ಮಂಡ್ಯದಲ್ಲಿ ತೀವ್ರ ಬರಗಾಲದಿಂದಾಗಿ ಕಬ್ಬಿನ ಇಳುವರಿ ಕುಸಿದಿದ್ದು, ಬೆಲ್ಲದ ಉತ್ಪಾದನೆಗೆ ಹೊಡೆತ ಬಿದ್ದಿದೆ. ಈ ಕಾರಣದಿಂದ ಮಾರುಕಟ್ಟೆಯಲ್ಲಿ ಬೆಲ್ಲದ ಕೊರತೆ ಉಂಟಾಗಿ, ಅದರ ದರವು ಸಾರ್ವಕಾಲಿಕ ದಾಖಲೆ ಮಟ್ಟಕ್ಕೆ ಏರಿಕೆಯಾಗಿದೆ.

ಮಂಡ್ಯ (ಆ.22): ಸಕ್ಕರೆ ನಾಡು ಮಂಡ್ಯದಲ್ಲಿ ಭೀಕರ ಬರಗಾಲದ ಕರಿಛಾಯೆ ಆವರಿಸಿದ್ದು, ಬೆಲ್ಲ ಹಾಗೂ ಸಕ್ಕರೆ ದರ ಗಗನಕ್ಕೇರಿದೆ. ಕಳೆದ ಆರು ತಿಂಗಳಿಂದ ಸೂಕ್ತ ಮಳೆಯಾಗದೆ ಹಾಗೂ ಕಾವೇರಿ ನೀರಿನ ಪೂರೈಕೆ ಸಿಗದೆ ಕಬ್ಬಿನ ಗದ್ದೆಗಳು ಸಂಪೂರ್ಣ ಒಣಗಿ ನಿಂತಿವೆ. ಪರಿಣಾಮವಾಗಿ, ಕಬ್ಬಿನ ಇಳುವರಿ ಅರ್ಧದಷ್ಟು ಕುಸಿದಿದ್ದು, ಬೆಲ್ಲ ಉತ್ಪಾದಿಸುವ ಗಾಣಗಳಿಗೆ ಅಗತ್ಯ ಕಬ್ಬು ಸಿಗದೆ ಮಾರುಕಟ್ಟೆಯಲ್ಲಿ ಬೆಲ್ಲದ ಕೊರತೆ ತೀವ್ರವಾಗಿದೆ. ಇದರಿಂದಾಗಿ ಮಂಡ್ಯ ಬೆಲ್ಲದ ಮಾರುಕಟ್ಟೆಯ ಇತಿಹಾಸದಲ್ಲೇ ಎಂದೂ ಕಾಣದ ರೀತಿಯಲ್ಲಿ ಬೆಲ್ಲದ ದರ ಸಾರ್ವಕಾಲಿಕ ದಾಖಲೆ ಮಟ್ಟದಲ್ಲಿ ಹರಾಜಾಗುತ್ತಿದೆ.

ಎರಡೇ ದಿನದಲ್ಲಿ ಕ್ವಿಂಟಾಲ್‌ಗೆ 2,000 ರೂ. ಏರಿಕೆ

ಮಂಡ್ಯ ಮಾರುಕಟ್ಟೆಯಲ್ಲಿ ಈ ಹಿಂದೆ ಪ್ರತಿ ಕ್ವಿಂಟಾಲ್ ಬೆಲ್ಲದ ದರ 4,500 ರೂಪಾಯಿ ಇತ್ತು. ಆದರೆ, ಕೇವಲ ಕಳೆದ ಎರಡ್ಮೂರು ದಿನಗಳಲ್ಲಿ ದಿಢೀರನೇ 2,000 ರೂಪಾಯಿ ಏರಿಕೆಯಾಗಿದ್ದು, ಪ್ರಸ್ತುತ ಕ್ವಿಂಟಾಲ್‌ ಬೆಲ್ಲ 6,500 ರಿಂದ 7,000 ರೂಪಾಯಿವರೆಗೆ ಭಾರಿ ಬೆಲೆಗೆ ಹರಾಜಾಗುತ್ತಿದೆ. ಸಾಮಾನ್ಯವಾಗಿ ಈ ಋತುವಿನಲ್ಲಿ ಬೆಲ್ಲದ ದರ ಇಳಿಕೆಯಾಗಬೇಕಿತ್ತು. ಆದರೆ, ಇಷ್ಟೊಂದು ಬೃಹತ್ ಪ್ರಮಾಣದಲ್ಲಿ ದರ ಏರಿಕೆಯಾಗಿರುವುದು ಮಂಡ್ಯ ಮಾರುಕಟ್ಟೆಯ ಇತಿಹಾಸದಲ್ಲೇ ಇದೇ ಮೊದಲು ಎಂದು ಸ್ಥಳೀಯ ವ್ಯಾಪಾರಿಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ.

ಅರ್ಧದಷ್ಟು ಕುಸಿದ ಬೆಲ್ಲದ ಪೂರೈಕೆ

ನೀರಿಲ್ಲದೆ ಕಬ್ಬಿನ ಇಳುವರಿ ಅರ್ಧಕ್ಕಿಂತ ಕಡಿಮೆ ಬಂದಿರುವುದರಿಂದ ಬೆಲ್ಲ ಉತ್ಪಾದನೆಯ ಮೇಲೆಯೂ ನೇರ ಪರಿಣಾಮ ಬೀರಿದೆ. ಪ್ರತಿದಿನ ಮಂಡ್ಯ ಮಾರುಕಟ್ಟೆಯಿಂದ ಸುಮಾರು 10 ರಿಂದ 12 ಲಾರಿಯಷ್ಟು ಬೆಲ್ಲ ವಿಲೇವಾರಿಯಾಗುತ್ತಿತ್ತು. ಪ್ರಸ್ತುತ ಬೆಲ್ಲದ ಪೂರೈಕೆ ಶೇ. 50 ರಷ್ಟು ಕಡಿಮೆಯಾಗಿದ್ದು, ಮಾರುಕಟ್ಟೆಗೆ ಬರುವ ಬೆಲ್ಲದ ಪ್ರಮಾಣ ತೀವ್ರ ಕುಸಿತ ಕಂಡಿದೆ. ನೀರಿನ ಅಭಾವ, ಗಾಣಗಳಿಗೆ ಕಬ್ಬಿನ ಅಭಾವ ಮತ್ತು ಮಾರುಕಟ್ಟೆಗೆ ಪೂರೈಕೆ ಕಡಿಮೆಯಾಗಿರುವುದು ಮಂಡ್ಯ ಬೆಲ್ಲದ ದರ ದಾಖಲೆ ಮಟ್ಟಕ್ಕೆ ತಲುಪಲು ಮುಖ್ಯ ಕಾರಣವಾಗಿದೆ.