ಮಂಡ್ಯ ಜಿಲ್ಲೆಯ ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದಲ್ಲಿ ವಿಶ್ವೇಶ್ವರಯ್ಯ ನಾಲೆಗೆ ಇಬ್ಬರು ಮಕ್ಕಳೊಂದಿಗೆ ತಾಯಿ ಬಿದ್ದ ಘಟನೆ ನಡೆದಿದೆ. ಸ್ಥಳೀಯರು ತಾಯಿಯನ್ನು ರಕ್ಷಿಸಿದರೂ, ಇಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿದ್ದಾರೆ.
ಮಂಡ್ಯ (ಜ.27): ಮೈಸೂರು ಸಂಸ್ಥಾನದ ಕೃಷ್ಣರಾಜ ಒಡೆಯರು ಕಾವೇರಿ ನದಿಗೆ ಜಲಾಶಯ ನಿರ್ಮಾಣ ಮಾಡಿ ಮಂಡ್ಯ ಜಿಲ್ಲೆಯ ರೈತರಿಗೆ ಕೃಷಿ ಬೆಳೆಗೆ ಅನುಕೂಲ ಮಾಡಿಕೊಡಲೆಂದು ಕಾಲುವೆಗಳನ್ನು ನಿರ್ಮಿಸಿದ್ದಾರೆ. ಆದರೆ, ಇಲ್ಲೊಬ್ಬ ಮಹಿಳೆ ನೀರು ಹರಿಯುವ ಕಾಲುವೆಗೆ ತನ್ನಿಬ್ಬರು ಮಕ್ಕಳನ್ನು ಎಸೆದು ತಾನೂ ಹಾರಿದ್ದಾಳೆ. ಇದನ್ನು ನೋಡಿದ ಸ್ಥಳೀಯರು ಮಹಿಳೆಯನ್ನು ರಕ್ಷಣೆ ಮಾಡಿದ್ದು, ಎರಡು ಪುಟ್ಟ ಕಂದಮ್ಮಗಳು ನಾಲೆಯಲ್ಲಿ ಕೊಚ್ಚಿ ಹೋಗಿ ಸಾವನ್ನಪ್ಪಿವೆ.
ಈ ಘಟನೆ ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ಬನಘಟ್ಟ ಗ್ರಾಮದಲ್ಲಿ ನಡೆದಿದೆ. ಬನಘಟ್ಟ ಗ್ರಾಮದ ಪಕ್ಕದಲ್ಲಿ ಕೆಆರ್‌ಎಸ್ ಜಲಾಶಯದಿಂದ ನೀರು ಹರಿಯುವ ವಿಶ್ವೇಶ್ವರಯ್ಯ ನಾಲೆಗೆ ಇಬ್ಬರು ಮಕ್ಕಳೊಂದಿಗೆ ತಾಯಿ ಬಿದ್ದಿದ್ದಾರೆ. ಈ ವೇಳೆ ನೀರಿನಲ್ಲಿ ಸಾವು ಬದುಕಿನ ನಡುವೆ ಒದ್ದಾಡುತ್ತಿದ್ದ ಮಹಿಳೆಯನ್ನು ನೋಡಿದ ಸ್ಥಳೀಯರು ಕೂಡಲೇ ನಾಲೆಗೆ ಹಾರಿ ತಾಯಿಯನ್ನು ರಕ್ಷಣೆ ಮಾಡಿದ್ದಾರೆ. ಆದರೆ, ತಾನು ಕಾಲುವೆಗೆ ಹಾರುವ ಮೊದಲೇ ತನ್ನ ಇಬ್ಬರು ಪುಟ್ಟ ಕಂದಮ್ಮಗಳನ್ನು ನಾಲೆಗೆ ಎಸೆದಿದ್ದು, ಅವು ನೀರಿನಿಂದ ಮೇಲೇಳಲೂ ಬಾರದೇ ಮುಳುಗಿ ನೀರಿನಲ್ಲಿ ಕೊಚ್ಚಿಕೊಂಡು ಹೋಗಿವೆ.
