ಮಂಡ್ಯ (ನ.25):  ಸದ್ಯದಲ್ಲೇ ಗ್ರಾಪಂ ಚುನಾವಣೆ ಘೋಷಣೆಯಾಗುವ ಮುನ್ಸೂಚನೆ ಅರಿತ ವಿವಿಧ ರಾಜಕೀಯ ಪಕ್ಷದ ಮುಖಂಡರು ಇದೀಗ ಹಳ್ಳಿಗಳ ಕಡೆ ಮುಖ ಮಾಡಿದ್ದಾರೆ. ಇದರೊಂದಿಗೆ ಹಳ್ಳಿ ರಾಜಕೀಯ ದಿನೇದಿನೇ ಹೊಸ ರಂಗನ್ನು ತುಂಬಿಕೊಳ್ಳಲಾರಂಭಿಸಿದೆ.

ಮೈ ನಡುಗಿಸುವ ಚಳಿಯ ನಡುವೆಯೂ ಗ್ರಾಮ ಪಂಚಾಯ್ತಿ ಚುನಾವಣೆ ಬಿಸಿ ನಿಧಾನವಾಗಿ ಏರಲಾರಂಭಿಸಿದೆ. ಹಳ್ಳಿ ರಾಜಕೀಯದ ಚರ್ಚೆ ಇದೀಗ ಅಲ್ಲಲ್ಲಿ ಶುರುವಾಗಿದೆ. ರಾಜಕೀಯ ಪ್ರವೇಶಿಸುವ ಯುವಕರಿಗೆ ಗ್ರಾಪಂ ಚುನಾವಣೆ ಮೊದಲನೇ ಮೆಟ್ಟಿಲಾಗಿರುವುದರಿಂದ ಹಲವು ಯುವ ಆಕಾಂಕ್ಷಿತ ಅಭ್ಯರ್ಥಿಗಳು ಚುನಾವಣಾ ಅಖಾಡ ಪ್ರವೇಶಿಸಲು ಪೂರ್ವ ತಯಾರಿ ಆರಂಭಿಸಿದ್ದಾರೆ.

ಜಿಲ್ಲೆಯಲ್ಲಿ ನಡೆಯುವ ಗ್ರಾಪಂ ಚುನಾವಣೆಯಲ್ಲಿ ಪ್ರಾಬಲ್ಯ, ಜನವಿಶ್ವಾಸ ಗಳಿಸಿರುವ ಯುವಕರ ಕುರಿತು ಪ್ರತಿ ವಾರ್ಡ್‌ಗಳಲ್ಲೂ ಚರ್ಚೆಗಳು ನಡೆಯುತ್ತಿವೆ. ರಾಜಕೀಯ ಪಕ್ಷದ ಮುಖಂಡರು ಗೆಲ್ಲುವ ಸಾಧ್ಯತೆ ಇರುವವರ ಮಾಹಿತಿ ಕಲೆಹಾಕುತ್ತಿದ್ದಾರೆ.

ಮಂಡ್ಯದಲ್ಲಿ ಅಂಬರೀಶ್ ದೇವಾಲಯ, ಅಂಬಿ ನೆನಪಿಸಿದ ಅಭಿಮಾನಿಗಳು

ಜೆಡಿಎಸ್‌, ಕಾಂಗ್ರೆಸ್‌ ಹಾಗೂ ಬಿಜೆಪಿ ಮುಖಂಡರು ಗ್ರಾಮ ಸಂಚಾರ ಆರಂಭಿಸಿದ್ದು, ಶಾಸಕರು, ಜಿಪಂ ಅಧ್ಯಕ್ಷರು, ಸದಸ್ಯರು, ತಾಪಂ ಅಧ್ಯಕ್ಷರು ಮತ್ತು ಸದಸ್ಯರು ಹಳ್ಳಿ ಜನರ ಮನೆ ಬಾಗಿಲಿಗೆ ಅಲೆಯುತ್ತಿದ್ದಾರೆ. ಗ್ರಾಮೀಣ ಭಾಗದ ಮತದಾರರ ಮನವೊಲಿಸಲು ಅಭಿವೃದ್ಧಿ ಅಸ್ತ್ರವನ್ನು ಬಳಸಲಾರಂಭಿಸಿದ್ದಾರೆ. ಬಹುತೇಕ ಎಲ್ಲ ತಾಲೂಕುಗಳಲ್ಲಿ ಕಳೆದ ಮೂರ್ನಾಲ್ಕು ತಿಂಗಳಿಂದ ಕಾಮಗಾರಿಗಳ ಗುದ್ದಲಿ ಪೂಜೆಗಳು ಬಿರುಸಾಗಿ ನಡೆಯುತ್ತಿವೆ.

