ಬೆಂಗಳೂರು [ಡಿ.22]:  ಆಟೋ ಪಾರ್ಕಿಂಗ್‌ ವಿಚಾರಕ್ಕೆ ನಡೆದಿದ್ದ ಜಗಳ ಸ್ನೇಹಿತನ ಹತ್ಯೆಯೊಂದಿಗೆ ಅಂತ್ಯಗೊಂಡ ಘಟನೆ ಬೈಯಪ್ಪನಹಳ್ಳಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಶನಿವಾರ ನಡೆದಿದ್ದು, ಕೊಲೆ ಮಾಡಿ ಪರಾರಿಯಾಗುತ್ತಿದ್ದ ಆರೋಪಿಯನ್ನು ಪೊಲೀಸರು ಹದಿನೈದೇ ನಿಮಿಷದಲ್ಲಿ ಬಂಧಿಸಿದ್ದಾರೆ.

ಸುದ್ದುಗುಂಟೆಪಾಳ್ಯ ನಿವಾಸಿ ಸಂತೋಷ್‌ (27) ಕೊಲೆಯಾದವ. ಕೃಷ್ಣಪ್ಪ ಗಾರ್ಡನ್‌ ನಿವಾಸಿ ಆನಂದ್‌ (26) ಬಂಧಿತ.

ಸಂತೋಷ್‌ ಮಹದೇವಪುರ ಠಾಣಾ ವ್ಯಾಪ್ತಿಯ ರೌಡಿಶೀಟರ್‌ ಆಗಿದ್ದು, ಮೂರು ವರ್ಷಗಳ ಹಿಂದೆ ವಿವಾಹವಾಗಿದ್ದ. ಪತ್ನಿ ಜತೆ ಸುದ್ದುಗುಂಟೆಪಾಳ್ಯದಲ್ಲಿ ನೆಲೆಸಿದ್ದ ಸಂತೋಷ್‌ ಆಟೋ ಚಾಲನೆ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಆರೋಪಿ ಆನಂದ್‌ ಸಹ ಆಟೋ ಚಾಲಕನಾಗಿದ್ದು, ಇಬ್ಬರು ಸ್ನೇಹಿತರಾಗಿದ್ದರು.

ಇತ್ತೀಚೆಗೆ ಆಟೋ ಪಾರ್ಕಿಂಗ್‌ ವಿಚಾರಕ್ಕೆ ಇಬ್ಬರ ನಡುವೆ ಜಗಳ ನಡೆದಿತ್ತು. ಇದೇ ವಿಚಾರಕ್ಕೆ ಆನಂದ್‌, ಸಂತೋಷ್‌ ಮೇಲೆ ದ್ವೇಷ ಸಾಧಿಸುತ್ತಿದ್ದ. ಶನಿವಾರ ಸಂಜೆ ಆರು ಗಂಟೆ ಸುಮಾರಿಗೆ ಸಂತೋಷ್‌ ಮನೆಗೆ ಏಕಾಏಕಿ ನುಗ್ಗಿದ ಆರೋಪಿ, ಚಾಕುವಿನಿಂದ ಇರಿದು ಪರಾರಿಯಾಗಿದ್ದ. ಸಂತೋಷನ ಚೀರಾಟ ಕೂಗಿ ಸ್ಥಳೀಯರು ಜಮಾಯಿಸಿದ್ದರು. 

ಬೆಂಗಳೂರು: ಕಂಡಕ್ಟರ್ ಮೇಲಿನ ಆ್ಯಸಿಡ್ ದಾಳಿ‌ ಹಿಂದೆ ಮೈದುನ -ಅತ್ತಿಗೆಯ ಪ್ರೇಮ್ ಕಹಾನಿ...

ಅಷ್ಟೊತ್ತಿಗೆ ಅದೇ ಮಾರ್ಗದಲ್ಲಿ ಗಸ್ತಿನಲ್ಲಿದ್ದ ಬೈಯಪ್ಪನಹಳ್ಳಿ ಪೊಲೀಸರು ಜನ ಸೇರಿದ್ದನ್ನು ಕಂಡು ಸ್ಥಳಕ್ಕೆ ತೆರಳಿದ್ದರು. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಘಟನೆ ನಡೆದ ಹದಿನೈದು ನಿಮಿಷದಲ್ಲೇ ಆನಂದ್‌ನನ್ನು ಬಂಧಿಸಿದ್ದಾರೆ. ಘಟನೆ ನಡೆದ ವೇಳೆ ಸಂತೋಷ್‌ ಮನೆಯಲ್ಲಿ ಪತ್ನಿ ಇರಲಿಲ್ಲ. ಗಾಯಾಳು ತೀವ್ರ ರಕ್ತಸ್ರಾವವಾಗಿ ಸ್ಥಳದಲ್ಲಿಯೇ ಮೃತಪಟ್ಟಿದ್ದ ಎಂದು ಪೊಲೀಸರು ಮಾಹಿತಿ ನೀಡಿದರು.