ಮೀನು ಮಾರಾಟಗಾರ ಯುವಕಗೆ ಸೋಂಕು: ದಕ್ಕೆ ಸೀಲ್‌ಡೌನ್
ಮಂಗಳೂರು ನಗರದ ಹೊರವಲಯದ ಎಕ್ಕೂರಿನ ಮೀನು ಮಾರಾಟ ಮಾಡುವ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಸೋಮವಾರ ಪಾಸಿಟಿವ್ ವರದಿ ಬಂದಿದೆ.
ಮಂಗಳೂರು(ಜೂ.24): ನಗರದ ಹೊರವಲಯದ ಎಕ್ಕೂರಿನ ಮೀನು ಮಾರಾಟ ಮಾಡುವ ಯುವಕನಿಗೆ ಕೊರೋನಾ ಸೋಂಕು ದೃಢಪಟ್ಟಿದೆ. ಎಕ್ಕೂರು ನಿವಾಸಿ 27 ವರ್ಷದ ಯುವಕನಿಗೆ ಸೋಮವಾರ ಪಾಸಿಟಿವ್ ವರದಿ ಬಂದಿತ್ತು. ಈ ಯುವಕ ಮಂಗಳೂರಿನಲ್ಲಿ ಮನೆಗಳಿಗೆ ತೆರಳಿ ಮೀನು ಮಾರಾಟ ಮಾಡುತ್ತಿದ್ದ ಎಂದು ತಿಳಿದುಬಂದಿದ್ದು, ಆತಂಕ ಮತ್ತಷ್ಟುಹೆಚ್ಚಿದೆ. ಬಂದರಿಗೆ ತೆರಳಿ ಮೀನು ಖರೀದಿಸಿ ಮನೆ ಮನೆಗಳಿಗೆ ಮಾರಾಟ ಮಾಡುತ್ತಿದ್ದ. ಆತನ ಜೊತೆ ಸಂಪರ್ಕವಿದ್ದವರ ಪತ್ತೆ ಕಾರ್ಯದಲ್ಲಿ ಆರೋಗ್ಯ ಇಲಾಖೆ ನಿರತವಾಗಿದೆ.
ಮೀನುಗಾರಿಕಾ ದಕ್ಕೆ ಸೀಲ್‌ಡೌನ್
ಮೀನು ವ್ಯಾಪಾರಿ ಯುವಕನಿಗೆ ಕೊರೋನಾ ಪಾಸಿಟಿವ್ ಬಂದ ಬೆನ್ನಲ್ಲೇ ಮಂಗಳೂರು ಮೀನುಗಾರಿಕಾ ದಕ್ಕೆಯನ್ನು ಅಧಿಕಾರಿಗಳು ಸೀಲ್‌ಡೌನ್ ಮಾಡಿದ್ದಾರೆ. ದಕ್ಕೆಯಲ್ಲಿ ಪ್ರಸ್ತುತ ಹಲವು ಮಂದಿಗೆ ಅನಾರೋಗ್ಯ ಕಾಡುತ್ತಿರುವ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಸೀಲ್‌ಡೌನ್ ನಿರ್ಧಾರ ಕೈಗೊಳ್ಳಲಾಗಿದೆ.
ಎಕ್ಕೂರಿನ ಮೀನು ವ್ಯಾಪಾರಿ ಯುವಕ ದಕ್ಕೆಯಿಂದ ಮೀನು ಖರೀದಿಸಿ ಮನೆಮನೆಗೆ ಮಾರಾಟಕ್ಕೆ ಹೋಗುತ್ತಿದ್ದ. ದಕ್ಕೆಯಲ್ಲಿ ಇತರ ರಾಜ್ಯದವರೂ ಬರುತ್ತಿದ್ದು, ಅವರಿಂದ ಸೋಂಕು ಹರಡಿರಬಹುದು ಎಂದು ಅಂದಾಜಿಸಲಾಗಿದೆ. ಇನ್ನೂ ಅನೇಕರಿಗೆ ಸೋಂಕು ತಗುಲುವ ಅಪಾಯ ಕಂಡುಬಂದಿದೆ.
'ಕೊರೋನಾ ಚಿಕಿತ್ಸೆಗೆ ನಿಗದಿಪಡಿಸಿರೋ ದರ ಸೋಂಕಿತರಿಗೆ ಹೃದಯಾಘಾತವಾಗುವಂತಿದೆ '
ವ್ಯವಹಾರ ನಿಷೇಧಕ್ಕೆ ಒತ್ತಾಯ: ಮಂಗಳೂರು ದಕ್ಕೆಯಲ್ಲಿ ಪ್ರಸ್ತುತ ಹಲವು ವರ್ತಕರಿಗೆ ಮತ್ತು ಇತರರಿಗೆ ಅನಾರೋಗ್ಯ, ಸೋಂಕು ಲಕ್ಷಣಗಳು ಕಂಡುಬಂದಿರುವುದರಿಂದ ದಕ್ಕೆಯ ಸರ್ವ ವ್ಯವಹಾರವನ್ನು ಬುಧವಾರದಿಂದ 10 ದಿನಗಳವರೆಗೆ ಸ್ಥಗಿತಗೊಳಿಸಲು ದಕ್ಕೆ ರಖಂ ಮೀನು ವ್ಯಾಪಾರಿಗಳು ನಿರ್ಧರಿಸಿದ್ದಾರೆ.
ವ್ಯವಹಾರ ಸ್ಥಗಿತಗೊಳಿಸಿದರೂ ಕೂಡ ಕೆಲವು ವ್ಯವಹಾರಸ್ಥರು ಅನಧಿಕೃತವಾಗಿ ಇತರೆಡೆ ವ್ಯವಹಾರ ಆರಂಭಿಸದಂತೆ ಜಿಲ್ಲಾಡಳಿತ ನಿಷೇಧ ಹೇರಬೇಕು ಎಂದು ಮಂಗಳೂರು ದಕ್ಕೆ ಹಸಿಮೀನು ವ್ಯಾಪಾರಸ್ಥರು ಮತ್ತು ಕಮಿಷನ್ ಏಜೆಂಟರ ಸಂಘದ ಕಾರ್ಯಾಧ್ಯಕ್ಷ ಅಶ್ರಫ್ ಒತ್ತಾಯಿಸಿದ್ದಾರೆ. ಜತೆಗೆ ಉಳ್ಳಾಲ ಕೋಟೆಪುರ, ಹೊಯ್ಗೆ ಬಜಾರ್, ಬೆಂಗ್ರೆ, ಫರಂಗಿಪೇಟೆ, ವಿಆರ್‌ಎಲ್ ಸಮೀಪ, ಕುದ್ರೋಳಿ, ಕಲ್ಲಾಪು, ಮಾರಿಪಳ್ಳ ಇತ್ಯಾದಿ ಕಡೆಗಳಲ್ಲೂ ಮತ್ಸ್ಯ ವ್ಯವಹಾರ ನಿಷೇಧಿಸಿ ಆದೇಶ ಹೊರಡಿಸಬೇಕು ಎಂದೂ ಅವರು ಆಗ್ರಹಿಸಿದ್ದಾರೆ.