ಗ್ರಾಪಂ ಚುನಾವಣೆಯನ್ನು ಪ್ರತಿಷ್ಠೆಯಾಗಿ ಪರಿಗಣಿಸಿರುವ ರಾಜಕೀಯ ಪಕ್ಷಗಳು ಚುನಾವಣೆಗೆ ಪಕ್ಷದಿಂದ ನೇರವಾಗಿ ತಮ್ಮ ಬೆಂಬಲಿತ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಗೆಲ್ಲಿಸಿಕೊಂಡು ಬರುವ ಕಸರತ್ತು ನಡೆಸಿವೆ.

ಮಂಡ್ಯ ಜಿಲ್ಲೆ ಜೆಡಿಎಸ್‌ ಭದ್ರಕೋಟೆಯಾಗಿದೆ. 6 ಮಂದಿ ಶಾಸಕರು, ಮೂವರು ವಿಧಾನ ಪರಿಷತ್‌ ಸದಸ್ಯರನ್ನು ಹೊಂದಿದೆ. ಬಿಜೆಪಿ ಒಬ್ಬ ಶಾಸಕರನ್ನು ಹೊಂದಿದ್ದು, ಪಕ್ಷೇತರ ಸಂಸದೆ ಕಾಂಗ್ರೆಸ್‌ ಪರವೋ, ಬಿಜೆಪಿ ಪರವೋ ಎನ್ನುವ ನಿಶ್ಚಿತತೆ ಇಲ್ಲ.

ಶಾಸಕಿ ಅನಿತಾ ಕುಮಾರಸ್ವಾಮಿ ಬಾಯಿಂದ ಇದೆಂಥಾ ಮಾತು..! ...

ಜಿಲ್ಲಾ ಪಂಚಾಯ್ತಿ, ತಾಲೂಕು ಪಂಚಾಯ್ತಿಯಲ್ಲೆಲ್ಲಾ ಜೆಡಿಎಸ್‌ ಅಧಿಕಾರದಲ್ಲಿದೆ. ಕಾಂಗ್ರೆಸ್‌ ಪಕ್ಷದಿಂದ ಒಬ್ಬ ಶಾಸಕರೂ ಇಲ್ಲ, ವಿಧಾನ ಪರಿಷತ್‌ ಸದಸ್ಯರೂ ಇಲ್ಲ. ಇಂತಹ ಪರಿಸ್ಥಿತಿಯಲ್ಲಿ ಗ್ರಾಪಂ ಚುನಾವಣೆಯಲ್ಲಿ ತಮ್ಮ ಬೆಂಬಲಿಗ ಅಭ್ಯರ್ಥಿಗಳನ್ನು ಅತಿ ಹೆಚ್ಚಿನ ಸಂಖ್ಯೆಯಲ್ಲಿ ಗೆಲ್ಲಿಸಿದರೆ ಮುಂದಿನ ದಿನಗಳಲ್ಲಿ ದೊಡ್ಡ ಚುನಾವಣೆಗಳನ್ನು ಗೆಲ್ಲುವುದು ಸುಲಭವಾಗಲಿದೆ ಎನ್ನುವುದು ರಾಜಕೀಯ ಪಕ್ಷದವರ ಲೆಕ್ಕಾಚಾರವಾಗಿದೆ.

