ಕಾರ್ಕಳ(ಆ.14): ಒಂದು ಕಡೆ ನಷ್ಟದ ಭೀತಿ, ಮತ್ತೊಂದು ಕಡೆ ಫಲವತ್ತಾದ ಭೂಮಿಯಿದ್ದರೂ ಕೃಷಿಯತ್ತ ಒಲವು ತೋರದೆ ಭೂಮಿಯನ್ನು ಖಾಲಿ ಬಿಟ್ಟವರ ಸಂಖ್ಯೆಯೇ ಹೆಚ್ಚು. ಅಂಥದ್ದರಲ್ಲಿ ಇಲ್ಲೊಬ್ಬ ರೈತ ಬಂಡೆಯ ಮೇಲೆ ಬತ್ತ ಕೃಷಿಯ ಜತೆ ವಿವಿಧ ಕೃಷಿಯೇತರ ಫಸಲು ಬೆಳೆಸುವ ಮೂಲಕ ಇತರ ಕೃಷಿಕರಿಗೆ ಮಾದರಿಯಾಗಿದ್ದಾರೆ.

ಬಂಡೆಕಲ್ಲುಗಳೇ ತುಂಬಿದ್ದ ಭೂಮಿ:

ತಾಲೂಕಿನ ಕುಕ್ಕುಂದೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಕ್ರೆ ನಿವಾಸಿ ಸಾಧು ಮೇರ (55) ಈ ಅಪ್ರತಿಮ ಸಾಧಕ. ತನ್ನಲ್ಲಿರುವ 1.80 ಎಕರೆ ಭೂಮಿಯಲ್ಲಿ ವಿವಿಧ ಕೃಷಿ ಮಾಡುವ ಮೂಲಕ ಈ ಸಾಧನೆಗೈದಿದ್ದಾರೆ. ವಿಶೇಷ ಎಂದರೆ ಇದ್ದ ಭೂಮಿ ಎಲ್ಲವೂ ಬಂಡೆಕಲ್ಲುಗಳಿಂದ ಆವೃತವಾಗಿದ್ದು, ಅದರ ಮೇಲೆ ಅವರು ಕೃಷಿ ನಡೆಸಿ ಯಶಸ್ವಿಯಾಗಿರುವುದು ಸವಾಲೇ ಸರಿ.

ಕರ್ನಾಟಕ ಪ್ರವಾಹದ ಹೆಚ್ಚಿನ ಸುದ್ದಿಗಾಗಿ ಇಲ್ಲಿ ಕ್ಲಿಕ್ಕಿಸಿ

ನಕ್ರೆ ಕಲ್ಲು ಎನ್ನುವುದು ಇತಿಹಾಸ ಪ್ರಸಿದ್ದ. ಅದರ ಬುಡಭಾಗದಲ್ಲಿರುವ ಒಂಟೆಚಾರು ಎಂಬ ಪ್ರದೇಶದಲ್ಲಿ ಅವರ ಮನೆಯಿದೆ. ಸುತ್ತಲೂ ಕಲ್ಲಿನಿಂದ ಆವರಿಸಿರುವ ಭೂಮಿ. ಅದೃಷ್ಟ ಎಂದರೆ ಕೇವಲ ಹತ್ತು ಅಡಿ ಆಳದ ಬಾವಿಯಲ್ಲಿ ವರ್ಷವಿಡೀ ಸಾಕಾಗುವಷ್ಟುಜಲಧಾರೆ. ಇದು ಅವರ ಪಾಲಿಗೆ ವರವಾಗಿ ಪರಿಣಮಿಸಿದ್ದು, ಇದೇ ನೀರನ್ನಾಧರಿಸಿದ ಸಾಧು ಮೇರ ಈ ವಿಭಿನ್ನ ಕೃಷಿ ಕಾಯಕಕ್ಕೆ ಕೈ ಹಾಕಿ ಯಶಸ್ಸು ಕಂಡಿದ್ದಾರೆ.

ಏನೇನು ಬೆಳೆ..?:

ಬಾಳೆ ಗಿಡಗಳಿವೆ. ಬಾಳೆಕಾಯಿ ಮತ್ತು ಎಲೆ ಮಾರಾಟವಾಗುತ್ತಿದೆ. ತಲಾ ನೂರಕ್ಕೂ ಮಿಕ್ಕಿದ ಅಡಕೆ ಮತ್ತು ತೆಂಗಿನ ತೋಟವಿದೆ. ಇನ್ನೊಂದೆಡೆ ಕರಿಮೆಣಸು, ಗೇರು ಇದೆ. ಅದರ ನಡುವೆಯೇ ಮಿಶ್ರ ಬೆಳೆಗಳನ್ನು ಬೆಳೆಯಲಾಗುತ್ತಿದೆ. ಮಳೆಗಾಲ ಮತ್ತು ಬೇಸಗೆಯಲ್ಲಿ ವಿವಿಧ ತರಕಾರಿಗಳ ಉತ್ಪಾದನೆ ಇದೇ ಭೂಮಿಯಲ್ಲಿ ನಡೆಯುತ್ತಿದೆ. ಬದುಕಿಗೆ ಬೇಕಾದ ಆದಾಯವನ್ನು ಕೃಷಿಯಲ್ಲಿ ಈ ಕುಟುಂಬ, ಕೃಷಿ ಬದುಕಿನಲ್ಲೇ ತೃಪ್ತಿ ಕಂಡಿದೆ. ಕೃಷಿಗೆ ಬೇಕಾದ ಹಟ್ಟಿಗೊಬ್ಬರವನ್ನು ಕೂಡಾ ಮನೆಯಲ್ಲೇ ಸಿದ್ಧಪಡಿಸಲಾಗುತ್ತಿದೆ.

