ಮಂಗಳೂರು(ಡಿ.17): ಈ ಸಾಲಿನ ಕರಾವಳಿ ಉತ್ಸವ ಜನವರಿ 3ರಿಂದ ಮಂಗಳೂರಿನಲ್ಲಿ ನಡೆಯಲಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಸಭಾಂಗಣದಲ್ಲಿ ಸೋಮವಾರ ಕರಾವಳಿ ಉತ್ಸವ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ್ದಾರೆ. ನಗರದ ಮಂಗಳಾ ಕ್ರೀಡಾಂಗಣ ಹಾಗೂ ಕದ್ರಿ ಉದ್ಯಾನವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗುವುದು. ನಾಡಿನ ಸಂಸ್ಕೃತಿ, ಕಲೆ, ಜನಪದ, ಕ್ರೀಡೆಯ ಅತ್ಯುನ್ನತ ಪ್ರದರ್ಶನ ಈ ಕರಾವಳಿ ಉತ್ಸವದಲ್ಲಿ ಪ್ರತಿಬಿಂಬಿತವಾಗಬೇಕು. ಈ ನಿಟ್ಟಿನಲ್ಲಿ ಉತ್ಸವದ ಎಲ್ಲ ಉಪಸಮಿತಿಗಳು ಉತ್ತಮ ರೀತಿಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಚಿವರು ಸೂಚಿಸಿದ್ದಾರೆ.

'ಎಂಟಿಬಿಗೆ BJPಯಲ್ಲಿ ಸ್ಥಾನ ಮಾನ ಕೊಡಲು ಸಾಧ್ಯವೇ ಇಲ್ಲ'..!

ಕರಾವಳಿ ಉತ್ಸವದ ಉದ್ಘಾಟನೆ ದಿನ ನಡೆಯುವ ಸಾಂಸ್ಕೃತಿಕ ಮೆರವಣಿಗೆಯಲ್ಲಿ ರಾಜ್ಯದ ಎಲ್ಲ ಪ್ರಕಾರಗಳ ಸಾಂಸ್ಕೃತಿಕ ತಂಡಗಳನ್ನು, ಸ್ತಬ್ಧ ಚಿತ್ರಗಳನ್ನು ಒಳಗೊಂಡಿರಬೇಕು. ಉತ್ಸವದ ಯಶಸ್ಸು ಮೆರವಣಿಗೆಯಲ್ಲಿ ಪ್ರತಿಬಿಂಬಿತವಾಗುವುದರಿಂದ ಇದನ್ನು ಹೆಚ್ಚು ಪರಿಣಾಮಕಾರಿಯಾಗಿ ನಡೆಸಬೇಕು. ಈ ನಿಟ್ಟಿನಲ್ಲಿ ತುಳು, ಬ್ಯಾರಿ ಹಾಗೂ ಕೊಂಕಣಿ ಸಾಹಿತ್ಯ ಅಕಾಡೆಮಿ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಜತೆಗೂಡಿ ಮೆರವಣಿಗೆಯ ರೂಪುರೇಷೆ ನಿರ್ಧರಿಸಿ ಅಂತಿಮಗೊಳಿಸಲು ಕೋಟ ತಿಳಿಸಿದ್ದಾರೆ

ಪೂರ್ತಿ ಮೈದಾನ ಬಳಕೆ?:

ಕರಾವಳಿ ಉತ್ಸವ ಮೈದಾನ ಕಿರಿದಾಗಿರುವುದರಿಂದ ಹೆಚ್ಚು ಸ್ಟಾಲ್‌ಗಳನ್ನು ಹಾಗೂ ಕಾರ್ಯಕ್ರಮಗಳನ್ನು ನಡೆಸಲು ಸಮಸ್ಯೆ ಆಗಿರುವ ಬಗ್ಗೆ ತಿಳಿದು ಬಂದಿದ್ದು, ಈ ನಿಟ್ಟಿನಲ್ಲಿ ಪೂರ್ತಿ ಕರಾವಳಿ ಉತ್ಸವ ಮೈದಾನದಲ್ಲಿ ಉತ್ಸವ ನಡೆಸುವ ಬಗ್ಗೆ ಜಿಲ್ಲಾಡಳಿತ ಸೂಕ್ತ ನಿರ್ಧಾರಕ್ಕೆ ಬರಲು ಅವರು ಸೂಚಿಸಿದ್ದಾರೆ.

