Asianet Suvarna Big 3 Impact; ಮಂಡ್ಯದ ಸ್ಲಂ ನಿವಾಸಿಗಳಿಗೆ ಸಿಕ್ತು ಮನೆ
- ಏಷ್ಯಾನೆಟ್ ಸುವರ್ಣ ನ್ಯೂಸ್ ಬಿಗ್ 3 ಇಂಪ್ಯಾಕ್ಟ್.
- ಮಂಡ್ಯದ ಸ್ಲಂ ನಿವಾಸಿಗಳಿಗೆ ಸಿಕ್ತು ಮನೆ
- ಜನರ ಬಹುದಿನಗಳ ಆಸೆಯಂತೆ ನೆಮ್ಮದಿಯ ಸೂರು
ವರದಿ : ನಂದನ್ ರಾಮಕೃಷ್ಣ, ಏಷ್ಯಾನೆಟ್ ಸುವರ್ಣ ನ್ಯೂಸ್
ಮಂಡ್ಯ (ಜು.6): ಸ್ಲಂ ನಿವಾಸಿಗಳಿಗಾಗಿ ಕಟ್ಟಿದ ಮನೆಗಳನ್ನು ಹಂಚಿಕೆ ಮಾಡದೆ ವರ್ಷಗಳೇ ಕಳೆದಿತ್ತು. ಸೌಲಭ್ಯ ವಂಚಿತ ಜನರು ದಿನಿನಿತ್ಯ ನರಕಯಾತನೆ ಅನುಭವಿಸುತ್ತಿದ್ರು. ಆದ್ರೆ ಬಿಗ್3 ಎಂಟ್ರಿ ಆಗ್ತಿದ್ದಂತೆ ವರ್ಷಗಳ ಸಮಸ್ಯೆಗೆ ತಿಂಗಳಲ್ಲಿ ಪರಿಹಾರ ಸಿಕ್ಕಿದೆ. ಆ ಜನರ ಬಹುದಿನಗಳ ಆಸೆಯಂತೆ ನೆಮ್ಮದಿಯ ಸೂರು ದೊರಕಿದೆ.
ಮಂಡ್ಯದ ಹಾಲಹಳ್ಳಿ ಸ್ಲಂ ನಿವಾಸಿಗಳಿಗೆ ಮನೆ ಹಂಚಿಕೆಯಾಗದ ಬಗ್ಗೆ ಮೇ 4ರಂದು ಬಿಗ್3 ವರದಿ ಪ್ರಸಾರ ಮಾಡಿತ್ತು. ವರದಿ ಬೆನ್ನಲ್ಲೇ ಅಲರ್ಟ್ ಆಗಿದ್ದ ಜಿಲ್ಲಾಧಿಕಾರಿ ಅಶ್ವಥಿ ಫಲಾನುಭವಿಗಳ ಅಂತಿಮ ಪಟ್ಟಿ ತಯಾರಿಸಲು ಸೂಚಿಸಿದರು. ಆದರೆ ದಕ್ಷಿಣ ಪದವೀಧರ ಕ್ಷೇತ್ರ ಚುನಾವಣೆ ನೀತಿ ಸಂಹಿತೆ ಹಿನ್ನೆಲೆ ಮುಂದೂಡಲಾಗಿದ್ದ ಮನೆ ಹಂಚಿಕೆ ಪ್ರಕ್ರಿಯೆ ಜು.2 ರಂದು ನೆರವೇರಿದೆ. ಕನಸಿನ ಸೂರು ಪಡೆದ ನಿವಾಸಿಗಳು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
BIG 3: ಅಂಬರೀಶ್ ಕನಸು ನನಸು, ಮಂಡ್ಯದಲ್ಲಿ 632 ಮನೆ ಹಂಚಿಕೆ, ಹಾಲಹಳ್ಳಿಯಲ್ಲಿ ಸಂಭ್ರಮ!
