು ಬೋಧಿಸಿದರು.

ಕರಾವಳಿ ತೀರದಲ್ಲಿ ನಿರಂತರ ಭದ್ರತೆ:

ಉಗ್ರರು ನುಸುಳುವ ಶಂಕೆ ಹಾಗೂ ಮುಂಜಾಗ್ರತಾ ಕ್ರಮವಾಗಿ ಕರಾವಳಿ ತೀರದಲ್ಲಿ ಕಟ್ಟುನಿಟ್ಟಿನ ಭದ್ರತೆ ನಿರಂತರವಾಗಿ ಮುಂದುವರಿಯಲಿದೆ. ಈಗಾಗಲೇ ಕಳೆದ 15 ದಿನಗಳಿಂದ ಕಡಲ ತೀರದಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಮೀನುಗಾರರು ಕೂಡ ಶಂಕಿತ ಬೋಟ್‌ ಹಾಗೂ ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡುತ್ತಿದ್ದಾರೆ. ಮಾರ್ಕೆಟ್‌, ಮಾಲ್‌, ಆಸ್ಪತ್ರೆ, ಬಸ್‌, ರೈಲು ನಿಲ್ದಾಣಗಳಲ್ಲಿ ಬಿಗು ತಪಾಸಣೆ ನಡೆಸಲಾಗುತ್ತಿದೆ ಎಂದು ಕಮಿಷನರ್‌ ತಿಳಿಸಿದರು.

ಮಂಗಳೂರು: ಬೀಟ್‌ ಪೊಲೀಸ್ ಜೊತೆ ಬೀಟ್‌ ನಡೆಸಿದ ಕಮಿಷನರ್‌!

ಇದೇ ಸಂದರ್ಭ ಸರ್ಕಾರಿ ಲಾಂಭನವನ್ನು ಅನಧಿಕೃತವಾಗಿ ಬಳಕೆ ಮಾಡುವವರ ವಿರುದ್ಧ ನಿರ್ದಾಕ್ಷಿಣ್ಯವಾಗಿ ಕ್ರಮ ಕೈಗೊಳ್ಳಲಾಗುತ್ತಿದೆ. ಕಳೆದ ಒಂದು ವಾರದಿಂದ ಸಂಚಾರಿ ಪೊಲೀಸರು ಕಾರ್ಯಾಚರಣೆ ನಡೆಸುತ್ತಿದ್ದು, 500ರಷ್ಟುವಾಹನ ತಪಾಸಣೆ ನಡೆಸುತ್ತಿದ್ದಾರೆ ಎಂದು ಕಮಿಷನರ್‌ ಡಾ.ಹರ್ಷ ಸ್ಪಷ್ಟಪಡಿಸಿದರು.