ಮಂಗಳೂರು(ಡಿ.15): ಪ್ರಧಾನಿಯ ಆಶಯದಂತೆ ಪ್ರಕೃತಿಯಿಂದ ದೊರೆಯುವ ಅಗಾಧ ಶಕ್ತಿಯನ್ನು ಸದ್ಬಳಕೆ ಮಾಡಿಕೊಳ್ಳುವುದರಿಂದ ಜಾಗತಿಕ ತಾಪಮಾನವನ್ನು ನಿಯಂತ್ರಿಸಲು ಸಾಧ್ಯ. ವಿದ್ಯುತ್‌ಗೆ ಪರ್ಯಾಯವಾಗಿ ಸೌರಶಕ್ತಿಯ ಬಳಕೆ, ಛಾವಣಿಗೆ ಬೀಳುವ ಮಳೆ ನೀರನ್ನು ಅಂತರ್ಜಲಗೊಳಿಸುವುದು, ಪಾಳು ಭೂಮಿಯಲ್ಲಿ ಕಾಡು ಬೆಳೆಸುವ ಮೂಲಕ ನೆಲ್ಯಾಡಿಯ ವೈದ್ಯ ದಂಪತಿ ನಡೆ ಅನುಕರಣೀಯ ಹಾಗೂ ಶ್ಲಾಘನೀಯವಾಗಿದೆ.

ನೆಲ್ಯಾಡಿ ಅಶ್ವಿನಿ ಆಸ್ಪತ್ರೆಯ ವೈದ್ಯ ದಂಪತಿ ಡಾ. ಮುರಳೀಧರ ಹಾಗೂ ಡಾ. ಸುಧಾ ದಂಪತಿ ತಮ್ಮ ಆಸ್ಪತ್ರೆಯಲ್ಲಿ ಸೌರಶಕ್ತಿ ಪರಿವರ್ತನಾ ಹಾಗೂ ಜಲಮರುಪೂರಣ ಘಟಕ ಅಳವಡಿಸಿದುದ್ದಲ್ಲದೇ ತಮ್ಮ ಹಿರಿಯರಿಂದ ಬಂದ ಜಾಗದಲ್ಲಿ ವಿವಿಧ ಜಾತಿಯ ಗಿಡಗಳನ್ನು ಬೆಳೆಸಿದ್ದಾರೆ. ಈ ಮೂಲಕ ಪರಿಸರ ಸಂರಕ್ಷಣೆಗೆ ತಮ್ಮ ಕೊಡುಗೆಯನ್ನು ನೀಡುತ್ತಿದ್ದಾರೆ.

ಲಕ್ಷಗಳಲ್ಲಿದ್ದ ವಿದ್ಯುತ್ ಬಿಲ್ ಸಾವಿರಕ್ಕಿಳಿಯಿತು..!