ಚುರುಕಾದ ಜೆಡಿಎಸ್‌:  ಗ್ರಾಪಂ ಚುನಾವಣೆಯನ್ನು ಗಂಭೀರವಾಗಿ ಪರಿಗಣಿಸಿರುವ ಜೆಡಿಎಸ್‌ ಬೇರು ಮಟ್ಟದಲ್ಲಿ ಪಕ್ಷವನ್ನು ಭದ್ರ ಪಡಿಸಿಕೊಳ್ಳುವುದಕ್ಕೆ ಸಿದ್ಧತೆ ಆರಂಭಿಸಿದೆ. ಈಗಾಗಲೇ ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಅವರು ದೇವಸ್ಥಾನದ ಉದ್ಘಾಟನೆ, ಕಾರ್ಯಕರ್ತರ ವಿವಾಹ ಮಹೋತ್ಸವದ ನೆಪದಲ್ಲಿ ಗ್ರಾಮಗಳಿಗೆ ಬಂದು ಹಳ್ಳಿ ಜನರನ್ನು ಪಕ್ಷದ ಕಡೆ ಸೆಳೆಯುವ ಪ್ರಯತ್ನ ನಡೆಸಲಾರಂಭಿಸಿದ್ದಾರೆ. ಈಗಾಗಲೇ ಮದ್ದೂರು ತಾಲೂಕಿನ ಬ್ಯಾಡರಹಳ್ಳಿ ಮತ್ತು ತೊಪ್ಪನಹಳ್ಳಿ ಗ್ರಾಮಕ್ಕೆ ಬಂದು ಹೋಗಿರುವ ಕುಮಾರಸ್ವಾಮಿ ಅವರು ಜನರನ್ನು ಜಾಗೃತಿಗೊಳಿಸುವ ಕಾರ್ಯವನ್ನು ಸದ್ದಿಲ್ಲದೆ ಆರಂಭಿಸಿದ್ದಾರೆ.

ಜೆಡಿಎಸ್‌ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಕೂಡ ಕೆ.ಆರ್‌.ಪೇಟೆ ಹಾಗೂ ಮಂಡ್ಯ ಕಡೆ ಸುತ್ತಾಟ ನಡೆಸುತ್ತಾ ಯುವಕರನ್ನು ಪಕ್ಷದ ಕಡೆ ಸೆಳೆಯುವ ಪ್ರಯತ್ನ ನಡೆಸುತ್ತಿದ್ದಾರೆ. ಜೆಡಿಎಸ್‌ನ 6 ಶಾಸಕರೂ ಕ್ಷೇತ್ರ ಬಿಟ್ಟು ಕದಲುತ್ತಿಲ್ಲ. ಕ್ಷೇತ್ರದಲ್ಲೇ ಉಳಿದು ಹಲವು ಗ್ರಾಮಗಳಲ್ಲಿ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ, ಗುದ್ದಲಿಪೂಜೆ ನಡೆಸುತ್ತಿದ್ದಾರೆ. ಸ್ಥಳೀಯ ಮುಖಂಡರೊಡನೆ ಗ್ರಾಪಂ ಚುನಾವಣೆ ಕುರಿತು ಚರ್ಚಿಸುತ್ತಾ ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಅಭಿವೃದ್ಧಿ ಕಾಮಗಾರಿಗಳ ಪರಿಶೀಲನೆ ಹೆಸರಿನಲ್ಲಿ ಗ್ರಾಮೀಣ ಭಾಗದಲ್ಲೇ ಬೆಳಗ್ಗೆಯಿಂದ ಸಂಜೆಯವರೆಗೂ ಶಾಸಕರು, ಮುಖಂಡರು ಸುತ್ತಾಡುತ್ತಾ ವಾತಾವರಣವನ್ನು ಸೂಕ್ಷ್ಮವಾಗಿ ಅರಿಯುತ್ತಿದ್ದಾರೆ.

