ಕಾಡಿನಲ್ಲಿ ಹುಡುಕಿದಾಗ ಕಾದಿತ್ತು ಅಚ್ಚರಿ: 6 ದಿನಗಳಿಂದ ನಾಪತ್ತೆಯಾಗಿದ್ದ ವ್ಯಕ್ತಿ ಪವಾಡವೆಂಬಂತೆ ಬದುಕಿ ಬಂದ್ರು!
ವ್ಯಕ್ತಿಯೊಬ್ಬರು ಕಣ್ಮರೆಯಾಗಿ ಆರು ದಿನಗಳ ಬಳಿಕ ಪವಾಡ ಎಂಬಂತೆ ಬದುಕಿ ಬಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದೆ.
ಸ್ವಸ್ತಿಕ್ ಕನ್ಯಾಡಿ, ಏಷಿಯಾನೆಟ್ ಸುವರ್ಣ ನ್ಯೂಸ್
ಬೆಳ್ತಂಗಡಿ (ಮೇ.27): ವ್ಯಕ್ತಿಯೊಬ್ಬರು ಕಣ್ಮರೆಯಾಗಿ ಆರು ದಿನಗಳ ಬಳಿಕ ಪವಾಡ ಎಂಬಂತೆ ಬದುಕಿ ಬಂದಿರುವ ಘಟನೆ ಬೆಳ್ತಂಗಡಿ ತಾಲೂಕಿನ ಶಿಬಾಜೆಯಲ್ಲಿ ನಡೆದಿದೆ. ಧರ್ಮಸ್ಥಳ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಪರಿಸರ ಪ್ರೇಮಿ ದಿನೇಶ್ ಹೊಳ್ಳ ಹಾಗೂ ಸ್ಥಳೀಯರ ಸಹಕಾರದೊಂದಿಗೆ ಕಾಡಿನಲ್ಲಿ ದಾರಿ ತಪ್ಪಿದ್ದ ವೃದ್ದನನ್ನು ಯಶಸ್ವಿಯಾಗಿ ಕಾರ್ಯಾಚರಣೆ ನಡೆಸಿ ಮನೆಗೆ ಕರೆ ತರಲಾಯಿತು. ಕಟ್ಟಿಗೆ ತರಲು ಕಾಡಿಗೆ ಹೊರಟಿದ್ದ ವಾಸು ರಾಣ್ಯಗೆ ಕಾಡಿನಲ್ಲಿ ಯಾರೋ ಕರೆದಂತಾಗಿ ಬಳಿಕ ಕಾಡಿನಲ್ಲಿ ದಾರಿ ತಪ್ಪಿ, ಬಳಿಕ ಬರೀ ನೀರು ಕುಡಿದು ಬದುಕಿದ್ದರು ಎನ್ನಲಾಗಿದೆ. ನಾಪತ್ತೆಯಾಗಿ ಐದು ದಿನಗಳ ಬಳಿಕ ಕಾಡಿನಿಂದ ಕೇಳಿಸಿದ ಸಣ್ಣ ಕೂಕಲು ಶಬ್ದವೇ ಅವರನ್ನು ಮರಳಿ ಕರೆತರಲು ಸಾಧ್ಯವಾಗಿಸಿದ್ದು ಅಂತಾರೆ ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಸ್ವಯಂಸೇವಕರು.