ಮಕ್ಕಳನ್ನು ನೀರಿಗೆ ಎಸೆದ ಮಹಿಳೆ ವಿದ್ಯಾ (30) ಎಂದು ಗುರುತಿಸಲಾಗಿದೆ. ವಿಶ್ವೇಶ್ವರಯ್ಯ ನಾಲೆಯಲ್ಲಿ ಕೊಚ್ಚಿಕೊಂಡು ಹೋಗಿ ಮೃತಪಟ್ಟ ಮಕ್ಕಳನ್ನು ಲಿತಿಷಾ (8) ಹಾಗೂ ಕಿಶನ್ (2) ಎಂದು ತಿಳಿದುಬಂದಿದೆ. ಈ ಮಹಿಳೆ ಮಾಡಿದ ಎಡವಟ್ಟಿನಿಂದ ಜಗತ್ತಿನ ಪರಿಜ್ಞಾನವೇ ಇಲ್ಲದ ಅಮಾಯಕ ಮಕ್ಕಳು ನೀರಿನಲ್ಲಿ ಮುಳುಗಿ ದಾರುಣವಾಗಿ ಸಾವನ್ನಪ್ಪಿವೆ. ಇದರಿಂದಾಗಿ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಆದರೆ, ಇದೀಗ ಮಹಿಳೆ ಮಕ್ಕಳ ಕೊಲೆ ಆರೋಪದಿಂದ ತಪ್ಪಿಸಿಕೊಳ್ಳಲು ಸುಳ್ಳಿನ ಕಥೆಯೊಂದನ್ನು ಕಟ್ಟಿದ್ದಾಳೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ.
ಇದನ್ನೂ ಓದಿ: ಮುಡಾ ಹಗರಣ: ಪಾರ್ವತಿ, ಬೈರತಿಗೆ ಹೈಕೋರ್ಟ್ ತಾತ್ಕಾಲಿಕ ರಿಲೀಫ್
ನಾಲೆ ಪಕ್ಕದಲ್ಲಿ ನಿಂತುಕೊಂಡು ಮಗಳು ಲಿತಿಷಾ ಸೆಲ್ಪಿ ತೆಗೆದುಕೊಳ್ಳುತ್ತಿದ್ದಾಗ ನಾಲೆಗೆ ಬಿದ್ದಿದ್ದಾಳೆ. ಆಗ ನಾನು ರಕ್ಷಣೆಗೆ ಹೋಗಿದ್ದು, ಮಗ ಕಿಶನ್ ಕೂಡ ಅಮ್ಮಾ ಎಂದು ಕೂಗುತ್ತಾ ನಾಲೆಗೆ ಬಿದ್ದಿದ್ದಾನೆ. ಆಗ ಸ್ಥಳೀಯರು ನನ್ನನ್ನು ರಕ್ಷಣೆ ಮಾಡಿದ್ದು, ನನ್ನಿಬ್ಬರು ಮಕ್ಕಳು ನೀರಿನಲ್ಲಿ ಕೊಚ್ಚಿ ಹೋಗಿದ್ದಾರೆ ಎಂದು ಮಹಿಳೆ ವಿದ್ಯಾ ಪೊಲೀಸರ ಮುಂದೆ ಕಥೆಯೊಂದನ್ನು ಕಟ್ಟಿದ್ದಾಳೆ. ಇದೀಗ ನಾಲೆಯಲ್ಲಿ ಕೊಚ್ಚಿ ಹೋದ ಮಕ್ಕಳಿಗಾಗಿ ಅಗ್ನಿಶಾಮಕ ದಳ ಶೋಧ ಕಾರ್ಯ ನಡೆಸುತ್ತಿದೆ. ಇನ್ನು ಕತ್ತಲಾದ ಹಿನ್ನಲೆ ನಾಳೆ ಕಾರ್ಯಾಚರಣೆ ನಡೆಸಲು ನಿರ್ಧಾರ ಮಾಡಲಾಗಿದೆ. ಈ ಘಟನೆಗೆಯು ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.
