ಅಕ್ರಮ ಸಂಬಂಧಕ್ಕೆ ಅಡ್ಡಿಯಾಗುತ್ತಿದ್ದಾನೆಂದು  ಆಕೆಯ ಗಂಡನ ಕೊಲ್ಲಲು ಆಕೆಯ ಪ್ರಿಯತಮ ಸುಪಾರಿ ನೀಡಿದ್ದ. ಸುಪಾರಿ ಪಡೆದು ಅವನ ಕೊಂದವನಿಗೆ ಈಗ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. 

 ಮೈಸೂರು (ಮಾ.22): ಅಕ್ರಮಕ್ಕೆ ಸಂಬಂಧಕ್ಕೆ ಅಡ್ಡಿಯಾದ ವ್ಯಕ್ತಿಯನ್ನು ಹಣದ ಆಸೆಗೆ ಕೊಲೆಗೈದ ಆರೋಪಿಗೆ ನಗರದ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿದೆ.

ಟಿ. ನರಸೀಪುರ ತಾಲೂಕು ಹೊರಳಹಳ್ಳಿಯ ಸಿದ್ದಪ್ಪಾಜಿ ಅಲಿಯಾಸ್‌ ಸಿದ್ದಪ್ಪಗೆ ಜೀವಾವಧಿ ಶಿಕ್ಷೆ, 2 ಲಕ್ಷ ದಂಡ ವಿಧಿಸಿದರು. ಕೊಲೆಗೆ ನೆರವು ನೀಡಿದ್ದರು ಎನ್ನಲಾಗಿದ್ದ ಸಿದ್ದರಾಜು ಪತ್ನಿ ಮಂಜುಳಾ ಅಲಿಯಾಸ್‌ ಮರಿಗೆ ಸಾಕ್ಷ್ಯಾಧಾರ ಕೊರತೆಯಿಂದ ಬಿಡುಗಡೆ ಆಗಿದ್ದಾರೆ. ಮತ್ತೋರ್ವ ಆರೋಪಿ ಮಹದೇವಯ್ಯ ಅಲಿಯಾಸ್‌ ಬೊಮ್ಮ ಈ ಹಿಂದೆಯೇ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮಂಜುಳಾ ಮತ್ತು ಮಹದೇವಯ್ಯ ನಡುವೆ ಅಕ್ರಮ ಸಂಬಂಧ ಇತ್ತು. ಇದನ್ನು ಪ್ರಶ್ನಿಸಿ, ತಮ್ಮ ಮನೆಗೆ ಬರದಂತೆ ತಾಕೀತು ಮಾಡಿದ್ದ ಮಂಜುಳಾಳ ಪತಿ ಸಿದ್ದರಾಜುವನ್ನು ಕೊಲೆ ಮಾಡಲು ಸಂಚು ರೂಪಿಸಲಾಯಿತು.

ಪತ್ನಿ ಶೀಲ ಶಂಕಿಸಿ ಆಕೆಯ ಗುಪ್ತಾಂಗಕ್ಕೆ ಹೊಲಿಗೆ ಹಾಕಿದ ಪಾಪಿ ಪತಿ ...

ಮಹದೇವಯ್ಯನು ಪ್ರಕರಣದ ಮೊದಲ ಆರೋಪಿ ಸಿದ್ದಪ್ಪಾಜಿಗೆ ಸಿದ್ದರಾಜುವನ್ನು ಕೊಲೆ ಮಾಡಲು ಹಣದ ಆಮಿಷ ಒಡ್ಡಿದ್ದ. ಅದರಂತೆ 2018ರ ಮಾ. 30 ರಂದು 3 ಜನರು ಸಿದ್ದರಾಜುವನ್ನು ಕರೆದುಕೊಂಡು ಹೋಗಿ ಚೆನ್ನಾಗಿ ಮದ್ಯಪಾನ ಮಾಡಿಸಿ ಹೊರಳಹಳ್ಳಿ ಗ್ರಾಮದ ಗುರುಲಿಂಗಪ್ಪ ಅವರ ತೆಂಗಿನ ತೋಟದ ಬಳಿ ಸಿಡಿಎಸ್‌ ಕಾಲುವೆಯ ಪಾಲದ ಬಳಿ ಅದೇ ದಿನ ರಾತ್ರಿ 9 ಗಂಟೆಗೆ ಕರೆದುಕೊಂಡು ಹೋಗಿ ಅಲ್ಲಿಯೂ ಚೆನ್ನಾಗಿ ಮದ್ಯಪಾನ ಮಾಡಿಸಿದ್ದು, ನಂತರ ಮಹದೇವಯ್ಯನು ದೊಣ್ಣೆಯಿಂದ ಸಿದ್ದರಾಜುವಿನ ತಲೆಗೆ 2 ರಿಂದ 3 ಬಾರಿ ಹೊಡೆದು ಆತನನ್ನು ಕೊಲೆ ಮಾಡಿದ್ದ.

ಬಳಿಕ ಇಬ್ಬರೂ ಸೇರಿ ಹೆಣವನ್ನು ಕಾಲುವೆಯ ಮೋರಿಯ ಸಿಮೆಂಟ್‌ ಪೈಪ್‌ ಒಳಗೆ ತುರುಕಿ ಸಾಕ್ಷ್ಯಾಧಾರ ನಾಶಪಡಿಸಿರುವುದು ತನಿಖೆಯಿಂದ ದೃಢಪಟ್ಟಿದೆ. ಈ ಸಂಬಂಧ ತನಿಖಾಧಿಕಾರಿ ಟಿ.ಕೆ. ಚಂದ್ರಶೇಖರ್‌ ದೋಷಾರೋಪಣಾ ಪತ್ರ ಸಲ್ಲಿಸಿದ್ದರು. ಪ್ರಕರಣದ ವಿಚಾರಣೆ ನಡೆಸಿದ 2ನೇ ಅಧಿಕ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಲಯದ ನ್ಯಾಯಾಧೀಶ ಹೊಸಮನಿ ಪುಂಡಲಿಕ್‌ ಅವರು ಸಾಕ್ಷಿಯನ್ನು ಪರಿಗಣಿಸಿ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 2 ಲಕ್ಷ ದಂಡ ವಿಧಿಸಿದ್ದಾರೆ. ಸರ್ಕಾರದ ಪರ ಎಚ್‌.ಡಿ. ಆನಂದಕುಮಾರ್‌ ವಾದ ಮಂಡಿಸಿದ್ದರು.