ಬೆಳಗಾವಿ(ಅ.02): ತಾಲೂಕಿನ ಮಚ್ಛೆ ಗ್ರಾಮದಲ್ಲಿ ನಡೆದಿದ್ದ ವಿವಾಹಿತ ಮಹಿಳೆಯರಿಬ್ಬರ ಜೋಡಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಹಿಳೆ ಸೇರಿ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಕಾಳೇನಟ್ಟಿ ಗ್ರಾಮದ ಕಲ್ಪನಾ ಬಸರಿಮರದ(35), ಮಹಾರಾಷ್ಟ್ರ ಮೂಲದ ಮಹೇಶ್ ನಾಯಿಕ್, ಬೆಳಗುಂದಿಯ ರಾಹುಲ್ ಪಾಟೀಲ್, ಗಣೇಶಪುರದ ರೋಹಿತ್ ವಡ್ಡರ್, ಕಾಳೇನಟ್ಟಿಯ ಶಾನೂರ್ ಬನ್ನಾರ್ ಬಂಧಿತ ಆರೋಪಿಗಳಾಗಿದ್ದಾರೆ. 

ಸೆಪ್ಟೆಂಬರ್ 26ರ ಸಂಜೆ 4 ರಂದು ವಾಕಿಂಗ್‌ಗೆ ಹೋಗಿದ್ದ ಗರ್ಭಿಣಿ ಸೇರಿ ಇಬ್ಬರು ಮಹಿಳೆಯರನ್ನು ಹತ್ಯೆಗೈಯ್ಯಲಾಗಿತ್ತು. ರೋಹಿಣಿ ಹುಲಮನಿ(23), ರಾಜಶ್ರೀ ಬನ್ನೂರ್(21) ಕೊಲೆಯಾದ ಮಹಿಳೆಯರಾಗಿದ್ದಾರೆ.

ಡಬ್ಬಲ್ ಮರ್ಡರ್: 24 ಗಂಟೆಗಳಲ್ಲಿ ಪ್ರಕರಣ ಭೇದಿಸಿದ ಪೊಲೀಸ್ರು, ಮಾಹಿತಿ ಕೊಟ್ಟವನೇ ಕೊಲೆಗಾರ

ಪ್ರಕರಣದ ಹಿನ್ನೆಲೆ: 

ಕೊಲೆಯಾದ ರೋಹಿಣಿ ಗಂಡ ಗಂಗಪ್ಪ ಜೊತೆ ಆರೋಪಿ ಕಲ್ಪನಾ ಅಕ್ರಮ ಸಂಬಂಧ ಹೊಂದಿದ್ದಳು ಎಂದು ತಿಳಿದು ಬಂದಿದೆ. ಗಂಗಪ್ಪನಿಗೆ ಅವಶ್ಯಕತೆ ಇದ್ದಾಗ ಆರೋಪಿ ಕಲ್ಪನಾ ಹಣ ನೀಡುತ್ತಿದ್ದಳು. ರೋಹಿಣಿ ಜೊತೆ ಮದುವೆಯಾದ ಬಳಿಕ ಗಂಗಪ್ಪ ಕಲ್ಪನಾಳನ್ನು ದೂರ ಮಾಡಿದ್ದನು.

ಇದರಿಂದ ಕೋಪಿತಗೊಂಡಿದ್ದ ಕಲ್ಪನಾ ತನ್ನ ಅಕ್ರಮ ಸಂಬಂಧಕ್ಕೆ ರೋಹಿಣಿ ಅಡ್ಡಿಯಾಗಿದ್ದಳೆಂದು ಸಂಚು ರೂಪಿಸಿ ತನ್ನ ಸಂಬಂಧಿ ಮಹೇಶ ನಾಯಕ್‌ ಎಂಬುವನಿಗೆ ಹೇಳಿಸಿ ಕಲ್ಪನಾ ರೋಹಿಣಿ ಹುಲಮನಿ ಕೊಲೆ ಮಾಡಲು ಸಂಚು ರೂಪಿಸಿದ್ದರು. ಆದರೆ, ರೋಹಿಣಿ ಜೊತೆ ವಾಕಿಂಗ್‌ಗೆ ಹೋಗಿದ್ದ ಜಯಶ್ರೀ ಅವರನ್ನೂ ಕೂಡ ಆರೋಪಿಗಳು ಹತ್ಯೆಗೈದು ಪರಾರಿಯಾಗಿದ್ದರು. ಈ ಸಂಬಂಧ ಬೆಳಗಾವಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.