ಬೀದರ್‌ (ಫೆ.08): ಮುಖ್ಯಮಂತ್ರಿ ಬಿಎಸ್‌ ಯಡಿಯೂರಪ್ಪ ಅವರ ವಿರುದ್ಧ ಅವಹೇಳನಾಕಾರಿಯಾಗಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದು ಸಾವಿನ ಎಚ್ಚರಿಕೆ ಕೊಟ್ಟಿದ್ದ ವ್ಯಕ್ತಿಯ ವಿರುದ್ಧ ತಾಲೂಕಿನ ಮನ್ನಳ್ಳಿ ಪೊಲೀಸ್‌ ಠಾಣೆಯಲ್ಲಿ ಬಿಜೆಪಿ ಮುಖಂಡರು ನೀಡಿದ ದೂರಿನ ಹಿನ್ನೆಲೆಯಲ್ಲಿ ಸದರಿ ವ್ಯಕ್ತಿಗೆ ನೋಟಿಸ್‌ ನೀಡಲಾಗಿದೆ.

ಪ್ರಧಾನಿ ನರೇಂದ್ರ ಮೋದಿ ಹಾಗೂ ಅಮಿತ್‌ ಶಾ ಅವರಿಂದಲೇ ನಾನು ಎಲ್ಲ ಸಂಕಷ್ಟಗಳಿಂದ ಹೊರಬಂದಿದ್ದೇನೆ, ಅವರು ಇರುವವರೆಗೆ ನಾನು ಸಿಎಂ ಆಗಿರುತ್ತೇನೆ ಎಂದು ಮುಖ್ಯಮಂತ್ರಿಗಳು ಅಧಿವೇಶನದಲ್ಲಿನ ಹೇಳಿಕೆ ಮಾಧ್ಯಮದಲ್ಲಿ ಹರಿದಾಡುತ್ತಲೇ ಅದರ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿ, ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾನೆ. ಅಲ್ಲದೆ ಸುಳ್ಳು ಹೇಳುವ ಸಿಎಂ ಬಿಎಸ್‌ ಯಡಿಯೂರಪ್ಪ ಅವರ ಸಾವು 20ರಂದು ಖಚಿತ ಎಂದು ಫೇಸ್‌ಬುಕ್‌ನಲ್ಲಿ ಕಮೆಂಟ್‌ ಮಾಡಿದ್ದಾನೆ.

'ಸಿಎಂ ಯಡಿಯೂರಪ್ಪ ಜೆಟ್ ಪೈಲೆಟ್ ಇದ್ದಂತೆ' ...

ಈ ಕುರಿತಂತೆ ಇಲ್ಲಿನ ಬಿಜೆಪಿ ಮುಖಂಡ ಘಾಳೆಪ್ಪ ಚಟ್ನಳ್ಳಿ ತಾಲೂಕಿನ ಮನ್ನಳ್ಳಿ ಗ್ರಾಮದ ಪೊಲೀಸ್‌ ಠಾಣೆಯಲ್ಲಿ ಶನಿವಾರ ಸಂಜೆ ದೂರು ನೀಡಿ ಸದರಿ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣ ಫೇಸ್‌ಬುಕ್‌ನಲ್ಲಿ ಬಸವರಾಜ ಎಂಬ ವಿಜಯಪೂರದ ಮೂಲದ ವ್ಯಕ್ತಿ ಸಿಎಂ ವಿರುದ್ಧ ಕಾಮೆಂಟ್‌ ಮಾಡಿದ್ದಾನೆ ಎಂದು ತಿಳಿದುಬಂದಿದ್ದು, ಪೊಲೀಸರು ಆತನಿಗೆ ನೋಟಿಸ್‌ ಜಾರಿಗೊಳಿಸಿದ್ದಾರೆ.