ಅಕ್ರಮ ಗಣಿಗಾರಿಕೆಯನ್ನು ಕೇಂದ್ರ ಗಂಭೀರವಾಗಿ ಪರಿಗಣಿಸಿದೆ: ಸುಮಲತಾ
* ಪ್ರಧಾನಿ ಮೋದಿಗೆ ಇ-ಮೇಲ್ ಮೂಲಕ ದೂರು ರವಾನೆ
* ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಸೂಚಿಸಿದ ಪ್ರಹ್ಲಾದ ಜೋಶಿ
* ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಹಲವು ಸೂಚನೆಗಳು ರವಾನೆ
ಮದ್ದೂರು(ಆ.12): ವಿಶ್ವವಿಖ್ಯಾತ ಕೆಆರ್‌ಎಸ್ ಸುತ್ತಮುತ್ತ ಸೇರಿದಂತೆ ಜಿಲ್ಲೆಯಲ್ಲಿ ನಡೆಯುತ್ತಿರುವ ಅಕ್ರಮ ಗಣಿಗಾರಿಕೆಯನ್ನು ಕೇಂದ್ರ ಸರ್ಕಾರ ಬಹಳ ಗಂಭೀರವಾಗಿ ಪರಿಗಣಿಸಿದೆ ಎಂದು ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿ, ಅಕ್ರಮ ಗಣಿಗಾರಿಕೆ ಕುರಿತು ನಾನು ಕೇಂದ್ರ ಗೃಹ ಸಚಿವರು, ಜಲಶಕ್ತಿ ಸಚಿವರು, ಪರಿಸರ ಖಾತೆ ಸಚಿವರು ಸೇರಿದಂತೆ ಹಲವರಿಗೆ ಖುದ್ದಾಗಿ ದೂರು ನೀಡಿದ್ದೇನೆ. ಪ್ರಧಾನಿ ಮೋದಿ ಅವರಿಗೆ ಇ-ಮೇಲ್ ಮೂಲಕ ದೂರನ್ನು ರವಾನಿಸಿದ್ದೇನೆ ಎಂದು ತಿಳಿಸಿದ್ದಾರೆ.
'ಹಳೆಯ ಸೇಡನ್ನು ಕುಮಾರಸ್ವಾಮಿ ಈಗ ತೀರಿಸಿಕೊಳ್ತಿದ್ದಾರೆ'
ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಜಲಶಕ್ತಿ ಸಚಿವ ಗಜೇಂದ್ರಸಿಂಗ್ ಶೆಖಾವತ್‌ಗೆ ದೂರವಾಣಿ ಮೂಲಕ ಸಂಪರ್ಕಿಸಿ ಅಕ್ರಮ ಗಣಿಗಾರಿಕೆ ವಿಷಯವನ್ನು ಗಂಭೀರವಾಗಿ ಪರಿಗಣಿಸಿ ಸೂಕ್ತ ಕ್ರಮ ಜರುಗಿಸುವಂತೆ ತಿಳಿಸಿದ್ದಾರೆ.
ಕೇಂದ್ರ ಗಣಿ ಖಾತೆಗೆ ರಾಜ್ಯ ಸಚಿವ ಪ್ರಹ್ಲಾದ ಜೋಶಿ ಅವರು ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದು ಅಕ್ರಮ ಗಣಿಗಾರಿಕೆಗೆ ಕಡಿವಾಣ ಹಾಕುವಂತೆ ಸೂಚಿಸಿದ್ದಾರೆ. ಅದರ ಮೇರೆಗೆ ರಾಜ್ಯ ಸರ್ಕಾರದಿಂದ ಜಿಲ್ಲಾಡಳಿತಕ್ಕೆ ಹಲವು ಸೂಚನೆಗಳು ರವಾನೆಯಾಗಿರುವುದಾಗಿ ಹೇಳಿದ್ದಾರೆ.