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ ಶೌರ್ಯ ತಂಡದ ಸ್ವಯಂಸೇವಕ ರಮೇಶ್ ತಮ್ಮ ಅನುಭವವನ್ನು ಹೀಗೆ ಹಂಚಿಕೊಂಡಿದ್ದಾರೆ. ನಮ್ಮ ಶೌರ್ಯ ತಂಡಕ್ಕೆ ನಾಪತ್ತೆಯಾದವರನ್ನು ಹುಡುಕುವ ಕಾರ್ಯಾಚರಣೆ ಹೊಸತೇನೂ ಅಲ್ಲ. ರೆಖ್ಯ ಗ್ರಾಮದಲ್ಲಿ ಸರಿ ಸುಮಾರು ನಾಲ್ಕು ಕಾರ್ಯಾಚರಣೆಗಳಲ್ಲಿ ಭಾಗವಹಿಸಿದ ಅನುಭವ ನಮ್ಮ ತಂಡದ್ದಾಗಿದೆ. ಈ ಹಿಂದೆ ನಡೆಸಿದ ಕಾರ್ಯಾಚರಣೆಗಳಲ್ಲಿ ಎಲ್ಲವೂ ದಿನ ,ಎರಡು ದಿನದ ಕಾರ್ಯಾಚರಣೆಗಳು. ಆದರೆ ಇದು ಆರು ದಿನಗಳ ನಿರಂತರ ಕಾರ್ಯಾಚರಣೆ. ಗೊತ್ತು ಗುರಿ ಇಲ್ಲದೆ ಕಾಡಿನಲ್ಲಿ, ತೊರೆಗಳಲ್ಲಿ, ಕೆರೆಗಳಲ್ಲಿ, ಬದುಗಳಲ್ಲಿ ಹುಡುಕಿಯೂ ಸಿಗದಿದ್ದಾಗಲೂ ನಾವು ತಂಡ-ತಂಡವಾಗಿ ಕಾರ್ಯಾಚರಣೆ ನಡೆಸಿ ಯಶಸ್ವಿಯಾಗಿದ್ದು.
ರಾಜ್ಯದಲ್ಲಿದೆ ಅಭಿವೃದ್ಧಿ ಶೂನ್ಯ ಕಾಂಗ್ರೆಸ್ ಸರ್ಕಾರ: ಮಾಜಿ ಸಚಿವ ಸುನೀಲ್ ಕುಮಾರ್
ವ್ಯಕ್ತಿಯೊಬ್ಬರು ನಾಪತ್ತೆಯಾಗಿ ಸುಮಾರು ಆರು ದಿನಗಳ ನಿರಂತರ ಹುಡುಕಾಟ: ಆರು ದಿವಸಗಳ ಬಳಿಕ ಜೀವಂತವಾಗಿ ಸುಮಾರು ಎಂಬತ್ತು ವರುಷಗಳ ವೃದ್ದನನ್ನು ಹುಡುಕಿದ್ದೇವೆ. ಈ ಮೂಲಕ ನಮ್ಮೆಲ್ಲರ ಕಾರ್ಯಾಚರಣೆಗಳಿಗೆ ಕಲಶಪ್ರಾಯವಾಗುವಂತಹ ಕಾರ್ಯಾಚರಣೆ ಯಶಸ್ವಿಯಾಗಿ ನಡೆಯಲು ಭಗವಂತನ ಅನುಗ್ರಹವಲ್ಲದೆ ಬೇರೇನೂ ಅಲ್ಲ. ಹಾಗೆಂದು ಪ್ರತಿ ದಿನ ಎಲ್ಲರೂ ಹುಡುಕಲು ಹೋಗಿಲ್ಲ. ಮೇ 22ರಂದು ಒಮ್ಮೆ ಎಲ್ಲರೂ ತಂಡವಾಗಿ ಹುಡುಕಾಟ ನಡೆಸಿದೆವು. ಆ ಬಳಿಕ ಪ್ರತಿದಿನ ಬಿಡುವಿರುವ ಸದಸ್ಯರು ಸ್ಥಳೀಯರ ಜತೆ ಸೇರಿಕೊಂಡು ಹುಡುಕಾಟ ಮುಂದುವರೆಯಿತು. ಮೇ 25ರಂದು ನಾಳೆ ಎಲ್ಲರೂ ಒಟ್ಟಾಗಿ ಒಮ್ಮೆ ಹುಡುಕಲೇಬೇಕು ಎಂಬ ನಿರ್ಣಯಕ್ಕೆ ಬಂದೆವು. ಊರಿನ ಇನ್ನಿತರ ಆಸಕ್ತರನ್ನು ಭೇಟಿಯಾಗಿ ಅವರ ಸಹಕಾರವನ್ನು ಕೇಳಿದೆವು.
