Asianet Suvarna News Asianet Suvarna News

Mandya : ಮುಂಗಾರು ಮಳೆ ಕುಸಿತ : ಬರಿದಾದ ಕೆರೆಗಳು..!

ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೇ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ಈಗಾಗಲೇ ಬರಿದಾಗಿವೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿ ಇನ್ನಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

Mandya  Fall of Monsoon Rain: Drained Lakes..!
Author
First Published Oct 5, 2023, 9:24 AM IST

  ಕೆ.ಆರ್‌.ಪೇಟೆ :  ನಿರೀಕ್ಷಿತ ಪ್ರಮಾಣದಲ್ಲಿ ಮುಂಗಾರು ಮಳೆಯಾಗದೇ ತಾಲೂಕಿನ ಬಹುತೇಕ ಕೆರೆ ಕಟ್ಟೆಗಳು ಈಗಾಗಲೇ ಬರಿದಾಗಿವೆ. ಮುಂಬರುವ ಬೇಸಿಗೆಯಲ್ಲಿ ನೀರಿನ ಸಮಸ್ಯೆ ಉಂಟಾಗಿ ಇನ್ನಷ್ಟು ಸಂಕಷ್ಟಗಳು ಎದುರಾಗುವ ಸಾಧ್ಯತೆ ಹೆಚ್ಚಾಗಿದೆ.

ಜೀವನದಿ ಹೇಮಾವತಿ ತಾಲೂಕಿನಲ್ಲಿ ಹರಿಯುತ್ತಿದ್ದರೂ ರೈತ ಸಮುದಾಯ ಹನಿ ನೀರಿಗೆ ಪರದಡಬೇಕಾದ ಸನ್ನಿವೇಶ ನಿರ್ಮಾಣವಾಗಿ ಭೀಕರ ಬರಗಾಲ ಕಾಣಿಸಿಕೊಂಡಿದೆ. ನೀರಾವರಿ ಇಲಾಖೆಯ ಎಂಜಿನಿಯರ್‌ಗಳ ನಿರ್ಲಕ್ಷ್ಯಕ್ಕೆ ಹೇಮೆಯ ನೀರು ಕೆಲವು ಕಾಲ ಕಾಲುವೆಯಲ್ಲಿ ಹರಿದ ಹೋದರೂ ಕೆರೆ-ಕಟ್ಟೆಗಳು ಮಾತ್ರ ಬರಿದಾಗಿವೆ.

ತಾಲೂಕಿನಲ್ಲಿ ದೊಡ್ಡ ಕೆರಗಳು, ಸಣ್ಣ ಮತ್ತು ಅತೀಸಣ್ಣ ಕೆರೆಗಳು ಸೇರಿದಂತೆ ಒಟ್ಟು 235 ಕೆರೆಗಳಿವೆ. ಇದರಲ್ಲಿ 106 ಕೆರೆಗಳು ಹೇಮಾವತಿ ಎಡದಂಡೆ ನಾಲಾ ಎಂಜಿನಿಯರಿಂಗ್ ವ್ಯಾಪ್ತಿಗೆ ಸೇರಿದ್ದರೆ 8 ಕೆರೆಗಳು ಸಣ್ಣ ನೀರಾವರಿ ಇಲಾಖೆಯ ಅಡಿಯಲ್ಲಿವೆ. 121 ಸಣ್ಣಪುಟ್ಟ ಕೆರೆಗಳು ಜಿಲ್ಲಾ ಪಂಚಾಯ್ತಿ ನಿಯಂತ್ರಣದಲ್ಲಿವೆ. ಹೇಮೆಯ ನೀರು ಹರಿಯದ ಕಾರಣ ಶೇ.90 ರಷ್ಟು ಕೆರೆಗಳು ಒಣಗಿ ನಿಂತಿವೆ.

ತಮಿಳುನಾಡಿಗೆ ನೀರು ಹರಿಸಬೇಕಾದ ಕಠಿಣ ಸನ್ನಿವೇಶದ ನಡುವೆಯೂ ಕಳೆದ ಆಗಸ್ಟ್ ತಿಂಗಳ ಅಂತ್ಯ ಮತ್ತು ಸೆಪ್ಟಂಬರ್ ತಿಂಗಳಿನಲ್ಲಿ 45 ದಿನಗಳ ಕಾಲ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಲು ಹೇಮಾವತಿ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಯಲ್ಲಿ ನೀರು ಹರಿಸಲಾಯಿತು.