ದಿ.ಅಂಬರೀಶ್ ಅವರು ವಸತಿ ಸಚಿವರಾಗಿದ್ದ ವೇಳೆ 2014ರಲ್ಲಿ 712 ಮನೆಗಳ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಾಗಿತ್ತು. ಸ್ಲಂ ನಿವಾಸಿಗಳಿಗೆ ಸೂರು ಕಲ್ಪಿಸಬೇಕೆಂಬುದು ದಿ. ಅಂಬರೀಶ್ ಕನಸು. ಆದರೆ 712 ಮನೆಗಳ ಪೈಕಿ 632 ಮನೆಗಳು ನಿರ್ಮಾಣಗೊಂಡು 3-4 ವರ್ಷಗಳೇ ಕಳೆದರೂ ಹಂಚಿಕೆ ಮಾಡುವ ಮನಸ್ಸು ಯಾರಿಗೂ ಇರಲಿಲ್ಲ.
ಜನಪ್ರತಿನಿಧಿಗಳು, ಅಧಿಕಾರಿಗಳ ನಿರ್ಲಕ್ಷ್ಯತನಕ್ಕೆ ದಿನನಿತ್ಯ ನರಕದ ಜೀವನ ಸಾಗಿಸುತ್ತಿದ್ದ ಜನರು ಸುಡು ಬಿಸಿಲಿಗೆ ಕಾದ ಜೆನ್‌ಶೆಡ್ ಕೆಳಗೆ ನೀರು, ವಿದ್ಯುತ್ ಪೂರೈಕೆಯಿಲ್ಲದೆ ಬದುಕು ಸಾಗಿಸುತ್ತಿದ್ದರು. ಮಳೆ ಬಂದಾಗಲಂತೂ ಜೆನ್‌ಶೆಡ್‌ಗಳು ಸಂಪೂರ್ಣ ಜಲಾವೃತಗೊಂಡು ಜೀವನ ಅಸ್ತವ್ಯಸ್ತವಾಗುತ್ತಿತ್ತು. ಇಂತಹ ಕಷ್ಟದ ಪರಿಸ್ಥಿತಿಯಿಂದ ಹೊರಬರಲು ಅದೆಷ್ಟೋ ಬಾರಿ ಜನರು ಸಂಬಂಧಪಟ್ಟವರ ಬಳಿ ಮನವಿ ಮಾಡಿದ್ರು ಯಾವುದೇ ಪ್ರಯೋಜನ ಆಗಿರಲಿಲ್ಲ.
Mandya: 110 ಅಡಿಯತ್ತ ಕೆಆರ್‌ಎಸ್ ಜಲಾಶಯ: ಒಳ ಹರಿವು ಹೆಚ್ಚಳ
ಆದರೆ ಸುವರ್ಣ ನ್ಯೂಸ್ ಬಿಗ್3 ಬಿಡಲಿಲ್ಲ ಸ್ಲಂ ನಿವಾಸಿಗಳು ಎದರುಸುತ್ತಿದ್ದ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕೆಲಸ ಮಾಡಿತ್ತು. ವರದಿ ಬಳಿಕ ಕಾರ್ಯ ಪ್ರವೃತ್ತರಾದ ಸಂಸದೆ ಸುಮಲತಾ, ಶಾಸಕ ಎಂ. ಶ್ರೀನಿವಾಸ್ ಹಾಗೂ ಸ್ಲಂ ಬೋರ್ಡ್ ಅಧಿಕಾರಿಗಳು ಫಲಾನುಭವಿಗಳಿಗೆ ಮನೆ ಹಂಚಿಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಜು.2 ರಂದು ನೂತನ ಮನೆಗಳನ್ನು ಉದ್ಘಾಟಿಸಿದ ವಸತಿ ಸಚಿವ ವಿ.ಸೋಮಣ್ಣ ಫಲಾನುಭವಿಗಳಿಗೆ ಹಕ್ಕು ಪತ್ರ ವಿತರಿಸಿದರು. ನೂತನ ಬಡಾವಣೆಗೆ ಅಂಬರೀಶ್ ಅವರ ಹೆಸರು ಇಡುವ ಮೂಲಕ ಗೌರವವನ್ನು ಸಲ್ಲಿಸಿದ್ದಾರೆ. ಕನಸಿನ ಮನೆ ಪಡೆದು ಸಂಭ್ರಮಿಸಿದ ಸ್ಲಂ ನಿವಾಸಿಗಳು ಸುವರ್ಣ ನ್ಯೂಸ್‌ಗೆ ಧನ್ಯವಾದ ಅರ್ಪಿಸಿದರು. ಈ ಮೂಲಕ ಅಂಬರೀಶ್ ಅವರ ಕನಸು ಸಾಕಾರಗೊಂಡಿದೆ.