ಶ್ರೀರಂಗಪಟ್ಟಣ (ಅ.02):  ಪತ್ನಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದನೆಂಬ ಕಾರಣಕ್ಕೆ ಯುವಕನೊಬ್ಬ ಸ್ನೇಹಿತನ ಜೊತೆಗೂಡಿ ಹತ್ಯೆಗೈದಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ. ಪ್ರಕರಣ ಸಂಬಂಧ ಇಬ್ಬರು ಆರೋಪಿಗಳನ್ನು ಕೆಆರ್‌ಎಸ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ತಾಲೂಕಿನ ಹೊಸುಂಡವಾಡಿ ಗ್ರಾಮದ ಮಹೇಶ್‌ (30) ಹಾಗೂ ಅದೇ ಗ್ರಾಮದ ಕುಮಾರ್‌ (30) ಬಂಧಿತ ಆರೋಪಿಗಳು. ಮೈಸೂರಿನ ಬೆಳವಾಗಿ ಗ್ರಾಮದ ಬೀರೇಶ್‌ನನ್ನು ಇಬ್ಬರು ಸೇರಿ ಹತ್ಯೆಗೈದಿದ್ದಾಗಿ ಒಪ್ಪಿಕೊಂಡಿದ್ದಾರೆ.

ಬೀರೇಶ್‌, ಮಹೇಶ್‌ ಇಬ್ಬರೂ ಸ್ನೇಹಿತರಾಗಿದ್ದರು. ಹಾಗಾಗಿ ಮಹೇಶ್‌ ಮನೆಗೆ ಬೀರೇಶ್‌ ಬಂದು ಹೋಗುತ್ತಿದ್ದನು. ಈ ನಡುವೆ ಮಹೇಶ್‌ ಪತ್ನಿ ಪರಿಚಯವಾಗಿ ನಂತರದಲ್ಲಿ ಅನೈತಿಕ ಸಂಬಂಧಕ್ಕೆ ತಿರುಗಿತ್ತು. ಈ ವಿಷಯ ತಿಳಿದ ಮಹೇಶ್‌ ಕೆಂಡಾಮಂಡಲನಾದನು. ಬೀರೇಶ್‌ನನ್ನು ಕೊಲೆ ಮಾಡಲು ಸ್ನೇಹಿತ ಕುಮಾರ್‌ ಎಂಬಾತನ ನೆರವು ಪಡೆದನು.

ಬೆಳಗಾವಿ: ಅಕ್ರಮ ಸಂಬಂಧಕ್ಕೆ ಅಡ್ಡಿ, ಡಬ್ಬಲ್‌ ಮರ್ಡರ್‌ ಮಾಡಿಸಿದ್ದ ಮಹಿಳೆ ಸೇರಿ ಐವರ ಬಂಧನ .

ಸೆ.16 ರ ಸಂಜೆ 4 ಗಂಟೆ ವೇಳೆ ಮೈಸೂರು ಬೆಳವಾಗಿ ಗ್ರಾಮದ ಬೀರೇಶ್‌ ಎಂಬಾತನನ್ನು ಮದ್ಯ ಸೇವನೆ ಮಾಡಿ ಬರೋಣವೆಂದು ಕರೆದೊಯ್ದರು. ಬೆಳಗೊಳ ಬಳಿಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅಲ್ಲಿ ಬಾಟಲ್‌ಗಳಿಂದ ಹೊಡೆದು ಬೀರೇಶ್‌ನನ್ನು ಕೊಲೆ ಮಾಡಿ ಪರಾರಿಯಾಗಿದ್ದರು. ಪ್ರಕರಣವನ್ನು ಭೇದಿಸಿದ ಕೆಆರ್‌ಎಸ್‌ ಠಾಣಾ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಆರೋಪಿಗಳಿಂದ ಮೃತನ ಬೈಕು ಮತ್ತು ಆರೋಪಿಗಳು ಕೊಲೆಗೆ ಉಪಯೋಗಿಸಿದ್ದ ಮೋಟಾರ್‌ ಬೈಕ್‌ ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ.

ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಪರಿಶುರಮ್‌, ಹೆಚ್ಚುವರಿ ಪೊಲೀಸ್‌ ವರಿಷ್ಠಾಧಿಕಾರಿ ಧನಂಜಯ, ಡಿವೈಎಸ್‌ಪಿ ಅರುಣ್‌ ನಾಗೇಗೌಡ ಮಾರ್ಗದರ್ಶನದಲ್ಲಿ ತನಿಖಾಧಿಕಾರಿಗಳಾದ ವೃತ್ತ ನಿರೀಕ್ಷಕ ಯೋಗೇಶ್‌, ಕೆಆರ್‌ಎಸ್‌ ಪಿಎಸ್‌ಐ ನವೀನ್‌ಗೌಡ, ಠಾಣಾ ಸಿಬ್ಬಂದಿಗಳಾದ ಮಂಜುನಾಥ್‌, ಚನ್ನಂಕ, ಮಂಜೆಗೌಡ, ಯಧುರಾಜ್‌, ತೌಸಿಫ್‌, ಲೋಕೇಶ್‌, ಶ್ರೀನಿವಾಸಮೂರ್ತಿ, ಅರುಣ್‌ಕುಮಾರ್‌ ಸೇರಿದಂತೆ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.