ನಂದಿನಿ ಮೊಸರು ಪ್ಯಾಕೆಟ್‌ನಲ್ಲಿ ಜಿಯೋ ಸಿಮ್ ಸಿಕ್ಕಿದೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ್ದ ಮದ್ದೂರಿನ ಅರುಣ್ ಕುಮಾರ್‌ನನ್ನು ಪೊಲೀಸರು ಬಂಧಿಸಿದ್ದಾರೆ. ತನಿಖೆಯಲ್ಲಿ ಆ ಸಿಮ್ ಆತನ ಪತ್ನಿಯದ್ದೇ ಎಂದು ತಿಳಿದುಬಂದಿದ್ದು, ಆರೋಪಿಯು ತನ್ನ ತಪ್ಪನ್ನು ಒಪ್ಪಿಕೊಂಡಿದ್ದಾನೆ.

ಮಂಡ್ಯ: ಮದ್ದೂರು ನಂದಿನಿ ಮೊಸರು ಪ್ಯಾಕೆಟ್ ನಲ್ಲಿ ಜಿಯೋ ಸಿಮ್ ಕಾರ್ಡ್ ಪತ್ತೆಯಾಗಿದೆ ಎಂದು ಆರೋಪಿಸಿ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಮನ್ಮುಲ್ ಮಾರುಕಟ್ಟೆ ಘನತೆಗೆ ಕುಂದು ಉಂಟು ಮಾಡಿದ್ದ ಆರೋಪಿಯನ್ನು ಮದ್ದೂರು ಪೊಲೀಸರು ಶುಕ್ರವಾರ ಬಂಧಿಸಿದ್ದಾರೆ.

ಅರುಣ್ ಕುಮಾರ್ ಬಂಧಿತ ಆರೋಪಿ.

ತಾಲೂಕಿನ ಚನ್ನಸಂದ್ರ ಗ್ರಾಮದ ಶಿವಲಿಂಗಯ್ಯನ ಪುತ್ರ ಅರುಣ್ ಕುಮಾರ್ (35) ಬಂಧಿತ ಆರೋಪಿ. ಮನ್‌ಮುಲ್‌ ಮಾರುಕಟ್ಟೆ ವ್ಯವಸ್ಥಾಪಕ ಪ್ರಸಾದ್ ದೂರಿದ ಮೇರೆಗೆ ಕಾರ್ಯಾಚರಣೆ ಕೈಗೊಂಡ ಮದ್ದೂರು ಠಾಣೆ ಸಿಪಿಐ ನವೀನ ಹಾಗೂ ಸಿಬ್ಬಂದಿ ಆರೋಪಿ ಅರುಣ್ ಕುಮಾರ್‌ನನ್ನು ಶುಕ್ರವಾರ ಸಂಜೆ ಆತನ ನಿವಾಸದಲ್ಲಿ ವಶಕ್ಕೆ ತೆಗೆದುಕೊಂಡಿದ್ದಾರೆ.

ಆರೋಪಿ ಹೇಳಿದ್ದೇನು?

ಬಂಧಿತ ಅರುಣ್ ಕುಮಾರ್ ಪೊಲೀಸರಿಗೆ ನೀಡಿರುವ ಹೇಳಿಕೆ ಪ್ರಕಾರ, ಸಾರಿಗೆ ಬಸ್ ನಿಲ್ದಾಣದ ಆವರಣದಲ್ಲಿರುವ ನಂದಿನಿ ಪಾರ್ಲರ್‌ನಲ್ಲಿ ಮಂಗಳವಾರ ಸಂಜೆ ಮೊಸರು ಪಾಕೆಟ್ ಖರೀದಿಸಿದ್ದೆ. ಅದನ್ನು ಮನೆಗೆ ತಂದು ಒಗ್ಗರಣೆ ಹಾಕಲು ಪಾತ್ರೆಗೆ ಸುರಿಯುವಾಗ ಜಿಯೋ ಸಿಮ್ ಕವರಿನಿಂದ ಜಾರಿ ಮೊಸರಲ್ಲಿ ಬಿದ್ದಿದೆ. ಇದನ್ನು ಗಮನಿಸಿದ ನಾನು ಮೊಸರು ಪಾಕೆಟ್ ನಲ್ಲಿ ಸಿಮ್ ಪತ್ತೆಯಾಗಿದೆಯೆಂದು ಸಾಮಾಜಿಕ ಜಾಲತಾಣದಲ್ಲಿ ಹರಿಯ ಬಿಟ್ಟಿದ್ದು ನಿಜ ಎಂದು ಪೊಲೀಸರ ಎದುರು ನೀಡಿರುವ ಹೇಳಿಕೆಯಲ್ಲಿ ತಪ್ಪು ಒಪ್ಪಿಕೊಂಡಿದ್ದಾನೆ. ಜಿಯೋ ಸಿಮ್ ನನ್ನ ಪತ್ನಿ ಎನ್. ಸುಧಾ ಹೆಸರಿನಲ್ಲಿದೆ ಎಂದು ಆತ ತಿಳಿಸಿದ್ದಾನೆ.

ಸುಳ್ಳು ಆರೋಪ

ನಂದಿನಿ ಮೊಸರಿನ ಹೆಸರಿಗೆ ಕಳಂಕ ತರಲು ಖಾಸಗಿ ಡೈರಿಗಳೊಂದಿಗೆ ಶಾಮೀಲಾಗಿರುವ ಅರುಣ್ ಕುಮಾರ್ ಈ ರೀತಿ ಸುಳ್ಳು ಆರೋಪ ಮಾಡಿದ್ದಾನೆ ಎಂದು ಮನ್‌ಮುಲ್‌ ಅಧ್ಯಕ್ಷ ಹರೀಶ್ ಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.