ಶ್ರೀರಂಗಪಟ್ಟಣದ ಶ್ರೀರಂಗನಾಥಸ್ವಾಮಿ ದೇವಾಲಯದ ಹುಂಡಿ ಎಣಿಕೆ ಕಾರ್ಯು ಮುಕ್ತಾಯಗೊಂಡದ್ದು, ಅರ್ಧ ಕೋಟಿಗೂ ಅಧಿಕ ಹಣ ಸಂಗ್ರಹವಾಗಿದೆ. ಇದೇ ವೇಳೆ, ಮಂಡ್ಯ ನಗರದಲ್ಲಿ ಹಿಂದೂ ಸಮಾಜದ ಏಕತೆ ಮತ್ತು ಸಂಸ್ಕೃತಿ ಜಾಗೃತಿಗಾಗಿ ಬೃಹತ್ ಹಿಂದೂ ಸಮಾಜೋತ್ಸವವನ್ನು ಆಯೋಜಿಸಲಾಗಿದೆ.
ಮಂಡ್ಯ: ಶ್ರೀರಂಗಪಟ್ಟಣ ಪಟ್ಟಣದ ಐತಿಹಾಸಿಕ ಶ್ರೀರಂಗನಾಥಸ್ವಾಮಿ ದೇವಾಲಯದ ಕಾಣಿಕೆ ಹುಂಡಿ ಎಣಿಕೆ ಕಾರ್ಯ ನಡೆದು ಒಟ್ಟು 55,92,613 ರು. ಹಣ ಸಂಗ್ರಹವಾಗಿದೆ.
ದೇವಾಲಯ ಸಮಿತಿ ಅಧ್ಯಕ್ಷ ಜೆ.ಸೋಮಶೇಖರ್ ಹಾಗೂ ಇಒ ಉಮಾ ನೇತೃತ್ವದಲ್ಲಿ ನಡೆದ ಏಣಿಕೆಯಲ್ಲಿ ದೇವಾಲಯದ 12 ಹುಂಡಿಗಳನ್ನು ತೆರೆದು ಏಣಿಕೆ ಮಾಡಲಾಯಿತು. ಎಣಿಕೆ ವೇಳೆ ಹಣ ಜೊತೆಗೆ ಭಕ್ತರಿಂದ 40 ಗ್ರಾಂ ಬೆಳ್ಳಿ ದೊರೆತಿದೆ. ಇದಲ್ಲದೆ ವಿವಿಧ ದೇಶಗಳ 8 ಕರೆನ್ಸಿ ನೋಟುಗಳು ಸಹ ದೊರೆತಿವೆ.
ಕಳೆದ 2025ರ ಅ.30ರಂದು ಎಣಿಕೆ ಕಾರ್ಯ ಮಾಡಲಾಗಿತ್ತು. ಧನುರ್ಮಾಸ ಹಿನ್ನೆಲೆಯಲ್ಲಿ ದೇವಾಲಯಕ್ಕೆ ಲಕ್ಷಾಂತರ ಜನ ಭೇಟಿ ನೀಡಿದ್ದರು. ಕರ್ನಾಟಕ ಗ್ರಾಮೀಣ ಬ್ಯಾಂಕ್ ವ್ಯವಸ್ಥಾಪಕ ಹಾಗೂ ಸಿಬ್ಬಂದಿ ಜೊತೆಗೆ ದೇವಾಲಯದ ಸಿಬ್ಬಂದಿ, ಬೆಂಗಳೂರಿನ ಶ್ರೀಭ್ರಮ್ಮರಾಂಭ ಸೇವಾ ಸಂಘದ ಸದಸ್ಯರು, ದೇವಾಲಯದ ಸಮಿತಿ ಸದಸ್ಯರು ಹುಂಡಿ ಎಣಿಕೆಯಲ್ಲಿ ಭಾಗವಹಿಸಿದ್ದರು.
ನಂತರ ಕರ್ನಾಟಕ ಗ್ರಾಮೀಣ ಬ್ಯಾಂಕ್‌ಗೆ ಹಣವನ್ನು ಜಮೆ ಮಾಡಲಾಯಿತು. ದೇವಾಲಯ ಸಮಿತಿ ಸದಸ್ಯರಾದ ಅರ್ಚಕ ವಿಜಯಸಾರಥಿ, ಸದಸ್ಯರಾದ ಟಿ.ಆನಂದ್, ಸತೀಶ್, ಕಮಲಮ್ಮ, ಆಶಾ ಲತಾಪುಟ್ಟೇಗೌಡ, ಸುಬ್ರಮಣ್ಯ ಹಾಗೂ ರಘು ಸೇರಿದಂತೆ ಇತರರು ರು ಇತರರು ಉಪಸ್ಥಿತರಿದ್ದರು. ಹುಂಡಿ ಎಣಿಕೆ ನಡೆಯುವ ವೇಳೆ ನಾಲ್ಕು ಭಾಗಗಳಲ್ಲಿ ವಿಡಿಯೋ ಕ್ಯಾಮೆರಾಗಳ ಅಳವಡಿಸಿ ಚಿತ್ರೀಕರಿಸಲಾಯಿತು.
