ಹಾವು ಕಚ್ಚಿದ್ರು, ಮುಳ್ಳು ಚುಚ್ಚಿದೆ ಎಂದು ಊಟ ಮಾಡಿ ಮಲಗಿದ್ದ ವ್ಯಕ್ತಿ ಸಾವು!
ಹಾವು ಕಚ್ಚಿದರೂ ಮುಳ್ಳು ಚುಚ್ಚಿದೆ ಎಂದು ಮನೆಗೆ ಬಂದು ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗಾಗುವಷ್ಟರಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ.
ವರದಿ: ಆಲ್ದೂರು ಕಿರಣ್, ಏಷ್ಯಾನೆಟ್ ಸುವರ್ಣ ನ್ಯೂಸ್, ಚಿಕ್ಕಮಗಳೂರು
ಚಿಕ್ಕಮಗಳೂರು (ಮೇ.27): ಹಾವು ಕಚ್ಚಿದರೂ ಮುಳ್ಳು ಚುಚ್ಚಿದೆ ಎಂದು ಮನೆಗೆ ಬಂದು ಊಟ ಮಾಡಿ ಮಲಗಿದ್ದ ವ್ಯಕ್ತಿ ಬೆಳಗಾಗುವಷ್ಟರಲ್ಲಿ ಸಾವನ್ನಪ್ಪಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ಕರಕುಚ್ಚಿ ಗ್ರಾಮದಲ್ಲಿ ನಡೆದಿದೆ. ಮೃತನ 48 ವರ್ಷದ ಗಂಗಪ್ಪ ಎಂದು ಗುರುತಿಸಲಾಗಿದೆ. ಮೃತ ಗಂಗಪ್ಪ ನಿನ್ನೆ (ಭಾನುವಾರ ) ಸಂಜೆ ತೋಟದಲ್ಲಿ ಕೆಲಸ ಮಾಡುವಾಗ ಕಾಲಿಗೆ ಎರಡು ಬಾರಿ ಹಾವು ಕಚ್ಚಿದೆ. ಹಾವು ಕಡಿದದ್ದು ಅವರ ಗಮನಕ್ಕೆ ಬಂದಿರಲಿಲ್ಲ.
ಯಾವುದೋ ಮುಳ್ಳು ಚುಚ್ಚಿರಬೇಕು, ಏನೂ ಆಗಲ್ಲ ಎಂದು ಮನೆಗೆ ಬಂದು ಊಟ ಮಾಡಿ ಮಲಗಿದ್ದರು. (ಸೋಮವಾರ) ಇಂದು ಬೆಳಗಿನ ಜಾವ ಎದೇ ಉರಿ ಹಾಗೂ ಸುಸ್ತು ಎಂದು ಮನೆಯಲ್ಲಿ ಕೂಗಾಡಿದ್ದಾರೆ. ಮನೆಯವರು ಎದ್ದು ನೀರು ಕುಡಿಸಿ ಆಸ್ಪತ್ರೆಗೆ ಹೋಗಲು ಹೊರಡುವಷ್ಟರಲ್ಲಿ ಸಾವನ್ನಪ್ಪಿದ್ದಾರೆ. ಬಾಯಿಯಲ್ಲಿ ನೊರೆ ಬಂದಿದ್ದು ಗಮನಿಸಿದ ಮೇಲೆ ಆಗ ಮನೆಯವರು ಹಾವು ಕಡಿದಿರುವುದು ಗಮನಕ್ಕೆ ಬಂದಿದೆ.
ಹಾವು ಕಚ್ಚಿದ 8 ಗಂಟೆಯ ನಂತರ ಸಾವು: ಭಾನುವಾರ ಸಂಜೆ ಹಾವು ಕಚ್ಚಿದ್ರು ಸೋಮವಾರ ಬೆಳಗಿನ ಜಾವ ಹೇಗೆ ಸಾವನ್ನಪ್ಪಿದರು ಎಂಬ ಅನುಮಾನ ಕಾಡಲಿದೆ. ಆದರೆ, ಹಾವು ಕಡಿದಿರೋದು ಮೃತ ಗಂಗಪ್ಪನ ಗಮನಕ್ಕೆ ಬಾರದೆ ಇರೋದ್ರಿಂದ ಅವರು ಬೆಳಗಿನ ಜಾವದವರೆಗೂ ಬದುಕಿದ್ದಾರೆ. ಏಕೆಂದರೆ, ಹಾವು ಕಡಿದದ್ದು ಕಡಿಸಿಕೊಂಡವರ ಗಮನಕ್ಕೆ ಬಾರದೆ ಇದ್ದರೆ ಅದರ ವಿಷ ಮೈಗೆ ಏರುವುದು ತುಂಬಾ ನಿಧಾನ. ಹಾವು ಕಡಿದದ್ದನ್ನ ಕಡಿಸಿಕೊಂಡವರು ತಕ್ಷಣ ನೋಡಿದರೆ ಹಾವು ಕಡಿಯಿತೆಂದು ಆತಂಕ, ಭಯ, ಗಾಬರಿಯಲ್ಲಿ ಬ್ಲಡ್ ಪ್ರೆಷರ್ ಹೆಚ್ಚಾಗೋದು ಸರ್ವೇ ಸಾಮಾನ್ಯ.
ಕಾಡಿನಲ್ಲಿ ಹುಡುಕಿದಾಗ ಕಾದಿತ್ತು ಅಚ್ಚರಿ: 6 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪವಾಡವೆಂಬಂತೆ ಬದುಕಿ ಬಂದ್ರು!
ಆಗ, ಹಾವಿನ ವಿಷ ಬೇಗ ಮೈಗೆ ಏರಿ ಸೂಕ್ತ ಚಿಕಿತ್ಸೆ ಸಿಗದಿದ್ದರೆ ಒಂದೆರಡು ಗಂಟೆಯಲ್ಲಿ ಸಾವನ್ನಪ್ಪುತ್ತಾರೆ. ಆದರೆ, ಗಂಗಪ್ಪನಿಗೆ ಹಾವು ಕಡಿದಿರೋದು ಗೊತ್ತೇ ಇಲ್ಲದ ಕಾರಣ ಆತ ಮನೆಗೆ ಬಂದು ಊಟ ಮಾಡಿ ಮಲಗಿದರೂ ಸಾವನ್ನಪ್ಪಿರಲಿಲ್ಲ.ಸಂಜೆ ಸರಿ ಸುಮಾರು 5ರಿಂದ 6 ಗಂಟೆ ಸಮಯಕ್ಕೆ ಹಾವು ಕಚ್ಚಿದ ಬಳಿಕ ಮನೆಗೆ ಬಂದು ಊಟ ಮಾಡಿ, ಮಲಗಿ ಬೆಳಗಿನ ಜಾವ 3 ಗಂಟೆಗೆ ನಿಧಾನಕ್ಕೆ ಹಾವಿನ ದೇಹಕ್ಕೆ ಹರಡಿದ ಮೇಲೆ ಸುಸ್ತು-ವಾಂತಿ ಎಂದು ಕೂಗಾಡಿದ ಮೇಲೆ ಮನೆಯವರು ನೀರು ಕುಡಿಸಿದ ಮೇಲೆ ಬಾಯಿಯಲ್ಲಿ ನೊರೆ ಬಂದು ಸಾವನ್ನಪ್ಪಿದ್ದಾರೆ. ಲಕ್ಕವಳ್ಳಿ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.