ಅಶ್ವಿನಿ ಆಸ್ಪತ್ರೆಯಲ್ಲಿ ಕಳೆದ ಅಗಸ್ಟ್‌ ತಿಂಗಳ ತನಕ ಮಾಸಿಕ 60 ಸಾವಿರ ರು. ವಿದ್ಯುತ್‌ ಬಿಲ್‌, ಜನರೇಟರ್‌ಗೆ ಮಾಸಿಕ 50 ಸಾವಿರ ರು. ಮೊತ್ತದ ಡೀಸೆಲ್‌ ಬಳಕೆಯಾಗುತ್ತಿತ್ತು. ಸುಮಾರು 36.5 ಲಕ್ಷ ರುಪಾಯಿ ವೆಚ್ಚದಲ್ಲಿ ಸೋಲಾರ್‌ ಘಟಕ ಅಳವಡಿಸಿ ಆಸ್ಪತ್ರೆಗೆ ನಿರಂತರ ಸೌರಶಕ್ತಿಯ ವ್ಯವಸ್ಥೆ ಮಾಡಿರುವುದರಿಂದ ವಿದ್ಯುತ್‌ ಬಿಲ್‌ 35 ಸಾವಿರ ರು.ಗೆ ಇಳಿದಿದೆ. ಜನರೇಟರ್‌ ಅಗತ್ಯವೇ ಇಲ್ಲದ ಕಾರಣ ಡೀಸೆಲ್‌ಗಾಗಿ ಮಾಸಿಕ 50 ಸಾವಿರ ರು. ಖರ್ಚು ಮಾಡುವುದು ಸಂಪೂರ್ಣ ನಿಂತಿದೆ. ಆಸ್ಪತ್ರೆಯ ರೂಫ್‌ ಮೇಲೆ 150 ಪ್ಯಾನೆಲ್‌ಗಳನ್ನು ಅಳವಡಿಸಲಾಗಿದ್ದು ಇದಕ್ಕಾಗಿ 200 ಎ.ಎಚ್‌. ಸಾಮರ್ಥ್ಯದ 30 ಬ್ಯಾಟರಿಗಳನ್ನೂ ಹಾಕಲಾಗಿದೆ. ಇದು 60 ಕಿಲೋ ವ್ಯಾಟ್‌ನ ವಿದ್ಯುತ್‌ ಪರಿವರ್ತಕದ ಸಾಮರ್ಥ್ಯಕ್ಕೆ ಸರಿ ಸಮಾನವಾಗಿದೆ. ಪ್ರಸ್ತುತ ಬೇಸಗೆಯ ಪ್ರತಿದಿನ 250 ಯುನಿಟ್‌ ವಿದ್ಯುತ್‌ ಉತ್ಪಾದನೆಯಾಗುತ್ತಿದ್ದು ಪೂರ್ತಿ ಆಸ್ಪತ್ರೆ ಸೌರ ವಿದ್ಯುತ್‌ನಿಂದಲೇ ಕೆಲಸ ನಿರ್ವಹಿಸುತ್ತಿದೆ.

ಜಲ ಮರುಪೂರಣ ಘಟಕ:

ತಮ್ಮ ಆಸ್ಪತ್ರೆಯ 2 ಸಾವಿರ ಅಡಿ ವಿಸ್ತೀರ್ಣದ ರೂಫ್‌ ಶೀಟ್‌ನಲ್ಲಿ ಅಪಾರ ಪ್ರಮಾಣದ ಮಳೆ ನೀರು ಪೋಲಾಗುವುದನ್ನು ಮನಗಂಡು ತಮ್ಮದೇ ಕೊಳವೆ ಬಾವಿಗೆ ಪೂರ್ಣ ಮಳೆ ನೀರನ್ನು ಇಂಗಿಸುವ ವ್ಯವಸ್ಥೆ ಮಾಡಿದ್ದಾರೆ. ಸುಮಾರು 50 ಸಾವಿರ ರುಪಾಯಿ ವೆಚ್ಚದಲ್ಲಿ ಜಲಮರುಪೂರಣ ಘಟಕ ಅಳವಡಿಸಿದ್ದು, ಈ ಬಾರಿಯ ಮಳೆಗಾಲದಲ್ಲಿ ಆಸ್ಪತ್ರೆಯ ಛಾವಣಿಗೆ ಬಿದ್ದ ಒಂದೇ ಒಂದು ಹನಿ ನೀರು ಪೋಲಾಗದೆ ಅಂತರ್ಜಲವಾಗಿಸುವಲ್ಲಿ ಯಶಸ್ಸಾಗಿದ್ದಾರೆ.

ಗಗನಕ್ಕೇರಿದ್ದ ಈರುಳ್ಳಿ ಧಾರಣೆ ಧರೆಯತ್ತ!

2 ಸಾವಿರಕ್ಕೂ ಅಧಿಕ ಗಿಡ: ಪಟ್ರಮೆಯಲ್ಲಿ ಡಾ. ಮುರಳೀಧರ ಅವರಿಗೆ ತಮ್ಮ ಹಿರಿಯರಿಂದ ಬಂದ 25 ಎಕರೆ ಭೂಮಿಯಲ್ಲಿ ವಿವಿಧ ಜಾತಿಯ 2,250 ಗಿಡಗಳನ್ನು ನೆಡುವ ದೊಡ್ಡ ಯೋಜನೆಯನ್ನು ಕಾರ್ಯಗತಗೊಳಿಸಲಾಗಿದೆ. ಇದು ಪೂರ್ಣಗೊಳ್ಳುವ ಹಂತದಲ್ಲಿದೆ. ಈ ಮೂಲಕ ಭೂಮಿಯ ತಾಪಮಾನ ಕಾಯ್ದುಕೊಳ್ಳಲು ಹಸಿರು ಹೊದಿಕೆಯ ಕಾರ್ಯವನ್ನು ಈ ವೈದ್ಯ ದಂಪತಿ ನಡೆಸಿದ್ದಾರೆ.

