ಕೃಷ್ಣ ದರ್ಶನಕ್ಕೆ ಬಂದು ಕಳೆದೊಂದು ತಿಂಗಳಿಂದ ಉಡುಪಿಯಲ್ಲಿ ಉಳಿದಿದ್ದ ತಾಯಿಮಗ ಇಬ್ಬರೂ ಬಹಳ ಸಂತೋಷದಿಂದ ಯಾದಗಿರಿ ಜಿಲ್ಲೆಯ ವಲಸೆ ಕಾರ್ಮಿಕರೊಂದಿಗೆ ಮರಳಿ ಊರಿಗೆ ಹೊರಟರು. ತಮ್ಮನ್ನು ಚೆನ್ನಾಗಿ ನೋಡಿಕೊಂಡ ಜಿಲ್ಲಾಧಿಕಾರಿಗೆ ಕೃತಜ್ಞತೆ ಹೇಳುವಾಗ ರಮೇಶ್ ಗದ್ಗದಿತರಾಗಿದ್ದರು. 

ಉಡುಪಿ(ಏ.26): ಶನಿವಾರ ಊರಿಗೆ ತೆರಳಿದ ಕಾರ್ಮಿಕರ ಬಸ್ಸಲ್ಲಿ ಯಾದಗಿರಿ ಜಿಲ್ಲೆಯ ವಯಸ್ಸಾದ ತಾಯಿ ಮತ್ತವರ ಮಗ ರಮೇಶ್‌ ಕೂಡ ಇದ್ದರು. ರಮೇಶ್‌ ಅವರು ತನ್ನ ತಾಯಿಯನ್ನು ಉಡುಪಿ ಕೃಷ್ಣನ ದರ್ಶನಕ್ಕೆಂದು ಕರೆತಂದಿದ್ದರು.

ಉಡುಪಿಗೆ ಬಂದಿಳಿದ ದಿನವೇ ಲಾಕ್‌ಡೌನ್‌ ಘೋಷಣೆಯಾಯಿತು. ಅತ್ತ ಕೃಷ್ಣಮಠಕ್ಕೂ ಜನರ ಭೇಟಿಯನ್ನು ನಿಷೇಧಿಸಲಾಯಿತು. ಇದರಿಂದ ರಮೇಶ್‌ ಮತ್ತವರ ತಾಯಿಗೆ ಕೃಷ್ಣಮಠದೊಳಗೆ ಹೋಗುವ ಅವಕಾಶ ಸಿಕ್ಕಲಿಲ್ಲ, ಹೊರಗಿನಿಂದ ಕನಕನ ಕಿಂಡಿಯಲ್ಲಿ ಕೃಷ್ಣನನ್ನು ನೋಡಿ, ಬಂದದ್ದಕ್ಕೆ ಅಷ್ಟಾದರೂ ಸಿಕ್ಕಿತ್ತಲ್ಲ ಎಂದು ತೃಪ್ತಿಪಟ್ಟುಕೊಂಡರು.

