ಮಂಗಳೂರು(ಜೂ. 06): ಮಂಗಳೂರು ನಗರದಲ್ಲಿ ಜೂ.1ರಿಂದ ಸಿಟಿ ಬಸ್‌ ಸಂಚಾರ ಆರಂಭವಾಗುವುದರೊಂದಿಗೆ ನಗರದಲ್ಲಿ ಜನರ ಓಡಾಟವೂ ಹೆಚ್ಚಿದೆ. ಇಂಥ ಸಂದರ್ಭದಲ್ಲಿ ಕೊರೋನಾ ಮಹಾಮಾರಿ ಹರಡುವುದನ್ನು ತಪ್ಪಿಸಲು ಎರಡು ಸಿಟಿಬಸ್‌ಗಳ ನಿರ್ವಾಹಕರು ಸೋಂಕು ನಿರೋಧಕ ರಕ್ಷಾ ಕವಚ ಧರಿಸಿ ಗಮನ ಸೆಳೆದಿದ್ದಾರೆ. ಈ ಮೂಲಕ ಜನರಲ್ಲೂ ಜಾಗೃತಿ ಮೂಡಿಸುತ್ತಿದ್ದಾರೆ.

ನಗರದ ಸ್ಟೇಟ್‌ಬ್ಯಾಂಕ್‌ನಿಂದ ಶಕ್ತಿನಗರಕ್ಕೆ ತೆರಳುವ ರೂಟ್‌ ಸಂಖ್ಯೆ 6ಎ ‘ಸಾಯಿಶಾ’ ಬಸ್ಸುಗಳ ಮಾಲೀಕರು ಈ ಪ್ರಯೋಗಕ್ಕೆ ಮುಂದಾಗಿದ್ದಾರೆ. ಶುಕ್ರವಾರ ಮೊದಲ ಬಾರಿಗೆ ಬಸ್ಸು ನಿರ್ವಾಹಕರು ರಕ್ಷಾ ಕವಚ ಧರಿಸಿ ಕರ್ತವ್ಯ ನಿರ್ವಹಿಸಿದ್ದು ಜನರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಸಕಲ ಸಿದ್ಧತೆ

ಪಿಪಿಇ ಕಿಟ್‌ ಅಲ್ಲ: ನಿರ್ವಾಹಕರು ಧರಿಸಿದ್ದು ಪಿಪಿಇ ಕಿಟ್‌ ಅಲ್ಲ, ಅದರಂತೆಯೇ ಇರುವ ದಿರಿಸು. ತಲೆಯನ್ನೂ ಮುಖವನ್ನೂ ಇದು ಮುಚ್ಚುತ್ತದೆ. ಮುಖಕ್ಕೆ ಫೇಸ್‌ ಶೀಲ್ಡ್‌ ಇದೆ. ಗ್ಲೌಸ್‌, ಮಾಸ್ಕ್‌ನ್ನೂ ಧರಿಸುತ್ತಾರೆ. ನಿರ್ವಾಹಕರ ಡ್ಯೂಟಿ ಬೆಳಗ್ಗೆ 7ರಿಂದ ಸಂಜೆ 7ರವರೆಗೆ ಇರುತ್ತದೆ. ಇಡೀ ದಿನ ಧರಿಸುವಾಗ ಸ್ವಲ್ಪ ಮಟ್ಟಿಗೆ ಸೆಕೆಯಾಗುತ್ತದೆ. ಆದರೆ ಕೊರೋನಾ ಮುನ್ನೆಚ್ಚರಿಕೆಗೆ ಇದು ಅನಿವಾರ್ಯ. ಬಸ್‌ ಸಿಬ್ಬಂದಿ ಸುರಕ್ಷತೆ ದೃಷ್ಟಿಯಿಂದ ಮಾಲೀಕರು ಇದನ್ನು ನೀಡಿದ್ದು, ನಿತ್ಯವೂ ಒಗೆದು ಮತ್ತೆ ಧರಿಸಬಹುದಾಗಿದೆ ಎಂದು ಸಾಯಿಶಾ ಬಸ್‌ಗಳ ಮ್ಯಾನೇಜರ್‌ ರೋಹಿತ್‌ ಕೋಟ್ಯಾನ್‌ ‘ಕನ್ನಡಪ್ರಭ’ಕ್ಕೆ ತಿಳಿಸಿದ್ದಾರೆ.