ಜಾಗೃತಿಗಾಗಿ 15ರಂದು ಉದ್ಘಾಟನಾ ಕಾರ್ಯಕ್ರಮ

ಸೌರಶಕ್ತಿ ಪರಿವರ್ತನಾ ಘಟಕ, ಜಲ ಮರುಪೂರಣ ಘಟಕ ಮತ್ತು ಸೇವಾ ಚಟುವಟಿಕೆಗಳ ಅನಾವರಣ ಕಾರ್ಯಕ್ರಮವನ್ನು ಸಾಮಾಜಿಕ ಜಾಗೃತಿಯ ಹಿನ್ನೆಲೆಯಿಂದ ಡಿ.15ರಂದು ಅಶ್ವಿನಿ ಆಸ್ಪತ್ರೆಯ ಆವರಣದಲ್ಲಿ ನಡೆಸಲಾಗುವುದು ಎಂದು ಡಾ. ಮುರಳೀಧರ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

'ಇವರೆಂತ ಕಳ್ಳನ್ ಮಕ್ಳು'..? ದೇವೇಗೌಡ ಕುಟುಂಬದ ವಿರುದ್ಧ ಹಿಗ್ಗಾಮುಗ್ಗ ವಾಗ್ದಾಳಿ

ಕಾರ್ಯಕ್ರಮದಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕರಾದ ಎಸ್‌. ಅಂಗಾರ, ಸಂಜೀವ ಮಠಂದೂರು, ಹರೀಶ್‌ ಪೂಂಜ, ಜಿ.ಪಂ. ಸದಸ್ಯ ಸರ್ವೋತ್ತಮ ಗೌಡ, ಕೌಕ್ರಾಡಿ ಗ್ರಾ.ಪಂ. ಅಧ್ಯಕ್ಷ ಎಂ.ಕೆ. ಇಬ್ರಾಹಿಂ, ಎಪಿಎಂಸಿ ಸದಸ್ಯ ಬಾಲಕೃಷ್ಣ ಬಾಣಜಾಲು, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಭ್ಯಂತರ ಸಜಿಕುಮಾರ್‌, ಕೆನರಾ ಬ್ಯಾಂಕ್‌ನ ನೆಲ್ಯಾಡಿ ಶಾಖಾ ಪ್ರಬಂಧಕ ರಾಮಣ್ಣ ನಾಯ್‌್ಕ, ಮೆಸ್ಕಾಂ ನೆಲ್ಯಾಡಿ ಶಾಖಾ ಜೆಇ ರಮೇಶ್‌, ಮಂಗಳೂರು ಸಹ್ಯಾದ್ರಿ ಸಂಚಯದ ಸಂಚಾಲಕ ದಿನೇಶ್‌ ಹೊಳ್ಳ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟದ ರಾಜ್ಯ ಕಾರ್ಯದರ್ಶಿ ಶಶಿಧರ ಶೆಟ್ಟಿ, ಆ್ಯಂಬರ್‌ ಎನರ್ಜಿ ಪ್ರೈವೇಟ್‌ ಲಿಮಿಟೆಡ್‌ನ ಪಾಲುದಾರ ಯತೀಶ್‌ ಪುತ್ಯೆ ಭಾಗವಹಿಸಲಿದ್ದಾರೆ. ಕಾರ್ಯಕ್ರಮದ ಬಳಿಕ ಉಚಿತವಾಗಿ ಮಧುಮೇಹ ತಪಾಸಣೆ ಶಿಬಿರವೂ ನಡೆಯಲಿದೆ ಎಂದು ಅವರು ತಿಳಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಆ್ಯಂಬರ್‌ ಎನರ್ಜಿ ಸಂಸ್ಥೆಯ ಅವಿನಾಶ್‌, ಅಶ್ವಿನಿ ಆಸ್ಪತ್ರೆಯ ವ್ಯವಸ್ಥಾಪಕ ಸುಮಂತ್‌ ಇದ್ದರು.