 

ಉತ್ಸವದ ಉದ್ಘಾಟನೆಯನ್ನು ಖ್ಯಾತನಾಮರಿಂದ ನಡೆಸುವ ಬಗ್ಗೆ ಜಿಲ್ಲಾಡಳಿತ ತೀರ್ಮಾನಿಸಲಿದೆ. ಉತ್ಸವದ ಸಂದರ್ಭದಲ್ಲಿ ಯಾವುದೇ ಸಂಚಾರ ಸಮಸ್ಯೆ ಆಗದಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.

ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ:

ಬೀಚ್‌ ಉತ್ಸವ ಕೊನೆಯ ಮೂರು ದಿನಗಳಲ್ಲಿ ಪಣಂಬೂರು ಬೀಚ್‌ನಲ್ಲಿ ನಡೆಯಲಿದೆ. ಈ ಸಲ ವಿಶೇಷ ಆಕರ್ಷಣೆಯಾಗಿ ಅಂತಾರಾಷ್ಟ್ರೀಯ ಗಾಳಿಪಟ ಉತ್ಸವ ನಡೆಸಲಾಗುವುದು. ಈ ನಿಟ್ಟಿನಲ್ಲಿ ಅಂತಾರಾಷ್ಟ್ರೀಯ ಗಾಳಿಪಟ ಕ್ರೀಡಾಳುಗಳನ್ನು ನಗರಕ್ಕೆ ಕರೆತರಲು ಬೀಚ್‌ ಉತ್ಸವ ಉಪಸಮಿತಿ ಸಿದ್ಧತೆ ನಡೆಸಲು ಉಸ್ತುವಾರಿ ಸಚಿವ ಕೋಟ ಸೂಚಿಸಿದ್ದಾರೆ.

ಲಕ್ಷ ದಾಟುತ್ತಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..! ಸಕ್ಸಸ್ ಆಯ್ತು ವೈದ್ಯ ದಂಪತಿ ಪ್ಲಾನ್

ಪಣಂಬೂರು ರಾಷ್ಟ್ರೀಯ ಹೆದ್ದಾರಿಯಿಂದ ಬೀಚ್‌ಗೆ ಹೋಗುವ ರಸ್ತೆಯ ಕಾಂಕ್ರೀಟಿಕರಣ ನಡಯುತ್ತಿದ್ದು, ಜನವರಿ 5ರೊಳಗೆ ರಸ್ತೆಯನ್ನು ಸಂಚಾರಕ್ಕೆ ಬಿಟ್ಟು ಕೊಡಲು ಎನ್‌ಎಂಪಿಟಿ ಅಧಿಕಾರಿಗಳಿಗೆ ತಾಕೀತು ಮಾಡಿದರು.

ಶಾಸಕರಾದ ವೇದವ್ಯಾಸ ಕಾಮತ್‌, ಉಮಾನಾಥ ಕೋಟ್ಯಾನ್‌, ಜಿಲ್ಲಾ ಪಂಚಾಯ್ತಿ ಅಧ್ಯಕ್ಷೆ ಮೀನಾಕ್ಷಿ ಶಾಂತಿಗೋಡು, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಪೊನ್ನುರಾಜ್‌, ಜಿಲ್ಲಾಧಿಕಾರಿ ಸಿಂಧು ರೂಪೇಶ್‌, ವಿವಿಧ ಅಕಾಡೆಮಿ ಅಧ್ಯಕ್ಷರಾದ ದಯಾನಂದ ಕತ್ತಲ್‌ಸಾರ್‌, ರಹೀಂ ಉಚ್ಚಿಲ್‌, ಜಗದೀಶ್‌ ಪೈ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‌ ಅಧ್ಯಕ್ಷ  ಪ್ರದೀಪ್‌ ಕುಮಾರ್‌ ಕಲ್ಕೂರ ಮತ್ತಿತರರು ಇದ್ದರು. ಸಭೆಯಲ್ಲಿ ಕರಾವಳಿ ಉತ್ಸವದ ವಿವಿಧ ಉಪಸಮಿತಿಗಳ ಅಧ್ಯಕ್ಷರು, ಕ್ರಿಯಾಯೋಜನೆಯ ವಿವರ ಮಂಡಿಸಿದರು.