ಜ.24ರಂದು ನಗರದಲ್ಲಿ ಹಿಂದೂ ಸಮಾಜೋತ್ಸವ
ಹಿಂದೂ ಸಮಾಜೋತ್ಸವ ಆಯೋಜನಾ ಸಮಿತಿಯಿಂದ ಜ.24ರಂದು ಮಧ್ಯಾಹ್ನ 3.30ಕ್ಕೆ ನಗರದ ಗುತ್ತಲು ಬಡಾವಣೆಯ ಕುವೆಂಪು ಶತಮಾನೋತ್ಸವ ಶಾಲಾ ಆವರಣದಲ್ಲಿ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದು ಸಮಿತಿಯ ರಾಜಶೇಖರ್ ತಿಳಿಸಿದರು.
ಸನಾತನ ಧರ್ಮದ ಉಳಿವು, ಹಿಂದೂ ಸಮಾಜದ ಏಕತೆ ಮತ್ತು ಸಂಸ್ಕೃತಿಯ ಮೌಲ್ಯಗಳನ್ನು ಜಾಗೃತಿಗಾಗಿ ಈಗಾಗಲೇ ಮಂಡ್ಯ ಜಿಲ್ಲೆಯಲ್ಲಿ ಹಿಂದೂ ಸಮಾಜೋತ್ಸವವನ್ನು ಪ್ರಾರಂಭಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಜಿಲ್ಲಾದ್ಯಂತ ಸುಮಾರು 60ಕ್ಕೂ ಹೆಚ್ಚು ಹಿಂದೂ ಸಮಾಜೋತ್ಸವ ಆಯೋಜಿಸಲಾಗಿದ್ದು, ಇದರ ಭಾಗವಾಗಿ ಮಂಡ್ಯದಲ್ಲೂ ಸಹ ಬೃಹತ್ ಹಿಂದೂ ಸಮಾಜೋತ್ಸವ ನಡೆಯಲಿದೆ ಎಂದರು.
ಕಾರ್ಯಕ್ರಮಕ್ಕೂ ಮುನ್ನ ಶೋಭಾಯಾತ್ರೆ
ಕಾರ್ಯಕ್ರಮಕ್ಕೂ ಮುನ್ನ ನಗರದ ಗುತ್ತಲು ರಸ್ತೆಯ ಪ್ರಮುಖ ವೃತ್ತದಿಂದ ಆರಂಭವಾಗುವ ಶೋಭಾಯಾತ್ರೆ ಬೇಬಿ ಬೆಟ್ಟದ ಶ್ರೆ ರಾಮಯೋಗೀಶ್ವರ ಮಠದ ಶ್ರೆ ಶಿವಬಸಪ್ಪಸ್ವಾಮೀಜಿ ಅವರ ಪಾದಪೂಜೆಯೊಂದಿಗೆ ಪ್ರಾರಂಭವಾಗಿ ವೇದಿಕೆಯವರೆವಿಗೂ ಜಾನಪದ ಕಲಾತಂಡಗಳೊಂದಿಗೆ ಭವ್ಯ ಮೆರವಣಿಗೆ ನಡೆಯಲಿದೆ. ಗುತ್ತಲು ಮುಖ್ಯ ರಸ್ತೆಯ ಪ್ರಮುಖ ವೃತ್ತದಲ್ಲಿ ವಿವಿಧ ಜಾನಪದ ಕಲಾತಂಡದೊಂದಿಗೆ ಭವ್ಯ ಶೋಬಾ ಯಾತ್ರೆ ನಡೆಯಲಿದೆ ಎಂದರು.
ವಾಗ್ಮಿ ಹಾಗೂ ಸಾಮಾಜಿಕ ಕಾರ್ಯಕರ್ತ ನವೀನ್ ಸುಬ್ರಹ್ಮಣ್ಯ ಸಮಾಜದ ಏಕತೆ ಮತ್ತು ಧರ್ಮದ ರಕ್ಷಣೆ ಕುರಿತು ಮಾತನಾಡುವರು. ಸಮಾರಂಭದಲ್ಲಿ ಸುಮಾರು ೧೫೦೦ಕ್ಕೂ ಹೆಚ್ಚು ಮಂದಿ ಭಾಗವಹಿಸುವ ನಿರೀಕ್ಷೆ ಇದೆ. ಸಂಸ್ಕೃತಿ ಮತ್ತು ಪರಂಪರೆಯನ್ನು ಮುಂದಿನ ಪೀಳಿಗೆಗೆ ಪರಿಚಯಿಸುವುದು, ಸಮಾಜದಲ್ಲಿ ಸಂಘಟಿತ ಶಕ್ತಿಯನ್ನು ಪ್ರದರ್ಶಿಸುವ ಕಾರ್ಯಕ್ರಮ ಇದಾಗಿದ್ದು, ಹಿಂದೂಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅವರು ಮನವಿ ಮಾಡಿದರು.
ಸಮಿತಿಯ ದೊಡ್ಡಾಚಾರಿ, ಲೋಕೇಶ್, ರಾಕೇಶ್, ಧಾಮೋಧರ ಶಣೈ, ನಂದೀಶ್ ಅವರು ಗೋಷ್ಠಿಯಲ್ಲಿದ್ದರು.


