ಮಂಡ್ಯ(ಆ.03): ಕೆಆರ್‌ಎಸ್‌ ಜಲಾಶಯದಿಂದ ತಮಿಳುನಾಡಿಗೆ ಕಾವೇರಿ ನದಿ ಮೂಲಕ ನೀರು ಹರಿಸುವ ಕ್ರಮ ಖಂಡಿಸಿ ರೈತ ಸಂಘದ ಕಾರ್ಯಕರ್ತರು ನದಿಗಿಳಿದು ಶುಕ್ರವಾರ ಪ್ರತಿಭಟನೆ ನಡೆಸಿದರು.

 ಶ್ರೀರಂಗಪಟ್ಟಣದ ಸ್ನಾನಘಟ್ಟದ ಬಳಿ ರೈತ ಸಂಘದ ಅಧ್ಯಕ್ಷ ಕೃಷ್ಣೇಗೌಡ ನೇತೃತ್ವದಲ್ಲಿಸೇರಿದ ಕಾರ್ಯಕರ್ತರು ಕಾವೇರಿ ನದಿಗಿಳಿದು ಕೇಂದ್ರ ಮತ್ತು ರಾಜ್ಯ ಬಿಜೆಪಿ ಸರ್ಕಾರಗಳ ವಿರುದ್ಧ ಧಿಕ್ಕಾರ ಕೂಗಿದರು.

ಪ್ರತಿನಿತ್ಯ 10 ಸಾವಿರಕ್ಕೂ ಅಧಿಕ ಕ್ಯುಸೆಕ್‌ ನೀರನ್ನು ನದಿ ಮೂಲಕ ತಮಿಳುನಾಡಿಗೆ ಹರಿಸಲಾಗುತ್ತಿದೆ, ಕಾವೇರಿ ನ್ಯಾಯ ಮಂಡಳಿಗೆ ಇಲ್ಲಿನ ವಾಸ್ತವ ಸ್ಥಿತಿ ಅರ್ಥವಾಗದೆ ಇರುವುದು ಖಂಡನೀಯ. ಮುಂಗಾರು ಮಳೆ ಕೈಕೊಟ್ಟು ಜಲಾಶಯಕ್ಕೆ ನೀರು ಬರದೆ ಜಲಾಶಯದ ನೀರಿನ ಮಟ್ಟದಿನೇದಿನೇ ಕುಸಿಯುತ್ತಿದರೂ ತಮಿಳುನಾಡಿಗೆ ಇನ್ನು 5 ದಿನ ನೀರು ಹರಿಸಿ ಎಂದು ಸೂಚಿಸಿರುವುದು ರೈತರಿಗೆ ಮಾಡುತ್ತಿರುವ ಘೋರ ಅನ್ಯಾಯ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಕಾವೇರಿ ಕೂಗು ಅಭಿಯಾನಕ್ಕೆ ಕೊಯಮತ್ತೂರಲ್ಲಿ ಚಾಲನೆ

ರಾಜ್ಯದಲ್ಲಿ ಮಳೆಯ ಕೊರೆತೆಯಿಂದಾಗಿ ಜಿಲ್ಲೆಯ ರೈತರು ಸಂಕಷ್ಟಪರಿಸ್ಥಿತಿಯಲ್ಲಿದ್ದಾರೆ. ಬೇಸಿಗೆ ಬೆಳೆಗೆ ನೀರು ಕೊಡದೆ ರೈತರು ಯಾವುದೇ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಮುಂಗಾರು ಮಳೆ ಕೈಕೊಟ್ಟಿದ್ದರಿಂದ ರೈತರು ಮುಂಗಾರು ಬೆಳೆ ಹಾಕದೆ ನೀರಿಗಾಗಿ ಕಾಯುತ್ತಿದ್ದಾರೆ. ಕಟಾವಿಗೆ ಬಂದ ಬೆಳೆಗಳು ಒಣಗುತ್ತಿವೆ ರೈತರ ಆತ್ಮಹತ್ಯೆಗಳು ಹೆಚ್ಚುತ್ತಿವೆ. ಆದರೂ ತಮಿಳುನಾಡಿಗೆ ಜಲಾಶಯದಿಂದ ನೀರು ಹರಿಸಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರ ರೈತರ ಹಿತ ಕಾಯುತ್ತಿಲ್ಲ. ಕಾವೇರಿ ನಿರ್ವಹಣ ಮಂಡಳಿಗೆ ಇಲ್ಲಿನ ರೈತರ ಸಮಸ್ಯೆಗಳನ್ನು ತಿಳಿಸದೆ ನೀರು ಹರಿಸುತ್ತಿದೆ ಎಂದು ಕಿಡಿಕಾರಿದರು.

ನಾಲೆಗೆ ನೀರು ಹರಿಸಿ:

ಕೂಡಲೇ ನದಿಗೆ ಹರಿಸುವ ನೀರನ್ನು ಈ ತಕ್ಷಣದಿಂದಲೇ ಸ್ಥಗಿತಗೊಳಿಸಿ ನಾಲೆಗಳಿಗೆ ನೀರು ಹರಿಸಬೇಕು ಎಂದು ಸುಮಾರು ಒಂದು ತಾಸಿಗೂ ಹೆಚ್ಚು ಹೊತ್ತು ನದಿಗಿಳಿದು ಸರ್ಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ಪೊಲೀಸರು ಮನವೊಲಿಸಿದ್ದರಿಂದ ಪ್ರತಿಭಟನೆ ಕೈ ಬಿಟ್ಟರು.

ಪ್ರತಿಭಟನೆಯಲ್ಲಿ ಜಿಲ್ಲಾ ರೈತ ಸಂಘದ ಕಾರ್ಯಾಧ್ಯಕ್ಷ ಸ್ವಾಮೀಗೌಡ, ಪಿಎಸ್‌ಎಸ್‌ಕೆ ಮಾಜಿ ನಿರ್ದೇಶಕ ಪಾಂಡು, ರೈತ ಮುಖಂಡ ಬಾಲಕೃಷ್ಣ, ಸಂಚಾಲಕ ಬಿ.ಎಸ್‌.ರಮೇಶ್‌, ಮುಖಂಡರಾದ ಶಂಕರೇಗೌಡ, ಶ್ರೀನಿವಾಸ್‌, ಸಿದ್ದಪ್ಪ, ನಾಗೇಂದ್ರ ಸೇರಿದಂತೆ ಹಲವರು ಭಾಗವಹಿಸಿದರು.

ಕರ್ನಾಟಕ ರಾಜಕೀಯದ ಹೆಚ್ಚಿನ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