ಮಂಡ್ಯ(ಮಾ.14): ಬಸ್ ಅಥವಾ ಇನ್ಯಾವುದೋ ವಾಹನದಲ್ಲಿ ಹೋಗುವಾರ ಹೊರಗೆ ಕೈಚಾಚುವ ಕೆಟ್ಟ ಅಭ್ಯಾಸ ಮಕ್ಕಳಿಗೆ ಮಾತ್ರವಲ್ಲದೆ ಕೆಲವು ದೊಡ್ಡವರಿಗೂ ಇದೆ. ಮಂಡ್ಯದ ಪಾಂಡವಪುರದಲ್ಲಿ ವ್ಯಕ್ತಿಯೊಬ್ಬರು ತಮ್ಮ ಕೈಯನ್ನೇ ಕಳೆದುಕೊಂಡಿದ್ದಾರೆ.

ಸಾರಿಗೆ ಬಸ್‌ಗೆ ಟಾಟಾ ಏಸ್‌ ಗೂಡ್ಸ್‌ ವಾಹನ ಡಿಕ್ಕಿಯಾಗಿ ಪ್ರಯಾಣಿಕನ ಮುಂಗೈ ತುಂಡಾಗಿರುವ ಘಟನೆ ಪಾಂಡವಪುರ ರೈಲ್ವೆ ನಿಲ್ದಾಣದ ಮೇಲ್ಸೇತುವೆ ಬಳಿ ಶುಕ್ರವಾರ ನಡೆದಿದೆ. ಕೆ.ಆರ್‌.ಪೇಟೆ ಪಟ್ಟಣದ ನಿವಾಸಿ ನವೀನ್‌(37) ಕೈಯನ್ನು ಕಳೆದುಕೊಂಡಿರುವ ವ್ಯಕ್ತಿ. ಕೆ.ಆರ್‌.ಪೇಟೆಯಿಂದ ಮೈಸೂರಿಗೆ ತೆರಳುತ್ತಿದ್ದ ಹೊಳೆನರಸೀಪುರ ಡಿಪೋಗೆ ಸೇರಿದ ಸಾರಿಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ನವೀನ್‌ ಬಲಗೈಯನ್ನು ಬಸ್ಸಿನ ಕಿಟಕಿಯಿಂದ ಹೊರಚಾಚಿದ್ದ.

ಕೊರೋನಾ ಭೀತಿ: KRS, ರಂಗನತಿಟ್ಟಿಗೆ 1 ವಾರ ನಿಷೇಧ

ಈ ವೇಳೆ ಮೈಸೂರಿನಿಂದ ಪಾಂಡವಪುರ ಕಡೆಗೆ ಬರುತ್ತಿದ್ದ ಟಾಟಾ ಏಸ್‌ ಗೂಡ್ಸ್‌ ವಾಹನ ಬಸ್ಸಿಗೆ ಘರ್ಷಿಸಿದಾಗ ಕೈ ತುಂಡಾಗಿದೆ. ಗಾಯಗೊಂಡ ವ್ಯಕ್ತಿಗೆ ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ ಮುಂಗೈಯನ್ನು ಜೋಡಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡಾಕ್ಟರ್‌ಗೂ ಬಿಡದ ಕೊರೋನಾ ವೈರಸ್‌: ತನ್ನದೇ ಆಸ್ಪತ್ರೆಗೆ ದಾಖಲಾದ ವೈದ್ಯ!

ಘಟನೆಯಿಂದ ಕೆಲ ಕಾಲ ಸಂಚಾರ ಅಸ್ತವ್ಯಸ್ತಗೊಂಡಿತ್ತು. ಈ ಸಂಬಂಧ ಪೊಲೀಸರು ಎರಡು ವಾಹನಗಳನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಸಾರಿಗೆ ಡಿಪೋ ಸಿಬ್ಬಂದಿ ನೀಡಿದ ದೂರಿನ ಮೇರೆಗೆ ಪಾಂಡವಪುರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.