8ರಿಂದ ಕುಕ್ಕೆ ಸುಬ್ರಮಣ್ಯ ದೇಗುಲದಲ್ಲಿ ಭಕ್ತರಿಗೆ ದರ್ಶನ ವ್ಯವಸ್ಥೆ

ಸಾಯಿಶಾದ ಒಟ್ಟು 5 ಬಸ್ಸುಗಳಿದ್ದು, ಸದ್ಯ ಎರಡು ಬಸ್ಸುಗಳು ಓಡಾಟ ನಡೆಸುತ್ತಿವೆ. ಸೋಮವಾರದಿಂದ ಮತ್ತೆ ಮೂರು ಬಸ್ಸುಗಳು ರಸ್ತೆಗಿಳಿಯಲಿವೆ. ಒಟ್ಟು ಐದೂ ಬಸ್ಸುಗಳ ನಿರ್ವಾಹಕರಿಗೆ ಈ ರಕ್ಷಾ ಕವಚ ನೀಡಲಾಗುವುದು. ತುಂಬ ಸೆಕೆ ಅನ್ನಿಸಿದರೆ ಆಗಾಗ ಸಿಗುವ ಬಿಡುವಿನ ಸಮಯದಲ್ಲಿ ಕೊಂಚ ಸಡಿಲಿಸಿ ಮತ್ತೆ ಧರಿಸಿಕೊಳ್ಳಲು ಅವಕಾಶವಿದೆ. ಧರಿಸಲೇಬೇಕು ಎಂಬ ಕಡ್ಡಾಯ ಏನೂ ಇಲ್ಲ, ಆದರೆ ಸುರಕ್ಷತೆ ದೃಷ್ಟಿಯಿಂದ ಬಳಕೆ ಉತ್ತಮ ಎನ್ನುತ್ತಾರವರು.

ಗ್ರೀನ್ ಝೋನ್ ಆಗಿದ್ದ ಉಡುಪಿಯಲ್ಲಿ ಮುಂದುವರಿದ ಕೊರೋನಾ ಅಟ್ಟಹಾಸ: ಒಂದೇ ದಿನ 204 ಸೋಂಕಿತರು

ಜನರಲ್ಲೂ ಜಾಗೃತಿ: ಬಸ್‌ ನಿರ್ವಾಹಕರು ರಕ್ಷಾ ಕವಚ ಧರಿಸಿದ್ದು ನೋಡಿ ಜನರೂ ಜಾಗೃತರಾಗುತ್ತಿದ್ದಾರೆ. ತಾವೂ ಗ್ಲೌಸ್‌, ಮಾಸ್ಕ್‌ ಧರಿಸಬೇಕು ಎನ್ನುವ ಅರಿವು ಮೂಡುತ್ತಿದೆ. ಈ ಬಸ್ಸಿನಲ್ಲಿ ಸಂಚರಿಸುವವರಿಗಂತೂ ಮೊದಲ ದಿನವೇ ಇದು ಹೊಸ ಅನುಭವ ನೀಡಿದೆ. ಅದನ್ನು ಹೇಳಿಕೊಂಡಿದ್ದಾರೆ ಕೂಡ. ಬಸ್ಸು ಡ್ರೈವರ್‌ ಜನರಿಂದ ಪ್ರತ್ಯೇಕವಾಗಿರುವುದರಿಂದ ಅವರಿಗೆ ಈ ಕಿಟ್‌ ಅಗತ್ಯವಿಲ್ಲ. ಆದರೆ ಅವರೂ ಗ್ಲೌಸ್‌, ಮಾಸ್ಕ್‌ನ್ನು ಕಡ್ಡಾಯವಾಗಿ ಧರಿಸುತ್ತಾರೆ. ಬಸ್ಸು ಹತ್ತುವಾಗಲೇ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಿದ್ದು, ಪ್ರತಿ ಪ್ರಯಾಣಿಕರೂ ಸ್ಯಾನಿಟೈಸರ್‌ ಬಳಕೆ ಮಾಡುವಂತೆ ಪ್ರೇರೇಪಿಸಲಾಗುತ್ತಿದೆ.