ಬಿಜೆಪಿ ಸರ್ಕಸ್‌:  ಬಿಜೆಪಿಯಿಂದ ಜಿಲ್ಲೆಯೊಳಗೆ ಕೆ.ಆರ್‌.ಪೇಟೆ ಕ್ಷೇತ್ರದ ಕೆ.ಸಿ.ನಾರಾಯಣಗೌಡರು ಶಾಸಕರಾಗಿದ್ದು, ಅವರೇ ಉಸ್ತುವಾರಿ ಸಚಿವರೂ ಆಗಿದ್ದಾರೆ. ಅವರೂ ಸಹ ಗ್ರಾಪಂ ಚುನಾವಣೆಯಲ್ಲಿ ಅಧಿಕ ಸ್ಥಾನಗಳಲ್ಲಿ ಗೆಲ್ಲುವುದಕ್ಕೆ ಪಣ ತೊಟ್ಟಿದ್ದಾರೆ. ಗ್ರಾಪಂ ಚುನಾವಣೆ ಹಿನ್ನೆಲೆಯಲ್ಲಿ ಈಗಾಗಲೇ ದೀಪಾವಳಿ ಹಬ್ಬದಂದು ಕೃಷಿ ಸಚಿವ ಬಿ.ಸಿ.ಪಾಟೀಲ್‌ ಅವರೊಂದಿಗೆ ರೈತರೊಂದಿಗೆ ಒಂದು ದಿನ ಕಾರ್ಯಕ್ರಮ ಹಮ್ಮಿಕೊಂಡು ಕ್ಷೇತ್ರದ ಹಳ್ಳಿಗಳಲ್ಲಿ ಸುತ್ತಾಡಿ ಅಲೆ ಎಬ್ಬಿಸಿದ್ದಾರೆ.

ಕೆ.ಆರ್‌.ಪೇಟೆ ಹೊರತುಪಡಿಸಿದಂತೆ ಮದ್ದೂರು ತಾಲೂಕಿನಲ್ಲಿ ಎಸ್‌.ಪಿ.ಸ್ವಾಮಿ ಅವರು ಹಳ್ಳಿಗಳಲ್ಲಿ ಪಕ್ಷ ಸಂಘಟಿಸುವ ಉತ್ಸಾಹದಲ್ಲಿ ಚುರುಕಾಗಿ ಓಡಾಡುತ್ತಿದ್ದಾರೆ. ತಮ್ಮದೇ ಪಡೆಯನ್ನು ಕಟ್ಟಿಕೊಂಡು ಕ್ಷೇತ್ರದಲ್ಲಿ ತಮ್ಮ ಪ್ರಾಬಲ್ಯವನ್ನು ಹೆಚ್ಚಿಸಿಕೊಳ್ಳುವುದಕ್ಕೆ ಹರಸಾಹಸ ನಡೆಸುತ್ತಿದ್ದಾರೆ. ಮುಂದಿನ ಚುನಾವಣೆಯಲ್ಲಿ ಬಿಜೆಪಿಯಿಂದ ಟಿಕೆಟ್‌ ಪಡೆದು ಅಭ್ಯರ್ಥಿಯಾಗುವ ಹಂಬಲ ಹೊತ್ತಿರುವ ಅವರು ಗ್ರಾಪಂ ಚುನಾವಣೆಯಲ್ಲಿ ತಮ್ಮ ಶಕ್ತಿ ಪ್ರದರ್ಶಿಸಲು ಸಜ್ಜಾಗುತ್ತಿದ್ದಾರೆ. ಅವರೂ ಸಹ ಹಳ್ಳಿ ಸಂಚಾರದಲ್ಲಿ ತೊಡಗಿಸಿಕೊಂಡು ಗೆಲ್ಲುವ ಅಭ್ಯರ್ಥಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಜಿಲ್ಲೆಯ ಉಳಿದ ತಾಲೂಕುಗಳಲ್ಲಿ ಬಿಜೆಪಿ ಹವಾ ಎಲ್ಲೂ ಕಂಡುಬರುತ್ತಿಲ್ಲ. ಸ್ಥಳೀಯ ಮುಖಂಡರು ಇನ್ನೂ ಚುರುಕಾಗಿಲ್ಲದಿರುವುದು ಕಂಡುಬರುತ್ತಿದೆ.