ಹೇಮೆಯ ನೀರಿನಿಂದ ನೆರೆಯ ಪಾಂಡವಪುರ ತಾಲೂಕಿನ ಎಲ್ಲ ಕೆರೆಗಳು ತುಂಬಿದ್ದರೆ, ನಾಗಮಂಗಲ ತಾಲೂಕಿನ ಬಹುತೇಕ ಕೆರೆಗಳು ತುಂಬಿವೆ. ನೆರೆಯ ತಾಲೂಕಿಗೆ ಕೆ.ಆರ್.ಪೇಟೆ ತಾಲೂಕಿನ ಮುಖಾಂತರವೇ ಹೇಮೆಯ ನೀರು ಹರಿದು ಹೋಗಬೇಕು. ನಾಲೆಯ ಕೆಳ ಭಾಗದ ತಾಲೂಕಿನ ಕೆರೆ ಕಟ್ಟೆಗಳು ತುಂಬಿದರೂ ನಮ್ಮ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸುವ ಇಚ್ಚಾಶಕ್ತಿಯನ್ನು ಇಲ್ಲಿನ ಎಂಜಿನಿಯರ್‌ಗಳು ತೋರಿಸಿಲ್ಲ.

ಕಾಲುವೆಗೆ ನೀರು ಬಿಟ್ಟ ತಕ್ಷಣವೇ ಎಂಜಿನಿಯರ್‌ಗಳು ಹಗಲು ರಾತ್ರಿ ಶ್ರಮವಹಿಸಿ ಹೇಮೆಯ ನೀರಿನಿಂದ ತಾಲೂಕಿನ ಕೆರೆ - ಕಟ್ಟೆಗಳನ್ನು ತುಂಬಿಸಬೇಕಾಗಿತ್ತು. ಆದರೆ, ಅವರ ಕರ್ತವ್ಯ ಲೋಪಕ್ಕೆ ಕೆರೆಗಳು ಬರಿದಾಗಿದ್ದು ರೈತ ಸಮುದಾಯ ಸಂಕಷ್ಟಕ್ಕೆ ಸಿಲುಕಿದೆ.

ವಳಗೆರೆ ಮೆಣಸ, ಅಗ್ರಹಾರ ಬಾಚಹಳ್ಳಿ ಮತು ಕೆ.ಆರ್‌.ಪೇಟೆಯ ದೇವೀರಮ್ಮಣ್ಣಿ ಕೆರೆ ಸೇರಿದಂತೆ ಶೇ.20 ರಷ್ಟು ಕೆರೆಗಳು ಮಾತ್ರ ಹೇಮೆಯ ನೀರು ಕಂಡಿವೆ. ಉಳಿದಂತೆ ಎಲ್ಲ ಕೆರೆಗಳು ಖಾಲಿ ಖಾಲಿಯಾಗಿವೆ. ಕೆರೆ ಅಚ್ಚುಕಟ್ಟು ಪ್ರದೇಶದ ಸುಮಾರು 5255 ಎಕರೆ ಪ್ರದೇಶದಲ್ಲಿ ರೈತರು ಬೆಳೆ ನಷ್ಟಕ್ಕೊಳಗಾಗಿದ್ದಾರೆ.

ಅಂತರ್ಜಲ ಕುಸಿತ:

ಕೆರೆಗಳು ಬರಿದಾಗಿರುವುದರಿಂದ ತಾಲೂಕಿನಾದ್ಯಂತ ಅಂತರ್ಜಲ ಮಟ್ಟವೂ ಕುಸಿದಿದೆ. ಇದರ ಪರಿಣಾಮ ಕೆರೆ ಮತ್ತು ಕಾಲುವೆ ನೀರಾವರಿಗಲ್ಲದೆ ಅಂತರ್ಜಲವನ್ನು ಅಧರಿಸಿ ಕೃಷಿ ಮಾಡುತ್ತಿದ್ದ ಸಾವಿರಾರು ಕೃಷಿಕರ ಮೇಲಾಗಿದೆ. ತಾಲೂಕಿನಲ್ಲಿ ಸುಮಾರು 26 ಸಾವಿರಕ್ಕೂ ಅಧಿಕ ಸಕ್ರಮ ಪಂಪ್ ಸೆಟ್ ಆಧಾರಿತ ಬೇಸಾಯಗಾರರಿದ್ದರೆ 12 ಸಾವಿರಕ್ಕೂ ಅಧಿಕ ಅನಧಿಕೃತ ಪಂಪ್ ಸೆಟ್ ಬೇಸಾಯಗಾರರಿದ್ದಾರೆ. ಇವರೆಲ್ಲರ ಕೃಷಿ ಬದುಕಿನ ಮೇಲೆ ಅಂತರ್ಜಲ ಕುಸಿತದ ಪರಿಣಾಮ ಉಂಟಾಗುತ್ತಿದೆ.