ಶಿಕ್ಷಣ ಕ್ಷೇತ್ರವನ್ನು ಕಾಂಗ್ರೆಸ್ ಎಂದೂ ಕಡೆಗಣಿಸಿಲ್ಲ: ಗೃಹ ಸಚಿವ ಪರಮೇಶ್ವರ್
ಕಾಡಂಚಿನಿಂದ ಕೇಳಿದ ಕೂಕಲು ಶಬ್ದ: ನಮ್ಮ ನಿಲುಮೆ ಭಗವಂತನಿಗೂ ಒಲುಮೆಯಾಯಿತೋ ಏನೋ ಮರುದಿನ ಮುಂಜಾನೆ ದೂರದ ಕಾಡಿನಿಂದ ನಾಲ್ಕೈದು ಕೂಕುಲು ಶಬ್ದ ಕೇಳಿ ಬಂದು ಸ್ವಯಂ ಸೇವಕರ ಉತ್ಸಾಹ ಇಮ್ಮಡಿ ಆಯಿತು. ಬೆಳಗ್ಗಿನಿಂದಲೇ ಹುಡುಕಾಟದ ಕಾರ್ಯಾಚರಣೆ ಆರಂಭವಾಯಿತು. ಕೂಕುಲು ಶಬ್ದವನ್ನು ಬೆನ್ನತ್ತಿ ಕಾಡಂಚಿನಲ್ಲಿ ಮೂರು ಕಿ.ಮೀ ತೆರಳಿದ ನಮಗೆ ಕಂಡದ್ದು ಅಚ್ಚರಿ. ಕಳೆದ ಆರು ದಿನಗಳಿಂದ ಅನ್ನ ನೀರಿಲ್ಲದೆ ನಿತ್ರಾಣಗೊಂಡಿದ್ದರೂ ತನ್ನೆಲ್ಲಾ ಶಕ್ತಿಯನ್ನು ಕೂಕುಲು ಹಾಕಲು ಉಪಯೋಗಿಸಿ ನಿತ್ರಾಣಗೊಂಡು ಮರಕ್ಕೆ ಒರಗಿದ್ದ ವಾಸುರಾಣ್ಯ. ನಮ್ಮ ಸ್ವಯಂಸೇವಕ ಶೀನಪ್ಪಣ್ಣನಿಗೆ ಮೊದಲು ಕಂಡದ್ದೇ ತಡ ಕೂಡಲೆ ಎಲ್ಲರೂ ಸೇರಿ ಅವರಿಗೆ ಪ್ರಥಮ ಚಿಕಿತ್ಸೆ ಲಘು ಆಹಾರ, ನೀರು ನೀಡಿದೆವು. ನಿಧಾನವಾಗಿ ಎತ್ತಿಕೊಂಡೇ ಅವರ ಮನೆಗೆ ಕರೆತಂದೆವು. ಪ್ರವೀಣ್ ಹಾಗೂ ಅವಿನಾಶ್ ಎಂಬ ಸ್ವಯಂಸೇವಕರು ಅರಸಿನಮಕ್ಕಿಯ ನವಶಕ್ತಿ ಅಟೋ ಚಾಲಕ ಮಾಲಕ ಸಂಘ ದ ಅಂಬುಲೆನ್ಸ್ ಮೂಲಕ ಕೊಕ್ಕಡ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕೊಂಡೊಯ್ದೆವು. ಅಲ್ಲಿ ಚಿಕಿತ್ಸೆ ಕೊಡಿಸಿ ಮರಳಿ ಮನೆಗೆ ಕರೆತಂದು ಬಿಟ್ಟಾಗ ಮನಸ್ಸಲ್ಲೇನೋ ಸಂತೃಪ್ತ ಭಾವ ನಮ್ಮನ್ನು ಕಾಡಿತ್ತು.