ಕೈ ಪಡೆ ತಯಾರು:

ಸಹಕಾರ ಕ್ಷೇತ್ರದ ಚುನಾವಣೆಗಳಲ್ಲಿ ಅತಿ ಹೆಚ್ಚು ಸ್ಥಾನಗಳಲ್ಲಿ ಗೆಲುವು ಸಾಧಿಸಿ ಬೀಗುತ್ತಿರುವ ಕಾಂಗ್ರೆಸ್‌ ಗ್ರಾಪಂ ಚುನಾವಣೆಗೆ ಸಜ್ಜಾಗುವುದಕ್ಕೆ ತಯಾರಾಗುತ್ತಿದೆ. ಮಾಜಿ ಸಚಿವ ಎನ್‌.ಚಲುವರಾಯಸ್ವಾಮಿ, ಪಿ.ಎಂ. ನರೇಂದ್ರಸ್ವಾಮಿ, ಮಾಜಿ ಶಾಸಕ ಕೆ.ಬಿ. ಚಂದ್ರಶೇಖರ್‌, ರಮೇಶ್‌ ಬಂಡಿಸಿದ್ದೇಗೌಡ, ಯುವ ಮುಖಂಡ ರವಿಕುಮಾರ್‌ ಗಣಿಗ ಅವರು ಕಾಂಗ್ರೆಸ್‌ನ ಶಕ್ತಿಯಾಗಿದ್ದಾರೆ.

ಇವರಲ್ಲಿ ಎನ್‌. ಚಲುವರಾಯಸ್ವಾಮಿ ಅವರು ಈಗಷ್ಟೇ ಕೊರೋನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ. ಉಳಿದವರು ಅವರವರ ಕ್ಷೇತ್ರಕ್ಕೆ ಸೀಮಿತರಾಗಿ ಗ್ರಾಪಂ ಚುನಾವಣೆ ಕಾರ್ಯಾಚರಣೆ ಆರಂಭಿಸಿದ್ದಾರೆ. ತಳಮಟ್ಟದಲ್ಲಿ ಪಕ್ಷದ ಬೇರುಗಳು ಭದ್ರವಾಗಿದ್ದು, ಕಾಂಗ್ರೆಸ್‌ ಮತದಾರರನ್ನು ಕಳೆದುಕೊಂಡಿಲ್ಲವೆಂದು ಪಕ್ಷದ ನಾಯಕರು ಹಾಗೂ ಮುಖಂಡರು ಬಲವಾಗಿ ನಂಬಿದ್ದಾರೆ.

ಟಿಎಪಿಸಿಎಂಎಸ್‌ ಚುನಾವಣೆಯಲ್ಲಿ ನಾಗಮಂಗಲ ಹಾಗೂ ಮಳವಳ್ಳಿ ಕ್ಷೇತ್ರದಲ್ಲಿ ಪ್ರಾಬಲ್ಯ ಸಾಧಿಸಿದ್ದ ಕಾಂಗ್ರೆಸ್‌, ಸಹಕಾರ ಕ್ಷೇತ್ರದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ಗೆಲುವು ಸಾಧಿಸಿ ಪ್ರಾಬಲ್ಯ ಮೆರೆದಿದೆ. ಗ್ರಾಮೀಣ ಮತದಾರರು ಮತ್ತೆ ಕಾಂಗ್ರೆಸ್‌ನತ್ತ ಒಲವು ತೋರುತ್ತಿರುವುದಕ್ಕೆ ಈ ಬೆಳವಣಿಗೆ ಸಾಕ್ಷಿಯಾಗಿದೆ. ಆದರೂ, ಕಾಂಗ್ರೆಸ್‌ನ ಜಿಪಂ, ತಾಪಂ ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಗ್ರಾಮದಲ್ಲೇ ಠಿಕಾಣಿ ಹೂಡಿ ಗ್ರಾಮ ರಾಜಕೀಯ ಅರಿಯುತ್ತಿದ್ದಾರೆ. ಯಾವಾಗ ಚುನಾವಣೆ ಘೋಷಣೆಯಾದರೂ ಎದುರಿಸಲು ಸಿದ್ಧ ಎಂಬ ವಿಶ್ವಾಸದಲ್ಲಿದ್ದಾರೆ.