ಬಂಡೆ ಕಲ್ಲಿನ ನಡುವೆ ಕೃಷಿ:

ಜಾಗಕ್ಕೆ ಹೊರಗಿನಿಂದಲೇ ಮಣ್ಣು ತಂದು ತುಂಬಿಸಲಾಗಿದೆ. ಅದರಲ್ಲೂ ಬತ್ತದ ಕೃಷಿ ಮತ್ತಷ್ಟುಗಮನ ಸೆಳೆಯುತ್ತಿದೆ. ಸುಮಾರು 55 ಸೆಂಟ್ಸ್‌ ಭೂಮಿ ಅಕ್ಷರಶಃ ಬಂಡೆಗಳಿಂದ ಆವರಿಸಿದೆ. ಬಂಡೆ ಕೊರೆದು ತೆಗೆದು ಸುಮಾರು ನಾಲ್ಕು ಅಡಿಗಳಷ್ಟುಮಣ್ಣು ತುಂಬಿಸಲಾಗಿದೆ. ಮಳೆಗಾಲ ಆರಂಭವಾಗುತ್ತಲೇ ಯಾಂತ್ರೀಕರಣದಿಂದ ಗದ್ದೆಯನ್ನು ಉಳುಮೆ ಮಾಡಿ ಬತ್ತ ಕೃಷಿ ಮಾಡಲಾಗುತ್ತದೆ. ವರ್ಷಕ್ಕೆ ನಾಲ್ಕು ಕ್ವಿಂಟಲ್‌ ಅಕ್ಕಿ ಪಡೆಯಲಾಗುತ್ತಿದ್ದು, ಮನೆಗೆ ಬೇಕಾಗುವಷ್ಟುಆಹಾರ, ಹಸುಗಳಿಗೆ ಬೇಕಾಗುವಷ್ಟುಒಣಹುಲ್ಲನ್ನು ಪಡೆಯಲಾಗುತ್ತಿದೆ. ಬೇಸಗೆಯಲ್ಲಿ ವಿವಿಧ ಬಗೆಯ ತರಕಾರಿಯನ್ನು ಇದೇ ಗದ್ದೆಗಳಲ್ಲಿ ಬೆಳೆಯಲಾಗುತ್ತದೆ.

ದೇವಳದ ಆನೆ ಇಂದಿರಾ ಇನ್ನಿಲ್ಲ, ಕೊಲ್ಲೂರು ಪೇಟೆ ಬಂದ್

ಸಾಧು ಮೇರ ಅವರದ್ದು ಹೋರಾಟದ ಬದುಕು. ಸ್ವಂತ ಶ್ರಮದಿಂದಲೇ ಬಂಡೆ ಕಲ್ಲುಗಳಿಂದ ಕೂಡಿದ ಭೂಮಿಯನ್ನು ಕೃಷಿ ಭೂಮಿಯನ್ನಾಗಿ ಪರಿವರ್ತಿಸಿದ್ದಾರೆ. ದಿನದ ಬೆಳಗ್ಗೆ ಮತ್ತು ಸಾಯಂಕಾಲ ಮಾತ್ರ ಮನೆಯಲ್ಲಿ ಕೃಷಿ ಕಾಯಕ ನಡೆಸುತ್ತಿದ್ದಾರೆ. ದಿನ ಕೂಲಿ ಕೆಲಸಕ್ಕೆ ತೆರಳುವ ಅವರದ್ದು ಕಠಿಣವಾದ ದುಡಿಮೆ. ಪತ್ನಿ ಶಾಂತಾ ಮೇರ ಅವರೊಂದಿಗೆ ಜೀವನ ನಡೆಸುತ್ತಿದ್ದಾರೆ. ದಂಪತಿಗೆ ಮೂವರು ವಿವಾಹಿತ ಹೆಣ್ಣು ಮಕ್ಕಳಿದ್ದು, ಅವರು ಪತಿಯ ಮನೆಯಲ್ಲಿದ್ದಾರೆ. ಕೃಷಿಯಲ್ಲೇ ಸಂತೃಪ್ತಿಯ ಬದುಕು ಈ ದಂಪತಿಯದ್ದು.

ಬರಡು ಭೂಮಿಯಲ್ಲಿ ಏನೂ ಇಲ್ಲ ಎನ್ನುವ ಬದಲು ಆ ಭೂಮಿ ಹಸನಾಗಿಸಿ:

ಕೃಷಿಯಲ್ಲಿ ಸಾಕಷ್ಟುಲಾಭ ಗಳಿಸಬಹುದು. ಆದರೆ ದುಡಿಯುವ ಮನಸ್ಸು ಬೇಕು. ಕಲ್ಲುಗಳಿಂದ ಕೂಡಿದ ಬರಡಾದ ಭೂಮಿಯಲ್ಲಿ ಏನೂ ಇಲ್ಲ ಎಂದು ನಾನು ಸುಮ್ಮನೆ ಕುಳಿತುಕೊಳ್ಳದೆ ಪ್ರಯತ್ನಿಸಿದ ಫಲವಾಗಿ, ಕೃಷಿಯಲ್ಲಿ ಆದಾಯ ಗಳಿಸಲು ಸಾಧ್ಯವಾಯಿತು. ಈ ಪ್ರಯತ್ನವನ್ನು ಎಲ್ಲರೂ ನಡೆಸಬೇಕು. ತಮಗೆ ಬೇಕಾದ ಆಹಾರವನ್ನು ತಾವೇ ಉತ್ಪಾದಿಸುವ ಪ್ರಯತ್ನ ಮಾಡಬೇಕು ಎನ್ನುತ್ತಾರೆ ಸಾಧು ಮೇರ.