ಮಂಗಳೂರು[ಮಾ.20]: ವಿದೇಶದಿಂದ ವಿಮಾನದಲ್ಲಿ ಬಂದ ವ್ಯಕ್ತಿಯೊಬ್ಬರನ್ನು ತಪಾಸಣೆ ನಡೆಸಿ ಗೃಹಬಂಧನದಲ್ಲಿ ಇರಿಸಲಾತ್ತು. ಆದರೂ ಅವರು ಬುಧವಾರ ಕುಟುಂಬದೊಂದಿಗೆ ಕಟೀಲಿಗೆ ಆಗಮಿಸಿದ್ದರು. ವಿಷಯ ತಿಳಿದ ಕೂಡಲೇ ಬಜಪೆ ಪೊಲೀಸರು ಅವರನ್ನು ಹುಡುಕಿ ವಾಪಸ್‌ ಕರೆದುಕೊಂಡು ಹೋಗಿದ್ದಾರೆ.

ಕಳೆದ ವಾರ ದುಬೈನಿಂದ ಆಗಮಿಸಿದ್ದ ಈ ವ್ಯಕ್ತಿಯನ್ನು 14 ದಿನಗಳ ಗೃಹಬಂಧನದಲ್ಲಿರಿಸಲಾಗಿತ್ತು. ಆದಾಗ್ಯೂ ಕುಟುಂಬಸ್ಥರೊಂದಿಗೆ ಕಟೀಲು ದೇಗುಲಕ್ಕೆ ವ್ಯಕ್ತಿ ಆಗಮಿಸಿದ್ದ. ದೇವಳದ ಒಳಗೂ ಪ್ರವೇಶಿಸಿದ ವಿಷಯ ತಿಳಿದು ಪೊಲೀಸರು ಬಂದು ವಾಪಸ್‌ ಕರೆದುಕೊಂಡು ಹೋಗಿದ್ದಾರೆ.

15ದಿನ ಹಿಂದೆ ವಿದೇಶದಿಂದ ಬಂದವರ ಮಾಹಿತಿ ಸಂಗ್ರಹ

ಕಟೀಲು ದೇವಳದಲ್ಲಿ ಕೊರೋನಾ ಬಗ್ಗೆ ಭಕ್ತರಲ್ಲಿ ಜಾಗೃತಿ ಮೂಡಿಸುವ ಹಾಗೂ ಮಾಹಿತಿ ನೀಡುವ ನಿಟ್ಟಿನಲ್ಲಿ ಕಟೀಲು ದೇವಳ ಹಾಗೂ ದುರ್ಗಾ ಸಂಜೀವನಿ ಮಣಿಪಾಲ್‌ ಆಸ್ಪತ್ರೆ ವತಿಯಿಂದ ಬ್ಯಾನರ್‌ಗಳನ್ನು ಅಳವಡಿಸಲಾಗಿದೆ. ಗುರುವಾರದಂದು ಕಟೀಲಿನಲ್ಲಿ ದೇವರಿಗೆ ದೈನಂದಿನ ಪೂಜೆ ನಡೆಸಿದ್ದು, ಯಾವುದೇ ಸೇವೆ ನಡೆದಿಲ್ಲ. ಸಂಪ್ರದಾಯದಂತೆ ಎಲ್ಲ ಮೇಳಗಳ ಯಕ್ಷಗಾನ ನಡೆದಿದೆ. ಮೂಲ್ಕಿಯ ಬಪ್ಪನಾಡು ದೇವಳದಲ್ಲಿ ಕೂಡ ದೈನಂದಿನ ಪೂಜೆ ನಡೆದಿದ್ದು ಯಾವುದೇ ಸೇವಾ ಚಟುವಟಿಕೆ ನಡೆದಿಲ್ಲ.

ಕೊರೋನಾ ಚಿಕಿತ್ಸೆ ತಪ್ಪಿಸಿಕೊಂಡಿದ್ದ ವ್ಯಕ್ತಿ ಪೊಲೀಸರ ನೆರವಿನಿಂದ ಆಸ್ಪತ್ರೆಗೆ

ಕೊರೋನಾ ವೈರಸ್‌ ಹರಡದಂತೆ ಮುಂಜಾಗ್ರತಾ ಕ್ರಮವಾಗಿ ಮೂಲ್ಕಿಯಲ್ಲಿ ಹೆಚ್ಚಿನ ಜನಸಂಖ್ಯೆಯಿರುವ ಲಿಂಗಪ್ಪಯ್ಯ ಕಾಡು ಪರಿಸರದಲ್ಲಿ ಜನರಿಗೆ ಮಾಹಿತಿ ನೀಡುವ ಕಾರ್ಯ ನಡೆಯುತ್ತಿದೆ. ಇಲ್ಲಿಗೆ ಪ್ರತಿದಿನ ಕಲ್ಬುರ್ಗಿ, ಬಿಜಾಪುರ ಕಡೆಯಿಂದ ಬಸ್‌ ವ್ಯವಸ್ಥೆಯಿದ್ದು, ಬಸ್‌ನಲ್ಲಿ ಬರುವವರ ಮೇಲೆ ನಿಗಾ ಇರಿಸಲಾಗಿದೆ. ಕಲ್ಬುರ್ಗಿ ಜಿಲ್ಲಾಡಳಿತವು ಹೊರ ಜಿಲ್ಲೆಗಳಿಗೆ ಹೋಗುವ ಬಸ್‌ ಸಂಚಾರವನ್ನು ಸ್ಥಗಿತಗೊಳಿಸಿರುವುದರಿಂದ ಇಲ್ಲಿಗೆ ವಲಸೆ ಬರುವ ಕಾರ್ಮಿಕರ ಸಂಖ್ಯೆ ಕಡಿಮೆಯಾಗಿದೆ.