ಅಂತರ್ಜಲ ಮಟ್ಟ ಕುಸಿದಿರುವ ಕಾರಣ ಕೆಲವು ಕಡೆ ಈಗಾಗಲೇ ಕೊಳವೆ ಬಾವಿಗಳು ಸ್ಥಗಿತಗೊಂಡಿವೆ. ರೈತರು ಕಷ್ಟಪಟ್ಟು ಬೆಳೆದಿರುವ ಬೆಳೆ ಕಣ್ಣೆದುರೇ ಒಣಗುವ ಆತಂಕ ಕಾಣಿಸಿಕೊಂಡಿದೆ.

ಕುಡಿಯುವ ನೀರಿಗೂ ಹಾಹಾಕಾರ:

ನೀರಾವರಿ ಇಲಾಖೆ ಎಂಜಿನಿಯರ್‌ಗಳು ಬದ್ಧತೆಯಿಂದ ಕೆರೆಗಳನ್ನು ತುಂಬಿಸಿದ ಪರಿಣಾಮ ತಾಲೂಕಿನ ಕುಡಿಯುವ ನೀರು ಪೂರೈಕೆ ಜಾಲದ ಮೇಲೂ ಪ್ರತಿಕೂಲ ಪರಿಣಾಮ ಬೀರುವ ಸನ್ನಿವೇಶ ಎದುರಾಗಿದೆ. ತಾಲೂಕಿನ 34 ಗ್ರಾಪಂ ವ್ಯಾಪ್ತಿಯ 365 ಕ್ಕೂ ಅಧಿಕ ಹಳ್ಳಿಗಳು ಬೋರ್ ವೆಲ್ ಆಧಾರಿತ ಕುಡಿಯುವ ನೀರು ವ್ಯವಸ್ಥೆಯ ಜಾಲದಲ್ಲಿವೆ. ಅಂತರ್ಜಲ ಕುಸಿತದಿಂದ ಈಗಾಗಲೇ ಕೆಲವೆಡೆ ಬೋರ್ ವೆಲ್‌ಗಳು ಸ್ಥಗಿತಗೊಳ್ಳುತ್ತಿವೆ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ಹಾಹಾಕಾರ ಉಂಟಾಗಲಿದೆ.

ಕ್ಷೇತ್ರದ ಶಾಸಕರು ಮತ್ತು ಕಾಂಗ್ರೆಸ್ ಮುಖಂಡರು ಸರ್ಕಾರದ ಮೇಲೆ ಒತ್ತಡ ಹಾಕಿ ಹೇಮಾವತಿ ಕಾಲುವೆಯಲ್ಲಿ ಮತ್ತೆ ನೀರು ಹರಿಸಿ ತಾಲೂಕಿನ ಕೆರೆ-ಕಟ್ಟೆಗಳನ್ನು ತುಂಬಿಸಬೇಕು. ಇಲ್ಲವಾದರೆ ಮುಂದಿನ ದಿನಗಳಲ್ಲಿ ರೈತರು ಬೆಳೆ ನಷ್ಟಕ್ಕೊಳಗಾಗಿ ಜನ-ಜಾನುವಾರುಗಳಿಗೂ ನೀರಿನ ಕೊರತೆ ಉಂಟಾಗುವ ಜೊತೆಗೆ ರೈತರು ಆತ್ಮಹತ್ಯೆಯ ದಾರಿ ತುಳಿಯಬೇಕಾಗುತ್ತದೆ.

ಕಾರಿಗನಹಳ್ಳಿ ಪುಟ್ಟೇಗೌಡ, ತಾಲೂಕು ರೈತ ಸಂಘದ ಅಧ್ಯಕ್ಷ.

Follow Us:
Download App:
  • android
  • ios