ಮಂಗಳೂರಲ್ಲಿದ್ದ 2 ಸಾವಿರಕ್ಕೂ ಹೆಚ್ಚು ವಲಸೆ ಕಾರ್ಮಿಕರಿಗೆ ಮನೆ ಸೇರೋ ಸಂತಸ

ಆದರೆ, ನಿಜವಾದ ಕಷ್ಟಅಮೇಲೆ ಆರಂಭವಾಯಿತು, ಅವರಿಗೆ ಊರಿಗೆ ಹಿಂದಕ್ಕೆ ಹೋಗುವುದಕ್ಕೆ ಬಸ್ಸುಗಳು ಸ್ಥಗಿತಗೊಂಡಿದ್ದವು. ಮುಂದೇನು ಎಂದು ತೋಚದೇ 3 ದಿನಗಳ ಕಾಲ ತಾಯಿಮಗ ಇಬ್ಬರೂ ರಥಬೀದಿಯಲ್ಲಿರುವ ಕನಕದಾಸರ ಗುಡಿಯ ಜಗಲಿಯಲ್ಲಿ ಮಲಗಿ, ಯಾರೋ ಕೊಟ್ಟತಿಂಡಿಯನ್ನು ತಿಂದು ಕಾಲಕಳೆದರು. ನಂತರ ಮಹಿಳಾ ಪೊಲೀಸ್‌ ಸಿಬ್ಬಂದಿಯೊಬ್ಬರು ಅವರು ಅಲ್ಲೇಕೆ ಇದ್ದಾರೆಂದು ವಿಚಾರಿಸಿ, ಅವರನ್ನು ನಗರದ ಬೋರ್ಡ್‌ ಶಾಲೆಯ ನಿರಾಶ್ರಿತರ ಕೇಂದ್ರಕ್ಕೆ ಕರೆದೊಯ್ದು ಸೇರಿಸಿದರು.

ಸೀಲ್‌ಡೌನ್ ಆಸ್ಪತ್ರೆಯಲ್ಲಿ ಕೆಲಸ ಮಾಡಿದ ನರ್ಸ್‌ ಕುಟುಂಬ ಕ್ವಾರಂಟೈನ್‌ಗೆ

ಶನಿವಾರ ಉಡುಪಿಯಲ್ಲಿದ್ದ ಯಾದಗಿರಿ ಮತ್ತು ಇತರ ಜಿಲ್ಲೆಗಳ ವಲಸೆ ಕಾರ್ಮಿಕರನ್ನು ಕರೆದೊಯ್ಯುವುದಕ್ಕೆ ಜಿಲ್ಲಾಡಳಿತ ಬಸ್ಸಿನ ವ್ಯವಸ್ಥೆ ಮಾಡಿತ್ತು. ಕಳೆದೊಂದು ತಿಂಗಳಿಂದ ಇಲ್ಲಿಯೇ ಉಳಿದಿದ್ದ ತಾಯಿಮಗ ಇಬ್ಬರೂ ಬಹಳ ಸಂತೋಷದಿಂದ ಯಾದಗಿರಿ ಜಿಲ್ಲೆಯ ವಲಸೆ ಕಾರ್ಮಿಕರೊಂದಿಗೆ ಮರಳಿ ಊರಿಗೆ ಹೊರಟರು.

ಚೆನ್ನಾಗಿ ನೋಡಿಕೊಂಡರು:

ಮನೆಯವರಿಗೆ ಕರೆ ಮಾಡಿ ತಾವು ಉಡುಪಿಯಲ್ಲಿ ಚೆನ್ನಾಗಿದ್ದೇವೆ ಎಂದು ಹೇಳಿದ್ದೆ, ನಿಜವಾಗಿಯೂ ಇಲ್ಲಿ ನಮ್ಮನ್ನು ಚೆನ್ನಾಗಿ ನೋಡಿಕೊಂಡರು. ಪ್ರತಿದಿನ ಹಾಲು, ತಿಂಡಿ, ಊಟ ಕೊಟ್ಟರು. ಬಟ್ಟೆಬರೆ, ಹೊದಿಕೆ ಕೂಡ ಕೊಟ್ಟರು. ಜಿಲ್ಲಾಧಿಕಾರಿ ಅವರು ಇಂತಹ ನಿರಾಶ್ರಿತರ ಕೇಂದ್ರವೊಂದನ್ನು ಮಾಡಿರದೇ ಇದ್ದಿದ್ದರೆ ತಾನು ಮತ್ತು ತನ್ನ ವಯಸ್ಸಾದ ತಾಯಿ ಇವತ್ತಿಗೂ ರಸ್ತೆ ಬದಿಯಲ್ಲಿ ಮಲಗಬೇಕಾಗಿತ್ತು ಎಂದು ಊರಿಗೆ ಹೊರಡುವಾಗ ರಮೇಶ್‌ ಗದ್ಗದಿತರಾಗಿ ಜಿಲ್ಲಾಧಿಕಾರಿಗೆ ಕೃತಜ್ಞತೆ ಸಲ್ಲಿಸಿದರು.